विवेचन सारांश
ಸಕಾಮ, ನಿಷ್ಕಾಮ ಉಪಾಸನೆಯ ಫಲಗಳು ಮತ್ತು ಭಗವಂತನ ಪ್ರತಿಜ್ಞೆಗಳು

ID: 6788
कन्नड़ - ಕನ್ನಡ
ಭಾನುವಾರ, 13 ಏಪ್ರಿಲ್ 2025
ಅಧ್ಯಾಯ 9: ರಾಜವಿದ್ಯಾರಾಜಗುಹ್ಯಯೋಗ
3/3 (ಶ್ಲೋಕ 20-34)
ವಿವೇಚನಕಾರರು: ಗೀತಾ ವಿಶಾರದ ಶ್ರೀ ಡಾ. ಆಶು ಗೋಯಲ್ ಜಿ


ಭಕ್ತಿ ತುಂಬಿದ ಸುಮಧುರ, ಸುಂದರ, ಪ್ರಾರ್ಥನೆ ಮತ್ತು ಸಕಾರಾತ್ಮಕ ವಾತಾವರಣದ ಆಶಯದೊಂದಿಗೆ ದೀಪ ಪ್ರಜ್ವಲನೆಯನ್ನು ಮಾಡಲಾಯಿತು.

ವಸುದೇವ ಸುತ ಯೋಗೇಶ್ವರನನ್ನು ನೆನೆಯುತ್ತಾ, ಶ್ರೀ ಗುರು ಚರಣಗಳಿಗೆ ವಂದಿಸಲಾಯಿತು. ಭಗವಂತನ ಅತಿಶಯ, ಮಂಗಳಮಯ ಕೃಪೆಯಿಂದ ನಮ್ಮೆಲ್ಲರ ಸೌಭಾಗ್ಯ ಜಾಗೃತವಾಗಿದೆ. ಆದ್ದರಿಂದಲೇ ನಾವು ನಮ್ಮ ಮಾನವ ಜೀವನವನ್ನು ಸಾಕಾರಗೊಳಿಸಿಕೊಳ್ಳಲು, ಉತ್ಕೃಷ್ಟತೆಯನ್ನು ಸಾಧಿಸಲು, ಈ ಜನ್ಮಕ್ಕೂ ಮತ್ತು ಈ ಜನ್ಮದ ನಂತರದ ಪರಲೋಕಕ್ಕೂ ಬೇಕಾದ ಪುಣ್ಯವನ್ನು ಸಂಚಯನ ಮಾಡಿಕೊಳ್ಳಲು ಭಗವದ್ಗೀತೆಯ ಕಲಿಕೆಯಲ್ಲಿ ತೊಡಗಿದ್ದೇವೆ. ನಮ್ಮ ಈ ಜೀವನದ ಪುಣ್ಯದ ಫಲವೋ, ಪೂರ್ವ ಜನ್ಮದ ಅಥವಾ ನಮ್ಮ ಪೂರ್ವಿಕರ ಪುಣ್ಯದ ಫಲವೋ ಅಥವಾ ಯಾವ ಸಂತ ಮಹಾಪುರುಷರ ಕೃಪಾ ದೃಷ್ಟಿಯೋ ಗೊತ್ತಿಲ್ಲ, ಭಗವದ್ಗೀತೆ ನಮ್ಮನ್ನು ಆರಿಸಿಕೊಂಡಿದೆ. ಸಾಧ್ಯವಾದಷ್ಟು ನಾವು ಈ ಗೀತೆಯ ಪ್ರಚಾರವನ್ನು ಮಾಡುತ್ತಾ, ನಮ್ಮ ಸ್ನೇಹಿತರನ್ನು, ಬಂಧು ಮಿತ್ರರನ್ನು ಗೀತೆಯ ಕಲಿಕೆಯ ಕಾರ್ಯದಲ್ಲಿ ಸೇರಿಸಿಕೊಳ್ಳೋಣ. ಗೀತೆಯನ್ನು ಯಾರು ಪ್ರಚಾರ ಮಾಡುತ್ತಾರೋ ಅವರು ನನಗೆ ಪ್ರಿಯರಾದವರು ಎಂದು ಸ್ವಯಂ ಭಗವಂತನೇ ಹೇಳಿದ್ದಾನೆ. ಗೀತೆ ಭಗವಂತನ ಹೃದಯವಾಗಿದೆ.

ನಾವು ಒಂಬತ್ತನೇ ಅಧ್ಯಾಯದ ವಿವೇಚನೆಯನ್ನು ನೋಡುತ್ತಲಿದ್ದೇವೆ. ಹೋದ ವಾರದ ವಿವೇಚನಾ ಸತ್ರದಲ್ಲಿ ೧೯ ಶ್ಲೋಕಗಳ ವರೆಗೆ ವಂದನಾ ಕಾಕೀಜೀಯವರು ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. ಹೋದ ವಾರ ಆಶೂ ಅಣ್ಣನವರು ಗುರುವಾಯೂರಿನಲ್ಲಿ, ನಮ್ಮ ಗೀತಾ ಪರಿವಾರದ ಮಲಯಾಳಂ ಭಾಷಾ ಸೇವಿಗಳಿಂದ ಆಯೋಗಿಸಲ್ಪಟ್ಟ ಮೈತ್ರಿ ಮಿಲನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಸುಮಾರು ಸಾವಿರದಿಂದ, ಸಾವಿರದ ಐನೂರರಷ್ಟು ಸೇವಿಗಳು ನೆರೆದಿದ್ದರು. ಇದು ಹರ್ಷದಾಯಕ ಸಂಗತಿಯಾಗಿದೆ.

