विवेचन सारांश
ಈಶ್ವರೈಕಶರಣತೆ, ಈಶ್ವರ ಮಾಯೆ ಮತ್ತು ಅರ್ಜುನನ ಜ್ಞಾನೋದಯ

ID: 5671
कन्नड़ - ಕನ್ನಡ
ಭಾನುವಾರ, 06 ಅಕ್ಟೋಬರ್ 2024
ಅಧ್ಯಾಯ 18: ಮೋಕ್ಷಸಂನ್ಯಾಸಯೋಗ
6/6 (ಶ್ಲೋಕ 51-78)
ವಿವೇಚನಕಾರರು: ಗೀತಾ ವಿಶಾರದ ಶ್ರೀ ಡಾ. ಆಶು ಗೋಯಲ್ ಜಿ


ಜಗದ್ಗುರುವಾದ ಶ್ರೀಕೃಷ್ಣನಿಗೆ ವಂದಿಸುತ್ತಾ ದೀಪ ಬೆಳಗುವ ಮೂಲಕ ಇಂದಿನ ವಿವೇಚನ ಸತ್ರವು ಪ್ರಾರಂಭವಾಯಿತು. ನಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯಕರ್ಮಗಳ ಫಲವಾಗಿ, ತಂದೆತಾಯಿಯ ಆಶೀರ್ವಾದದಿಂದ, ಗುರು ಹಿರಿಯರ ಅನುಗ್ರಹದಿಂದ ನಾವು ಭಗವದ್ಗೀತೆಯನ್ನು ಕಲಿಯಲು, ತಿಳಿಯಲು ಮುಂದಾಗಿದ್ದೇವೆ. ನಿಧಾನವಾಗಿ ಗೀತೆಯ ಸಾರವನ್ನು ತಿಳಿದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕೂಡಾ ಪ್ರಾರಂಭ ಮಾಡಿದ್ದೇವೆ. ನಮ್ಮ ಭಾಗ್ಯೋದಯಕ್ಕಾಗಿ, ನಮಗೆ ದೊರೆತ ಈ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವುದಕ್ಕಾಗಿ ಭಗವಂತನೇ ನಮ್ಮನ್ನೆಲ್ಲಾ ಪರಮ ಪವಿತ್ರವಾದ ಭಗವದ್ಗೀತೆ ಕಲಿಯಲು ಆರಿಸಿಕೊಂಡಿದ್ದಾನೆ.

ಶಾರದಾ ನವರಾತ್ರಿಯ ಪರ್ವಕಾಲವಿದು. ಆಧ್ಯಾತ್ಮ ಸಾಧನೆಗೆ ಅತ್ಯಂತ ಶ್ರೇಷ್ಠವಾದ ಸಮಯ. ಈ ಒಂಬತ್ತು ದಿನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮಾಡಿದ ಅನುಷ್ಟಾನ, ಜಪ-ತಪಗಳು ಜನ್ಮಜನ್ಮಾಂತರಗಳಲ್ಲಿ ಶ್ರೇಯಸ್ಸನ್ನು ಕೊಡುತ್ತದೆ. ಸಾಧಾರಣ ಮನುಷ್ಯರಷ್ಟೇ ಅಲ್ಲ, ತಪಸ್ವಿಗಳು, ಋಷಿ ಮುನಿಗಳು ಕೂಡಾ ಈ ಸಮಯದಲ್ಲಿ ವಿಶೇಷ ಅನುಷ್ಠಾನಗಳನ್ನು ಮಾಡುತ್ತಾರೆ. ಶಕ್ತಿಯ ಆರಾಧನೆ ಮಾಡುವುದರಿಂದ ನಮ್ಮ ಭಕ್ತಿ ಹೆಚ್ಚಾಗುತ್ತದೆ.

ಶಕ್ತಿಯ ಆರಾಧನೆಯ ವಿಚಾರ ಬಂದಾಗ ಆದಿ ಶಂಕರಾಚಾರ್ಯರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಸ್ಮರಿಸೋಣ. ಯಾವುದೋ ಒಂದು ಸಂದರ್ಭದಲ್ಲಿ ಶಂಕರರಿಂದ ತಿಳಿಯದೇ ಶಕ್ತಿಯ ಖಂಡನೆಯಾಯಿತು. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಸಂಪೂರ್ಣ ಶರೀರ ಅಶಕ್ತತೆಯಿಂದ ಬಳಲಿತು. ಎದ್ದು ಒಂದು ಹನಿ ನೀರು ಕುಡಿಯಲೂ ಸಾಧ್ಯವಾಗದಷ್ಟು ನಿತ್ರಾಣರಾದರು ಶಂಕರರು. ಒಂದು ದಿನ ಮಲಗಿದ್ದಾಗ ಬಾಯಾರಿಕೆಯಿಂದ ಬಾಯಿ ಒಣಗುತ್ತಿದ್ದಾಗ, ಅವರ ಬಳಿ ಒಬ್ಬ ಪುಟ್ಟ ಬಾಲಕಿ ಹಾದು ಹೋದಳು. ಶಂಕರರು, ಒಂದು ಗುಟುಕು ನೀರು ಕೊಡುವಂತೆ ಅವಳಲ್ಲಿ ಕೇಳಿಕೊಂಡರು. ಆ ಹುಡುಗಿ, "ನೀವೇ ಎದ್ದು ನೀರು ಕುಡಿಯಬಹುದಲ್ಲ" ಎಂದಳು. ಶಂಕರರು, ತನ್ನ ಬಳಿ ಶಕ್ತಿಯೇ ಇಲ್ಲದಾಗಿದೆ ಎಂದು ಉತ್ತರಿಸಿದರು. ಆಗ ಆ ಹುಡುಗಿ, "ಇಷ್ಟು ಸಮಯ ಶಕ್ತಿಯನ್ನು ಖಂಡಿಸುತ್ತಿದ್ದಿರಿ. ಈಗ ಶಕ್ತಿಯ ಅವಶ್ಯಕತೆ ಅರ್ಥ ಆಯಿತೇ?" ಎಂದು ಕೇಳಿದಳು. ಶಂಕರರಿಗೆ ತಮ್ಮ ತಪ್ಪಿನ ಅರಿವಾಗಿ, ಆ ಸಮಯದಲ್ಲಿ "ದೇವೀ ಅಪರಾಧ ಕ್ಷಮಾಪಣ" ಸ್ತೋತ್ರವನ್ನು ರಚಿಸಿದರು. ಭವಾನ್ಯಷ್ಟಕವನ್ನೂ ರಚಿಸಿದರು.

ಭಗವಂತನೇ ಬಂದು ಎಚ್ಚರಿಸುವುದು ಮಹಾತ್ಮರ ಜೀವನದಲ್ಲಿ ಮಾತ್ರವೇ ನಡೆಯುತ್ತದೆ. ಇದು ಎಲ್ಲರ ಬದುಕಿನಲ್ಲಿ ನಡೆಯುವ ಸಾಮಾನ್ಯ ಸಂಗತಿಯಲ್ಲ. ಮಹಾನ್ ಸಾಧಕರ ಯೋಗಕ್ಷೇಮವೆಲ್ಲ ಭಗವಂತನ ಕೈಯಲ್ಲಿರುತ್ತದೆ. ಅವರು ತಪ್ಪು ಮಾಡದೇ ಇರುವ ಹಾಗೆ ಮಾಡುವ, ಅಥವಾ ಒಂದು ಚಿಕ್ಕ ತಪ್ಪು ಮಾಡಿದಲ್ಲಿ ಅದನ್ನು ಆಗಲೇ ತಿದ್ದಿ ಅನುಗ್ರಹಿಸುವ ಸಂಪೂರ್ಣ ಜವಾಬ್ದಾರಿಯನ್ನು ಭಗವಂತನು ಹೊತ್ತಿರುತ್ತಾನೆ.

ಶಕ್ತಿಯ ಆರಾಧನೆಯೇ ಸಂಕೇತವಾದ ಈ ನವರಾತ್ರಿಯಲ್ಲಿ ಒಂದಾದರೂ ನಿಯಮ ಪಾಲನೆಯ ಸಂಕಲ್ಪ ಮಾಡಬೇಕು. ಸ್ತೋತ್ರ ಪಾರಾಯಣ, ಮೌನ ವ್ರತ, ಭಗವದ್ಗೀತೆಯ ಪಾರಾಯಣ, ಹೀಗೆ ಯಾವುದಾದರೂ ವ್ರತ ಪಾಲನೆ ಮಾಡಬೇಕು. ಇದರಿಂದ ಅತ್ಯಂತ ದೊಡ್ಡ ಪ್ರಮಾಣದ ಲಾಭವಿದೆ. ನಮ್ಮೆಲ್ಲರ ಭಾಗ್ಯವೇನೆಂದರೆ ಈ ಪರ್ವ ಕಾಲದಲ್ಲಿ ನಾವು ಭಗವದ್ಗೀತೆಯ ಅತ್ಯಂತ ಪ್ರಮುಖ ಅಧ್ಯಾಯವಾದ ಮೋಕ್ಷ ಸಂನ್ಯಾಸ ಯೋಗದ ವಿವೇಚನೆಯಲ್ಲಿ ಪಾಲ್ಗೊಂಡಿದ್ದೇವೆ.

51ರಿಂದ ಮುಂದಿನ ಮೂರು ಶ್ಲೋಕಗಳಲ್ಲಿ ಭಗವಂತನು ಭಗವದ್ ಪ್ರಾಪ್ತಿಯನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸಿ ಕೊಡುತ್ತಿದ್ದಾನೆ. ಜ್ಞಾನ ಯೋಗದಿಂದ ಯಾರು ಭಗವಂತನನ್ನು ಸೇರಬಲ್ಲರು? ಅಥವಾ ಭಗವಂತನನ್ನು ಸೇರುವ ಜ್ಞಾನಯೋಗಿಗಳ ಲಕ್ಷಣಗಳೇನು? ಎಂಬುದನ್ನು ಈ ಶ್ಲೋಕಗಳು ತಿಳಿಸುತ್ತವೆ.

18.51

ಬುದ್ಧ್ಯಾ ವಿಶುದ್ಧಯಾ ಯುಕ್ತೋ, ಧೃತ್ಯಾತ್ಮಾನಂ(ನ್) ನಿಯಮ್ಯ ಚ
ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ, ರಾಗದ್ವೇಷೌ ವ್ಯುದಸ್ಯ ಚ॥51॥

ವಿಶುದ್ಧವಾದ ಬುದ್ಧಿಯಿಂದ ಕೂಡಿದವನಾಗಿ ಹಾಗೂ ಹಗುರವಾದ, ಸಾತ್ವಿಕ ಮತ್ತು ನಿಯಮಿತ ಭೋಜನವನ್ನು ಮಾಡುವವನೂ, ಶಬ್ದವೇ ಮೊದಲಾದ ವಿಷಯಗಳನ್ನು ತ್ಯಾಗಗೈದು ಏಕಾಂತ ಮತ್ತು ಶುದ್ಧವಾದ ದೇಶದಲ್ಲಿ ವಾಸ ಮಾಡುವವನೂ, ಸಾತ್ವಿಕ ಧಾರಣಶಕ್ತಿಯ ಮೂಲಕ ಅಂತಃಕರಣ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು, ಮನಸ್ಸು, ವಾಣಿ ಮತ್ತು ಶರೀರವನ್ನು ವಶದಲ್ಲಿರಿಸಿಕೊಳ್ಳುವವನೂ, ರಾಗ- ದ್ವೇಷಗಳನ್ನು ಸರ್ವಥಾ ನಾಶಗೊಳಿಸಿ, ಚೆನ್ನಾದ ದೃಢವಾದ ವೈರಾಗ್ಯವನ್ನು ಆಶ್ರಯಿಸುವವನೂ ಹಾಗೂ ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ ಮತ್ತು ಪರಿಗ್ರಹವನ್ನು ತ್ಯಾಗಮಾಡಿ, ನಿರಂತರ ಧ್ಯಾನಯೋಗ ಪರಾಯಣನಾಗಿರುವ ಮಮತಾರಹಿತ ಶಾಂತಿಯುಕ್ತ ಪುರುಷನು, ಸಚ್ಚಿದಾನಂದ ಬ್ರಹ್ಮನಲ್ಲಿ ಅಭಿನ್ನಭಾವದಿಂದ ಸ್ಥಿತನಾಗಿರಲು ಪಾತ್ರನಾಗುತ್ತಾನೆ.

18.51 writeup

18.52

ವಿವಿಕ್ತಸೇವೀ ಲಘ್ವಾಶೀ, ಯತವಾಕ್ಕಾಯಮಾನಸಃ
ಧ್ಯಾನಯೋಗಪರೋ ನಿತ್ಯಂ(ಮ್), ವೈರಾಗ್ಯಂ(ಮ್) ಸಮುಪಾಶ್ರಿತಃ॥52॥

18.52 writeup

18.53

ಅಹಂಕಾರಂ(ಮ್) ಬಲಂ(ನ್) ದರ್ಪಂ(ಙ್), ಕಾಮಂ(ಙ್) ಕ್ರೋಧಂ(ಮ್) ಪರಿಗ್ರಹಮ್
ವಿಮುಚ್ಯ ನಿರ್ಮಮಃ(ಶ್) ಶಾಂತೋ, ಬ್ರಹ್ಮಭೂಯಾಯ ಕಲ್ಪತೇ ॥53॥

ಆತ್ಮ ಸಾಕ್ಷಾತ್ಕಾರಕ್ಕೆ ಅರ್ಹನಾಗುವವನಲ್ಲಿರಬಹುದಾದ ಲಕ್ಷಣಗಳನ್ನು ಈ ಮೂರು ಶ್ಲೋಕಗಳಲ್ಲಿ ತಿಳಿಸಲಾಗಿದೆ.

'ಬುದ್ಧ್ಯಾ ವಿಶುದ್ಧಯಾ ಯುಕ್ತೋ (ಬುದ್ಧಿಯಿಂದ ಪೂರ್ಣ ಶುದ್ಧನಾದ)' ವ್ಯಕ್ತಿಯಲ್ಲಿ ಐದು ಪ್ರಮುಖ ಲಕ್ಷಣಗಳನ್ನು ಕಾಣಬಹುದು.
- ಯಾವ ಕೆಲಸವು ಧರ್ಮಯುಕ್ತವಾದದ್ದು ಎಂಬುದನ್ನು ಅರಿತು ಕೆಲಸ ಮಾಡುತ್ತಾನೆ. ತನ್ನದಲ್ಲದ ಕೆಲಸದಲ್ಲಿ ಆಸಕ್ತಿಯನ್ನು ತೋರುವುದಿಲ್ಲ.
- ಧರ್ಮಯುಕ್ತವಾದರೂ ಅದು ಶಾಸ್ತ್ರಸಮ್ಮತವಾಗಿದೆಯೋ ಇಲ್ಲವೋ ಎಂದು ಯೋಚಿಸಿ ಕಾರ್ಯ ಮಾಡುತ್ತಾನೆ.
- ಮಾಡುವ ಕೆಲಸ ತನಗೂ ಪರರಿಗೂ ಶ್ರೇಯಸ್ಕರವೋ ಅಲ್ಲವೋ ಎಂದು ಯೋಚನೆ ಮಾಡುತ್ತಾನೆ.
- ಮಾಡುವ ಕೆಲಸ ಧರ್ಮಯುಕ್ತವಾಗಿದ್ದರೂ, ಶಾಸ್ತ್ರ ಸಮ್ಮತವಾಗಿದ್ದರೂ, ಶ್ರೇಯಸ್ಕರವಾಗಿದ್ದರೂ, ಅದು ಆ ಸಮಯದಲ್ಲಿ ಮಾಡಲೇಬೇಕಾದ ಕೆಲಸವೇ ಎಂಬುದನ್ನು ಯೋಚನೆ ಮಾಡುತ್ತಾನೆ.
- ಈ ಕೆಲಸ ಮಾಡುವುದರಿಂದ ನಾನು ಅಂದುಕೊಂಡ ಗುರಿಯನ್ನು ತಲುಪುತ್ತೇನೋ ಇಲ್ಲವೋ, ಇದರಿಂದ ನನ್ನ ಗುರಿ ತಲುಪುವ ಮಾರ್ಗದಲ್ಲಿ ಯಾವುದೇ ಅಡೆತಡೆ ಆಗುತ್ತದೆಯೋ ಎಂದು ಆಲೋಚನೆ ಮಾಡಿ ಕಾರ್ಯ ಮಾಡುತ್ತಾನೆ.

ಶುದ್ಧವಾದ ಬುದ್ಧಿಯನ್ನು ಹೊಂದಿದ ಮನುಷ್ಯ ಒಂದು ಕೆಲಸವನ್ನು ಮಾಡಬೇಕಾದರೆ ಈ ಎಲ್ಲಾ ವಿಷಯಗಳ ಬಗ್ಗೆ ಚಿಂತಿಸಿ ಕೆಲಸ ಮಾಡುತ್ತಾನೆ. ದಿನಗಟ್ಟಲೆ ತೆಗೆದುಕೊಳ್ಳದೇ ಒಂದು ಕ್ಷಣದಲ್ಲಿ ಇವುಗಳ ಬಗ್ಗೆ ಯೋಚಿಸಿ ಕಾರ್ಯತತ್ಪರನಾಗುತ್ತಾನೆ. ಅವನಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ನಿಸ್ಸಂಶಯನಾಗಿ ಕಾರ್ಯ ಮಾಡುತ್ತಾನೆ.

ಮೇಲ್ನೋಟಕ್ಕೆ "ಲಘ್ವಾಶಿ" ಪದದ ಅರ್ಥ 'ಕಡಿಮೆ ತಿನ್ನುವನನು' ಎಂಬುದು. ಆದರೆ ಇಲ್ಲಿ ಇದರ ಗೂಢ ಅರ್ಥವನ್ನು ತಿಳಿಯಬೇಕು. ಆಹಾರವನ್ನೇನೋ ನಾವು ಬಾಯಿಯಿಂದ ತಿನ್ನುತ್ತೇವೆ. ಆದರೆ ಆಹಾರವೊಂದನ್ನೇ ನಾವು ಗ್ರಹಣ (ಸೇವನೆ) ಮಾಡುವುದಿಲ್ಲ. ನಮ್ಮ ಎಲ್ಲಾ ಇಂದ್ರಿಯಗಳಿಂದಳೂ ಸೇವಿಸುತ್ತೇವೆ. ಆದ್ದರಿಂದ ಜೀವನ ನಡೆಸುವ ಸಮಯದಲ್ಲಿ ಅವಶ್ಯಕವಾದ ಪ್ರತಿಯೊಂದು ವಸ್ತು(ವಿಷಯ)ಗಳ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬುದು "ಲಘ್ವಾಶಿ" ಪದದ ಅರ್ಥ ವಿಸ್ತಾರ. ತಿನ್ನುವುದೊಂದೇ ಅಲ್ಲ, ಸ್ವೀಕರಿಸುವ ಎಲ್ಲಾ ವಿಷಯಗಳೂ ಜೀವನದಲ್ಲಿ ಹಿತಮಿತವಾಗಿರಬೇಕು.

ಆದರಣೀಯ, ಪರಮಪೂಜ್ಯರಾದ ಜಯದಯಾಲ್ ಗೋಯಂಕಾರ ಬಳಿ ಕೇವಲ ಮೂರು ಜೊತೆ ಬಟ್ಟೆಗಳಿರುತ್ತಿದ್ದವು. ಅವರು ಜೀವನದುದ್ದಕ್ಕೂ ತಮ್ಮ ಆಹಾರದಲ್ಲಿ ಕೇವಲ ಮೂರು ಬಗೆಯ ಪದಾರ್ಥಗಳನ್ನು ಮಾತ್ರ ಸೇವಿಸುತ್ತಿದ್ದರು.

ಸಾಧನೆಯ ಮಾರ್ಗದಲ್ಲಿ ಮುಂದುವರಿಯಬೇಕಾದರೆ ನಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತಾ ಹೋಗಬೇಕು. ಇಂದ್ರಿಯ ವಿಷಯಗಳಲ್ಲಿ ಅನಾಸಕ್ತನಾಗಬೇಕು.
ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಹೊರಟವನು ಏಕಾಂತವಾಸಿ(ವಿವಿಕ್ತಸೇವಿ)ಯಾಗಿರುತ್ತಾನೆ.

ನಾವು "ಏಕಾಂತ"ಕ್ಕೆ ಹೊಸ ಅರ್ಥವನ್ನೇ ಕೊಟ್ಟುಬಿಟ್ಟಿದ್ದೇವೆ. ಮಾಡಲು ಏನೂ ಕೆಲಸವಿಲ್ಲದಿದ್ದಾಗ, ಟಿವಿ, ಕರೆಂಟ್ ಇಲ್ಲದೇ ಇದ್ದಾಗ "ಬೋರ್ ಆಗುತ್ತಿದೆ" ಎಂದು ಹೇಳಿಬಿಡುತ್ತೇವೆ. ನಮಗೆ ನಮ್ಮ ಏಕಾಂತವನ್ನು ಹೇಗೆ ಕಳೆಯಬೇಕು ಎಂಬುದು ಕೂಡಾ ತಿಳಿದಿಲ್ಲ. ಮಾತನಾಡಲು ಯಾರೂ ಇಲ್ಲ, ಟಿವಿ ಇಲ್ಲ, ಇಂಟರ್ನೆಟ್ ಇಲ್ಲ ಎಂದಾದಾಗ ಬೇಸರ ಮಾಡಿಕೊಳ್ಳುತ್ತೇವೆ. ಆದರೆ ಈ ಏಕಾಂತದ ಆನಂದವನ್ನು ಅನುಭವಿಸುವವನು ಸಾಧನೆಯ ಹಾದಿಯಲ್ಲಿ ಹೊರಟಿರುವವನು ಎಂದು ಅರ್ಥ. ಸಾಧಕನಲ್ಲಿ ಸಾತ್ತ್ವಿಕವಾದ ಧೃತಿ ಇರಬೇಕು.

ಸಪ್ತರ್ಷಿಗಳೇ ದೇವಿ ಪಾರ್ವತಿಯ ಬಳಿ ಬಂದು, "ಸ್ಮಶಾನವಾಸಿ, ವೈರಾಗಿ, ಸರ್ಪವನ್ನು ಧರಿಸಿದ, ಚರ್ಮದ ಕೌಪೀನವನ್ನು ಧರಿಸಿದ ಶಿವನನ್ನು ಯಾಕೆ ಮದುವೆಯಾಗಬೇಕೆಂದು ಹಟ ಹಿಡಿದಿರುವೆ? ಮದುವೆ ಆಗಲು ತಪಸ್ಸು ಮಾಡುವೆಯಾದರೆ, ಸರ್ವಾಲಂಕಾರ ಭೂಷಣನಾದ ಸುಂದರನಾದ ವಿಷ್ಣುವನ್ನು ಒಲಿಸಿಕೊಳ್ಳಬಹುದಲ್ಲ!" ಎಂದು ಬುದ್ಧಿ ಹೇಳಿದರು. ಆದರೆ ಪಾರ್ವತಿಯ ದೃಢ ಮನಸ್ಸು ಕೇವಲ ಪರಶಿವನ ಧ್ಯಾನದಲ್ಲಿತ್ತು. "ನನ್ನ ಗುರುಗಳು, ನಾರದ ಮಹರ್ಷಿಗಳು ಶಿವನನ್ನೇ ಮದುವೆಯಾಗಲು ನೀನು ಜನ್ಮ ತಾಳಿರುವುದು" ಎಂದು ಹೇಳಿದ್ದಾರೆ. "ಏನೇ ಆಗಲಿ ನಾನು ವರಿಸುವುದು ಶಿವನನ್ನೇ" ಎಂಬ ಧೃತಿಯಿಂದ ದೇವೀ ಪಾರ್ವತಿ ತಪಸ್ಸು ಮಾಡಿದಳು. ಕೋಟಿ ಜನ್ಮಗಳೇ ಕಳೆಯಲಿ, ಮದುವೆ ಆದರೆ ಶಿವನನ್ನು ಮಾತ್ರ. ಇಲ್ಲದೇ ಇದ್ದರೆ ಹಾಗೇ ಕುಮಾರಿಯಾಗಿಯೇ ಇರುತ್ತೇನೆ. ಎಂದು ಸಂಕಲ್ಪ ಮಾಡಿದ್ದಳು ಪಾರ್ವತಿ.