9.20


ತ್ರೈವಿದ್ಯಾ ಮಾಂ(ಮ್) ಸೋಮಪಾಃ(ಫ್) ಪೂತಪಾಪಾ,
ಯಜ್ಞೈರಿಷ್ಟ್ವಾ ಸ್ವರ್ಗತಿಂ(ಮ್) ಪ್ರಾರ್ಥಯಂತೇ
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಮ್,
ಅಶ್ನಂತಿ ದಿವ್ಯಾಂದಿವಿ ದೇವಭೋಗಾನ್।।20।।

ಮೂರು ವೇದಗಳಲ್ಲಿಯೂ ತಿಳಿಸಿರುವ ಸಕಾಮಕರ್ಮಗಳನ್ನು ಮಾಡುವ ಮತ್ತು ಸೋಮರಸವನ್ನು ಪಾನ ಮಾಡುವ ಪಾಪರಹಿತ ಪುರುಷರು ನನ್ನನ್ನು ಯಜ್ಞಗಳ ಮೂಲಕ ಆರಾಧಿಸಿ ಸ್ವರ್ಗವನ್ನು ಬಯಸುತ್ತಾರೆ. ಅವರು ತಮ್ಮ ಪುಣ್ಯ ಫಲದಿಂದ ಸ್ವರ್ಗಲೋಕವನ್ನು ಪಡೆದು ಸ್ವರ್ಗದಲ್ಲಿ ದಿವ್ಯ ಭೋಗಗಳನ್ನು ಅನುಭವಿಸುತ್ತಾರೆ.

ಮೂರು ವೇದಗಳಲ್ಲಿ ಹೇಳಿರುವ ಸಕಾಮ ಕರ್ಮಗಳನ್ನು ಮಾಡುವವರು, ಸೋಮರಸ ಪಾನ ಮಾಡುವವರು, ಪಾಪರಹಿತ ಜನರು ನನ್ನನ್ನು ಯಜ್ಞಗಳಿಂದ ಪೂಜಿಸಿ, ಸ್ವರ್ಗ ಪ್ರಾಪ್ತಿಯನ್ನು ಬಯಸುತ್ತಾರೆ. ಆ ಪುರುಷರು ತಮ್ಮ ಪುಣ್ಯಗಳ ಫಲವಾದ ಸ್ವರ್ಗಲೋಕಕ್ಕೆ ಹೋಗಿ ಸ್ವರ್ಗದಲ್ಲಿ ದೇವತೆಗಳು ಅನುಭವಿಸುವ, ದಿವ್ಯ ಭೋಗಗಳನ್ನು ಅನುಭವಿಸುತ್ತಾರೆ.

ಭಗವಂತ ಇಲ್ಲಿ ತ್ರೈವಿದ್ಯಾಮಾಮ್ ಎಂದು ಹೇಳಿದ್ದಾನೆ. ಅಂದರೆ ಮೂರು ವೇದಗಳ ಬಗ್ಗೆ ಹೇಳಿದ್ದಾನೆ. ಆದರೆ ನಮ್ಮ ತಿಳಿವಳಿಕೆಯಂತೆ ವೇದಗಳು ನಾಲ್ಕು ಎನ್ನುತ್ತೇವೆ. ಹಾಗಾದರೆ ಇನ್ನೊಂದು ವೇದದ ಬಗ್ಗೆ ಏಕೆ ಹೇಳಲಿಲ್ಲವೆಂದೆನಿಸಬಹುದು. ಆದರೆ ವಾಸ್ತವಿಕವಾಗಿ ವೇದ ಎಂಬುದು ಒಂದೇ. ನಾವು ಗೀತೆಯಲ್ಲಿ ಓದುವಂತೆ, ಅನುಷ್ಠಪ್ ಛಂದಸ್ಸಿನಲ್ಲಿ ಎಂಟು ಅಕ್ಷರಗಳಿವೆ. ತ್ರಿಷ್ಟುಪ್ ಛಂದಸ್ಸಿನಲ್ಲಿ ಹನ್ನೊಂದು ಅಕ್ಷರಗಳಿವೆ. ಈ ರೀತಿ ನಿಖರವಾಗಿ ಇರುವ ಛಂದಸ್ಸಿನ ಅಧ್ಯಯನವೇ ಋಗ್ವೇದ. ಯಾವುದನ್ನು ರಾಗವಾಗಿ ಹಾಡಲಾಗುತ್ತದೆಯೋ ಅದು ಸಾಮವೇದ. ಅನಿಯತ ಅಕ್ಷರಗಳನ್ನು ಹೊಂದಿರುವ ರಚನೆಗಳನ್ನು ಯಜುರ್ವೇದ ಎನ್ನಲಾಯಿತು. ಯಾವ ರಚನೆಗಳಲ್ಲಿ ಮನೆಯನ್ನು ಹೇಗೆ ನಿರ್ಮಿಸುವುದು, ರಥವನ್ನು, ಅಡುಗೆಯನ್ನು, ಅಸ್ತ್ರ ಶಸ್ತ್ರಗಳನ್ನು ಹೇಗೆ ಮಾಡುವುದು, ಹೀಗೆ ಅರವತ್ನಾಲ್ಕು ಕಲೆಗಳ ವರ್ಣನೆಯನ್ನು ಮಾಡುವಂತಹ ರಚನೆಯನ್ನು ಅಥರ್ವವೇದ ಎನ್ನಲಾಯಿತು.

ವೇದಗಳಲ್ಲಿ, ಸಕಾಮ ಯಾಗಗಳಿಂದ ದೇವತೆಗಳನ್ನು ಹೇಗೆ ಪ್ರಾಪ್ತಿಗೊಳಿಸಿಕೊಳ್ಳಬಹುದೆಂದು ಹೇಳಲಾಗಿದೆ. ಈ ಶ್ಲೋಕದಲ್ಲಿ ಸೋಮರಸದ ಉಲ್ಲೇಖವಿದೆ. ಸೋಮರಸವೆಂದರೆ ಮದ್ಯವಲ್ಲ. ಇದು ಸ್ವರ್ಗದಿಂದ ಬಂದಿರುವ ಲತೆಯಾದ ಸೋಮವಲ್ಲಿಯ ರಸ. ಪೂರ್ವಕಾಲದಲ್ಲಿ ಋಷಿಗಳು ತಪಸ್ಸಿಗೆ ಕುಳಿತುಕೊಳ್ಳುವಾಗ ಹಸಿವು, ಬಾಯಾರಿಕೆ ಆಗದಿರಲೆಂದು ಈ ಲತೆಯ ರಸವನ್ನು ಕುಡಿಯುತ್ತಿದ್ದರು. ಸೋಮವಲ್ಲಿಯ ರಸ ಬಹಳ ಪೌಷ್ಟಿಕವಾದದ್ದು. ಒಮ್ಮೆ ಅದರ ಸೇವನೆ ಮಾಡಿದರೆ ಬಹಳ ಕಾಲದವರೆಗೆ ಹಸಿವು, ಬಾಯಾರಿಕೆ ಆಗುವುದಿಲ್ಲ. ದೇವತೆಗಳೂ ಈ ರಸವನ್ನು ಉಪಯೋಗಿಸುತ್ತಿದ್ದರು.

ವೇದದಲ್ಲಿ ಹೇಳಿದ ಸಕಾಮ ಉಪಾಸನೆಯನ್ನು ಮಾಡಿ ಕೆಲವರು ಪುಣ್ಯಗಳನ್ನು ಗಳಿಸಿಕೊಂಡು ಸ್ವರ್ಗ ಲೋಕದ ಪ್ರಾಪ್ತಿಯನ್ನು ಹೊಂದುತ್ತಾರೆ. ಈ ಲೋಕಕ್ಕೆ ಬೇಕಾದ ಧನ ಕನಕ ಸಂಪತ್ತುಗಳನ್ನೂ ಗಳಿಸಿ, ಸ್ವರ್ಗ ಲೋಕದಲ್ಲಿಯೂ ಅವುಗಳ ಸುಖವನ್ನು ಪಡೆಯುತ್ತಾರೆ.

9.21


ತೇ ತಂ(ಮ್) ಭುಕ್ತ್ವಾ ಸ್ವರ್ಗಲೋಕಂ(ವ್) ವಿಶಾಲಂ(ಙ್),
ಕ್ಷೀಣೇ ಪುಣ್ಯೇ ಮರ್ತ್ಯಲೋಕಂ(ವ್) ವಿಶಂತಿ।
ಏವಂ(ನ್) ತ್ರಯೀಧರ್ಮಮನುಪ್ರಪನ್ನಾ,
ಗತಾಗತಂ(ಙ್) ಕಾಮಕಾಮಾ ಲಭಂತೇ॥9.21॥

ಅವರು ಆ ವಿಶಾಲವಾದ ಸ್ವರ್ಗಸುಖವನ್ನು ಅನುಭವಿಸಿ ಪುಣ್ಯಫಲಗಳೆಲ್ಲ ಮುಗಿದ ನಂತರ ಮರ್ತ್ಯಲೋಕವನ್ನು ಪುನಃ ಪಡೆಯುತ್ತಾರೆ. ಈ ರೀತಿ ಸ್ವರ್ಗಕ್ಕೆ ಸಾಧನ ರೂಪಿಯಾದ ಮೂರು ವೇದಗಳಲ್ಲಿಯೂ ಹೇಳಲಾಗಿರುವ ಸಕಾಮ ಕರ್ಮಗಳನ್ನೇ ಆಶ್ರಯಿಸಿರುವವರು ಮತ್ತು ಭೋಗಾಪೇಕ್ಷೆಯುಳ್ಳವರು ಪದೇ-ಪದೇ ಜನನ - ಮರಣಗಳನ್ನೂ ಪಡೆಯುತ್ತಾರೆ. ಅರ್ಥಾತ್ ಪುಣ್ಯದ ಪ್ರಭಾವದಿಂದ ಸ್ವರ್ಗವನ್ನು ಸೇರುತ್ತಾರೆ ಮತ್ತು ಪುಣ್ಯಫಲ ಮುಗಿದ ಮೇಲೆ ಮರ್ತ್ಯ ಲೋಕಕ್ಕೆ ಮರಳುತ್ತಾರೆ.