ನವರಾತ್ರಿಯಲ್ಲಿ ಒಂಬತ್ತೂ ದಿನ ಉಪವಾಸ ಮಾಡುತ್ತೇವೆ ಎಂದು ಸಂಕಲ್ಪ ಮಾಡಿರುತ್ತೇವೆ. ಆದರೆ ಮೂರು ದಿನ ಉಪವಾಸ ಮಾಡುವ ಹೊತ್ತಿಗೆ ಸಾಕೆನಿಸುತ್ತದೆ. ಈ ವರ್ಷ ಇಷ್ಟೇ ಸಾಕು, ಇನ್ನು ಮುಂದಿನ ವರ್ಷ ನೋಡಿಕೊಳ್ಳೋಣ ಎಂದು ಸಂಕಲ್ಪ ಮುರಿಯುತ್ತೇವೆ. ಆಕಾಶ ಭೂಮಿ ಒಂದಾದರೂ ವ್ರತ ಪಾಲಿಸಲೇಬೇಕು ಎಂಬ ಧೃಢ ಸಂಕಲ್ಪ ಇದ್ದಾಗ ಮಾತ್ರ ಸಾಧನೆ ಸಾಧ್ಯ.

ಇನ್ನೊಂದು ಮುಖ್ಯ ಲಕ್ಷಣವೆಂದರೆ ಆತ್ಮದ ನಿಯಂತ್ರಣ, "ಆತ್ಮಾನಂ ನಿಯಮ್ಯ ಚ". ಏನು ಮಾಡಬೇಕು, ಏನು ಮಾಡಬಾರದು? ಯಾಕೆ ಮಾಡಬೇಕು? ಎಷ್ಟು ಹೊತ್ತಿಗೆ ಮಾಡಬೇಕು? ಎಂಬ ಎಲ್ಲಾ ವಿಚಾರಗಳನ್ನೂ ಸರಿಯಾಗಿ ಪರಾಮರ್ಶೆ ಮಾಡಿ ಕಾರ್ಯ ಮಾಡುವುದು. ಎಲ್ಲದರಲ್ಲಿಯೂ ಸಂಯಮದಿಂದ ವರ್ತಿಸುವುದು.
ಮನಸ್ಸು, ಮಾತು ಮತ್ತು ಕೆಲಸಗಳೆಲ್ಲದರಲ್ಲಿ ಸಂಯಮ ತಾಳುವುದು.

ಕೇವಲ ಕೆಲಸದಲ್ಲಷ್ಟೇ ಅಲ್ಲ, ಮಾತಿನಲ್ಲಿಯೂ ಹಿಡಿತವಿರಬೇಕು. ಒಂದು ಮಾತಿನಿಂದ ಹಲವು ತೊಂದರೆಗಳಾಗುತ್ತದೆ. "ಮಾತು ಮನೆ ಒಡೆಯಿತು" ಎಂಬ ಗಾದೆಯಿದೆ. ಆಡುವ ಮಾತಿನ ಮೇಲೆ ಹಿಡಿತವಿರಬೇಕು. ಮನಸ್ಸಿನಲ್ಲಿ ಬರುವ ಯೋಚನೆಗಳಿಂದ ಮಾತಿನ ಮೇಲೆ ಹಿಡಿತ ತಪ್ಪುತ್ತದೆ. ಮಾತು ಆಡಿ ಬಿಡುತ್ತೇವೆ. ಆದರೆ ಆಡಿದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಾತಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಸಾಧ್ಯವಾಗುವುದು ಮನಸ್ಸನ್ನು ಶುದ್ಧವಾಗಿಟ್ಟುಕೊಂಡಾಗ ಮಾತ್ರ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳಿಗೆ ಆಶ್ರಯ ಕೊಡಬಾರದು. ಕೆಟ್ಟ ಯೋಚನೆಗಳು ಕೆಟ್ಟ ಮಾತಿಗೆ ಕಾರಣ. ಕೆಟ್ಟ ಮಾತುಗಳು ಒಂದು ದಿನ ಕೆಟ್ಟ ಕೆಲಸಕ್ಕೆ ಪ್ರೇರಣೆ ಕೊಡುತ್ತದೆ. ಆದ್ದರಿಂದ ಮನಸ್ಸು ಸದಾ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಇದು ಸಾಧಕನ ಲಕ್ಷಣ.

ರಾಗದ್ವೇಷಗಳನ್ನು ತೊರೆದು ವೈರಾಗ್ಯವನ್ನು ಸಾಧಿಸಬೇಕು. ಇವೆರಡನ್ನು ಬಿಡುವುದು ಸುಲಭವಲ್ಲ. ನನಗೆ ಹಾನಿಯನ್ನುಂಟು ಮಾಡಿದವನ ಪ್ರತಿಯಾಗಿ ದ್ವೇಷ ಮಾಡದೇ ಇರುವುದು ಬಹಳ ಕಷ್ಟಕರವಾದದ್ದು. ಇನ್ನೊಬ್ಬರ ಏಳಿಗೆಯನ್ನು, ಯಶಸ್ಸನ್ನು ನೋಡಿ ಕೂಡಾ ದ್ವೇಷ ಮಾಡುವ ಜನರು ನಮ್ಮ ಮಧ್ಯೆ ಇರುತ್ತಾರೆ. ಭಗವದ್ಗೀತೆಯನ್ನು ಎಲ್ಲರಿಗಿಂತ ಬೇಗ ಕಂಠಪಾಠ ಮಾಡಿದವರನ್ನು ನೋಡಿ ಹಲವರಿಗೆ ಅವರ ಮೇಲೆ ಸಿಟ್ಟು ಬರುತ್ತದೆ.

ಜೈನ ತೀರ್ಥಂಕರರಾದ ಮಹಾವೀರರು ದಟ್ಟಅರಣ್ಯದಲ್ಲಿ ನಿಂತುಕೊಂಡು ಸಮಾಧಿಸ್ಥರಾದವರು. ಅರ್ಧ ಕಣ್ಣು ಮುಚ್ಚಿ ನಾಸಿಕದ ಮೂಲದಲ್ಲಿ ಏಕಾಗ್ರತೆ ಸಾಧಿಸಿ ಸಮಾಧಿ ಸ್ಥಿತಿಯಲ್ಲಿ ನಿಂತಿದ್ದರು. ಒಮ್ಮೆ ಒಬ್ಬ ದನಗಾಹಿ ದನಗಳನ್ನು ಮೇಯಿಸಲು ಆ ಜಾಗಕ್ಕೆ ಬಂದನು. ಸ್ವಲ್ಪ ಸಮಯ ಅಲ್ಲಿಯೇ ಕುಳಿತು, ಬಳಿಕ ಮಹಾವೀರರು ನಿಂತುಕೊಂಡಿದ್ದನ್ನು ನೋಡಿ, ತನ್ನ ದನಗಳನ್ನು ಸ್ವಲ್ಪ ಸಮಯ ನೋಡಿಕೊಳ್ಳಲು ಮಹಾವೀರರಿಗೆ ಹೇಳಿ ಅಲ್ಲಿಂದ ಹೊರಟು ಹೋದನು. ಸ್ವಲ್ಪ ಸಮಯದ ನಂತರ ಬಂದ ದನಗಾಹಿಗೆ ಅಲ್ಲಿ ದನಗಳು ಕಾಣಿಸಲಿಲ್ಲ. ಅಲ್ಲಿ ನಿಂತಿದ್ದ ಮಹಾವೀರರನ್ನು ದನಗಳ ಬಗ್ಗೆ ಕೇಳಿದನು. ಮಹಾವೀರರು ಅಲುಗಾಡದೆ ನಿಂತಿದ್ದರು. ಅವರು ಸಮಾಧಿ ಸ್ಥಿತಿಯಲ್ಲಿದ್ದಾರೆ ಎಂಬುದು ಈ ಸಾಧಾರಣ ಮನುಷ್ಯನಿಗೆ ಅರ್ಥವಾಗಲಿಲ್ಲ. ಮಹಾವೀರರನ್ನು ಪರಿಪರಿಯಾಗಿ ಮಾತನಾಡಿಸಲು ಪ್ರಯತ್ನ ಪಟ್ಟನು. ಕೊನೆಗೆ ಅವರು ಅಲುಗಾಡದೆ ನಿಂತಿದ್ದು ನೋಡಿ ಇವನಿಗೆ ವಿಪರೀತ ಕೋಪ ಬಂತು. ಅಲ್ಲಿಯೇ ಹತ್ತಿರವಿದ್ದ ಒಂದು ಚೂಪಾದ ಕೋಲನ್ನು ತಂದು ಮಹಾವೀರರ ಕಿವಿಗೆ ಚುಚ್ಚಿದನು. ಅವನು ಚುಚ್ಚಿದ ರಭಸ ಹೀಗಿತ್ತೆಂದರೆ ಮಹಾವೀರರ ಕಿವಿಯಿಂದ ರಕ್ತ ಬರತೊಡಗಿತು. ಆದರೂ ಮಹಾವೀರರು ನಿಶ್ಚಲವಾಗಿ ನಿಂತಿದ್ದರು. ಇದರಿಂದ ಇನ್ನೂ ಕೋಪಗೊಂಡ ದನ ಕಾಯುವವನು, ಒಂದು ದೊಡ್ಡ ಕಲ್ಲು ತಂದು ಮಹಾವೀರರ ಮೇಲೆ ಎತ್ತಿ ಬಿಸಾಕ ಹೊರಟನು. ಅಷ್ಟರಲ್ಲಿ ಸಾಕ್ಷಾತ್ ಇಂದ್ರದೇವನು ಪ್ರತ್ಯಕ್ಷನಾಗಿ, ಆ ದನಗಾಹಿಯನ್ನು ತಡೆದನು. ಮತ್ತು ಮಹಾವೀರರು ಸಮಾಧಿಸ್ಥರಾಗಿದ್ದಾರೆ. ಅವರಿಗೆ ತೊಂದರೆ ಕೊಡಬಾರದು. ಅವರನ್ನು ನೋಯಿಸಿ ನೀನು ಮಹಾಪಾಪ ಮಾಡಿದ್ದೀಯ. ನೀನು ದಂಡಕ್ಕೆ ಅರ್ಹನು ಎಂದು ಹೇಳಿ, ಮಹಾವೀರರ ಕಿವಿಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿ, ತನ್ನ ಕೈಗಳಿಂದ ಕಿವಿಯನ್ನು ಸವರಿ, ತಲೆ ನೇವರಿಸಿದನು. ದೇವ ಸ್ಪರ್ಶದಿಂದ ರಕ್ತ ಸುರಿಯುವುದು ನಿಂತಿತು. ಜೊತೆಗೆ ಮಹಾವೀರರಿಗೆ ಎಚ್ಚರವಾಯಿತು. ಅಲ್ಲಿ ಏನು ನಡೆಯಿತು ಎಂಬ ಯಾವ ವಿಷಯವೂ ಅವರಿಗೆ ತಿಳಿದಿರಲಿಲ್ಲ. ಆದರೂ ಕಿವಿಯಲ್ಲಿ ಏನೋ ಆಗಿರುವುದು ತಿಳಿಯಿತು. ಕುರುಬನು ಹೆದರಿ ನಡುಗುತ್ತ ನಿಂತಿದ್ದನು. ಇಂದ್ರ ದೇವನು ಅವನಿಗೆ ಬೈಯುತ್ತಿದ್ದನು. ಮತ್ತು ಮಹಾವೀರರ ಬಳಿ, ಇವನಿಗೆ ಏನು ಶಿಕ್ಷೆ ವಿಧಿಸುವುದು? ನೀವೇ ಹೇಳಿ ಎಂದು ಕೇಳಿದನು. ಮಹಾವೀರರು ಶಾಂತ ಚಿತ್ತದಿಂದ ಆ ಕುರುಬನನ್ನು ಅಲ್ಲಿಂದ ಹೋಗಲು ಹೇಳಿದರು. ಕುರುಬನು ಎದ್ದು ಬಿದ್ದು ಓಡಿ ಹೋದನು. ಸಂತ ಮಹಾತ್ಮರು ಹೀಗೆ ಎಲ್ಲರನ್ನೂ ಕ್ಷಮಿಸುತ್ತಾರೆ ಎಂದು ಗೊತ್ತಿರುವ ಇಂದ್ರ ದೇವನು ದನಗಾಹಿಯನ್ನು ಬಿಟ್ಟನು. ನಂತರ ಮಹಾವೀರರನ್ನುದ್ದೇಶಿಸಿ, "ಇನ್ನು ಮುಂದೆ ಹೀಗಾಗದಂತೆ ತಡೆಯಲು ಇಲ್ಲಿ ದೇವದೂತರನ್ನು ನೇಮಿಸುತ್ತೇನೆ" ಎಂದು ಹೇಳಿದನು. ಇದನ್ನು ಕೇಳಿದ ಮಹಾವೀರರು ಶಾಂತ ಚಿತ್ತರಾಗಿ ಅಲ್ಲಿಂದ ಹೊರಟರು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಹಿಂದೆ ತಿರುಗಿ, ಇಂದ್ರದೇವನಿಗೂ ಅಲ್ಲಿಂದ ಹೋಗುವಂತೆ ಸನ್ನೆ ಮಾಡಿದರು. ಹಾನಿ ಮಾಡಿದ ದನಗಾಹಿಯ ಮೇಲೆ ದ್ವೇಷವಿಲ್ಲ. ಉಪಕಾರ ಮಾಡಿದ ಇಂದ್ರದೇವನ ಮೇಲೆ ಪ್ರೀತಿಯೂ ಇಲ್ಲ. ಇದು ಸಾಧನೆಯ ಪರಮೋಚ್ಚ ಸ್ಥಿತಿ.

ರಾಗದ್ವೇಷಗಳು ಸಾಧನೆಯ ಹಾದಿಯಲ್ಲಿ ಅಡ್ಡಿಯುಂಟು ಮಾಡುವ ಪ್ರಮುಖ ಅಂಶಗಳು. ಭಗವದ್ಗೀತೆಯಲ್ಲಿ ಈ ವಿಷಯವನ್ನು ಬಹಳ ಸಲ ಚರ್ಚೆ ಮಾಡಲಾಗಿದೆ.

ಮಗನಿಗೆ ಮೈ ಹುಷಾರಿಲ್ಲ ಎಂದ ಕೂಡಲೇ ಅದೇ ದುಃಖದಿಂದ ತಾಯಿಯೂ ಕಾಯಿಲೆ ಬೀಳುತ್ತಾಳೆ. ಹೆಂಡತಿಯ ಕಷ್ಟವನ್ನು ಗಂಡ ಸಹಿಸಲಾರದೇ ಅವನೂ ಕಷ್ಟ ಅನುಭವಿಸುತ್ತಾನೆ. ಯಾರ ಮೇಲೂ ಕೂಡಾ ಈ ಪರಿಯಾದ ಮೋಹ ಒಳ್ಳೆಯದಲ್ಲ. ಅತಿಯಾದ ಪ್ರೀತಿ, ಅತಿಯಾದ ದ್ವೇಷ ಎರಡೂ ಸಾಧಕನ ಹಾದಿಯ ತೊಡಕುಗಳು.

ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ಹೊಗಳಿಕೆ, ತೆಗಳಿಕೆ, ಅಧಿಕಾರ ಬಲ ಇವೆಲ್ಲವನ್ನೂ ತ್ಯಜಿಸಿದ ಶಾಂತ ಮನಸ್ಕನು ಆತ್ಮ ಸಾಕ್ಷಾತ್ಕಾರವನ್ನು ಹೊಂದುತ್ತಾನೆ. ಇವೆಲ್ಲವುಗಳಿಗೂ ಮುಖ್ಯವಾಗಿ ಭಗವಂತನು 'ನಿತ್ಯಂ' ಎಂಬ ಶಬ್ದದ ಪ್ರಯೋಗ ಮಾಡಿದ್ದಾನೆ. ಈ ಎಲ್ಲಾ ಲಕ್ಷಣಗಳೂ ನಿತ್ಯ ನಿರಂತರವಾಗಿದ್ದರೆ ಮಾತ್ರ ಆ ಸಾಧಕನು ಆತ್ಮ ಸಾಕ್ಷಾತ್ಕಾರ ಪಡೆಯಲು ಸಾಧ್ಯ. ಈ ಸ್ಥಿತಿ ಅಪರೂಪಕ್ಕೆ ಒಮ್ಮೆ ಇದ್ದರೆ ಪ್ರಯೋಜನವಿಲ್ಲ. ಮೇಲೆ ಹೇಳಿದ ಲಕ್ಷಣಗಳು ನಮ್ಮಲ್ಲಿಯೂ ಒಮ್ಮೊಮ್ಮೆ ಕಾಣಿಸುತ್ತದೆ. ಆದರೆ ಇದು ಒಮ್ಮೊಮ್ಮೆ ಅಷ್ಟೇ. ಅಪರೂಪಕ್ಕೆ ದರ್ಪ ತೋರದೇ ಇರುವುದು, ದ್ವೇಷ ಮಾಡದೇ ಇರುವುದು, ಮೋಹಕ್ಕೆ ಒಳಗಾಗದೆ ಇರುವುದು ಮಾಡಿದರೆ ಏನೂ ಪ್ರಯೋಜನವಿಲ್ಲ. ಇವೆಲ್ಲವೂ ನಿತ್ಯದ ಮಂತ್ರವಾದಾಗ ಮಾತ್ರ ಸಾಧನೆ ಸಾಧ್ಯ.

ಈ ಎಲ್ಲಾ ಲಕ್ಷಣಗಳನ್ನೂ ನಿತ್ಯ ನಿರಂತರವಾಗಿ ರೂಢಿಸಿಕೊಂಡ ಮನುಷ್ಯ ಮತ್ತೆ ಪ್ರತ್ಯೇಕವಾಗಿ ಧ್ಯಾನ ಮಾಡಬೇಕಾಗಿಲ್ಲ. ಅವನ ನಿತ್ಯದ ನಡೆನುಡಿಗಳೇ ಧ್ಯಾನಯುಕ್ತವಾಗಿರುತ್ತದೆ. ಅವನು ಎಲ್ಲಾ ವಿಷಯ ವಸ್ತುಗಳ ಮೇಲಿನ ಮಮಕಾರವನ್ನು ತೊರೆದಿರುತ್ತಾನೆ. ನಾನು, ನನ್ನದು ಎಂಬ ಭಾವವನ್ನು ತೊರೆದಿರುತ್ತಾನೆ. ಈ ಶರೀರವೂ ತನ್ನ ಸ್ವಂತದ್ದಲ್ಲ ಎಂಬ ಭಾವ ಅವನಲ್ಲಿರುತ್ತದೆ. ಇಂಥ ಸ್ಥಿತಿಯಲ್ಲಿ ಆ ವ್ಯಕ್ತಿಯು ಅತ್ಯಂತ ಶಾಂತ ಸ್ವಭಾವದವನಾಗುತ್ತಾನೆ. ಈ ಅಪರಿಮಿತ ಶಾಂತಿಯನ್ನು ಪ್ರಭು ಶ್ರೀರಾಮನಲ್ಲಿ ಕಾಣಬಹುದು ಎಂದು ಗೋಸ್ವಾಮಿ ತುಳಸಿದಾಸರು ರಾಮಚರಿತ ಮಾನಸದಲ್ಲಿ ಸುಂದರವಾಗಿ ಹೇಳುತ್ತಾರೆ.

ಅಶಾಂತ ಸ್ವಭಾವದವರು ಎಲ್ಲಿಯೂ ಶಾಂತಿಯನ್ನು ಕಾಣುವುದಿಲ್ಲ. ಎಲ್ಲದರಲ್ಲಿಯೂ ಅತೃಪ್ತರಾಗಿಯೇ ಇರುತ್ತಾರೆ. ಎಲ್ಲಿಯೂ ಅವರಿಗೆ ಸಮಾಧಾನ ಇರುವುದಿಲ್ಲ. ಮನೆಯಲ್ಲಿ ಶಾಂತಿ ಸಿಗದೇ ಸಂನ್ಯಾಸಿಯಾದರೆ ಆ ವ್ಯಕ್ತಿಗೆ ಸಂನ್ಯಾಸತ್ವದಲ್ಲಿ ಕೂಡಾ ಶಾಂತಿ ಸಿಗುವುದಿಲ್ಲ. ಎಲ್ಲಕ್ಕೂ ಚಿಂತೆ ಮಾಡುವ, ಶೋಕಿಸುವ ಮನುಷ್ಯನನ್ನು ಭಗವಂತನೂ ಕೈ ಬಿಡುತ್ತಾನೆ. ಆದರೆ ಎಲ್ಲಾ ಚಿಂತೆಯನ್ನು ಬಿಟ್ಟು ಭಗವಂತನನ್ನು ಧ್ಯಾನ ಮಾಡಿದರೆ ಭಗವಂತ ಖಂಡಿತ ಅವರನ್ನು ಉದ್ಧಾರ ಮಾಡುತ್ತಾನೆ. "ಚಿಂತ್ಯಾಕೆ ಮಾಡುತಿದ್ದೀ ಚಿನ್ಮಯನಿದ್ದಾನೆ" ಅಲ್ಲವೇ? ಆ ಸಚ್ಚಿದಾನಂದ ಘನ ಪರಮಾತ್ಮನಿರುವಾಗ ಯಾವ ಚಿಂತೆ?

ವಾಸ್ತವದಲ್ಲಿ ಭಗವದ್ ಪ್ರಾಪ್ತಿ ಎಂಬುದು ಹೊಸದನ್ನೇನೋ ಪಡೆಯುವ ಪ್ರಕ್ರಿಯೆಯಲ್ಲ. "ಏಕೋ ಬ್ರಹ್ಮ ದ್ವಿತೀಯೋ ನಾಸ್ತಿ" ಎಂಬುದು ಸತ್ಯವಾದರೆ ಹೊಸದಾಗಿ ಬ್ರಹ್ಮನನ್ನು ಪಡೆಯಬೇಕೇ?

ಇಲ್ಲಿ ಹೇಳಿರುವ ಬ್ರಹ್ಮತತ್ತ್ವದ ಅರ್ಥವೇನು?