ಅವರು ಆ ವಿಶಾಲವಾದ ಸ್ವರ್ಗ ಲೋಕವನ್ನು ಅನುಭವಿಸಿ, ಪುಣ್ಯವು ಮುಗಿದಾಗ ಮತ್ತೆ ಮರ್ತ್ಯ ಲೋಕಕ್ಕೆ ಬರುತ್ತಾರೆ. ಹೀಗೆ ಸ್ವರ್ಗದ ಸಾಧನ ರೂಪಿ, ಮೂರು ವೇದಗಳಲ್ಲಿ ಹೇಳಿರುವ, ಸಕಾಮ ಕರ್ಮಗಳನ್ನು ಆಚರಿಸಿ ಭೋಗಗಳ ಇಚ್ಛೆಯುಳ್ಳ ಪುರುಷರು ಬಂದು ಹೋಗುತ್ತಾ ಇರುತ್ತಾರೆ. ಅರ್ಥಾತ್ ಪುಣ್ಯದ ಪ್ರಭಾವದಿಂದ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಪುಣ್ಯವು ಮುಗಿದಾಗ ಮರ್ತ್ಯ ಲೋಕಕ್ಕೆ ಬರುತ್ತಾರೆ.

ಈ ಶ್ಲೋಕವನ್ನು ಒಂದು ಉದಾಹರಣೆಯ ಮೂಲಕ ತಿಳಿಯೋಣ.
ನಮ್ಮ ಬಳಿ ೭0000 ವರೆಗೆ ಖರ್ಚು ಮಾಡಬಲ್ಲ ಒಂದು ಕ್ರೆಡಿಟ್ ಕಾರ್ಡ್ ಇದೆ ಎಂದು ಭಾವಿಸೋಣ. ದಿನಕ್ಕೆ ಸುಮಾರು ಹತ್ತು ಸಾವಿರ ರೂಪಾಯಿಗಳವರೆಗೆ ಖರ್ಚನ್ನು ಹೊಂದಿದಂತಹ ಪಂಚತಾರಾ ಹೋಟೆಲಿಗೆ ಹೋಗೋಣ. ಅವರು ನಮ್ಮ ಬಳಿ ದುಡ್ಡು ಇರುವವರೆಗೂ ಎಲ್ಲಾ ಸೌಕರ್ಯಗಳನ್ನು ಕೊಡುತ್ತಾರೆ. ಯಾವಾಗ ದುಡ್ಡು ಖಾಲಿಯಾಗುವುದೋ ಅಂದು ಹೋಟೆಲ್ ರೂಮ್ ಅನ್ನು ಖಾಲಿ ಮಾಡಿಸುತ್ತಾರೆ. ಮೊದಲು ಕೊಡುತ್ತಿದ್ದ ಯಾವುದೇ ಸೌಕರ್ಯವಾಗಲಿ, ಆದರ, ಪ್ರೀತಿಗಳನ್ನು ಕೊಡುವುದಿಲ್ಲ. ಎಲ್ಲಿಯವರೆಗೆ ಖಾತೆಯಲ್ಲಿ ಹಣವಿತ್ತೋ, ಅಲ್ಲಿಯವರೆಗೆ ಎಲ್ಲಾ ಸೌಕರ್ಯಗಳು ಲಭ್ಯವಿತ್ತು. ಹಣ ಮುಗಿದ ನಂತರ ಸೌಕರ್ಯಗಳು ಮುಗಿದು ಹೋದವು.

ಸ್ವರ್ಗದಲ್ಲಿಯೂ ಹೀಗೆಯೇ. ಅಲ್ಲಿ ನಮ್ಮ ಪುಣ್ಯದ ಕ್ರೆಡಿಟ್ ಕಾರ್ಡ್ ನಡೆಯುತ್ತದೆ. ಎಲ್ಲಿಯವರೆಗೆ ನಮ್ಮ ಪುಣ್ಯದ ಫಲ ಇರುವುದೋ ಅಲ್ಲಿಯವರೆಗೆ ಸ್ವರ್ಗದ ಭಾಗ್ಯವಿರುತ್ತದೆ. ಪುಣ್ಯ ಮುಗಿದ ತಕ್ಷಣ ಮತ್ತೆ ಈ ಮರ್ತ್ಯಲೋಕಕ್ಕೆ ಬರಬೇಕು. ಮತ್ತೆ ಸಂಸಾರದ ಚಕ್ರದಲ್ಲಿ ಸಿಲುಕಿಕೊಳ್ಳುತ್ತೇವೆ.

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್ ।
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾಽಪಾರೇ ಪಾಹಿ ಮುರಾರೇ ll
 
ಸ್ವರ್ಗ ಲೋಕದ ಪ್ರಾಪ್ತಿಯು ಶಾಶ್ವತವಾಗಿ ಇರುವುದಿಲ್ಲ. ಅದು ತಾತ್ಕಾಲಿಕ. ಗೋಸ್ವಾಮಿ ತುಳಸಿದಾಸರು ಹೇಳುವಂತೆ, ಸ್ವರ್ಗವೂ ಸಹ ಸ್ವಲ್ಪ ಪ್ರಮಾಣದ ಸುಖವನ್ನೇ ಕೊಡುತ್ತದೆ, ನಂತರ ದುಃಖದಿಂದ ಕೂಡಿದ ಈ ಜಗತ್ತಿಗೆ ಮರಳಿ ಬರಬೇಕು.

ನಮ್ಮ ಸನಾತನ ಧರ್ಮವನ್ನು ಹೊರತುಪಡಿಸಿ ಉಳಿದ ಯಾವುದೇ ಸಂಪ್ರದಾಯದಲ್ಲಿ ಮೋಕ್ಷದ ಕಲ್ಪನೆ ಇಲ್ಲ. ಸ್ವರ್ಗ ಮತ್ತು ನರಕಗಳ ಉಲ್ಲೇಖಗಳಿವೆ ಅಷ್ಟೇ. ನಮ್ಮ ಭೋಗ ಇಚ್ಛೆಗಳು ಸೂಕ್ಷ್ಮ ರೂಪದ್ದಾಗಿವೆ. ಬಹಳ ಸಾಧನೆಯ ನಂತರವೂ ಈ ಇಚ್ಛೆ ಹೋಗುವುದಿಲ್ಲ.

ಅದಕ್ಕೆ ಅರ್ಜುನನ್ನು, ಭಗವಂತನನ್ನು ಕುರಿತು ನಾನು ಈ ಇಚ್ಚೆಗಳಿಂದ ಎರಡು ಕಡೆಗೂ ಸೇರದೆ ಮಧ್ಯದಲ್ಲಿ ಸಿಲುಕಿಕೊಳ್ಳುವೆಯೋ ಎಂದು ಕೇಳುತ್ತಾನೆ.

9.22

ಅನನ್ಯಾಶ್ಚಿಂತಯಂತೋ ಮಾಂ(ಯ್),
ಯೇ ಜನಾಃ(ಫ್) ಪರ್ಯುಪಾಸತೇ।
ತೇಷಾಂ(ನ್) ನಿತ್ಯಾಭಿಯುಕ್ತಾನಾಂ(ಯ್),
ಯೋಗಕ್ಷೇಮಂ(ವ್) ವಹಾಮ್ಯಹಮ್॥9.22॥

ಯಾರು ಅನನ್ಯಭಾವದಿಂದ ನನ್ನಲ್ಲೇ ಸ್ಥಿರಗೊಂಡ ಭಕ್ತರು ಪರಮೇಶ್ವರನಾದ ನನ್ನ ಚಿಂತನೆಯನ್ನು ಸದಾ ಮಾಡುತ್ತಾ ನಿಷ್ಕಾಮ ಭಾವದಿಂದ ನನ್ನಲ್ಲಿಯೇ ಸ್ಥಿರಮನಸ್ಕರಾಗಿರುವವರೊ ಅವರ ಯೋಗಕ್ಷೇಮವನ್ನು ನಾನೇ ಸ್ವತಃ ವಹಿಸಿಕೊಳ್ಳುತ್ತೇನೆ.

ಈ ಶ್ಲೋಕ ಭಗವದ್ಗೀತೆಯ ಸುಂದರ ಶ್ಲೋಕವಾಗಿದೆ.

ಅನನ್ಯ ಪ್ರೇಮಿ ಭಕ್ತರು, ಪರಮೇಶ್ವರನಾದ ನನ್ನನ್ನು ನಿರಂತರ ಚಿಂತಿಸುತ್ತಾ, ನಿಷ್ಕಾಮ ಭಾವದಿಂದ ಭಜಿಸುತ್ತಾರೆ. ಹೀಗೆ ನಿತ್ಯ ನಿರಂತರ ಚಿಂತಿಸುವ ಮನುಷ್ಯರ ಯೋಗಕ್ಷೇಮವನ್ನು ನಾನೇ ಸ್ವತಃ ವಹಿಸಿಕೊಳ್ಳುವೆನು.

ಇಲ್ಲಿ ಭಗವಂತ, ಎರಡು ಮುಖ್ಯವಾದ ವಿಷಯಗಳನ್ನು ಹೇಳಿದ್ದಾನೆ ಅನನ್ಯ ಮತ್ತು ನಿತ್ಯಯುಕ್ತಾ.