ನಮ್ಮ ಬಳಿ ಇರುವ ಬಂಗಾರವನ್ನು ಕೊಟ್ಟು ಬೇರೆ ಬಂಗಾರವನ್ನು ತೆಗೆದುಕೊಳ್ಳಲು ನಾವು ಬಂಗಾರದ ಅಂಗಡಿಗೆ ಹೋಗುತ್ತೇವೆ. ಬಂಗಾರದ ಮೌಲ್ಯವನ್ನು ಹಾಗೆಯೇ ಆಭರಣದಿಂದ ಅಳೆಯುವುದಿಲ್ಲ. ಆ ಆಭರಣವನ್ನು ಬೆಂಕಿಯಲ್ಲಿ ಕರಗಿಸಿ, ಅದರಲ್ಲಿರುವ ಶುದ್ಧ ಬಂಗಾರವನ್ನು ಬೆರ್ಪಡಿಸಿ, ಶುದ್ಧ ಬಂಗಾರಕ್ಕೆ ಬೆಲೆ ಕಟ್ಟಲಾಗುತ್ತದೆ. ಮತ್ತು ಹೊಸ ಆಭರಣ ಮಾಡುವಾಗ ಈ ಶುದ್ಧ ಬಂಗಾರವನ್ನು ಮೊದಲು ಶುದ್ಧ ಬಂಗಾರದ ಜೊತೆ ಬೆರೆಸಿ ನಂತರ ಆಭರಣ ತಯಾರು ಮಾಡಲಾಗುತ್ತದೆ. ಶುದ್ಧ ಬಂಗಾರವು ಶುದ್ಧ ಬಂಗಾರದ ಜೊತೆ ಮಾತ್ರ ಬೆರೆಯುತ್ತದೆ. ಅದೇ ರೀತಿ ಆತ್ಮ. ಶುದ್ಧ ಆತ್ಮವು ಮಾತ್ರ ಪರಿಶುದ್ಧ ಪರಬ್ರಹ್ಮ ಪರಮಾತ್ಮನಲ್ಲಿ ಏಕೀಕಾರವಾಗಲು ಸಾಧ್ಯ. ಆತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲ. ಆತ್ಮವು ಶುದ್ಧವಾದಾಗ ಪರಮಾತ್ಮವೇ ಆಗುತ್ತದೆ. ಆತ್ಮದ ಶುದ್ಧಿಯಿಂದ ಮನುಷ್ಯ ಬ್ರಹ್ಮತತ್ತ್ವವನ್ನು ಪಡೆಯುತ್ತಾನೆ. ಬ್ರಹ್ಮವೇ ಆಗುತ್ತಾನೆ.

ಮೇಲಿನ ಮೂರು ಶ್ಲೋಕಗಳಲ್ಲಿರುವ ಲಕ್ಷಣಗಳನ್ನು ಪಡೆದ ಆತ್ಮವು ಪರಿಶುದ್ಧವಾಗಿ ಪರಬ್ರಹ್ಮನಲ್ಲಿ ಲೀನವಾಗಿ ಹೋಗುತ್ತದೆ.

18.54

ಬ್ರಹ್ಮಭೂತಃ(ಫ್) ಪ್ರಸನ್ನಾತ್ಮಾ, ನ ಶೋಚತಿ ನ ಕಾಂಕ್ಷತಿ
ಸಮಃ(ಸ್) ಸರ್ವೇಷು ಭೂತೇಷು, ಮದ್ಭಕ್ತಿಂ(ಮ್) ಲಭತೇ ಪರಾಮ್ ॥54॥

ಮತ್ತೆ ಆ ಸಚ್ಚಿದಾನಂದಘನ ಬ್ರಹ್ಮನಲ್ಲಿ ಸ್ಥಿತವಾದ, ಪ್ರಸನ್ನ ಮನಸ್ಸುಳ್ಳ ಯೋಗಿಯು ಯಾರಿಗಾಗಿಯೂ ಶೋಕಿಸುವುದಿಲ್ಲ ಮತ್ತು ಯಾವುದನ್ನೂ ಬಹಸುವುದಿಲ್ಲ. ಇಂತಹ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಪರಾಭಕ್ತಿಯನ್ನು ಪಡೆಯುತ್ತಾನೆ.

ಪರಮಪದವನ್ನು ಸಾಧಿಸಿದವನು ಪರಮಾನಂದದಲ್ಲಿರುತ್ತಾನೆ. ಅವನು ಏನನ್ನೂ ಬಯಸುವುದಿಲ್ಲ. ಯಾವ ದುಃಖವೂ ಅವನನ್ನು ಕಾಡುವುದಿಲ್ಲ. ಪ್ರಪಂಚದ ಎಲ್ಲಾ ಜೀವಿಗಳನ್ನೂ ಅವನು ಸಮ ಭಾವದಿಂದ ನೋಡುತ್ತಾನೆ. ಪರಮ ಭಕ್ತನಾಗುತ್ತಾನೆ.

ಕತ್ತಲೆ ಇಲ್ಲದ ಕಡೆ ತನ್ನಿಂದ ತಾನೇ ಬೆಳಕಾಗುತ್ತದೆ. ಆಸೆ ಆಕಾಂಕ್ಷೆಗಳಿಲ್ಲದ ಮನಸ್ಸಿನಲ್ಲಿ ಪರಮಾನಂದದ ಅನುಭವವಾಗುತ್ತದೆ. ಎಲ್ಲಾ ದುಃಖ, ಶೋಕಗಳಿಗೂ ಮೂಲ ಅಪೇಕ್ಷೆ. ಅಪೇಕ್ಷೆಗಳೇ ಇಲ್ಲದ ಸ್ಥಿತಿಯೇ ಪರಮಾನಂದದ ಸ್ಥಿತಿ.

ಹೊಟ್ಟೆ ತುಂಬಾ ಹಾಲು ಕುಡಿದು, ಒಳ್ಳೆ ನಿದ್ರೆ ಮಾಡಿ ಎದ್ದ ಕಂದಮ್ಮನ ಮುಖದಲ್ಲಿ ಆನಂದ ತುಂಬಿರುತ್ತದೆ. ಪರಮಾನಂದ ಎಂಬುದು ಸಹಜ ಸ್ಥಿತಿ. ಆಸೆ, ಆಕಾಂಕ್ಷೆಗಳನ್ನು ತುಂಬಿಕೊಂಡು ಮನುಷ್ಯನು ಈ ಸಹಜತೆಯಿಂದ ವಿಮುಖನಾಗಿರುತ್ತಾನೆ. ಪರಮಾನಂದವನ್ನು ಹೊಂದಿದವನಿಗೆ ಪರಮ ಭಕ್ತಿಯೂ ಲಭಿಸುತ್ತದೆ. ಪರಾಭಕ್ತಿಯಿಂದ ತತ್ತ್ವಜ್ಞಾನ ಮತ್ತು ಭಗವದ್ ಭಕ್ತಿ ಸಿಗುತ್ತದೆ. ಭಕ್ತಿಮಾರ್ಗದಲ್ಲಿ ನಡೆದವನಿಗೆ ಭಕ್ತಿ ಸಿಗುತ್ತದೆ. ಜ್ಞಾನ ಮಾರ್ಗವನ್ನು ಅನುಸರಿಸಿದವನು ತತ್ತ್ವಜ್ಞಾನವನ್ನು ಪಡೆಯುತ್ತಾನೆ. ಸಾಂಖ್ಯಯೋಗಿಯಲ್ಲಿ ಕರ್ಮಯೋಗ ಮತ್ತು ಭಕ್ತಿಯೋಗವು ಪ್ರಕಟವಾದರೆ, ಭಕ್ತಿಯೋಗಿಯಲ್ಲಿ ತತ್ತ್ವಜ್ಞಾನ ಪ್ರಕಟವಾಗುತ್ತದೆ. ಯಾರಲ್ಲಿ ಏನು ಇಲ್ಲವೋ ಅದನ್ನು ಭಗವಂತ ಕೊಟ್ಟು ಅವರನ್ನು ಉದ್ಧಾರ ಮಾಡುತ್ತಾನೆ. ಭಗವದ್ ಪ್ರಾಪ್ತಿ ಎಂಬುದು ಅಂತಿಮ ಗಂತವ್ಯ.

ಬೇರೆ ಬೇರೆ ಊರಿನಲ್ಲಿ ವಾಸವಾಗಿದ್ದ ನಾಲ್ಕು ಗೆಳೆಯರು ಒಂದು ಊರಿನ ಪಾರ್ಕಿನಲ್ಲಿ ಭೇಟಿಯಾಗಲು ನಿರ್ಧಾರ ಮಾಡಿದರು. ಒಬ್ಬನು ವಿಮಾನದಲ್ಲಿ, ಇನ್ನೊಬ್ಬ ರೈಲಿನಲ್ಲಿ, ಮತ್ತೊಬ್ಬ ಕಾರಿನಲ್ಲಿ ಮತ್ತು ಕೊನೆಯವ ಆಟೋದಲ್ಲಿ ಆ ಊರನ್ನು ತಲುಪಿದರು. ಎಲ್ಲರೂ ಆ ಪಾರ್ಕಿನ ಗೇಟಿನ ವರೆಗೆ ಬೇರೆ ಬೇರೆ ವಾಹನಗಳಲ್ಲಿ ಬಂದರು. ಆದರೆ ಗೇಟಿನಿಂದ ಒಳಗೆ ಹೋಗುವಾಗ ಆಯಾ ವಾಹನಗಳನ್ನು ಬಿಟ್ಟು ನಾಲ್ಕೂ ಜನ ಕಾಲ್ನಡಿಗೆಯಲ್ಲಿ ಪಾರ್ಕನ್ನು ಪ್ರವೇಶ ಮಾಡಿದರು. ಹೀಗೆ ಅಂತಿಮ ಗಂತವ್ಯವನ್ನು ತಲುಪಲು ಅನುಸರಿಸಿದ ಮಾರ್ಗ ಬೇರೆ ಬೇರೆ ಇರಬಹುದು. ಆದರೆ ಎಲ್ಲರ ಗಂತವ್ಯವೂ ಒಂದೇ. ಆ ಗಂತವ್ಯ ತಲುಪಲು ಪ್ರಾರಂಭದಲ್ಲಿ ಯಾವುದೇ ಮಾರ್ಗ ಅನುಸರಿಸಿರಲಿ, ಗಂತವ್ಯದ ಸಮೀಪ ತಲುಪಿದಾಗ ಎಲ್ಲರೂ ಅನುಸರಿಸುವ ಮಾರ್ಗ ಒಂದೇ ಆಗಿರುತ್ತದೆ. ಕರ್ಮ ಮಾರ್ಗ, ಭಕ್ತಿ ಮಾರ್ಗ, ಧ್ಯಾನ ಮಾರ್ಗ ಜ್ಞಾನ ಮಾರ್ಗ ಹೀಗೆ ಗುರಿ ಮುಟ್ಟಲು ಪ್ರಾರಂಭದಲ್ಲಿ ಆರಿಸಿಕೊಂಡ ಸಾಧನ ಯಾವುದೇ ಇರಬಹುದು. ಆದರೆ ಎಲ್ಲರ ಕೊನೆಯ ಹಂತದ ಮಾರ್ಗ ಒಂದೇ ಆಗಿರುತ್ತದೆ. ಭಗವದ್ ಪ್ರಾಪ್ತಿಗೂ ಸ್ವಲ್ಪ ಮೊದಲು ಎಲ್ಲಾ ಯೋಗಿಗಳೂ ಒಂದೇ ಪಥವನ್ನು ಅನುಸರಿಸುತ್ತಾರೆ. ಈ ಹಂತದಲ್ಲಿ ಭಗವಂತನು ಯಾರಲ್ಲಿ ಏನು ಕಡಿಮೆ ಇದೆಯೋ ಅದನ್ನು ಅವರಲ್ಲಿ ತುಂಬಿ ಅವರನ್ನು ಪರಿಪೂರ್ಣರನ್ನಾಗಿ ಮಾಡುತ್ತಾನೆ. ಅದ್ವೈತ ವೇದಾಂತದ ಪ್ರಚಾರಕರಾದ ಶಂಕರರು ಅಚಾನಕ್ಕಾಗಿ ಭಕ್ತಿಯೋಗಿಗಳಾಗಿ ಬಿಡುತ್ತಾರೆ. ನಿರಂತರ ಭಕ್ತಿಯೋಗಿದಲ್ಲಿ ಲೀನರಾದ ಜ್ಞಾನೇಶ್ವರ್ ಮಹಾರಾಜರು ಜ್ಞಾನಯೋಗಿಗಳಾಗುತ್ತಾರೆ. ಗಂತವ್ಯ ತಲುಪುವ ಅಂತಿಮ ಹಂತದಲ್ಲಿ ಸಾಧಕರಲ್ಲಿ ಇಲ್ಲದ ಅಂಶವನ್ನು ಭಗವಂತನೇ ಅನುಗ್ರಹಿಸಿ ಅವರನ್ನು ಉದ್ಧಾರ ಮಾಡುತ್ತಾನೆ.

18.55

ಭಕ್ತ್ಯಾ ಮಾಮಭಿಜಾನಾತಿ, ಯಾವಾನ್ಯಶ್ಚಾಸ್ಮಿ ತತ್ತ್ವತಃ
ತತೋ ಮಾಂ(ನ್) ತತ್ತ್ವತೋ ಜ್ಞಾತ್ವಾ, ವಿಶತೇ ತದನಂತರಮ್॥55॥

ಆ ಪರಾಭಕ್ತಿಯ ಮೂಲಕ ಅವನು ಪರಮಾತ್ಮನಾದ ನನ್ನನ್ನು ನಾನು ಯಾರಾಗಿದ್ದೇನೋ ಮತ್ತು ಯಾವ ಪ್ರಭಾವದಿಂದ ಯುಕ್ತನಾಗಿದ್ದೇನೋ, ಸರಿಯಾಗಿ ಹೇಗಿರುವೆನೋ ಹಾಗೆ ತತ್ವದಿಂದ ತಿಳಿಯುತ್ತಾನೆ; ಹಾಗೂ ಆ ಭಕ್ತಿಯಿಂದ ನನ್ನನ್ನು ತತ್ವದಿಂದ ತಿಳಿಸುಕೊಂಡು ತತ್ಕಾಲದಲ್ಲಿಯೇ ನನ್ನಲ್ಲಿ ಪ್ರವೇಶ ಮಾಡಿಬಿಡುತ್ತಾನೆ.

ಭಕ್ತಿಯೋಗಿಗೆ ತತ್ತ್ವಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಭಗವಂತನು ಹೇಳುತ್ತಿದ್ದಾನೆ. ಅರ್ಥ ಮಾಡಿಕೊಳ್ಳಲೇ ಬೇಕಾದ ಮುಖ್ಯ ವಿಷಯವಿದು. ತತ್ತ್ವ ಎಂಬುದು ಜ್ಞಾನಯೋಗದ ಲಕ್ಷಣ. ಆದರೆ ಭಕ್ತಿ ಮಾರ್ಗದಲ್ಲಿ ನಡೆದು ಆತ್ಮ ಸಾಕ್ಷಾತ್ಕಾರದ ಕಡೆ ಹೊರಟವನಿಗೂ ಕೂಡಾ ಅಂತಿಮವಾಗಿ ತತ್ತ್ವಜ್ಞಾನ ಪ್ರಾಪ್ತಿಯಾಗುತ್ತದೆ. ತತ್ತ್ವಜ್ಞಾನದಿಂದ ಅವನು ಭಗವಂತನನ್ನು ಸೇರುತ್ತಾನೆ. ನಿಷ್ಕಾಮ ಕರ್ಮಿಗಳೂ ಕೂಡಾ ಇದೇ ಅನುಭವವನ್ನು ಪಡೆಯುತ್ತಾರೆ.

18.56

ಸರ್ವಕರ್ಮಾಣ್ಯಪಿ ಸದಾ, ಕುರ್ವಾಣೋ ಮದ್ವ್ಯಪಾಶ್ರಯಃ ಮತ್ಪ್ರಸಾದಾದವಾಪ್ನೋತಿ, ಶಾಶ್ವತಂ(ಮ್) ಪದಮವ್ಯಯಮ್॥56॥

ನನ್ನ ಪರಾಯಣನಾದ ಕರ್ಮ ಯೋಗಿಯು ಸಂಪೂರ್ಣ ಕರ್ಮಗಳನ್ನು ಯಾವಾಗಲೂ ಮಾಡುತ್ತಿದ್ದರೂ ಕೂಡ ನನ್ನ ಕೃಪೆಯಿಂದ ಸನಾತನ, ಅವಿನಾಶಿಯಾದ ಪರಮಪದವನ್ನು ಪಡೆಯುತ್ತಾನೆ.

ಕರ್ಮ ಯೋಗಿಗಳೂ ಕೂಡಾ ಭಗವಂತನ ಕೃಪೆಯಿಂದ ಶಾಶ್ವತವಾದ ಅವಿನಾಶಿಯಾದ ಪರಮಪದವನ್ನು ಹೊಂದುತ್ತಾರೆ. ಈ ಶ್ಲೋಕದಲ್ಲಿ "ಮತ್ಪ್ರಸಾದಾ" ಎಂಬ ಶಬ್ದದ ಪ್ರಯೋಗವಿದೆ. ಇದೊಂದು ಶಬ್ದದ ಮೇಲೆಯೇ ಒಂದು ಸಂಪೂರ್ಣ ವಿವೇಚನೆ ಕೊಡಬಹುದು. ಅಷ್ಟು ಮಹತ್ವಪೂರ್ಣವಾದ ಗುಹ್ಯತಮ ಶಬ್ದವಿದು.

"ಪ್ರಸಾದ" ಎಂಬ ಶಬ್ದವನ್ನು ಋಷಿ ಮುನಿಗಳು ಅತ್ಯಂತ ಸುಂದರವಾಗಿ ವ್ಯಾಖ್ಯಾನ ಮಾಡಿದ್ದಾರೆ. ಸರಳವಾಗಿ ಪ್ರಸಾದ ಎಂದರೆ ದೇವಸ್ಥಾನದಲ್ಲಿ ಸಿಗುವ ಪ್ರಸಾದ. ಮನೆಯಲ್ಲಿ ಆದರೂ ಪೂಜೆಯಾದ ಮೇಲೆ ಸಿಗುವುದು ಪ್ರಸಾದ.

ಸಾಧನೆಯ ಅಂತಿಮ ಹಂತದಲ್ಲಿರುವ ಯೋಗಿಗೆ ಭಗವಂತನು ಅನುಗ್ರಹಿಸುವ ಪರಮಧಾಮವೇ ಪ್ರಸಾದ. ಇದು ಫಲವಲ್ಲ. ಇದು ಭಗವಂತನ ಅನುಗ್ರಹ. ಪ್ರಸಾದ ಎಂಬುದು ವಸ್ತುವಲ್ಲ. ಸಿಹಿ ಪದಾರ್ಥವಲ್ಲ.

ದೇವರಿಗೆ ಅರ್ಪಿಸಲು ತೆಗೆದುಕೊಂಡು ಹೊರಟ ಲಾಡು ದಾರಿಯಲ್ಲಿ ನೆಲದ ಮೇಲೆ ಬಿದ್ದು ಹೋದರೆ ನಾವು ಅದನ್ನು ಮತ್ತೆ ಎತ್ತಿಕೊಳ್ಳುವುದಿಲ್ಲ. ಅದೇ ಲಾಡು ದೇವರಿಗೆ ಸಮರ್ಪಣೆ ಮಾಡಿ ತರುವಾಗ ಕೆಳಗೆ ಬಿದ್ದರೆ, ಅದನ್ನು ಎತ್ತಿಕೊಂಡು ತಿನ್ನುತ್ತೇವೆ. ಇಲ್ಲಿ ಮೂಲ ವಸ್ತು ಇರುವುದು ಲಾಡು. ಆದರೆ ದೇವರಿಗೆ ಅರ್ಪಣೆ ಮಾಡುವ ಮೊದಲು ಅದು ಕೇವಲ ಸಿಹಿ ಪದಾರ್ಥವಾಗಿತ್ತು. ದೇವರಿಗೆ ಅರ್ಪಣೆ ಮಾಡಿದ ನಂತರ ಅದು ಪವಿತ್ರವಾಯಿತು. ಪ್ರಸಾದವಾಯಿತು. ಪದಾರ್ಥವು ಪ್ರಸಾದವಾಯಿತು. ಪ್ರಸಾದದ ಅರ್ಥ 'ಪ್ರಸನ್ನತೆ'.

ಭಗವಂತನನ್ನು ಪ್ರಸನ್ನ ಮಾಡಲು ದೇವಸ್ಥಾನಕ್ಕೆ ಹೋಗುತ್ತೇವೆ. ಭಗವಂತನ ಪ್ರೀತಿ ಗಳಿಸಲು, ಭಗವಂತನ ಕೃಪೆಗೆ ಒಳಗಾಗಲು ದೇವಸ್ಥಾನಕ್ಕೆ ಹೋಗುತ್ತೇವೆ. ನಾವೂ ದೇವರ ದರ್ಶನ ಮಾಡುತ್ತೇವೆ. ದೇವರಿಗೂ ನಮ್ಮ ದರ್ಶನ ಕೊಡುತ್ತೇವೆ. ಒಮ್ಮೆ ಭಗವಂತನು ಪ್ರಸನ್ನತೆಯಿಂದ ನನ್ನನ್ನು ನೋಡಿ, ಅನುಗ್ರಹಿಸಲಿ ಎಂದು ಆಶಿಸುತ್ತೇವೆ. ದೇವಸ್ಥಾನದ ಅರ್ಚಕರು ನಾವು ತೆಗೆದುಕೊಂಡು ಹೋದ ಪದಾರ್ಥವನ್ನು ದೇವರ ಮುಂದಿಟ್ಟಾಗ ಭಗವಂತನ ಕೃಪಾದೃಷ್ಟಿ ಆ ಪದಾರ್ಥದ ಮೇಲೂ ಬೀಳುತ್ತದೆ. ಭಗವಂತನ ಪ್ರಸನ್ನತೆ ತುಂಬಿದ ಆ ಪದಾರ್ಥ ಪ್ರಸಾದವಾಗುತ್ತದೆ. ಅದನ್ನು ನಾವು ಸ್ವೀಕಾರ ಮಾಡುತ್ತೇವೆ. ಪ್ರಸಾದ ಎಂಬ ಶಬ್ದದ ತಾತ್ಪರ್ಯ 'ಪ್ರಸನ್ನತೆ'. ಪ್ರಸಾದದಿಂದ ದುಃಖ ದುಮ್ಮಾನವೆಲ್ಲಾ ನಾಶವಾಗುತ್ತದೆ. ಪ್ರಸಾದದಿಂದ ಪ್ರಸನ್ನತೆ ಬರುತ್ತದೆ.

ಒಬ್ಬ ಸಂತರನ್ನು, "ಭಗವಂತನನ್ನು ಒಲಿಸಿಕೊಳ್ಳುವ ಸಾಧನ ಯಾವುದು?" ಎಂದು ಕೇಳಿದಾಗ ಅವರು, "ಯಾವ ಸಾಧನದಿಂದ ಭಗವಂತನು ಪ್ರಸನ್ನನಾಗುತ್ತಾನೋ ಆ ಸಾಧನೆ ಮಾಡು" ಎಂದು ಉತ್ತರಿಸಿದರು.