ಅನನ್ಯ (ನ - ಅನ್ಯ) - ಇದರ ಅರ್ಥವನ್ನು ತಪ್ಪಾಗಿ ಭಾವಿಸಲಾಗುತ್ತಿದೆ. ಅನನ್ಯ ಭಕ್ತಿ ಎಂದರೆ ನಾನು ಕೃಷ್ಣನನ್ನು ಪೂಜಿಸುತ್ತಿದ್ದರೆ ಇತರ ದೇವತೆಗಳನ್ನು ಪೂಜಿಸುವುದಿಲ್ಲ ಎಂದಲ್ಲ. ಇದು ಅನನ್ಯ ಭಕ್ತಿ ಎಂದೆನಿಸಿಕೊಳ್ಳುವುದಿಲ್ಲ, ಬೂಟಾಟಿಕೆಯ ಭಕ್ತಿಯಾಗುತ್ತದೆ. ಅನನ್ಯ ಭಕ್ತಿ ಎಂದರೆ, ನನಗೆ ಈ ಸಂಸಾರಕ್ಕಿಂತ ನೀನೇ ಬೇಕು ಎಂದು ಭಗವಂತನನ್ನು ಬಯಸುವುದು. ಇಷ್ಟ ಮತ್ತು ಅನಿಷ್ಟ ಎಂದರೆ ಏನು? ನಾವು ಇಷ್ಟಮಿತ್ರರು ಎನ್ನುತ್ತೇವೆ. ಅಂದರೆ ನಮಗೆ ಪ್ರೀತಿ ಪಾತ್ರರಾದವರು. ಅನಿಷ್ಟ ಎಂದರೆ ನಮಗೆ ಇಷ್ಟವಾಗದೆ ಇರುವುದು. ನಾವು ನಮ್ಮ ಇಷ್ಟದೈವ ರಾಮ, ಕೃಷ್ಣ, ಈಶ್ವರ ಎಂದು ದೇವಸ್ಥಾನದಲ್ಲಿ ಅವನ ಬಳಿ ಕುಳಿತುಕೊಂಡು, ನನಗೆ ಆರೋಗ್ಯ ಕೊಡು, ಧನಕನಕ ಕೊಡು, ಸುಖ ಸಂಪತ್ತನ್ನು ಕೊಡು ಎಂದು ಕೇಳುತ್ತೇವೆ. ಈಗ ಇಲ್ಲಿ ವಿಚಾರ ಮಾಡಬೇಕಾದ ಸಂಗತಿ ಎಂದರೆ ನಮ್ಮ ಇಷ್ಟ ದೇವರೋ ಅಥವಾ ಈ ಆಸೆಗಳೋ? ಎಂಬುದು. ನಾವು ಭಗವಂತನ ಬಳಿ ಹೋದಾಗ ಅವನನ್ನು ಬಿಟ್ಟು ಬೇರೆ ಏನನ್ನು ಕೇಳದೆ ಇದ್ದರೆ ಆಗ ನಮಗೆ ಭಗವಂತನೇ ಇಷ್ಟ ಎಂದರ್ಥ.

ಅರ್ಜುನ ಮತ್ತು ದುರ್ಯೋಧನ ಕೃಷ್ಣನನ್ನು ಭೇಟಿ ಮಾಡಲು ಹೋದಾಗ ಶ್ರೀ ಕೃಷ್ಣ ಮಲಗಿರುತ್ತಾನೆ. ಅರ್ಜುನ ಶ್ರೀ ಕೃಷ್ಣನ ಪಾದದ ಬಳಿ, ದುರ್ಯೋಧನ ಶ್ರೀ ಕೃಷ್ಣನ ಶಿರಸ್ಸಿನ ಬಳಿ ಕುಳಿತುಕೊಳ್ಳುತ್ತಾರೆ. ಎದ್ದ ನಂತರ ಮೊದಲು ಅರ್ಜುನನನ್ನು ನೋಡಿದ ಶ್ರೀ ಕೃಷ್ಣ ಅವನನ್ನು ಮಾತನಾಡಿಸಿ, ನಂತರ ದುರ್ಯೋಧನನನ್ನು ಮಾತನಾಡಿಸುತ್ತಾನೆ. ಇವರಿಬ್ಬರೂ ಬಂದ ವಿಷಯವನ್ನು ತಿಳಿದು, ನೀವಿಬ್ಬರೂ ನನ್ನ ಸಂಬಂಧಿಕರು. ನಾನು ಯುದ್ಧದಲ್ಲಿ ಆಯುಧವನ್ನು ಹಿಡಿದು ಹೋರಾಡುವುದಿಲ್ಲ. ನಿಮಗೆ ನನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ ಬೇಕೋ ಅಥವಾ ಶಸ್ತ್ರವನ್ನು ಹಿಡಿಯದ ನಾನು ಬೇಕೋ? ಎಂಬ ಆಯ್ಕೆಯನ್ನು ಇಡುತ್ತಾನೆ. ಅರ್ಜುನ ಶ್ರೀಕೃಷ್ಣನನ್ನೇ ಬೇಡುತ್ತಾನೆ. ಆದರೆ ದುರ್ಯೋಧನ ಹನ್ನೊಂದು ಅಕ್ಷೋಹಿಣಿ ಸೈನ್ಯ ದೊರೆತಿದ್ದಕ್ಕಾಗಿ ಸಂಭ್ರಮಿಸುತ್ತಾನೆ.

ಅರ್ಜುನನಿಗೆ ಕೃಷ್ಣನೆಂದರೆ ಬಲು ಇಷ್ಟ. ಹಾಗಾಗಿ ಅವನು ಇನ್ನೇನನ್ನೂ ಆಸೆ ಪಡದೆ ಕೃಷ್ಣನನ್ನೇ ಬಯಸಿದನು. ಈ ನಿಶ್ಚಲ ಭಕ್ತಿಯ ಕಾರಣದಿಂದಲೇ ಭಗವಂತ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದನು. ಅನನ್ಯ ಎಂದರೆ, ನನ್ನನ್ನು ಬಿಟ್ಟು ಬೇರೆ ಏನೂ ಇಲ್ಲ ಎನ್ನುವ ಭಾವ. ನಾವು ಯಾವುದೇ ದೇವತೆಯ ದೇವಸ್ಥಾನಕ್ಕೆ ಹೋದರೂ ನನ್ನ ಇಷ್ಟ ದೇವರ ಭಕ್ತಿಯನ್ನೇ ದಯಪಾಲಿಸು ಎಂದು ಬೇಡಿಕೊಳ್ಳಬೇಕು.

ಒಬ್ಬ ಶಿಷ್ಯ ಗುರುಗಳ ಬಳಿ ಬಂದನು. ಅವನು ಉತ್ತಮ ಶಿಷ್ಯನಾಗಿದ್ದನು. ಅವನು ಗುರುಗಳನ್ನು ಕುರಿತು, ಗುರುಗಳೇ ಏಳು ಎಂಟು ವರ್ಷಗಳ ಮೊದಲು ನೀವು ನನ್ನ ಸ್ಥಿತಿ ಉತ್ತಮವಾಗಿರುತ್ತದೆ ಎಂದು ಹೇಳಿದಿರಿ. ಆದರೆ ನಂತರದ ದಿನಗಳಲ್ಲಿ ನೀವು ಮತ್ತೆ ಹಾಗೆ ಹೇಳಲೇ ಇಲ್ಲ ಎಂದನಂತೆ. ಅದಕ್ಕೆ ಗುರುಗಳು ಆರಂಭದಲ್ಲಿ ಇದ್ದ ಭಕ್ತಿ, ಪ್ರೀತಿ ಕೊನೆವರೆಗೂ ಹಾಗೆ ಇರುವುದಿಲ್ಲ. ಅದು ಕಡಿಮೆಯಾಗುತ್ತಾ ಹೋಗುತ್ತದೆ ಎಂದರಂತೆ. ಭಾಗವತದಲ್ಲಿ ಭಕ್ತಿ ಎಂದರೇನು ಎಂಬುದಕ್ಕೆ ನಾರದರು, ಪ್ರತಿಕ್ಷಣಂ ವರ್ಧನಂ ಇತಿಭಕ್ತಿ ಎಂದಿದ್ದಾರೆ. ಪ್ರತಿಕ್ಷಣವೂ ಹೆಚ್ಚುತ್ತಾ ಇರುವುದನ್ನು ಭಕ್ತಿ ಎನ್ನಲಾಗಿದೆ.

ಯಾರು ನಿತ್ಯಯುಕ್ರತರಾಗಿರುತ್ತಾರೋ, ಯಾರು ಅನನ್ಯ ಭಾವದಿಂದ ನನ್ನನ್ನು ಭಜಿಸುತ್ತಾರೋ ಅವರ ಯೋಗಕ್ಷೇಮವನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಭಗವಂತ ಪ್ರತಿಜ್ಞೆ ಮಾಡಿದ್ದಾನೆ. ಯೋಗ ಎಂದರೆ ನನಗೆ ಏನು ಬೇಕೋ ಅದು, ಕ್ಷೇಮ ಎಂದರೆ ನನ್ನ ಬಳಿ ಏನು ಇದೆಯೋ ಅದರ ರಕ್ಷಣೆ.  ಮಗು ಬೇಕು ಎಂದು ಯೋಚಿಸುವುದು ಯೋಗ. ಮಗುವಾದಮೇಲೆ ಅದಕ್ಕೆ ಏನೂಝ ತೊಂದರೆ ಆಗದಿರಲಿ ಎನ್ನುವುದು ಕ್ಷೇಮ. ಹಾಗಾದರೆ ನಮಗೆ ಏನು ಬೇಕೋ ಅದು ಸಿಗುತ್ತದೆಯೇ? ಇಲ್ಲ. ನಮಗೆ ಏನು ಸಿಗಬೇಕೋ ಅದು ಸಿಗುತ್ತದೆ. Wants ಪೂರ್ಣಗೊಳ್ಳುವುದಿಲ್ಲ. ಆದರೆ Needs ಪೂರ್ಣಗೊಳ್ಳುತ್ತದೆ.

ಇಲ್ಲಿ  ವಿವೇಚಕರು ಒಂದು ಸುಂದರ ಭಜನೆ ಮಾಡುತ್ತಾರೆ. ಅದರ ತಾತ್ಪರ್ಯದಂತೆ, ಓ ಮನಸ್ಸೇ ನೀನು ಉದಾಸೀನನಾಗಬೇಡ, ನಿನ್ನ ಜೀವನವೆಂಬ ಹಡಗನ್ನು ರಾಮನಿಗೆ ಒಪ್ಪಿಸು. ಯಾಕೆಂದರೆ ಬರುವ ಪ್ರತಿ ಅಲೆಯು ಅವನದೇ ಆಗಿರುತ್ತದೆ.

ನಾವು ನಮ್ಮ ಜೀವನದ ಕಷ್ಟಗಳ ಸರಮಾಲೆಯನ್ನು ಅವನಿಗೆ ಒಪ್ಪಿಸಿದರೆ ನಮಗೆ ಅವನ ಸಾನಿಧ್ಯ ಬಹಳ ಸುಲಭವಾಗಿ ಸಿಗುತ್ತದೆ.