ಆರಂಭದಲ್ಲಿ ಸಾಧಕನು ತನ್ನ ಖುಷಿಗಾಗಿ ಕೆಲಸ ಮಾಡುತ್ತಾನೆ. ಭಗವದ್ಗೀತೆಯನ್ನು ಕಲಿಯಲು ಪ್ರಾರಂಭ ಮಾಡಿದಾಗ ಅದು ನನ್ನ ಖುಷಿಗಾಗಿ ಎಂದು ಕಲಿಯುತ್ತೇವೆ. ಆದರೆ ಅದನ್ನು ಮನನ ಮಾಡುತ್ತಾ ಹೋದಂತೆ ಭಗವಂತನನ್ನು ಪ್ರಸನ್ನ ಮಾಡಲು, ಅವನ ಅನುಗ್ರಹ ಪಡೆಯಲು ಭಗವದ್ಗೀತೆಯನ್ನು ಪಠನೆ ಮಾಡಬೇಕು ಎಂಬ ಆಸಕ್ತಿ ಬರುತ್ತದೆ.

ಒಬ್ಬರನ್ನೊಬ್ಬರು ಪ್ರೀತಿಸುವ ಜೋಡಿ ಮೊದಲು ತಮಗಾಗಿ ಪ್ರೀತಿಸಲು ಪ್ರಾರಂಭ ಮಾಡುತ್ತಾರೆ. ಪ್ರೀತಿಯು ಪ್ರೌಢವಾಗುತ್ತಾ ಹೋದಂತೆ, ಪಕ್ವವಾಗುತ್ತಾ ಹೋದಂತೆ ಎದುರಿನವರನ್ನು ಪ್ರಸನ್ನಗೊಳಿಸಲು, ಅವರು ಖುಷಿಯಾಗಿರಲು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಾರೆ. ಇನ್ನೊಬ್ಬರ ಖುಷಿಯಲ್ಲಿ ತಾವೂ ಖುಷಿ ಕಾಣುತ್ತಾರೆ. ಭಗವಂತನನ್ನು ಆರಾಧಿಸಲು ಪ್ರಾರಂಭ ಮಾಡಿದಾಗ ನನ್ನ ಖುಷಿ ಮುಂದಿರುತ್ತದೆ. ಆದರೆ ಆ ಆರಾಧನೆಯು ಪಕ್ವವಾಗುತ್ತಾ ಹೋದಂತೆ ಅಲ್ಲಿ ಭಗವಂತನನ್ನು ಪ್ರಸನ್ನಗೊಳಿಸುವುದು ಮುಖ್ಯವಾಗುತ್ತದೆ.

ಕಲ್ಕತ್ತಾದಲ್ಲಿ ಶಾರದಾದೇವಿ ಎಂಬುವ ಒಬ್ಬ ಮಹಿಳೆ ಇದ್ದರು. ಅಪರಿಮಿತ ಸಾಧಕರು. ತಮ್ಮ ಜೀವಿತಾವಧಿಯಲ್ಲಿ ಎಂಟು ನೂರಕ್ಕೂ ಹೆಚ್ಚು ಸಲ ಶ್ರೀಮದ್ಭಾಗವತವನ್ನು ಪಾರಾಯಣ ಮಾಡಿದ್ದರು. ಭಗವಂತನ ಜೊತೆ ಮಾತನ್ನಾಡುತ್ತಿದ್ದರಂತೆ. ಅಂಥ ಮಹಾ ಸಾಧಕರು. ತಮ್ಮ ಠಾಕುರಜೀಯ ಮೂರ್ತಿಯನ್ನು ನೋಡಿ, ಆ ಸಮಯದಲ್ಲಿ ಭಗವಂತನ ಭಾವವನ್ನು ತಿಳಿದುಕೊಳ್ಳುತ್ತಿದ್ದರು. ಭಗವಂತನ ಮೂರ್ತಿಗೆ ತೊಡಿಸುವ ವಸ್ತ್ರ ಅವನಿಗೆ ಇಷ್ಟವಾಯಿತೋ ಇಲ್ಲವೋ ಎಂಬುದು ಅವರಿಗೆ ತಿಳಿಯುತ್ತಿತ್ತು. ತಮ್ಮ ಜೀವನದ ಕೊನೆಯ ಇಪ್ಪತ್ತು ವರ್ಷಗಳನ್ನು ಕೇವಲ ಭಗವಂತನನ್ನು ಪ್ರಸನ್ನಗೊಳಿಸುವ ಗುರಿಯಿಟ್ಟುಕೊಂಡು ಕಳೆದರು. ಸದ್ಗೃಹಸ್ತೆಯಾದರೂ ತಪೋನಿಷ್ಠೆಯುಳ್ಳ, ಮಹಾ ಸಾಧಕಿಯಾಗಿದ್ದರು ಅವರು.

18.57

ಚೇತಸಾ ಸರ್ವಕರ್ಮಾಣಿ, ಮಯಿ ಸಂನ್ಯಸ್ಯ ಮತ್ಪರಃ
ಬುದ್ಧಿಯೋಗಮುಪಾಶ್ರಿತ್ಯ, ಮಚ್ಚಿತ್ತಃ(ಸ್) ಸತತಂ(ಮ್) ಭವ॥57॥

ಎಲ್ಲ ಕರ್ಮಗಳನ್ನು ಮನ್ಃಪೂರ್ವಕವಾಗಿ ನನ್ನಲ್ಲಿ ಅರ್ಪಣೆ ಮಾಡಿ ಹಾಗೂ, ಸಮತ್ವ ಬುದ್ಧಿರೂಪವಾದ ಯೋಗವನ್ನು ಅವಲಂಬಿಸಿಕೊಂಡು ನನ್ನ ಪರಾಯಣನಾಗಿ ಮತ್ತು ನಿರಂತರ ನನ್ನಲ್ಲಿ ಚಿತ್ತವುಳ್ಳವನಾಗು.

ಭಗವಂತನು ಈ ಶ್ಲೋಕದಲ್ಲಿ ಭಕ್ತಿಯೋಗ, ಜ್ಞಾನಯೋಗ ಮತ್ತು ಕರ್ಮಯೋಗಗಳನ್ನು ವಿಲೀನಗೊಳಿಸಿದ್ದಾನೆ. ಸಾಧಾರಣವಾಗಿ ಯೋಚಿಸಿದರೆ ಈ ಶ್ಲೋಕದಲ್ಲಿ ವಿಶೇಷ ಅರ್ಥ ಕಾಣಿಸುವುದಿಲ್ಲ. ಆದರೆ ಸಂತ ಮಹಾತ್ಮರ ದೃಷ್ಟಿಯಿಂದ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಭಗವಂತನು, "ಸಂನ್ಯಸ್ಯ, ಉಪಾಶ್ರಿತ್ಯ, ಮಚ್ಚಿತ್ತ" ಎಂಬ ಮೂರು ಶಬ್ದಗಳನ್ನು ಇಲ್ಲಿ ಉಲ್ಲೇಖ ಮಾಡಿದ್ದಾನೆ.

ಸಂನ್ಯಸ್ಯ - ಕರ್ಮಯೋಗದ ವಿಷಯ. ಅರ್ಪಣೆ ಮಾಡುವುದು ಕರ್ಮವಾಯಿತು.
ಉಪಾಶ್ರಿತ್ಯ - ಜ್ಞಾನಯೋಗದ ವಿಷಯ. ಅವಲಂಬನೆ ಮಾಡಿಕೊಳ್ಳುವ, ಧಾರಣೆ ಮಾಡಿ ಎಂಬ ಜ್ಞಾನದ ವಿಚಾರವಾಯಿತು.
ಮಚ್ಚಿತ್ತ - ಭಕ್ತಿಯೋಗಕ್ಕೆ ಸಂಬಂಧಪಟ್ಟ ವಿಚಾರ. ಭಗವಂತನಲ್ಲಿ ಚಿತ್ತವನ್ನು ಇಟ್ಟವನು. ಭಗವಂತನಲ್ಲಿ ಮನಸ್ಸಿಟ್ಟು ಭಕ್ತಿ ಮಾಡುವ ಭಕ್ತಿಯೋಗದ ವಿಷಯ.

ಮೂರೂ ಯೋಗಗಳನ್ನೂ ಭಗವಂತನು ಈ ಶ್ಲೋಕದಲ್ಲಿ ಒಂದು ಮಾಡಿ ಹೇಳಿದ್ದಾನೆ. ಮೂರೂ ಯೋಗಗಳನ್ನು ಆಶ್ರಯಿಸಿ ಅನುಸರಿಸಿದವರು ಕೊನೆಯಲ್ಲಿ ಭಗವಂತನನ್ನು ಸೇರುತ್ತಾರೆ.

18.58

ಮಚ್ಚಿತ್ತಃ(ಸ್) ಸರ್ವದುರ್ಗಾಣಿ, ಮತ್ಪ್ರಸಾದಾತ್ತರಿಷ್ಯಸಿ
ಅಥ ಚೇತ್ತ್ವಮಹಂಕಾರಾನ್, ನ ಶ್ರೋಷ್ಯಸಿ ವಿನಂಕ್ಷ್ಯಸಿ॥58॥

ಮೇಲೆ ಹೇಳಿದ ಪ್ರಕಾರದಿಂದ ನನ್ನಲ್ಲಿ ಚಿತ್ತವುಳ್ಳವನಾಗಿ ನೀನು ನನ್ನ ಕೃಪೆಯಿಂದ ಸಮಸ್ತ ಸಂಕಟಗಳನ್ನು ಅನಾಯಾಸವಾಗಿಯೇ ದಾಟಿಬಿಡುವೆ ಮತ್ತು ಒಂದು ವೇಳೆ ಅಹಂಕಾರದ ಕಾರಣದಿಂದ ನನ್ನ ವಚನಗಳನ್ನು ಕೇಳದಿದ್ದರೆ ನಾಶವಾಗುವೆ ಅರ್ಥಾತ್ ಪರಮಾರ್ಥದಿಂದ ಭ್ರಷ್ಟನಾಗಿ ಹೋಗುವೆ.

ಇಷ್ಟೆಲ್ಲಾ ಹೇಳಿದರೂ, ಉಪದೇಶ ಮಾಡಿದರೂ ಅರ್ಜುನನಲ್ಲಿ ನಿರೀಕ್ಷೆ ಮಾಡಿದ ಬದಲಾವಣೆ ಕಾಣಲಿಲ್ಲವಲ್ಲ ಎಂಬ ಭಾವ ಈ ಸಂದರ್ಭದಲ್ಲಿ ಭಗವಂತನಿಗೆ ಬಂದಿರಬೇಕು. ಅದಕ್ಕಾಗಿ ಭಗವಂತನು ಇಲ್ಲಿ ಸಣ್ಣದಾಗಿ ಅರ್ಜುನನ್ನು ಗದರಿದ್ದಾನೆ. ಅಥವಾ ಅವನು ಧ್ಯಾನದಿಂದ ಕೇಳುತ್ತಿರುವನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದಾನೆ. ಅರ್ಜುನನು ಏಕಾಗ್ರ ಚಿತ್ತನಾಗಿ ಕೇಳುತ್ತಿದ್ದಾನೆ ಎಂಬುದಂತೂ ಸತ್ಯ.

ಏಕಾಗ್ರತೆಯಿಂದ ಯಾವುದೋ ವಿಷಯವನ್ನು ಗಹನವಾಗಿ ಚಿಂತಿಸುತ್ತಾ ಕೇಳುವಾಗ ನಾವು ಭಾವಶೂನ್ಯರಾಗುತ್ತೇವೆ. ಇದನ್ನು ನಮ್ಮಲ್ಲಿ ಹಲವರು ಅನುಭವಿಸಿರುತ್ತೇವೆ. ಕಣ್ಣೆವೆಯಿಕ್ಕದೇ ಕಿವಿಯನ್ನು ನೆಟ್ಟಗೆ ಮಾಡಿಕೊಂಡು ಒಂದು ವಿಷಯವನ್ನು ಕೇಳುತ್ತಾ ಅದರಲ್ಲಿ ಮುಳುಗಿ ಹೋದಾಗ ನಮ್ಮ ಮುಖದಲ್ಲಿ ಯಾವ ಭಾವವೂ ಇರುವುದಿಲ್ಲ. ಆ ಕ್ಷಣ ನಮ್ಮ ಎದುರು ಇದ್ದವರಿಗೆ, ಇವನು ಕೇಳಿಸಿಕೊಳ್ಳುತ್ತಿದ್ದಾನೋ ಇಲ್ಲವೋ?! ಎಂಬ ಭಾವ ಬರುತ್ತದೆ.

ಭಗವಂತನು ಅರ್ಜುನನನ್ನು ಕೆಣಕುತ್ತಿದ್ದಾನೆ. ಹಂಗಿಸು(taunt)ತ್ತಿದ್ದಾನೆ. "ನನ್ನ ಅನುಗ್ರಹದಿಂದ ಎಲ್ಲವನ್ನೂ ಪಡೆಯುವ ಮನುಷ್ಯ ಒಂದು ವೇಳೆ ಅಹಂಕಾರದಿಂದ ನನ್ನ ಮಾತನ್ನು ಕೇಳದೇ ಇದ್ದರೆ ಪತನ(ನಾಶ)ವಾಗಿ ಹೋಗುತ್ತಾನೆ!" ಎಂದು ಭಗವಂತನು ಅರ್ಜುನನಿಗೆ ಎಚ್ಚರಿಕೆ ನೀಡುತ್ತಿದ್ದಾನೆ. ಅರ್ಜುನನಿಗೆ ಭಯವಾಯಿತು. ಏನೋ ಹೇಳಬೇಕು ಎನ್ನುವಷ್ಟರಲ್ಲಿ ಭಗವಂತನು ಇನ್ನೂ ಒಂದಿಷ್ಟು ಗಂಭೀರವಾದ ಮಾತುಗಳನ್ನು ಹೇಳುತ್ತಾನೆ.

18.59

ಯದಹಂಕಾರಮಾಶ್ರಿತ್ಯ, ನ ಯೋತ್ಸ್ಯ ಇತಿ ಮನ್ಯಸೇ
ಮಿಥ್ಯೈಷ ವ್ಯವಸಾಯಸ್ತೇ, ಪ್ರಕೃತಿಸ್ತ್ವಾಂ(ನ್) ನಿಯೋಕ್ಷ್ಯತಿ ॥59॥

ನೀನು ಯಾವ ಅಹಂಕಾರದ ಆಶ್ರಯ ಪಡೆದು ’ನಾನು ಯುದ್ಧ ಮಾಡುವುದಿಲ್ಲ’ ಎಂಬುದಾಗಿ ನಿಶ್ಚಯ ಮಾಡಿರುವೆಯೋ, ನಿನ್ನ ಈ ನಿಶ್ಚಯವು ಮಿಥ್ಯೆಯಾಗಿದೆ; ಏಕೆಂದರೆ ನಿನ್ನ ಸ್ವಭಾವವು ನಿನ್ನನ್ನು ಬಲವಂತವಾಗಿ ಯುದ್ಧದಲ್ಲಿ ತೊಡಗಿಸುವುದು.

"ಅದೇ ಅಹಂಕಾರವನ್ನು ಆಶ್ರಯಿಸಿ ಯುದ್ಧ ಮಾಡುವುದಿಲ್ಲ ಎಂದು ನೀನು ತೀರ್ಮಾನ ಮಾಡಿದರೆ ಅದು ನಿನ್ನ ಮೂರ್ಖತನವಾಗುತ್ತದೆ. ಈ ನಿರ್ಧಾರದಿಂದ ನೀನು ನಿನಗೇ ಮೋಸ ಮಾಡಿಕೊಂಡಂತೆ ಆಗುತ್ತದೆ. You are fooling yourself. ಯಾಕೆಂದರೆ ನಿನ್ನ ಪ್ರಕೃತಿ ಅದಲ್ಲ. ಹುಟ್ಟಿನಿಂದ ಬಂದ ಪ್ರಕೃತಿ ನಿನ್ನನ್ನು ಯುದ್ಧ ಮಾಡದಂತೆ ಇಡಲು ಸಾಧ್ಯವೇ ಇಲ್ಲ." ಎಂದು ಭಗವಂತನು ಅರ್ಜುನನಿಗೆ ಹೇಳುತ್ತಿದ್ದಾನೆ.

ಅರ್ಜುನ ಸ್ವಭಾವತಃ ಕ್ಷತ್ರಿಯ. ಈಗ ಈ ಕ್ಷಣ ಯುದ್ಧ ತೊರೆದು ಓಡಿ ಹೋದರೂ ಮುಂದೊಂದು ದಿನ ಇನ್ನೊಂದು ಪರಿಸ್ಥಿತಿಯಲ್ಲಿ ಶಸ್ತ್ರ ಪ್ರಯೋಗ ಮಾಡದೇ ಇರಲಾರ.

18.60

ಸ್ವಭಾವಜೇನ ಕೌಂತೇಯ, ನಿಬದ್ಧಃ(ಸ್) ಸ್ವೇನ ಕರ್ಮಣಾ
ಕರ್ತುಂ(ನ್) ನೇಚ್ಛಸಿ ಯನ್ಮೋಹಾತ್, ಕರಿಷ್ಯಸ್ಯವಶೋಽಪಿ ತತ್॥60॥

ಹೇ ಕುಂತೀಪುತ್ರನೇ ! ಯಾವ ಕರ್ಮವನ್ನು ನೀನು ಮೋಹದ ಕಾರಣದಿಂದಾಗಿ ಮಾಡಲು ಇಚ್ಛಿಸುವುದಿಲ್ಲವೋ ಅದನ್ನು ಸಹ ನಿನ್ನ ಪೂರ್ವಕೃತ ಸ್ವಾಭಾವಿಕ ಕರ್ಮದಿಂದ ಬಂಧಿಸಲ್ಪಟ್ಟು, ಪರವಶನಾಗಿ ಮಾಡುವೆ.

ಕೌಂತೇಯ! ಈ ಕ್ಷಣದ ಮೋಹದಿಂದ ಯಾವುದನ್ನು ಮಾಡಲು ನಿರಾಕರಿಸುತ್ತಿರುವೆಯೋ, ಆ ಕರ್ಮವು ನಿನ್ನನ್ನು ಯಾವತ್ತೂ ಬಿಡುವುದಿಲ್ಲ. ಆ ಕರ್ಮದ ಬಂಧನದಲ್ಲಿ ಸಿಲುಕಿ, ನಿನಗೆ ಇಷ್ಟವಿಲ್ಲದಿದ್ದರೂ ಅದನ್ನು ಮಾಡಲೇಬೇಕಾಗುತ್ತದೆ. ಆ ಕರ್ಮವನ್ನು ಬಿಡಲು ಸಾಧ್ಯವೇ ಇಲ್ಲ. ಈಗ ನೀನು ಮೋಹದ ಕಾರಣದಿಂದ ಮಾಡಲು ಬಯಸುತ್ತಿಲ್ಲ. ಆದರೆ ಸ್ವಭಾವದ ಕಾರಣದಿಂದ ಈ ಕರ್ಮವನ್ನು ನೀನು ಮಾಡುತ್ತೀಯ.

ಭಗವಂತನು ಸ್ವಲ್ಪ ಏರು ಧ್ವನಿಯಲ್ಲಿ ಹೇಳಿದ್ದನ್ನು ಕೇಳಿ ಅರ್ಜುನನಿಗೆ ಭಯವಾಯಿತು. "ನಿಜವಾಗಿಯೂ ನನ್ನ ಕೈಯಲ್ಲಿ ಏನೂ ಇಲ್ಲವೇ?" ಎಂಬ ಯೋಚನೆಯಾಯಿತು. ಇದನ್ನು ಅರಿತವನಂತೆ ಭಗವಂತನು "ಇಲ್ಲವೇ ಇಲ್ಲ" ಎಂದು ಬಿಟ್ಟನು.

18.61

ಈಶ್ವರಃ(ಸ್) ಸರ್ವಭೂತಾನಾಂ(ಮ್), ಹೃದ್ದೇಶೇಽರ್ಜುನ ತಿಷ್ಠತಿ
ಭ್ರಾಮಯನ್ಸರ್ವಭೂತಾನಿ, ಯಂತ್ರಾರೂಢಾನಿ ಮಾಯಯಾ॥61॥

ಹೇ ಅರ್ಜುನಾ ! ಶರೀರರೂಪೀ ಯಂತ್ರದಲ್ಲಿ ಆರೂಢನಾಗಿರುವ, ಸಂಪೂರ್ಣ ಪ್ರಾಣಿಗಳನ್ನು ಅಂತರ್ಯಾಮಿ ಪರಮೇಶ್ವರನು ತನ್ನ ಮಾಯೆಯಿಂದ ಅವರ ಕರ್ಮಗಳನುಸಾರವಾಗಿ ಅಲೆಸುತ್ತ ಎಲ್ಲ ಪ್ರಾಣಿಗಳ ಹೃದಯದಲ್ಲಿ ಸ್ಥಿತನಾಗಿದ್ದಾನೆ.

"ಶರೀರವೆಂಬ ಯಂತ್ರವನ್ನು ಚಲಾಯಿಸುತ್ತಿರುವುದು ಮಾಯಾರೂಪದ ಚಾಲಕ. ನಿನ್ನದು ಎನ್ನುವುದು ಇಲ್ಲ ಯಾವುದೂ ಇಲ್ಲ" ಎನ್ನುತ್ತಿದ್ದಾನೆ ಭಗವಂತ. ಮಾಯೆಯು ಹೇಗೆ ಆಡಿಸುತ್ತಾಳೋ ಹಾಗೆ ಶರೀರ ಕುಣಿಯುತ್ತದೆ.
ಗೋಸ್ವಾಮಿ ತುಳಸಿದಾಸರ ರಾಮಚಾರಿತ ಮಾನಸದಲ್ಲಿ, ರಾಮನ ಕುರಿತಾಗಿ ಶಿವ ಪಾರ್ವತಿಯರಲ್ಲಿ ನಡೆದ ಸಂಭಾಷಣೆಯ ಒಂದು ಚೌಪದಿಯನ್ನು ಇಲ್ಲಿ ನೋಡೋಣ:

ಉಮಾ ದಾರೂ ಜೋಷಿತ ಕೀ ನಾಈ I
ಸಬಹಿ ನಚಾವತ ರಾಮ ಗೋಸಾಯೀ II

ಇಲ್ಲಿ ದಾರೂ ಎಂದರೆ ಕಟ್ಟಿಗೆ. ಜೋಷಿತ ಎಂದರೆ ಹೆಣ್ಣು (ಸ್ತ್ರೀ). ಹೆಣ್ಣಿಗೂ ಕಟ್ಟಿಗೆಗೂ ಎಲ್ಲಿಯ ಸಂಬಂಧ? ಸಂತ ತುಳಸಿದಾಸರ ಉಪಮೆಗಳೇ ಅದ್ಭುತ. ದಾರೂ ಜೋಷಿತವನ್ನು ಒಟ್ಟಿಗೇ ಸೇರಿಸಿದರೆ "ಕಟಪುತಲಿ" ಎಂದಾಗುತ್ತದೆ. ಕಟ - ಕಟ್ಟಿಗೆ. ಪುತಲಿ - ಹೆಣ್ಣು. ಗೊಂಬೆಯಾಟದಲ್ಲಿ ಗೊಂಬೆ ಕುಣಿಯುವಂತೆ ತೋರುತ್ತದೆ. ಆದರೆ ಗೊಂಬೆಯನ್ನು ಕುಣಿಸುವ ಸೂತ್ರದಾರ ಪರದೆಯ ಹಿಂದೆ ಬೇರೊಬ್ಬನಿರುತ್ತಾನೆ. ಅದೇ ರೀತಿ ಮನುಷ್ಯನು ಕೂಡಾ. ಇವನು ಭಗವಂತನು ಕುಣಿಸಿದಂತೆ ಕುಣಿಯುವ ಮರದ ಬೊಂಬೆ ಅಷ್ಟೇ. ಎಲ್ಲವೂ ಮಾಯೆ. ಆದರೆ ಈ ಮಾಯೆ ಅದಕ್ಕೆ ಬೇಕಾದಂತೆ ಕುಣಿಯುವುದಿಲ್ಲ. ಆಯಾ ಜೀವಿಯ ಕರ್ಮಾನುಸಾರವೇ ಇದು ಕುಣಿಯುತ್ತದೆ. ಜನ್ಮಜನ್ಮಾಂತರಗಳಿಂದ ಸಂಚಯನವಾದ ಕರ್ಮಫಲಗಳಿಗನುಸಾರವಾಗಿ ಮಾಯೆ ಎಲ್ಲರ ಜೀವನದಲ್ಲಿ ಆಟವಾಡುತ್ತದೆ. ನಮ್ಮ ಹುಟ್ಟಿನಿಂದ ಪ್ರಾರಂಭವಾಗಿ, ಜೀವನದಲ್ಲಿ ನಡೆಯುವ ಚಿಕ್ಕ ದೊಡ್ಡ ಘಟನೆಗಳೂ ಈ ಮಾಯೆಯ ಅಧೀನದಲ್ಲಿರುತ್ತದೆ. ಮಾಯೆಯು ಕೆಲಸ ಮಾಡುವುದು ಜೀವಿಯ ಕರ್ಮಕ್ಕೆ ಅನುಗುಣವಾಗಿ.

ಅರ್ಜುನನ ಕರ್ಮ ಫಲವಾಗಿ ಅವನು ಈ ಜನ್ಮದಲ್ಲಿ ಕ್ಷತ್ರಿಯನಾಗಿ ಜನಿಸಿದ್ದಾನೆ. ಮಹಾ ಪರಕ್ರಾಮಿಯಾಗಿ ಪ್ರಖ್ಯಾತಿ ಪಡೆದಿದ್ದಾನೆ. ಈಗ ಈ ಕ್ಷಣ ಎಲ್ಲವನ್ನೂ ಬಿಟ್ಟು ಹೊರಡುತ್ತೇನೆ ಎಂದರೆ ಅದು ಸಾಧ್ಯವೇ? ಅಸಾಧ್ಯ ಎಂದು ಭಗವಂತನೇ ಹೇಳುತ್ತಿದ್ದಾನೆ. ಮತ್ತು ಅದು ಅವನು ಮಾಡಲೇಬೇಕಾದ ಕರ್ಮ. ಬೇಡವೆಂದರೂ ಇದರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬುದನ್ನೂ ಭಗವಂತ ಅರ್ಜುನನಿಗೆ ತಿಳಿಸುತ್ತಾನೆ.

ಈ ಜಗತ್ತಿನಲ್ಲಿ ಜನಿಸಿದ ಜೀವಿಯು ಮಾಡಬಹುದಾದ, ಮಾಡಬೇಕಾದ ಕೆಲಸ ಏನು ಎಂಬುದನ್ನು ಭಗವಂತ ಮುಂದಿನ ಶ್ಲೋಕದಲ್ಲಿ ತಿಳಿಸುತ್ತಿದ್ದಾನೆ.

18.62

ತಮೇವ ಶರಣಂ(ಙ್) ಗಚ್ಛ, ಸರ್ವಭಾವೇನ ಭಾರತ
ತತ್ಪ್ರಸಾದಾತ್ಪರಾಂ(ಮ್) ಶಾಂತಿಂ(ಮ್), ಸ್ಥಾನಂ(ಮ್) ಪ್ರಾಪ್ಸ್ಯಸಿ ಶಾಶ್ವತಮ್॥62॥

ಹೇ ಅರ್ಜುನಾ! ನೀನು ಎಲ್ಲಾ ಪ್ರಕಾರದಿಂದಲೂ ಆ ಪರಮೇಶ್ವರನಲ್ಲಿಯೇ ಶರಣು ಹೋಗು. ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನವಾದ ಪರಮಧಾಮವನ್ನು ಪಡೆಯುವೆ.

"ಭಗವಂತನಲ್ಲಿ ಸಂಪೂರ್ಣವಾಗಿ ಶರಣು ಹೋದರೆ ಮಾತ್ರವೇ ಜೀವಿಯ ಕಲ್ಯಾಣವಾಗುತ್ತದೆ. ಸೃಷ್ಟಿಯಲ್ಲಿ ಹುಟ್ಟಿದ ಎಲ್ಲಾ ಜೀವಿಗಳೂ ಪೂರ್ಣ ಮನಸ್ಸಿನಿಂದ ಭಗವಂತನಿಗೆ ಶರಣಾಗಬೇಕು."

ಈ ಶ್ಲೋಕದಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲೂ "ಮಮ ಮಮ" ಎಂದು ತನ್ನನ್ನು ತಾನು ಸಂಭೋದನೆ ಮಾಡಿಕೊಂಡ ಭಗವಂತ ಇಲ್ಲಿ ಮೊದಲ ಬಾರಿಗೆ 'ಭಗವಂತನಲ್ಲಿ ಶರಣಾಗು' ಎಂದು ಹೇಳುತ್ತಿದ್ದಾನೆ. "ತ್ವತ್ಪ್ರಸಾದಾತ್ ಪರಾಂ ಶಾಂತಿಮ್" - ಅವನ ಅನುಗ್ರಹದಿಂದ ನಿನಗೆ ಅಲೌಕಿಕ ಶಾಂತಿಯು ಲಭಿಸುತ್ತದೆ. ಎಂದು ಅರ್ಜುನನಿಗೆ ಹೇಳುತ್ತಿದ್ದಾನೆ. ಇಷ್ಟರವರೆಗೆ "ನನ್ನ ಅನುಗ್ರಹದಿಂದ" ಎಂದು ಹೇಳುತ್ತಿದ್ದ ಭಗವಂತ ಈಗ "ಅವನು" ಎನ್ನುತ್ತಾ ಅರ್ಜುನನನ್ನು ತನ್ನಿಂದ ಸ್ವಲ್ಪ ದೂರ ಮಾಡಿದ್ದಾನೋ?

ಇಲ್ಲಿಯವರೆಗೂ, ಇಷ್ಟು ಉಪದೇಶ ಮಾಡಿದರೂ ಅರ್ಜುನನ ಮನಸ್ಸಿಗೆ ತನ್ನ ಎದುರಿಗೆ ಇರುವವನೇ ಪರಬ್ರಹ್ಮ ಪರಮಾತ್ಮ ಎಂಬುದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿ, ಭಗವಂತನು, "ನೀನು ನಂಬಿದ ಆ ಭಗವಂತನಿಗೆ ಶರಣು ಹೋಗು. ಅವನ ಅನುಗ್ರಹ ಪಡೆ" ಎಂದು ಹೇಳುತ್ತಿದ್ದಾನೆ. 'ಮಮ' ಮತ್ತು 'ತತ್' ಶಬ್ದದ ಅರ್ಥವನ್ನು ಚೆನ್ನಾಗಿ ತಿಳಿದ ಅರ್ಜುನ ಈಗ ಇನ್ನೂ ಹೆದರಿ ಕಂಗಾಲಾದನು. "ನನ್ನನ್ನು ನಿನ್ನಿಂದ ದೂರ ಮಾಡಬೇಡಪ್ಪ. ನನ್ನ ಮೇಲೆ ದಯೆ ತೋರು. ನನ್ನನ್ನು ಅನುಗ್ರಹಿಸು" ಎಂದು ಬೇಡಿಕೊಳ್ಳುತ್ತಾನೆ. ಸಂತ ಮಹಾಪುರುಷರು, ಪ್ರವಚನಕಾರರು ಈ ಸಂದರ್ಭದಲ್ಲಿ ಒಂದು ಸುಂದರ ಭಜನೆ ಹಾಡುತ್ತಾರೆ. ನಾವೂ ಭಜನೆಯನ್ನು ಹಾಡಿ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ.



"ಭಗವಂತ! ನನ್ನ ಜೀವನ ಯಾನವನ್ನು ಯಶಸ್ಸುಗೊಳಿಸು. ನನ್ನನ್ನು ಹರಸಿ ಅನುಗ್ರಹಿಸು" ಎಂಬುದು ಈ ಭಜನೆಯ ಅರ್ಥ.

ಅರ್ಜುನನ ಭಾವವನ್ನು ಅರಿತ ಭಗವಂತ, ಮತ್ತೆ ಪ್ರೀತಿಯಿಂದ ತನ್ನ ಉಪದೇಶವನ್ನು ಮುಂದುವರಿಸುತ್ತಾನೆ. ಇಲ್ಲಿಯವರೆಗೂ ಅರ್ಜುನ ಏನೂ ಮಾತನಾಡಲಿಲ್ಲ. ಮುಖದಲ್ಲಿ ಯಾವುದೇ ಭಾವ ವ್ಯಕ್ತಪಡಿಸದೇ ಕೇಳುತ್ತಲೇ ಇರುವ ಅರ್ಜುನನನ್ನು ಸ್ವಲ್ಪ ಎಚ್ಚರಿಸಿದ ಭಗವಂತ, ಈಗ ಅರ್ಜುನನಲ್ಲಿ ಮೂಡಿದ ಸಮರ್ಪಣಾ ಭಾವವನ್ನು ತಿಳಿದು ಪ್ರಸನ್ನನಾಗಿ, ಅಭಯಹಸ್ತ ನೀಡಿ ಅವನನ್ನು ಅನುಗ್ರಹಿಸಲು ಮುಂದಾಗುತ್ತಾನೆ.

"ನನಗೆ ಅತ್ಯಂತ ಪ್ರೀಯನಾದಂತ ನಿನ್ನನ್ನು ಅನುಗ್ರಹಿಸಲು ನಾನು ತಯಾರಾಗಿ ನಿಂತಿದ್ದೇನೆ. ನನ್ನಲ್ಲಿ ಶರಣಾದ ನಿನ್ನನ್ನು ಹರಸಿ ಉದ್ಧಾರ ಮಾಡುತ್ತೇನೆ. ಹೆದರಬೇಡ." ಎನ್ನುತ್ತಾನೆ. ಆರ್ತತೆಯಿಂದ ಭಗವಂತನಲ್ಲಿ ಮೊರೆ ಇಟ್ಟ ಅರ್ಜುನನ ಭಜನೆಗೆ ಪ್ರತಿಯಾಗಿ, ಭಗವಂತ ಅನುಗ್ರಹಿಸಿ ಹೇಳಿದ ಮಾತುಗಳನ್ನು ಸಂತರು ಭಜನೆಯ ಮೂಲಕ ಹಾಡುತ್ತಾರೆ.

आजा मेरी नैया में,
ले जाऊँगा भव से पार,
इस नैया में जो चढ़ जाएँगे,
जनम जनम के सभी पाप धुल जाएँगे,
कटे चौरासी बन्धन, पड़े न यम की मार,
आजा मेरी नैया में, ले जाऊँगा भव के पार ।

18.63

ಇತಿ ತೇ ಜ್ಞಾನಮಾಖ್ಯಾತಂ(ಙ್), ಗುಹ್ಯಾದ್ಗುಹ್ಯತರಂ(ಮ್) ಮಯಾ
ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು॥63॥

ಈ ಪ್ರಕಾರವಾಗಿ ಈ ಗೋಪನೀಯಕ್ಕಿಂತಲೂ ಅತಿ ಗೋಪನೀಯವಾದ ಜ್ಞಾನವನ್ನು ನಾನು ನಿನಗೆ ಹೇಳಿಬಿಟ್ಟೆನು. ಈಗ ನೀನು ಈ ರಹಸ್ಯಯುಕ್ತವಾದ ಜ್ಞಾನವನ್ನು ಪೂರ್ಣವಾಗಿ ಚೆನ್ನಾಗಿ ವಿಚಾರ ಮಾಡಿ ಹೇಗೆ ಇಷ್ಟಪಡುವೆಯೋ ಹಾಗೆಯೇ ಮಾಡು.

18.63 writeup

18.64

ಸರ್ವಗುಹ್ಯತಮಂ(ಮ್) ಭೂಯಃ(ಶ್), ಶೃಣು ಮೇ ಪರಮಂ(ಮ್) ವಚಃ
ಇಷ್ಟೋಽಸಿ ಮೇ ದೃಢಮಿತಿ, ತತೋ ವಕ್ಷ್ಯಾಮಿ ತೇ ಹಿತಮ್ ॥64॥

ಸಂಪೂರ್ಣವಾದ ಗೋಪನೀಯಕ್ಕಿಂತ ಅತಿ ಗೋಪನೀಯವಾದ ನನ್ನ ಪರಮ ರಹಸ್ಯಯುಕ್ತವಾದ ವಚನವನ್ನು ನೀನು ಇನ್ನೊಮ್ಮೆ ಕೇಳು. ನೀನು ನನಗೆ ಅತಿಶಯವಾಗಿ ಪ್ರಿಯನಾಗಿರುವೆ, ಆದುದರಿಂದ ಈ ಪರಮ ಹಿತಕಾರವಾದ ವಚನವನ್ನು ನಾನು ನಿನಗೆ ಹೇಳುವೆನು.

ರಹಸ್ಯಕ್ಕಿಂತಲೂ ರಹಸ್ಯವಾದ ಜ್ಞಾನವನ್ನು ಭಗವಂತನು ಅರ್ಜುನನಿಗೆ ಇಲ್ಲಿಯವರೆಗೆ ಉಪದೇಶ ಮಾಡಿದ್ದಾನೆ. "ಇದನ್ನು ಅರ್ಥ ಮಾಡಿಕೊಂಡು, ಪರಾಮರ್ಶೆ ಮಾಡಿಕೊಂಡು, ನಿನ್ನ ಇಚ್ಛೆಯಂತೇ ಅನುಸರಿಸು. ಗುಹ್ಯತಮವಾದ ಜ್ಞಾನವನ್ನು ನಿನಗಾಗಿ, ನೀನು ನನ್ನ ಅತ್ಯಂತ ಪ್ರಿಯನು ಎನ್ನುವ ಕಾರಣಕ್ಕಾಗಿ ಮತ್ತೆ ಹೇಳುತ್ತಿದ್ದೇನೆ. ಅದನ್ನು ಅರ್ಥ ಮಾಡಿಕೊಂಡು ನಿನ್ನ ಮುಂದಿನ ಹೆಜ್ಜೆ ಇಡು". ಎಂದು ಭಗವಂತ ಅರ್ಜುನನಿಗೆ ಹೇಳುತ್ತಿದ್ದಾನೆ.

65ನೇ ಶ್ಲೋಕವು ಸಂಪೂರ್ಣ ಭಗವದ್ಗೀತೆಯ ಸಾರವನ್ನು ತಿಳಿಸುತ್ತದೆ. ಪ್ರವಚನಕಾರರು, ಸಂತ ಮಹಾಪುರುಷರು ಇದನ್ನು ಮನಸ್ಸಿಗೆ ಸಂತೃಪ್ತಿ ಆಗುವಷ್ಟು ವರ್ಣನೆ ಮಾಡುತ್ತಾರೆ. ಹಾಡುತ್ತಾರೆ. ನಾಮ ಸಂಕೀರ್ತನೆ ಮಾಡುತ್ತಾರೆ, ಹಾಡುತ್ತಾ ಭಾವುಕರಾಗುತ್ತಾರೆ. ಭಗವಂತನು ಕೃಪಾಸಿಂಧು. ದಯಾನಿಧಿ. ಕರುಣಾಮಯಿ. ಯಾವುದೇ ಕಾರಣಗಳಿಲ್ಲದೇ ಅನುಗ್ರಹಿಸುತ್ತಾನೆ. ಭಕ್ತರನ್ನು ಉದ್ಧಾರ ಮಾಡುತ್ತಾನೆ.

18.65

ಮನ್ಮನಾ ಭವ ಮದ್ಭಕ್ತೋ, ಮದ್ಯಾಜೀ ಮಾಂ(ನ್) ನಮಸ್ಕುರು
ಮಾಮೇವೈಷ್ಯಸಿ ಸತ್ಯಂ(ನ್) ತೇ, ಪ್ರತಿಜಾನೇ ಪ್ರಿಯೋಽಸಿ ಮೇ॥65॥

ಹೇ ಅರ್ಜುನಾ ! ನೀನು ನನ್ನಲ್ಲಿ ಮನಸ್ಸುಳ್ಳವನಗು, ನನ್ನ ಭಕ್ತನಾಗು, ನನ್ನನ್ನು ಪುಜಿಸುವವನಾಗು ಮತ್ತು ನನಗೆ ಪ್ರಣಾಮ ಮಾಡು. ಹೀಗೆ ಮಾಡುವುದರಿಂದ ನೀನು ನನ್ನನ್ನೇ ಪಡೆಯುವೆ. ಇದನ್ನು ನಾನು ನಿನ್ನಲ್ಲಿ ಸತ್ಯವಾಗಿ ಪ್ರತಿಜ್ಞೆಮಾಡಿ ಹೇಳುತ್ತೇನೆ; ಏಕೆಂದರೆ ನೀನು ನನಗೆ ಅತ್ಯಂತ ಪ್ರಿಯನಾಗಿರುವೆ.

"ನನ್ನನ್ನು ಚಿಂತಿಸು, ನನ್ನ ಭಕ್ತನಾಗು, ನನ್ನನ್ನು ಆರಾಧಿಸು. ನನಗೆ ನಮಸ್ಕಾರ ಮಾಡು. ಆಗ ಖಂಡಿತವಾಗಿಯೂ ನೀನು ನನ್ನ ಬಳಿ ಬರುವೆ" - ಇದು ಭಗವದ್ ವಾಕ್ಯ.
ಇಲ್ಲಿ "ನಾನು, ನನ್ನ" ಎಂಬ ಪದದ ಅರ್ಥ ಶ್ರೀಕೃಷ್ಣನಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ನನ್ನ ಇಷ್ಟ ದೇವ, ನನ್ನ ಆರಾಧ್ಯ ದೈವ ಯಾರೇ ಆಗಿರಲಿ ಅವರನ್ನು ಇಲ್ಲಿ, "ನಾನು" ಎಂಬಲ್ಲಿ ಕಲ್ಪನೆ ಮಾಡಿಕೊಳ್ಳಬೇಕು. ರಾಮ, ಕೃಷ್ಣ, ಈಶ್ವರ, ದುರ್ಗೆ, ಗಣಪತಿ, - ಯಾರೇ ಆಗಿರಲಿ. ಅವರು ಈ ಉಪದೇಶ ಕೊಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡು ಆ ಪರಬ್ರಹ್ಮ ಪರಮಾತ್ಮನಲ್ಲಿ ಶರಣಾಗಬೇಕು.

ಹೀಗೆ ಶರಣಾದವರನ್ನು ಖಂಡಿತವಾಗಿ ಉದ್ಧಾರ ಮಾಡುತ್ತೇನೆ ಎಂದು ಭಗವಂತ ಪ್ರತಿಜ್ಞೆ ಕೊಡುತ್ತಿದ್ದಾನೆ.

"ಪ್ರತಿಜಾನೇ" - ಎಂದರೆ ಪ್ರತಿಜ್ಞೆ ಮಾಡುವುದು. ತನ್ನ ಅತ್ಯಂತ ಪ್ರೀತಿಯ ಭಕ್ತನನ್ನು ನಾನು ಉದ್ಧಾರ ಮಾಡುತ್ತೇನೆ ಎಂದು ಭಗವಂತ ಪ್ರತಿಜ್ಞೆ ಮಾಡುತ್ತಿದ್ದಾನೆ.
ಸಾಕ್ಷಾತ್ ಪರಬ್ರಹ್ಮ ಪರಮಾತ್ಮನು ಪ್ರತಿಜ್ಞೆ ಮಾಡುತ್ತಿದ್ದಾನೆ! "ನೀನು ನನಗೆ ಅತ್ಯಂತ ಪ್ರೀಯನಾದವನು" ಎಂದು ಮತ್ತೆ ಇಲ್ಲಿ ಭಗವಂತ ಹೇಳಿದ್ದಾನೆ.

18.66

ಸರ್ವಧರ್ಮಾನ್ಪರಿತ್ಯಜ್ಯ, ಮಾಮೇಕಂ(ಮ್) ಶರಣಂ(ಮ್) ವ್ರಜ
ಅಹಂ(ನ್) ತ್ವಾ ಸರ್ವಪಾಪೇಭ್ಯೋ, ಮೋಕ್ಷಯಿಷ್ಯಾಮಿ ಮಾ ಶುಚಃ॥66॥

ಸಂಪೂರ್ಣ ಧರ್ಮಗಳನ್ನು ಅರ್ಥಾತ್ ಸಮಸ್ತ ಕರ್ತವ್ಯ- ಕರ್ಮಗಳನ್ನು ನನ್ನಲ್ಲಿ ತ್ಯಾಗಮಾಡಿ ( ಸಮರ್ಪಿಸಿ ) ನೀನು ಕೇವಲ, ಸರ್ವಶಕ್ತಿವಂತ, ಸರ್ವಾಧಾರ ಪರಮೇಶ್ವರನಾದ ನನ್ನೋರ್ವನಿಗೇ ಶರಣು ಬಂದುಬಿಡು. ನಾನು ನಿನ್ನನ್ನು ಸಮಸ್ತ ಪಾಪಗಳಿಂದ ಮುಕ್ತನಾಗಿಸುವೆ. ನೀನು ಶೋಕ ಮಾಡಬೇಡ.

ಅತ್ಯಂತ ಪ್ರಮುಖವಾದ, ಪ್ರಸಿದ್ಧವಾದ ಶ್ಲೋಕವಿದು.

"ಎಲ್ಲಾ ಧರ್ಮವನ್ನೂ ತ್ಯಾಗ ಮಾಡು" ಎಂಬ ಮಾತು ಸ್ವಲ್ಪ ಗೊಂದಲ ಉಂಟು ಮಾಡುತ್ತದೆ. ಸಂಪೂರ್ಣ ಭಗವದ್ಗೀತೆಯ ಉಪದೇಶ ಧರ್ಮ ಪರಿಪಾಲನೆಯ ಬಗ್ಗೆ ಇದೆ. ಶ್ರೇಷ್ಠ ಯೋಗಿಗಳಿಗೂ, ಸಂತ ಮಹಾತ್ಮರುಗಳಿಗೂ ಕೂಡಾ ಧರ್ಮ ಪಾಲನೆಯ ಅನಿವಾರ್ಯತೆಯನ್ನು ಭಗವಂತ ವಿವರಿಸಿದ್ದಾನೆ. ಅವರು ಕೂಡಾ ಯಜ್ಞ,ದಾನ, ತಪಗಳನ್ನು ಆಚರಿಸಬೇಕು ಎಂದು ಅವರುಗಳಿಗೂ ಧರ್ಮ ವಿಧಿಯನ್ನು ಹದಿನೇಳನೆಯ ಅಧ್ಯಾಯದಲ್ಲಿ ಹೇಳಿದ್ದಾನೆ. ಆದರೆ ಈಗ ಇಲ್ಲಿ ಅವೆಲ್ಲವುಗಳಿಗೂ ತದ್ವಿರುದ್ಧವಾದ ಮಾತನ್ನು ಹೇಳುತ್ತಿದ್ದಾನೆ.

"ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | "ಈ ವಾಕ್ಯದ ಎರಡನೇ ಭಾಗವನ್ನು ಮೊದಲು ತಿಳಿಯೋಣ. "ಮಾಮ್ ಏಕಮ್ ಶ ರಣಂ ವ್ರಜ" - ಯಾರು ಭಗವಂತನನ್ನೊಬ್ಬನನ್ನೇ ಆಶ್ರಯಿಸುವರೋ ಅವರಿಗೆ ಮಾತ್ರ ಎಲ್ಲಾ ಧರ್ಮಗಳನ್ನು ಬಿಡಲು ಅರ್ಹತೆ ಇದೆ. ಯಾವ ಆಸೆ ಆಕಾಂಕ್ಷೆಗಳೂ ಇಲ್ಲದವನಾದಾಗ ಭಗವಂತನನ್ನು ಸೇರಲು ಅರ್ಹತೆ ಬರುತ್ತದೆ.

21ವರ್ಷ ವಯಸ್ಸಿಗೆ ಸಿದ್ದಾರ್ಥನು ಪತ್ನಿ ಯಶೋಧರೆ ಮತ್ತು ನವಜಾತ ಶಿಶು ರಾಹುಲನನ್ನು ತ್ಯಜಿಸಿ ವನಕ್ಕೆ ತೆರಳಿ ಬಿಟ್ಟನು. ಈ ಲೋಕ ಅವನನ್ನು ಧರ್ಮಹೀನ ಎಂದು ಯಾವತ್ತೂ ಬೆರಳು ಮಾಡಲಿಲ್ಲ. ಪತಿ ಧರ್ಮ, ಪಿತೃ ಧರ್ಮವನ್ನು ತ್ಯಜಿಸಿ ಪಾಪ ಮಾಡಿದ ಎಂದು ಹೇಳಲಿಲ್ಲ. ಯಾಕೆಂದರೆ ಅವನು ನಂತರ ಸಂಸಾರ ಸುಖವನ್ನು ಬಯಸಲಿಲ್ಲ. ಎಲ್ಲಾ ಧರ್ಮಗಳನ್ನೂ ತ್ಯಜಿಸಿ ಭಗವಂತನನ್ನೊಬ್ಬನನ್ನೇ ಆಶ್ರಯಿಸಿದ. ಗೌತಮ ಬುದ್ಧನೆನಿಸಿಕೊಂಡ. ಎಲ್ಲಾ ಭೋಗ ಭಾಗ್ಯಗಳನ್ನೂ ತ್ಯಾಗ ಮಾಡಿ ಭಗವಂತನೊಬ್ಬನನ್ನೇ ನಂಬಿ ನಡೆದ. ಒಂದು ಭೋಗವನ್ನು ತ್ಯಜಿಸಿ ಇನ್ನೊಂದು ಭೋಗಕ್ಕೆ ಹಾರಿದರೆ ಅದು ಅಧರ್ಮವಾಗುತ್ತದೆ. ಎಲ್ಲವನ್ನೂ ತ್ಯಜಿಸಿ ಕೇವಲ ಭಗವಂತನಲ್ಲಿ ಶರಣು ಹೋದರೆ ಭಗವಂತನೇ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ. ಅಂಥವರ ಒಳಿತಿನ ಜವಾಬ್ದಾರಿಯನ್ನು ಭಗವಂತನು ಹೊರುತ್ತಾನೆ. ಅವನ ಶ್ರೇಯಸ್ಸಿಗೆ ಭಗವಂತನೇ ಕಾರಣನಾಗುತ್ತಾನೆ. ಆ ಶರಣಾಗತನ ಎಲ್ಲಾ ಪಾಪಗಳನ್ನೂ ನಾಶ ಮಾಡಿ ಅವನನ್ನು ಉದ್ಧರಿಸುತ್ತಾನೆ. ಜನ್ಮ ಜನ್ಮಗಳ ಪಾಪ ಪುಣ್ಯಗಳೆಲ್ಲವೂ ಭಗವಂತನಲ್ಲಿ ವಿಲೀನವಾಗಿ ಹೋಗುತ್ತದೆ.

ಭಗವದ್ ಭಕ್ತಿಯೊಂದು ದೃಢವಾಗಿದ್ದಲ್ಲಿ ಅದು ಎಲ್ಲಾ ನ್ಯೂನತೆಗಳನ್ನೂ ಸರಿಪಡಿಸಿ, ಎಲ್ಲಾ ದೋಷಗಳನ್ನೂ ಹೋಗಲಾಡಿಸಿ, ಎಲ್ಲ ಹಿತಗಳನ್ನೂ ಸಂಪಾದಿಸಿ ಕೊಡುತ್ತದೆ. ಅದು ಎಲ್ಲಕ್ಕಿಂತ ಮೇಲ್ಪಟ್ಟದ್ದು. ಆದ್ದರಿಂದ ಎಲ್ಲಾ ಸಾಮಾನ್ಯ ಧರ್ಮಗಳಿಗಿಂತಲೂ ಮಿಗಿಲಾದದ್ದು. ಎಲ್ಲಾ ಧರ್ಮಗಳಿಗೂ ಮಸ್ತಕಪ್ರಾಯವಾದದ್ದು ಭಗವಂತನಲ್ಲಿ ಶರಣು ಹೋಗುವುದು. ಇಲ್ಲಿ ಎಲ್ಲಾ ತರ್ಕ ಜಿಜ್ಞಾಸೆಗಳೂ ಸಮಾಪ್ತವಾಗುತ್ತದೆ. ಭಗವಂತನಲ್ಲಿ ಸಂಪೂರ್ಣ ನಂಬಿಕೆ ಅದೇ ಶರಣಾಗತಿ. ಇದರಿಂದಲೇ ಜೀವಿಯ ಶ್ರೇಯಸ್ಸು.

18.67

ಇದಂ(ನ್) ತೇ ನಾತಪಸ್ಕಾಯ, ನಾಭಕ್ತಾಯ ಕದಾಚನ
ನ ಚಾಶುಶ್ರೂಷವೇ ವಾಚ್ಯಂ(ನ್), ನ ಚ ಮಾಂ(ಮ್) ಯೋಽಭ್ಯಸೂಯತಿ॥67॥

ನೀನು ಈ ಗೀತಾರೂಪವಾದ ರಹಸ್ಯಮಯ ಉಪದೇಶವನ್ನು ಯಾವ ಕಾಲದಲ್ಲಿಯೂ ತಪರಹಿತನಾದ ಮನುಷ್ಯನಾಗಲೀ, ಭಕ್ತಿರಹಿತನಾದವನಿಗಾಗಲೀ ಮತ್ತು ಕೇಳಲು ಇಚ್ಛೆಯಿಲ್ಲದಿರುವವನಿಗಾಗಲೀ ಹೇಳಬಾರದು, ಹಾಗೂ ಯಾರು ನನ್ನಲ್ಲಿ ದೋಷದೃಷ್ಟಿಯನ್ನು ಇಡುತ್ತಾರೋ ಅವನಿಗಂತೂ ಎಂದಿಗೂ ಹೇಳಬಾರದು.

ಈ ಸಮಯದಲ್ಲಿ ತಾನು ಹೇಳಿದ ಭಗವದ್ಗೀತೆಯ ಜ್ಞಾನದ ಮೇಲೆ ಭಗವಂತನಿಗೇ ಗರ್ವ ಉಂಟಾಯಿತು. ಅರ್ಜುನ ಮತ್ತು ಕೃಷ್ಣನದ್ದು ಐವತ್ತು ವರ್ಷಗಳಿಗೂ ಮೀರಿದ ಒಡನಾಟ. ಆದರೆ ಇಲ್ಲಿಯವರೆಗೆ ಸಂಭವಿಸದೆ ಇದ್ದದ್ದು ಈಗ ಯುದ್ಧ ಭೂಮಿಯಲ್ಲಿ, ಯುದ್ಧ ಪ್ರಾರಂಭಕ್ಕೂ ಮುನ್ನ ನಡೆಯಿತು. ಈ ವಿದ್ಯಮಾನದಿಂದ ಭಗವಂತನೂ ಪುಳಕಿತನಾದಂತೆ ತೋರುತ್ತದೆ.

ಅರ್ಜುನನ ಮೋಹ, ಅವನು ಕೃಷ್ಣನಲ್ಲಿ ತನಗೆ ದಾರಿ ತೋರಿಸು ಎಂದು ಬೇಡಿದ ರೀತಿ, ಶ್ರೀಕೃಷ್ಣನು ಭಗವಂತನಾಗಿ ನಿಂತು ಅರ್ಜುನನನ್ನು ಸಂತೈಸುತ್ತಾ ಜ್ಞಾನಸುಧೆಯನ್ನು ಹರಿಸಿದ್ದು. ಎಲ್ಲವೂ ಪರಮ ಪುಣ್ಯ ಕ್ಷಣಗಳು. ಆದರೆ ಇದು ಮೊದಲೇ ತಯಾರಿ ನಡೆಸಿ ಬಂದೊದಗಿದ ಸಂದರ್ಭವಲ್ಲ. ಆ ಕ್ಷಣ ಸಂಭವಿಸಿದ್ದು. ಅರ್ಜುನನು, "ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಉದ್ಧಾರ ಮಾಡು ("ಶಾಧಿಮಾಂ ತ್ವಾಂ ಪ್ರಪನ್ನಮ್")" ಎಂದು ಭಗವಂತನಲ್ಲಿ ಬೇಡುತ್ತಾನೆ. ಆಗ ಭಗವಂತನು ಉಪನಿಷತ್ತಿನ ಸಾರವನ್ನೆಲ್ಲ ಒಂದು ಮಾಡಿ ಏಳು ನೂರು ಶ್ಲೋಕಗಳಲ್ಲಿ ಸುಂದರ, ಗೀತಾಮೃತ ಪಾನವನ್ನು ಅರ್ಜುನನಿಗೆ ಮಾಡಿಸುತ್ತಾನೆ. ಮಹರ್ಷಿ ವೇದವ್ಯಾಸರು ಇದನ್ನು ಬರೆಯುತ್ತಾರೆ ಮತ್ತು ಇದು ಸಂಪೂರ್ಣ ಜಗತ್ತಿನಲ್ಲಿ, ಯುಗಯುಗಾಂತರಗಳಲ್ಲಿ, ಅತ್ಯಂತ ಶ್ರೇಷ್ಠ ಗ್ರಂಥವಾಗಲಿದೆ ಎಂಬುದು ಸರ್ವಜ್ಞಾನಿಯಾದ ಭಗವಂತನಿಗೆ ಮೊದಲೇ ತಿಳಿದಿತ್ತು. ತನ್ನ ಮುಖಾರವಿಂದಗಳಿಂದ ಬಂದ ಈ ಉಪದೇಶಗಳಿಂದ ಭಗವಂತನಿಗೆ ಧನ್ಯತೆಯ ಭಾವ ಉಂಟಾಯಿತು. ಆದ್ದರಿಂದ, ಈ ರಹಸ್ಯಮಯವಾದ, ಪುಣ್ಯಪ್ರದವಾದ, ಪಾವನ ಗೀತಾಶಾಸ್ತ್ರವನ್ನು, "ತಪಸ್ಸು ಮಾಡದವನಿಗೆ, ಭಕ್ತನಲ್ಲದವನಿಗೆ, ಭಕ್ತಿ ಸೇವೆಯಲ್ಲಿ ನಿರತನಾಗದವನಿಗೆ, ಮತ್ತು ಭಗವಂತನಲ್ಲಿ ಅಸೂಯೆ ಇರುವವನಿಗೆ ಹೇಳಬಾರದು" ಎಂದು ಭಗವಂತನೇ ಹೇಳುತ್ತಾನೆ. ಹಾಗಾದರೆ ಇದನ್ನು ಯಾರಿಗೂ ಹೇಳಬಾರದೇ ಎಂಬ ಸಂದೇಹ ಅರ್ಜುನನಿಗೆ ಬರುತ್ತದೆ. ಆಗ ಭಗವಂತನು, ನನ್ನ ಭಕ್ತರು ಇದನ್ನು ಪ್ರಸಾರ, ಪ್ರಚಾರ ಮಾಡುವ ಪೂರ್ಣ ಅಧಿಕಾರವನ್ನು ಹೊಂದಿದ್ದಾರೆ ಎಂದು ಹೇಳುತ್ತಾನೆ.

ನಾನೇ ಇದನ್ನು ಇನ್ನೊಮ್ಮೆ ಹೇಳಲು ಸಾಧ್ಯವಿಲ್ಲ. ಇದು ಅತ್ಯಂತ ಗುಹ್ಯವಾದ ಶಾಸ್ತ್ರ. ಆದರೆ ಭಗವಾನ್ ವೇದವ್ಯಾಸರು ಇದನ್ನು ಲೋಕ ಕಲ್ಯಾಣಕ್ಕಾಗಿ ಬರೆಯುತ್ತಾರೆ ಎಂಬುದು ಭಗವಂತನಿಗೆ ತಿಳಿದಿತ್ತು. ಆದ್ದರಿಂದ ಈ ಅಮೃತವನ್ನು ನನ್ನ ಭಕ್ತಜನರೆಲ್ಲರೂ ಸವಿಯಲಿ ಎಂದು ಭಗವಂತನು ಆಶಿಸಿದನು.

18.68

ಯ ಇಮಂ(ಮ್) ಪರಮಂ(ಙ್) ಗುಹ್ಯಂ(ಮ್), ಮದ್ಭಕ್ತೇಷ್ವಭಿಧಾಸ್ಯತಿ
ಭಕ್ತಿಂ(ಮ್) ಮಯಿ ಪರಾಂ(ಙ್) ಕೃತ್ವಾ, ಮಾಮೇವೈಷ್ಯತ್ಯಸಂಶಯಃ॥68॥

ಯಾವ ಪುರುಷನು ನನ್ನಲ್ಲಿ ಪರಮ ಪ್ರೇಮವನ್ನಿಟ್ಟುಕೊಂಡು ಈ ಪರಮ, ರಹಸ್ಯಯುಕ್ತವಾದ, ಗೀತಾಶಾಸ್ತ್ರವನ್ನು ನನ್ನ ಭಕ್ತರಲ್ಲಿ ಹೇಳುವನೋ ಅವನು ನನ್ನನ್ನೇ ಪಡೆಯುತ್ತಾನೆ- ಇದರಲ್ಲಿ ಯಾವ ಸಂದೇಹವೂ ಇಲ್ಲ.

"ಪರಮ ಭಕ್ತಿಯನ್ನಿರಿಸಿ, ಪರಮ ಗುಹ್ಯವಾದ ಈ ಗೀತಾಶಾಸ್ತ್ರವನ್ನು ಯಾರು ತನ್ನ ಭಕ್ತರಿಗೆ ಪ್ರೀತಿಯಿಂದ ತಿಳಿಸುತ್ತಾರೋ ಅವರು ಕೊನೆಯಲ್ಲಿ ನನ್ನನ್ನೇ ಸೇರುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ" ಎಂದು ಭಗವಂತ ಆಶ್ವಾಸನೆ ಕೊಡುತ್ತಿದ್ದಾನೆ. ಜಾತಿ, ನೀತಿ, ಲಿಂಗ, ಎಲ್ಲವನ್ನೂ ಮೀರಿ ಭಗವಂತನು "ಯ ಇಮಮ್ (ಯಾರು ಬೇಕಾದರೂ)" ಎಂದಿದ್ದಾನೆ. ಭಗವದ್ಗೀತೆಯನ್ನು ಓದುವ, ಪ್ರಸಾರ ಮಾಡುವ, ಪ್ರಚಾರ ಮಾಡುವ, ಭಕ್ತರಿಗೆ ಇದರ ಸಾರವನ್ನು ತಿಳಿಸುವ, ಗೀತಾ ಸೇವಿಯು ಭಗವಂತನಿಗೆ ಅತ್ಯಂತ ಪ್ರಿಯನಾಗುತ್ತಾನೆ. ಅವನು ಭಗವದ್ ಪ್ರಾಪ್ತಿಯ ಅಧಿಕಾರಿಯಾಗುತ್ತಾನೆ. No conditions apply. ಯಾವ ಶರತ್ತುಗಳೂ ಇಲ್ಲದೇ, ಕೇವಲ ಭಗವದ್ಗೀತೆಯನ್ನು ಪ್ರಸಾರ ಪ್ರಚಾರ ಮಾಡುವ ಸೇವಿಯು ಪರಮಪದ ಹೊಂದಲು ಅರ್ಹನಾಗುತ್ತಾನೆ ಎಂಬುದನ್ನು ಕೇಳಿದ ಅರ್ಜುನನಿಗೆ ಪರಮಾಶ್ಚರ್ಯವಾಗುತ್ತದೆ.

ಭಗವಂತನು, "ಇಷ್ಟೇ ಅಲ್ಲ, ಇನ್ನೂ ಇದೆ ಕೇಳು" ಎಂದು ಪ್ರಸನ್ನತೆಯಿಂದ ಮುಂದುವರಿದನು. ಆಫರ್ ಗಳ ಸುರಿಮಳೆಗರೆಯುತ್ತಿದ್ದಾನೆ ಭಗವಂತ.

18.69

ನ ಚ ತಸ್ಮಾನ್ಮನುಷ್ಯೇಷು, ಕಶ್ಚಿನ್ಮೇ ಪ್ರಿಯಕೃತ್ತಮಃ
ಭವಿತಾ ನ ಚ ಮೇ ತಸ್ಮಾದ್, ಅನ್ಯಃ(ಫ್) ಪ್ರಿಯತರೋ ಭುವಿ॥69॥

ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಯಾರೂ ಇಲ್ಲ ಹಾಗೂ ಭೂಮಂಡಲದಲ್ಲಿ ಅವನಿಗಿಂತ ಮಿಗಿಲಾಗಿ ಪ್ರಿಯನಾದವನು ನನಗೆ ಬೇರೆ ಯಾರೂ ಭವಿಷ್ಯದಲ್ಲಿ ಆಗಲಾರರು.

ಪ್ರಪಂಚದ ಬೇರೆ ಯಾವ ಶಾಸ್ತ್ರಗಳಲ್ಲೂ ಸಿಗದ ಮಾತನ್ನು ಹೇಳಿದ್ದಾನೆ ಭಗವಂತ. ಯಾರು ಭಗವದ್ಗೀತೆಯನ್ನು ಪ್ರಸಾರ ಮಾಡುತ್ತಾರೋ, ಪ್ರಚಾರ ಮಾಡುತ್ತಾರೋ ಅವರು ನನಗೆ ಎಲ್ಲರಿಗಿಂತಲೂ ಪ್ರಿಯರು. ಅವರಿಗಿಂತಲೂ ಪ್ರೀತಿಪಾತ್ರರು ಈ ಜಗತ್ತಿನಲ್ಲಿ ಬೇರೊಬ್ಬರಿಲ್ಲ. ಋಷಿ ಮುನಿಗಳು, ಯೋಗೀ ಭಕ್ತರಿಗಿಂತ ಗೀತಾ ಸೇವಿಯು ತನಗೆ ಪರಮಪ್ರಿಯನು ಎಂದು ಭಗವಂತನು ಹೇಳಿದನು. ಭೂತ ಭವಿಷ್ಯಗಳಲ್ಲಿ ಕೂಡಾ ಇವನಿಗಿಂತ ಉತ್ತಮನು ಬೇರೊಬ್ಬನಿರಲು ಸಾಧ್ಯವಿಲ್ಲ.

18.70

ಅಧ್ಯೇಷ್ಯತೇ ಚ ಯ ಇಮಂ(ನ್), ಧರ್ಮ್ಯಂ(ಮ್) ಸಂವಾದಮಾವಯೋಃ
ಜ್ಞಾನಯಜ್ಞೇನ ತೇನಾಹಮ್, ಇಷ್ಟಃ(ಸ್) ಸ್ಯಾಮಿತಿ ಮೇ ಮತಿಃ ॥70॥

ಯಾವ ಪುರುಷನು ಈ ಧರ್ಮಮಯವಾದ ನಮ್ಮಿಬ್ಬರ ಸಂವಾದರೂಪವಾದ ಗೀತಾಶಾಸ್ತ್ರವನ್ನು ಓದುವನೋ ಅವನ ಮೂಲಕವೂ ಸಹ ನನೌ ಜ್ಞಾನಯಜ್ಞದಿಂದ ಪೂಜಿತನಾಗುವೆನು.

ಸಂವಾದ ರೂಪದಲ್ಲಿರುವ ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವವರು ಜ್ಞಾನ ಯಜ್ಞದಿಂದ ಭಗವಂತನನ್ನು ಆರಾಧಿಸಿದಂತೆ ಆಗುತ್ತದೆ. ಭಗವದ್ಗೀತೆಯ ಜ್ಞಾನ ಯಜ್ಞ ಎಂಬ ಹೊಸ ರೀತಿಯ ಯಜ್ಞವನ್ನು ಭಗವಂತನು ಇಲ್ಲಿ ಹುಟ್ಟು ಹಾಕುತ್ತಿದ್ದಾನೆ. ಕೇವಲ ಗೀತೆಯ ಅಧ್ಯಯನ ಮಾಡುವುದು ಯಜ್ಞಕ್ಕೆ ಸಮಾನವಾಗಿದೆ.

18.71

ಶ್ರದ್ಧಾವಾನನಸೂಯಶ್ಚ, ಶೃಣುಯಾದಪಿ ಯೋ ನರಃ
ಸೋಽಪಿ ಮುಕ್ತಃ(ಶ್) ಶುಭಾಁಲ್ಲೋಕಾನ್, ಪ್ರಾಪ್ನುಯಾತ್ಪುಣ್ಯಕರ್ಮಣಾಮ್॥71॥

ಯಾವ ಮನುಷ್ಯನು ಶ್ರದ್ಧಾಯುಕ್ತನಾಗಿ ಮತ್ತು ದೋಷದೃಷ್ಟಿಯಿಂದ ರಹಿತನಾಗಿ ಈ ಗೀತಾಶಾಸ್ತ್ರದ ಶ್ರವಣ ಮಾಡುವನೋ ಅವನೂ ಸಹ ಪಾಪಗಳಿಂದ ಮುಕ್ತನಾಗಿ ಉತ್ತಮ ಕರ್ಮಮಾಡುವವರ ಶ್ರೇಷ್ಠವಾದ ಲೋಕಗಳನ್ನು ಹೊಂದುವನು.

ಯಾವ ಮನುಷ್ಯನು ಶ್ರದ್ಧಾಭಕ್ತಿಯಿಂದ, ಅಸೂಯೆಯಿಲ್ಲದೆ ಈ ಗೀತಾಶಾಸ್ತ್ರವನ್ನು ಕೇಳುತ್ತಾನೋ ಅವನ ಪಾಪಗಳೆಲ್ಲ ನಾಶವಾಗಿ ಅವನು ಪುಣ್ಯವಂತರ ಶುಭಲೋಕವನ್ನು ಪಡೆಯುತ್ತಾನೆ.

ಇಷ್ಟು ಹೇಳಿ ಭಗವಂತನು ಅರ್ಜುನನಿಗೆ ಪ್ರಶ್ನೆ ಮಾಡುತ್ತಾನೆ.

ಅರ್ಜುನನ ಆ ಸಂದರ್ಭದ ಭಾವ ಭಗವಂತನಿಗೇನೋ ತಿಳಿಯಿತು. ಆದರೆ ಅದನ್ನು ಈ ಜಗತ್ತು ಕೂಡಾ ತಿಳಿಯಲಿ, ವೇದವ್ಯಾಸ ಭಗವಾನರು ಇದನ್ನು ಬರೆಯಲಿ ಎಂಬ ಕಾರಣಕ್ಕೆ ಭಗವಂತನು ಅರ್ಜುನನಿಗೆ ಪ್ರಶ್ನೆ ಮಾಡುತ್ತಾನೆ.

18.72

ಕಚ್ಚಿದೇತಚ್ಛ್ರುತಂ(ಮ್) ಪಾರ್ಥ, ತ್ವಯೈಕಾಗ್ರೇಣ ಚೇತಸಾ ಕಚ್ಚಿದಜ್ಞಾನಸಮ್ಮೋಹಃ(ಫ್), ಪ್ರನಷ್ಟಸ್ತೇ ಧನಂಜಯ॥72॥

ಹೇ ಪಾರ್ಥನೇ ! ಈ ಗೀತಾಶಾಸ್ತ್ರವನ್ನು ನೀನು ಏಕಾಗ್ರಚಿತ್ತನಾಗಿ ಶ್ರವಣ ಮಾಡಿದೆಯಾ ? ಮತ್ತು ಹೇ ಧನಂಜಯನೇ ! ಅಜ್ಞಾನದಿಂದ ಉಂಟಾದ ನಿನ್ನ ಮೋಹವು ನಾಶವಾಯಿತೇ ?

ಅರ್ಜುನನ ಹೆಸರುಗಳಲ್ಲಿ 'ಪಾರ್ಥ' ಭಗವಂತನಿಗೆ ಅತ್ಯಂತ ಪ್ರಿಯವಾದ ಹೆಸರು. ಸಂಪೂರ್ಣ ಭಗವದ್ಗೀತೆಯಲ್ಲಿ ಒಂಬತ್ತು ಸಲ ಈ ಹೆಸರಿನಿಂದ ಭಗವಂತನು ಅರ್ಜುನನನ್ನು ಸಂಬೋಧನೆ ಮಾಡಿದ್ದಾನೆ. ಅರ್ಜುನನ ಮೇಲೆ ಅತ್ಯಂತ ಪ್ರೀತಿಯುಂಟಾದಾಗ, ಅವನನ್ನು ಅಪ್ಪಿ ಅನುಗ್ರಹಿಸಬೇಕು ಎನಿಸಿದಾಗ ಭಗವಂತನು ಈ ಹೆಸರಿನಿಂದ ಅರ್ಜುನನನ್ನು ಕರೆಯುತ್ತಾನೆ.

ಎಲೈ ಪಾರ್ಥ! ನೀನು ಎಲ್ಲವನ್ನೂ ಏಕಾಗ್ರತೆಯಿಂದ ಕೇಳಿದೆಯಾ? ಧನಂಜಯ! ಅಜ್ಞಾನದಿಂದ ನಿನ್ನಲ್ಲಿ ಉಂಟಾದ ಮೋಹ ನಾಶವಾಯಿತೇ? ಹೇಳು ಎಂದು ಭಗವಂತನು ಕೇಳುತ್ತಿದ್ದಾನೆ.

ಈ ಶ್ಲೋಕದ ಬಳಿಕ ಭಗವಂತನು ಮುಂದೆ ಏನನ್ನೂ ಹೇಳಲಿಲ್ಲ.

18.73

ಅರ್ಜುನ ಉವಾಚ
ನಷ್ಟೋ ಮೋಹಃ(ಸ್) ಸ್ಮೃತಿರ್ಲಬ್ಧಾ, ತ್ವತ್ಪ್ರಸಾದಾನ್ಮಯಾಚ್ಯುತ
ಸ್ಥಿತೋಽಸ್ಮಿ ಗತಸಂದೇಹಃ(ಖ್), ಕರಿಷ್ಯೇ ವಚನಂ(ನ್) ತವ ॥73॥

ಅರ್ಜುನನು ಹೇಳಿದನು - ಹೇ ಅಚ್ಯುತಾ ! ನಿನ್ನ ಕೃಪೆಯಿಂದ ನನ್ನ ಮೋಹವು ನಾಶವಾಗಿ ಹೋಯಿತು ಮತ್ತು ನಾನು ಸ್ಮೃತಿಯನ್ನು ಪಡೆದುಕೊಂಡಿದ್ದೇನೆ. ಈಗ ನಾನು ಸಂಶಯರಹಿತನಾಗಿ ಸ್ಥಿತನಾಗಿದ್ದೇನೆ. ಆದ್ದರಿಂದ ನಿನ್ನ ಆಜ್ಞೆಯನ್ನು ಪಾಲನೆ ಮಾಡುವೆನು.

ಅರ್ಜುನನು ಭಾವೋದ್ವೇಗಕ್ಕೆ ಒಳಗಾದನು. ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಆರ್ತನಾಗಿ, ದೈನ್ಯತೆಯಿಂದ, ಗದ್ಗದಿತನಾಗಿ, ನಡುಗುವ ಸ್ವರದಿಂದ ಭಗವಂತನನ್ನು ನೋಡುತ್ತಾ ಉತ್ತರ ಕೊಡುತ್ತಾನೆ.

ಇದು ಅರ್ಜುನನ ಬಾಯಿಂದ ಬಂದ ಕೊನೆಯ ಶ್ಲೋಕ.

ಅಚ್ಯುತ! ನೀನೇ ನನ್ನ ಭಗವಂತ. ನೀನೇ ನನ್ನ ಮಾರ್ಗದರ್ಶಕ. ನಿನ್ನ ಅಸೀಮ ಅಪರಿಮಿತವಾದ ಅನುಗ್ರಹದಿಂದ ನನ್ನಲ್ಲಿ ಮೂಡಿದ ಮೋಹವು ನಾಶವಾಯಿತು. ನನಗೆ ಸ್ಮೃತಿ(ನೆನಪು)ಯುಂಟಾಯಿತು. ನಾನು ಯಾರು? ನನ್ನ ಕರ್ತವ್ಯವೇನು? ಎಂಬುದೆಲ್ಲ ನನಗೆ ನೆನಪಾಯಿತು.

ಜ್ಞಾನದ ಸಾಧನಗಳು ಐದು - ಪ್ರಮಾಣ, ವಿಪರ್ಯಾ, ವಿಕಲ್ಪ, ನಿದ್ರಾ ಮತ್ತು ಅಂತಿಮವಾಗಿ ಸ್ಮೃತಿ. 'ಸ್ಮೃತಿ' ಜ್ಞಾನದ ಕಟ್ಟ ಕಡೆಯ ಸಾಧನ. ಅರ್ಜುನನಿಗೆ ಸಂಪೂರ್ಣ ಜ್ಞಾನವಾಯಿತು. ಸ್ಮೃತಿಯುಂಟಾಯಿತು.

ಶ್ರೀರಾಮಚಂದ್ರನು, "ನನ್ನ ದರ್ಶನ ಮಾತ್ರದಿಂದಲೇ ಜೀವಿಗೆ ತನ್ನ ಅಸ್ತಿತ್ವದ ನಿಜ ಸ್ವರೂಪ ಅರ್ಥವಾಗುತ್ತದೆ" ಎಂದು ವಿಭೀಷಣನಿಗೆ ರಾಮಾಯಣ ಕಾಲದಲ್ಲಿ ಹೇಳಿದ್ದನು. ಇದೇ ಮಾತನ್ನು ಈಗ ಅರ್ಜುನನು ಅನುಭವಿಸಿ ಹೇಳುತ್ತಿದ್ದಾನೆ. ನನ್ನ ನಿಜ ರೂಪದ, ನಿಜ ಕರ್ತವ್ಯದ ಅರಿವು ಮೂಡಿತು ಎಂದು ಭಗವಂತನಲ್ಲಿ ಅರಿಕೆ ಮಾಡುತ್ತಿದ್ದಾನೆ. "ಯಾವುದೇ ಸಂದೇಹಗಳಿಲ್ಲದೇ, ನೀನು ಹೇಳಿದಂತೆ ಮಾಡುತ್ತೇನೆ" ಎನ್ನುತ್ತಿದ್ದಾನೆ ಅರ್ಜುನ. ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ನೀನು ಬೋಧಿಸಿದ ಉಪದೇಶಗಳಿಂದ ನನ್ನಲ್ಲಿ ಮೂಡಿದ ಎಲ್ಲಾ ಸಂಶಯಗಳೂ ನಾಶವಾಗಿ ಹೋಯಿತು. ನನ್ನ ಯೋಚನೆ ತಪ್ಪು ಎಂಬುದು ಅರ್ಥವಾಯಿತು. ಈಗ ಯಾವ ಅನ್ಯ ಯೋಚನೆಗಳೂ ಇಲ್ಲ. ನೀನು ಹೇಳಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡೆ. ನೀನು ಹೇಳಿದಂತೆ ನಡೆಯುತ್ತೇನೆ. ಎಂದು ಗದ್ಗದಿತನಾಗಿ ಅರ್ಜುನನು ಉತ್ತರ ಕೊಟ್ಟನು.

ಭಗವಂತನು ಪ್ರೀತಿಯಿಂದ ಅರ್ಜುನನನ್ನು ನೋಡುತ್ತಿದ್ದಾನೆ. ಅರ್ಜುನನು ಕೃತಾರ್ಥ ಭಾವದಿಂದ ಭಗವಂತನನ್ನು ನೋಡುತ್ತಿದ್ದಾನೆ.ಇವರಿಬ್ಬರ ಈ ಭಾವಲೋಕವನ್ನು ದೂರದಲ್ಲಿ ಇನ್ನೊಬ್ಬ ಮಹಾತ್ಮ ವೀಕ್ಷಿಸುತ್ತಿದ್ದಾನೆ. ಅವನೇ ಸಂಜಯ. ಅವನು ಕೂಡಾ ಎಲ್ಲವನ್ನೂ ವೀಕ್ಷಿಸಿ ಕೃತಾರ್ಥನಾಗುತ್ತಿದ್ದಾನೆ.

ಭಗವದ್ಗೀತೆಯ ಕೊನೆಯ ಐದು ಶ್ಲೋಕಗಳು ಸಂಜಯನದು. ಸಂಜಯ ಜನ್ಮದಿಂದ ಶೂದ್ರ, ಹವ್ಯಾಸದಿಂದ ಬ್ರಾಹ್ಮಣ ಮತ್ತು ಕರ್ಮದಿಂದ ಕ್ಷತ್ರಿಯ. ಮಹಾಭಾರತ ಯುದ್ಧದ ಕೊನೆಯಲ್ಲಿ ಇವನು ಕೌರವರ ಪರವಾಗಿ ಯುದ್ಧವನ್ನೂ ಮಾಡಿದ್ದಾನೆ. ಗವಲ್ಗಣ ಎಂಬ ಸೂತನ ಮಗನಾಗಿ ಹುಟ್ಟಿತ್ತಾನೆ ಸಂಜಯ. ಆದರೆ ಪೂರ್ವ ಪುಣ್ಯಗಳ ಫಲವಾಗಿ ಅವನಿಗೆ ಬಾಲ್ಯದಿಂದಲೇ ಶಾಸ್ತ್ರಗಳಲ್ಲಿ ಆಸಕ್ತಿ ಇರುತ್ತದೆ. ಬಾಲ್ಯದಲ್ಲಿಯೇ ವೇದವ್ಯಾಸರ ಬಳಿ ಶಿಷ್ಯನಾಗಿ ಹೋಗುತ್ತಾನೆ. ಇವನ ಅಪಾರ ಬುದ್ಧಿಶಕ್ತಿಯಿಂದ ಪ್ರಭಾವಿತರಾದ ಮಹರ್ಷಿಗಳು ಇವನಿಗೆ ಎಲ್ಲಾ ಶಾಸ್ತ್ರಗಳನ್ನೂ ಕಲಿಸುತ್ತಾರೆ. ಇವನಲ್ಲಿರುವ ಅಪಾರ ಜ್ಞಾನದ ಫಲವಾಗಿ ಮಹರ್ಷಿಗಳು ಇವನನ್ನು ಬ್ರಾಹ್ಮಣನೆಂದು ಘೋಷಣೆ ಮಾಡುತ್ತಾರೆ. ಇವನ ಶಿಕ್ಷಣವೆಲ್ಲ ಪೂರ್ಣವಾದ ಬಳಿಕ ಇವನನ್ನು ಧೃತರಾಷ್ಟ್ರನ ಬಳಿ ತಂದು ಬಿಡುತ್ತಾರೆ. "ಇವನು ಸೂತ, ಸಾರಥಿ. ಆದರೆ ಸಮಯ ಬಂದಾಗ ಮಂತ್ರಿಯಾಗಿ ನಿನಗೆ ಸಲಹೆ ಕೊಡುತ್ತಾನೆ. ಮತ್ತು ಇವನು ಯುದ್ಧ ಶಾಸ್ತ್ರವನ್ನೂ ಬಲ್ಲವನಾಗಿದ್ದಾನೆ. ನಿನ್ನ ಜೊತೆ ನಿನ್ನ ಕಣ್ಣಾಗಿ ಸದಾ ಇರುತ್ತಾನೆ" ಎಂದು ಹೇಳಿ ಸಂಜಯನ ಪರಿಚಯ ಮಾಡಿಕೊಟ್ಟು ಹೋಗುತ್ತಾರೆ.

ವೇದವ್ಯಾಸರ ಅತ್ಯಂತ ಪ್ರೀತಿಯ ಶಿಷ್ಯ ಸಂಜಯ. ಅವರು ಈ ಯುದ್ಧ ಸಂದರ್ಭದಲ್ಲಿ ಅವನಿಗೆ ದಿವ್ಯ ದೃಷ್ಟಿಯನ್ನು ದಯಪಾಲಿಸಿರುತ್ತಾರೆ. ದಿವ್ಯ ದೃಷ್ಟಿಯಿಂದ ಇಂದು ಸಂಜಯನು ಯುದ್ಧ ಭೂಮಿಯಲ್ಲಿ ನಡೆದ ಅದ್ಭುತವನ್ನು ಕಣ್ತುಂಬಿಸಿಕೊಂಡು ಕೃತಾರ್ಥನಾಗುತ್ತಾನೆ.

18.74

ಸಂಜಯ ಉವಾಚ
ಇತ್ಯಹಂ(ಮ್) ವಾಸುದೇವಸ್ಯ, ಪಾರ್ಥಸ್ಯ ಚ ಮಹಾತ್ಮನಃ ಸಂವಾದಮಿಮಮಶ್ರೌಷಮ್, ಅದ್ಭುತಂ(ಮ್) ರೋಮಹರ್ಷಣಮ್॥74॥

ಸಂಜಯನು ಹೇಳಿದನು - ಹೇ ರಾಜಾ ! ಈ ಪ್ರಕಾರವಾಗಿ ನಾನು ಶ್ರೀ ವಾಸುದೇವನ ಮತ್ತು ಮಹಾತ್ಮನಾದ ಅರ್ಜುನನ ಈ ಅಧ್ಬುತ ರಹಸ್ಯ ಯುಕ್ತವಾದ ರೋಮಾಂಚಕರವಾದ ಸಂವಾದವನ್ನು ಕೇಳಿದೆನು.

ಇಲ್ಲಿ ಸಂಜಯನು ಭಗವಂತನನ್ನು ವಾಸುದೇವ ಎಂದು ಮತ್ತು ಅರ್ಜುನನನ್ನು ಮಹಾತ್ಮ ಎಂದು ಸಂಬೋಧನೆ ಮಾಡುತ್ತಿದ್ದಾನೆ. ಈ ಶ್ಲೋಕದ ವಿಶೇಷತೆಯಿದು.

"ಅದ್ಭುತವಾದ, ರೋಮಾಂಚಕವಾದ ಸಂವಾದವನ್ನು ಕೇಳಿ, ತಿಳಿದು ಕೃತಾರ್ಥನಾಗುತ್ತಿದ್ದೇನೆ" ಎಂದು ರಾಜಾ ಧೃತಾರಾಷ್ಟ್ರನಿಗೆ ಸಂಜಯನು ವಿವರಿಸುತ್ತಿದ್ದಾನೆ. ಇವನ್ನೆಲ್ಲ ನೋಡುವ ಭಾಗ್ಯ ನನ್ನದಾಯಿತಲ್ಲ ಎಂದು ಹರ್ಷ ವ್ಯಕ್ತ ಪಡಿಸುತ್ತಿದ್ದಾನೆ.

18.75

ವ್ಯಾಸಪ್ರಸಾದಾಚ್ಛ್ರುತವಾನ್, ಏತದ್ಗುಹ್ಯಮಹಂ(ಮ್) ಪರಮ್
ಯೋಗಂ(ಮ್) ಯೋಗೇಶ್ವರಾತ್ಕೃಷ್ಣಾತ್, ಸಾಕ್ಷಾತ್ಕಥಯತಃ(ಸ್) ಸ್ವಯಮ್॥75॥

ಶ್ರೀ ವ್ಯಾಸರ ಕೃಪೆಯಿಂದ ದಿವ್ಯದೃಷ್ಟಿಯನ್ನು ಪಡೆದುಕೊಂಡು ನಾನು ಈ ಪರಮ ಗೋಪನೀಯವಾದ ಯೋಗವನ್ನು ಸ್ವಯಂ ಯೋಗೇಶ್ವರ ಭಗವಾನ್ ಶ್ರೀಕೃಷ್ಣನಿಂದ ಅರ್ಜುನನಿಗೆ ಹೇಳುತ್ತಿರುವಂತೆ ಪ್ರತ್ಯಕ್ಷವಾಗಿ ಕೇಳಿದ್ದೇನೆ.

"ಭಗವಾನ್ ವೇದವ್ಯಾಸರ ದಿವ್ಯ ಅನುಗ್ರಹದಿಂದ ಶ್ರೇಷ್ಠವಾದ, ಗುಹ್ಯವಾದ ಶಾಸ್ತ್ರವನ್ನು ಸಾಕ್ಷಾತ್ ಯೋಗೇಶ್ವರನಾದ ಶ್ರೀಕೃಷ್ಣನಿಂದ ಕೇಳುವ ಭಾಗ್ಯ ದೊರೆಯಿತು. ಇಬ್ಬರು ಪ್ರೀತಿ ಪಾತ್ರರು ಗೂಢವಾಗಿ ಮಾತನಾಡಿಕೊಂಡ ಸರ್ವಶ್ರೇಷ್ಠ ಯೋಗ ನನಗೂ ತಿಳಿಯುವಂತಾಯಿತು. ಸಾಕ್ಷಾತ್ ಭಗವಂತ ಮತ್ತು ಮಹಾತ್ಮನಾದ ಅರ್ಜುನನ ನಡುವೆ ನನ್ನಂತ ಸಾಧಾರಣ ಜೀವಿ ಎಲ್ಲಿಂದ ಬಂತು ನಾಕಾಣೆ. ಆದರೆ ಇದೆಲ್ಲವೂ ಸಾಧ್ಯವಾಗಿದ್ದು ಪೂಜ್ಯ ವೇದವ್ಯಾಸ ಭಗವಾನರ ಅನುಪಮ ದಿವ್ಯ ಕೃಪೆಯಿಂದ." ಎಂದು ಸಂಜಯನು ಭಗವಾನ್ ವೇದವ್ಯಾಸರಿಗೆ ಪ್ರಣಾಮ ಸಲ್ಲಿಸುತ್ತಾನೆ.

18.76

ರಾಜನ್ಸಂಸ್ಮೃತ್ಯ ಸಂಸ್ಮೃತ್ಯ, ಸಂವಾದಮಿಮಮದ್ಭುತಮ್ ಕೇಶವಾರ್ಜುನಯೋಃ(ಫ್) ಪುಣ್ಯಂ(ಮ್), ಹೃಷ್ಯಾಮಿ ಚ ಮುಹುರ್ಮುಹುಃ॥76॥

ಹೇ ರಾಜಾ! ಭಗವಾನ್ ಶ್ರೀ ಕೃಷ್ಣ ಮತ್ತು ಅರ್ಜುನರ ಈ ರಹಸ್ಯಯುಕ್ತವಾದ, ಕಲ್ಯಾಣಕರವಾದ ಮತ್ತು ಅದ್ಭುತವಾದ ಸಂವಾದವನ್ನು ಪುನಃ ಪುನಃ ಸ್ಮರಿಸಿಕೊಂಡು ನಾನು ಪದೇ ಪದೇ ಹರ್ಷಿತನಾಗುತ್ತಿದ್ದೇನೆ.

"ರಾಜಾ! ಕೇಶವಾರ್ಜುನರ ನಡುವೆ ನಡೆದ ಈ ಅದ್ಭುತವಾದ ಸಂವಾದವನ್ನು ಪುನಃ ಪುನಃ ನೆನೆ ನೆನೆದು ಹರ್ಷಗೊಳ್ಳುತ್ತಿದ್ದೇನೆ".

ಇಲ್ಲಿ ಸಂಜಯನು ತನಗೆ ಆಗುತ್ತಿರುವ ಮಹದಾನಂದವನ್ನು ವ್ಯಕ್ತ ಪಡಿಸುತ್ತಿದ್ದಾನೆ. ಒಂದು ಶ್ಲೋಕದಲ್ಲಿ ಒಂದು ಶಬ್ದ ಎರಡು ಸಲ ಬಂದರೆ ಅದನ್ನು ಶಾಸ್ತ್ರಗಳಲ್ಲಿ ದೋಷ (ಪುನರುಕ್ತಿ ದೋಷ) ಎಂದು ಪರಿಗಣಿಸಲಾಗುತ್ತದೆ. ನಿಯಮಾನುಸಾರ ಇದು ತಪ್ಪು. ಆದರೆ ಇಲ್ಲಿ ಪ್ರಜ್ಞಾಪೂರ್ವಕವಾಗಿ ಸಂಜಯನು ಈ ತಪ್ಪು ಮಾಡಿದ್ದಾನೆ. ಹೇಳ ತೀರದಷ್ಟು ಆನಂದ ಅವನಿಗೆ ಆಗುತ್ತಿದೆ.

18.77

ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ, ರೂಪಮತ್ಯದ್ಭುತಂ(ಮ್) ಹರೇಃ
ವಿಸ್ಮಯೋ ಮೇ ಮಹಾನ್ ರಾಜನ್, ಹೃಷ್ಯಾಮಿ ಚ ಪುನಃ(ಫ್) ಪುನಃ॥77॥

ಹೇ ರಾಜಾ ! ಶ್ರೀಹರಿಯ ಆ ಅತ್ಯಂತ, ವಿಲಕ್ಷಣವಾದ ರೂಪವನ್ನೂ ಕೂಡ ಪುನಃ ಪುನಃ ಸ್ಮರಿಸಿಕೊಂಡು ನನ್ನ ಚಿತ್ತದಲ್ಲಿ ಮಹಾನ್ ಆಶ್ಚರ್ಯವಾಗುತ್ತದ್ ಮತ್ತು ನಾನು ಬಾರಿ ಬಾರಿಗೂ ಹರ್ಷಿನನಾಗುತ್ತಿದ್ದೇನೆ.

ಭಾವೋದ್ವೇಗಕ್ಕೊಳಗಾದ ಸಂಜಯನಿಗೆ ತಾನು ಏನು ಹೇಳುತ್ತಿದ್ದೇನೆ ಎಂಬ ಪ್ರಜ್ಞೆಯೇ ಇಲ್ಲದಂತಾಗಿದೆ. ಮೊದಲಿನ ಶ್ಲೋಕದಲ್ಲಿ ಆಗಲೇ ಪುನರುಕ್ತಿ ದೋಷವನ್ನು ಮಾಡಿದ್ದ ಸಂಜಯ ಮತ್ತೆ ಅದೇ ತಪ್ಪನ್ನು ಈ ಶ್ಲೋಕದಲ್ಲಿಯೂ ಮಾಡುತ್ತಿದ್ದಾನೆ.

ಶ್ರೀಹರಿಯ ಅತ್ಯದ್ಭುತ ಅನುಪಮ ರೂಪವನ್ನು ನೆನೆನೆನೆದು ಪುಳಕಿತನಾಗುತ್ತಿದ್ದಾನೆ. ತನ್ನ ಭಾಗ್ಯವನ್ನು ನೆನೆದು ಆಶ್ಚರ್ಯಪಟ್ಟುಕೊಳ್ಳುತ್ತಿದ್ದಾನೆ. ತನಗಾದ ಆನಂದವನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು, ಇದು ಸತ್ಯವೇ? ನನಗೆ ಈ ಅದ್ಭುತದ ಅನುಭವವಾಗಲು ಸಾಧ್ಯವೇ? ಎಂದು ರೋಮಾಂಚನಗೊಳ್ಳುತ್ತಿದ್ದಾನೆ.

 ಕೊನೆಯಲ್ಲಿ ರಾಜನಾದ ಧೃತರಾಷ್ಟ್ರನನ್ನು ದೂಷಿಸುತ್ತಾನೆ. ನೀನು ನನ್ನ ರಾಜನೇ ಇರಬಹುದು. ಆದರೆ.....

18.78

ಯತ್ರ ಯೋಗೇಶ್ವರಃ(ಖ್) ಕೃಷ್ಣೋ, ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೋ ಭೂತಿಃ(ರ್), ಧ್ರುವಾ ನೀತಿರ್ಮತಿರ್ಮಮ॥78॥

ಹೇ ರಾಜಾ ! ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರ‍ೀಕೃಷ್ಣನಿದ್ದಾನೋ ಮತ್ತು ಎಲ್ಲಿ ಗಾಂಡೀವ ಧನುರ್ಧಾರಿಯಾದ ಅರ್ಜುನನಿದ್ದಾನೋ ಅಲ್ಲಿಯೇ ಶ್ರೀ, ವಿಜಯ, ವಿಭೂತಿ ಮತ್ತು ಅಚಲವಾದ ನೀತಿಯು ಇದೆ - ಎಂಬುದೇ ನನ್ನ ಮತವಾಗಿದೆ.

"ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನಿದ್ದಾನೋ, ಎಲ್ಲಿ ವೀರ ಧನುರ್ಧಾರಿ ಪಾರ್ಥನಿದ್ದಾನೋ ಅಲ್ಲಿ ಶ್ರೀ, ವಿಜಯ, ಐಶ್ವರ್ಯ, ಶಾಶ್ವತವಾದ ನೀತಿ ನೆಲೆಸಿರುತ್ತದೆ ಎಂಬುದು ನನ್ನ ಅಭಿಪ್ರಾಯ." ಎಂದು ಸಂಜಯ ಹೇಳುತ್ತಾನೆ. ಧೃತಾರಾಷ್ಟ್ರನ ಪಕ್ಷದಲ್ಲಿ ನಿಂತು, ರಾಜನ ಅತ್ಯಂತ ಹತ್ತಿರದವನಾಗಿ, ಮಹಾತ್ಮನಾದ ಸಂಜಯನು ಈ ಮಾತುಗಳನ್ನು ಹೇಳುತ್ತಾನೆ.

ಅದ್ಭುತವಾದ ವಿಷಯವೆಂದರೆ ಭಗವದ್ಗೀತೆಯ ಕೊನೆಯ ಶ್ಲೋಕದ ಕೊನೆಯ ಅಕ್ಷರ 'ಮಮ' ಶಬ್ದದ 'ಮ'.

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧.೧॥
ಮೊದಲನೇ ಅಧ್ಯಾಯದ ಮೊದಲ ಶ್ಲೋಕವನ್ನು ನೆನಪಿಸಿಕೊಂಡರೆ, ಈ ಶ್ಲೋಕವು ಧರ್ಮ ಶಬ್ದದಿಂದ ಪ್ರಾರಂಭವಾಗಿದೆ ಎಂಬುದು ಸ್ಮರಣೆಗೆ ಬರುತ್ತದೆ.

'ಧರ್ಮ' ಶಬ್ದದ ಮೊದಲ ಅಕ್ಷರ 'ಧರ್' ಅನ್ನು, 'ಮಮ' ಶಬ್ದದ ಕೊನೆಯ ಅಕ್ಷರ ಮ ಜೊತೆ ಸೇರಿಸಿದರೆ ಆಗುವ ಶಬ್ದ "ಧರ್ಮ".
ಧರ್ + ಮ = ಧರ್ಮ.
ಅಥವಾ
ಧ + ರ್ಮ(ಮತಿರ್ಮಮ ದ 'ರ್ಮ'). ಹೀಗೂ ಸರಿ.

ಎರಡೂ ಕಡೆಯಿಂದ ಬರುವ ಪವಿತ್ರ ಶಬ್ದ ಧರ್ಮ. ಸಂಪೂರ್ಣ ಭಗವದ್ಗೀತೆ ಧರ್ಮಮಯವಾಗಿದೆ. ಅರ್ಜುನನೆಂಬ ಕರುವಿಗೆ ಗೋಪಾಲಕನಾದ ಭಗವಾನ್ ಶ್ರೀಕೃಷ್ಣನು ಉಣಿಸಿದ ಹಾಲನ್ನು ಸಂಪೂರ್ಣ ಜಗತ್ತಿನ ಜೀವಿಗಳೆಲ್ಲ ಸೇವಿಸಿ, ಕೃತಾರ್ಥರಾಗುವಂತಾಯಿತು. ಯುಗ ಯುಗಗಳು ಈ ಗೀತಾಮೃತವನ್ನು ಸವಿದವು.
ಭಗವಾನ್ ವೇದವ್ಯಾಸರ ದಿವ್ಯ ಅನುಗ್ರಹದಿಂದ ಇವೆಲ್ಲ ಸಾಧ್ಯವಾಯಿತು. "ಮೋಕ್ಷ ಸಂನ್ಯಾಸಯೋಗ"ವೆಂಬ ಈ ಅಧ್ಯಾಯದೊಂದಿಗೆ ಪರಮ ಪವಿತ್ರವಾದ ಭಗವದ್ಗೀತೆಯು ಮುಕ್ತಾಯವಾಯಿತು.

ಹರೀ ಶರಣಂ.. ಹರೀ ಶರಣಂ

ಪ್ರಶ್ನೋತ್ತರಗಳು

ಕಿರಣಾ ಅಕ್ಕ 
ಪ್ರಶ್ನೆ - ಸ್ವಧರ್ಮವನ್ನು ಅನುಸರಿಸುವುದು ಉತ್ತಮ ಎಂದು ಹಿಂದೆ ಹೇಳಲಾಗಿದೆ. ಈಗ ಕೊನೆಯಲ್ಲಿ ಭಗವಂತನು ನನ್ನನ್ನು ಆಶ್ರಯಿಸಿದರೆ, ಎಲ್ಲಾ ಧರ್ಮಗಳು  ಅಲ್ಲೇ ಪೂರ್ತಿಯಾಗುತ್ತದೆ ಎಂದು ಹೇಳುತ್ತಿದ್ದಾನೆ. ಹಿಂದೆ ಹೇಳಿದ ಒಂದು ಕಥೆ ನೆನಪಿಗೆ ಬಂತು. ಒಬ್ಬ ವ್ಯಕ್ತಿಯು ತಪಸ್ಸು ಮಾಡುತ್ತಾನೆ, ತಾನೇ ಶ್ರೇಷ್ಠ ಎಂದು ಭಾವಿಸುತ್ತಾನೆ. ನಂತರ ಶ್ರೀಕೃಷ್ಣನು ಅವನನ್ನು ನ್ಯಾಯಯುತವಾಗಿ ಸ್ವಧರ್ಮ ಪಾಲನೆ ಮಾಡುತ್ತಿರುವ ಒಬ್ಬ ಕಟುಕನ ಬಳಿಗೆ ಕಳುಹಿಸುತ್ತಾನೆ. ಸ್ವಧರ್ಮ ಪಾಲನೆ ಮಾಡಿ ಒಳ್ಳೆಯ ಭಕ್ತ ಎನಿಸಿಕೊಳ್ಳಬಹುದು ಎಂದು ಈ ಕಥೆ ಹೇಳುತ್ತದೆಯಲ್ಲ. 
ಉತ್ತರ - ತಪಸ್ಸು ಮಾಡಿದ್ದರಿಂದ ಅವನನ್ನು ಕಟುಕನ ಬಳಿಗೆ ಕಳುಹಿಸಲಾಗಿಲ್ಲ. ಅವನು ಅಹಂಕಾರಿಯಾದನು. ಅದಕ್ಕಾಗಿ ಅವನನ್ನು ಕಟುಕನ ಬಳಿ ಕಳುಹಿಸಲಾಯಿತು. ಸ್ವಧರ್ಮವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ. ಸಂನ್ಯಾಸದಲ್ಲಿ ತಪಸ್ಸಿಗೆ ಮನೆ ಬಿಟ್ಟು ಹೋಗುವ ಸಂಪ್ರದಾಯವಿದೆ. ಇದು ಸಂನ್ಯಾಸ ಧರ್ಮ. 
"ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ".  ಈ ವಾಕ್ಯದಲ್ಲಿ ಎರಡನೇ ಭಾಗವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಗವಂತನೊಬ್ಬನನ್ನೇ ಆಶ್ರಯಿಸಬೇಕು ಎಂದು ಇಲ್ಲಿ ಹೇಳಲಾಗಿದೆ. ತಪಸ್ವಿಯು ತಪಸ್ಸು ಮಾಡಿ ಅಹಂಕಾರದ ಆಶ್ರಯ ಪಡೆದಿರುತ್ತಾನೆ. ಇದಕ್ಕಿಂತಲೂ ಕಟುಕನು ಅನುಸರಿಸುತ್ತಿರುವ ಸ್ವಧರ್ಮ ಪಾಲನೆ ಶ್ರೇಷ್ಠವಾದುದು. 

ಕುಲದೀಪ ಅಣ್ಣ 
ಪ್ರಶ್ನೆ - ಶ್ರೀಕೃಷ್ಣನು ಅರ್ಜುನನಿಗೆ ಯುದ್ಧದಲ್ಲಿ ವಿಜಯಕ್ಕಾಗಿ ದುರ್ಗೆಯನ್ನು ಪೂಜಿಸುವಂತೆ ಹೇಳುತ್ತಾನೆ ಎಂಬುದನ್ನು ಕೇಳಿದ್ದೇನೆ. "ನನ್ನ ಆಶ್ರಯದಲ್ಲಿ ಇದ್ದರೆ ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತೇನೆ" ಎಂದು ಭಗವಂತ ಹೇಳುತ್ತಿದ್ದಾನೆ ಆದರೂ ದುರ್ಗೆಯನ್ನು ಪೂಜಿಸಲು ಹೇಳಿದ್ದು ಯಾಕೆ?
ಉತ್ತರ - ದುರ್ಗೆಯನ್ನು ಭಗವಂತನಿಂದ ಭಿನ್ನ ಎಂದು ಪರಿಗಣಿಸಬಾರದು. ಎಲ್ಲಿ ಶಕ್ತಿಯನ್ನು ಪೂಜಿಸಬೇಕೋ ಅಲ್ಲಿ ಶಕ್ತಿಯನ್ನು ಪೂಜಿಸಬೇಕಾಗುತ್ತದೆ. ಅದೂ ಕೂಡಾ ಭಗವದ್ ಭಕ್ತಿ. ಔಷಧದ ಚೀಟಿಯನ್ನು ವೈದ್ಯರು ಬರೆದರೂ ಅದನ್ನು ತೆಗೆದುಕೊಳ್ಳಲು ಔಷಧ ಅಂಗಡಿಗೆ ಹೋಗಬೇಕು. ಅದೇರೀತಿ,ಭಗವಂತನು ವಿವಿಧ ಅಗತ್ಯಗಳನ್ನು  ಪೂರೈಸಲು ಬೇರೆ ಬೇರೆ ದೇವತೆಗಳನ್ನು ನೇಮಿಸಿದ್ದಾನೆ. ಎಲ್ಲಾ ದೇವರಲ್ಲಿ ಭಗವಂತನನ್ನು ಕಾಣಬೇಕು. ಭಗವಾನ್ ಆದಿ ಶಂಕರಾಚಾರ್ಯರು ಪಂಚತತ್ತ್ವಗಳನ್ನು ಪೂಜಿಸಲು ಪಂಚಾಯತನ ಪೂಜೆಯನ್ನು ಹೇಳಿದರು. ಶಿವ, ವಿಷ್ಣು, ದುರ್ಗೆ, ಗಣಪತಿ ಮತ್ತು ಪ್ರತ್ಯಕ್ಷ ದೈವ ಸೂರ್ಯನನ್ನು ನಿತ್ಯವೂ ತತ್ತ್ವರೂಪದಲ್ಲಿ ಪೂಜಿಸಬೇಕು. 

ಪದ್ಮಿನಿ ಅಕ್ಕ
ಪ್ರಶ್ನೆ - ಸನಾತನ ಧರ್ಮವೇ ಶ್ರೇಷ್ಠ ಎಂದು ನಂಬಲಾಗಿದೆ. ಆದರೆ ಕೌರವರ ನೂರು ಮಕ್ಕಳು, ಸಗರನ 60 ಸಾವಿರ ಮಕ್ಕಳು, ಮಕರಧ್ವಜನ ಜನನ ಮೊಸಳೆಯಿಂದ ಆಯಿತು ಎಂದೆಲ್ಲ ಕೇಳಿದಾಗ ನಂಬಲು ಕಷ್ಟವಾಗುತ್ತದೆ. ಇವೆಲ್ಲ ಸತ್ಯವೇ? ಕಾಲ್ಪನಿಕವೇ?
ಉತ್ತರ : ಯುಗಗಳು ಕಳೆದಂತೆ ಅನೇಕ ವಿಷಯಗಳು ಬದಲಾಗುತ್ತವೆ, ಕಣ್ಮರೆಯಾಗುತ್ತವೆ. ಒಂದು ಕಾಲದಲ್ಲಿ ಈ ಭೂಮಿಯ ಮೇಲೆ ಡೈನೋಸಾರ್‌ಗಳು ಇದ್ದವು. ಅದರ ಅಸ್ಥಿಪಂಜರವನ್ನು ನೋಡಿ ಅದು ಅಸ್ತಿತ್ವದಲ್ಲಿತ್ತು ಎಂದು  ನಂಬಬೇಕು. ಆದರೂ ಇಷ್ಟು ದೊಡ್ಡ ಪ್ರಾಣಿ ಈ ಭೂಮಿಯಲ್ಲಿ ವಾಸವಿತ್ತಾ ಎಂದು ಈಗ ಆಶ್ಚರ್ಯವಾಗುತ್ತದೆ. ಸತ್ಯಯುಗದಲ್ಲಿ ಪ್ರಾಣಿ ಪಕ್ಷಿಗಳು ಮಾತನಾಡುತ್ತಿದ್ದವು ಎಂದು ಪುರಾಣ ಹೇಳುತ್ತದೆ. ಆದರೆ ಇಂದು ಅವು ಮಾತನಾಡುವುದಿಲ್ಲ. ಹಾಗಾಗಿ ಕಾಗೆ ಹೀಗೆ ಹೇಳಿತು ಅಥವಾ ಸಿಂಹವು ಇಲಿಯ ಜೊತೆ ಸಂಭಾಷಣೆ ಮಾಡಿತು ಎಂದು ಓದಿದಾಗ, ಇದು ಸಾಧ್ಯವೇ? ಎನಿಸುತ್ತದೆ. ಆದರೆ ಆ ಸಮಯದಲ್ಲಿ ಅದು ಸಾಧ್ಯವಾಗಿತ್ತು. ಯೋಗ ಶಕ್ತಿ ಮತ್ತು ವಿವಿಧ ವೈಜ್ಞಾನಿಕ ಸಂಶೋಧನೆಗಳಿಂದ ಅನೇಕ ಅಸಾಧ್ಯ ವಿಷಯಗಳು ಈಗ ಸುಲಭ ಸಾಧ್ಯವಾಗಿವೆ. 

ಪ್ರಣಾಳ ಶಿಶು (ಟೆಸ್ಟ್ ಟ್ಯೂಬ್ ಬೇಬಿ) ಎಂಬುದು ಇತ್ತೀಚಿನ ದಿನಗಳಲ್ಲಿ ಮನೆ ಮಾತಾಗಿದೆ. ಐವತ್ತು ವರ್ಷಗಳ ಹಿಂದೆ ಯಾರಾದರೂ ಇದನ್ನು ಹೇಳಿದ್ದರೆ, ಯಾರೂ ಇದನ್ನು ನಂಬುತ್ತಿರಲಿಲ್ಲ. ಅದೇ ಟೆಸ್ಟ್ ಟ್ಯೂಬ್ ವಿಧಾನವನ್ನು ಬಳಸಿ, ಧಾತುವನ್ನು ನೂರು ಘಟಕಗಳಾಗಿ ರಚಿಸಿ ಮತ್ತು ಆ ಘಟಕಗಳಿಂದ ಹಲವಾರು ಮಕ್ಕಳು ಜನಿಸಿರಬಹುದಲ್ಲವೇ. ಆ ಕಾಲದಲ್ಲಿ ನಡೆದದ್ದು ಎಂದು ನಾವು ನಂಬಲು ತಯಾರಿಲ್ಲ. ಆದರೆ ಆ ಕಾಲದಲ್ಲೂ ತಂತ್ರಜ್ಞಾನವಿತ್ತು ಮತ್ತು ಅದನ್ನು ಈ ರೀತಿಯ ವಿಷಯಗಳಿಗೆ ಬಳಸಲಾಗುತ್ತಿತ್ತು.

ಇನ್ನು ಸಂಖ್ಯೆಗಳ ದೃಷ್ಟಿಕೋನದಿಂದ ನೋಡಿದರೆ ಆ ಕಾಲದಲ್ಲಿ ಲೆಕ್ಕಾಚಾರವು ವಿಭಿನ್ನ ರೀತಿಯಲ್ಲಿ ಇರಬಹುದು. ಇಂದಿನ ದಿನಗಳಲ್ಲಿ ವಿದ್ವಾಂಸರು ಅಕ್ಷೋಹಿಣಿಯ ಸಂಖ್ಯೆಯನ್ನು ಎರಡೂವರೆ ಲಕ್ಷ ಎಂದು ಪರಿಗಣಿಸಿದ್ದಾರೆ. ಆದರೆ ಆ ಕಾಲದಲ್ಲಿ ಅದರ ಲೆಕ್ಕ ಬೇರೆ ಇದ್ದಿರಲೂಬಹುದು. ಶ್ರೀರಾಮಚಂದ್ರನು ಹದಿಮೂರು ಸಾವಿರ ವರ್ಷಗಳ ಕಾಲ ಆಳಿದನು ಎಂದು ಪುರಾಣ ಹೇಳುತ್ತದೆ. ಈಗಿನ ಕಾಲಕ್ಕೆ ಇದು ಕಲ್ಪನೆ ಮಾಡುವುದು ಕೂಡಾ ಕಷ್ಟ. ಆದರೆ ಆಗ ಅಲ್ಲಿ ಸಮಯದ ಲೆಕ್ಕಾಚಾರವು ವಿಭಿನ್ನವಾಗಿರಬಹುದು. ಈ ಲೆಕ್ಕಾಚಾರವನ್ನು ನಂಬಿದ ಮೇಲೆ ರಾಜಾ ಸಗರನಿಗೆ ಸಾವಿರಗಟ್ಟಲೆ ಮಕ್ಕಳಿದ್ದರು ಎಂಬುದನ್ನು ಕೂಡಾ ನಂಬಲೇಬೇಕು. 

ಹನ್ನೊಂದನೇ ಶತಮಾನದಲ್ಲಿ, ಅಲ್ಲಾವುದ್ದೀನ್ ಖಿಲ್ಜಿ ಎಂಬ ಕ್ರೂರ ಆಕ್ರಮಣಕಾರನು ಇರಾನ್‌ನಿಂದ ಬಂದು ಮೂರು ತಿಂಗಳ ಕಾಲ ನಿಂತು ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟುಹಾಕಿದನು. ಅದಕ್ಕೂ ಮೊದಲು ನಾಲ್ಕನೇ ಶತಮಾನದಲ್ಲಿ ತಕ್ಷಶಿಲಾ ವಿಶ್ವವಿದ್ಯಾಲಯ ನಾಶವಾಯಿತು. ಇವೆರಡೂ ಭಾರತದ ಜ್ಞಾನ ಕೇಂದ್ರಗಳಾಗಿದ್ದವು. ಇವೆರಡೂ ಧರ್ಮದ್ರೋಹಿಗಳಿಂದ ನಾಶವಾದವು. ನಮ್ಮ ಪುರಾಣಗಳ ಬಗ್ಗೆ ಇದ್ದ ಪುರಾವೆಗಳೆಲ್ಲ ಅಂದೇ ನಾಶವಾಯಿತು. ಆದ್ದರಿಂದ ನಮಗೆ ಈ ಎಲ್ಲ ವಿಷಯಗಳಲ್ಲೂ ಸಂಶಯ ಮೂಡುತ್ತದೆ. ಆದರೆ ಎಲ್ಲವೂ ಸತ್ಯವಾದದ್ದು. 

ಇದರೊಂದಿಗೆ ಹದಿನೆಂಟನೇ ಅಧ್ಯಾಯದ ವಿವೇಚನೆಯು ಪರಿಸಮಾಪ್ತವಾಯಿತು.