ದ್ರೌಪದಿಯು, ತನ್ನ ವಸ್ತ್ರಾಪಹರಣದ ಸಮಯದಲ್ಲಿ, ಶ್ರೀ ಕೃಷ್ಣನು ಬೇಗನೆ ಬರಲಿಲ್ಲ ಎಂದು ಅವನ ಮೇಲೆ ಕೋಪಿಸಿಕೊಳ್ಳುತ್ತಾಳೆ. ಅದಕ್ಕೆ ಶ್ರೀ ಕೃಷ್ಣನು, ಇಲ್ಲ, ನೀನು ಕರೆದ ತಕ್ಷಣವೇ ನಾನು ಬಂದೇ ಎನ್ನುತ್ತಾನೆ. ಅದನ್ನು ದ್ರೌಪದಿಯು ಒಪ್ಪದೇ ವಾದ ಮಾಡುತ್ತಾಳೆ. ಆಗ ಶ್ರೀ ಕೃಷ್ಣ ಅವಳಿಗೆ ಹೀಗೆ ಉತ್ತರಿಸುತ್ತಾನೆ: ಸೀರೆ ಹರಣದ  ಸಮಯದಲ್ಲಿ ನಿನ್ನನ್ನು ಸಭೆಗೆ ಎಳೆದು ತಂದಾಗ, ನೀನು ಭೀಷ್ಮನನ್ನು, ನಂತರ  ಧೃತರಾಷ್ಟ್ರನನ್ನು, ನಿನ್ನ ಐವರು ಪತಿಗಳನ್ನು ನೋಡಿ ಅವರಿಂದ ಆಶ್ರಯ ಸಿಗಬಹುದೆಂದು ಪ್ರಯತ್ನಿಸಿದೆ. ನಂತರ ನೀನೇ ನಿನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದೆ. ಅದೂ ಆಗದೇ ಇದ್ದಾಗ, ಕೃಷ್ಣ ಕಾಪಾಡು ಎಂದು ನನ್ನನ್ನು ಕರೆದೆ. ತಕ್ಷಣವೇ ನಾನು ಬಂದುಬಿಟ್ಟೆನು ಎನ್ನುತ್ತಾನೆ. ನಾವುಗಳು ಸಹ ಅವನ ಮೇಲೆ ವಿಶ್ವಾಸವಿಟ್ಟು ಅವನನ್ನೇ ಕರೆಯಬೇಕೇ ಹೊರತು ಬೇರೆಯವರ ಆಶ್ರಯಕ್ಕಾಗಿ ಪ್ರಯತ್ನಿಸಬಾರದು.

ನಮ್ಮ ಪ್ರತಿ ಪ್ರಾರ್ಥನೆಗೆ ಉತ್ತರ ಸಿಗದಿದ್ದರೂ, ಅದನ್ನು ಅವನು ಆಲಿಸುತ್ತ ಇರುತ್ತಾನೆ. ಆದರೆ ನಮ್ಮ ಪ್ರಾರ್ಥನೆ ನಿಜವಾದದ್ದಾಗಿರಬೇಕು. ಕಪಟ ನಾಟಕದ ಪ್ರಾರ್ಥನೆ ಆಗಿರಬಾರದು. ನಮ್ಮನ್ನು ನಾವು ಅವನಿಗೆ ಅರ್ಪಿಸಿಕೊಂಡಾಗ ನಮ್ಮ ಭಯ ದೂರವಾಗುತ್ತದೆ.

ಒಮ್ಮೆ ಒಬ್ಬ ಶಿಷ್ಯ ಗುರುಗಳ ಬಳಿ ಬಂದು, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ, ಭಗವಂತ ನನ್ನನ್ನು ಕ್ಷಮಿಸುತ್ತಾನೆಯೇ? ಎನ್ನುತ್ತಾನೆ. ಅದಕ್ಕೆ ಗುರುಗಳು ಒಮ್ಮೆ ನೀನು ನಿನ್ನನ್ನು ಅವನಿಗೆ ಅರ್ಪಿಸಿಕೊಂಡು ಭಕ್ತಿಯಿಂದ ಅವನ ನಾಮ ಸ್ಮರಣೆಯನ್ನು ಮಾಡಿ ನೋಡು, ಜನ್ಮ ಜನ್ಮಾಂತರದ ಪಾಪಗಳನ್ನು ಅವನು ತೊಲಗಿಸುತ್ತಾನೆ ಎನ್ನುತ್ತಾರೆ.

ಒಂದು ಊರಿನಲ್ಲಿ ಒಬ್ಬ ಮಹಾನ್ ಸಂತರು ಗೀತೆಯ ಪ್ರವಚನವನ್ನು ಕೊಡುತ್ತಾ ಈ ಶ್ಲೋಕವನ್ನೇ ವಿವರಿಸಿದ್ದರು. ಅಲ್ಲಿದ್ದ ಒಬ್ಬ ವ್ಯಕ್ತಿ ಗುರುಗಳೇ ಇದು ಸತ್ಯವೇ? ಎಂದನು. ಅದಕ್ಕೆ ಗುರುಗಳು ಹೌದು ಗೀತೆಯಲ್ಲಿ ಇದರ ಉಲ್ಲೇಖವಿದೆ ಎಂದರು. ಅದಕ್ಕೆ ಆ ವ್ಯಕ್ತಿ ಭಗವಂತನೇ ಬಂದು ನನಗೆ ಊಟ ಮಾಡಿಸುವವರೆಗೂ ನಾನು ಊಟ ಮಾಡುವುದಿಲ್ಲವೆಂದು ಹಠ ಹಿಡಿದನು. ಯಾರು ಎಷ್ಟೇ ಹೇಳಿದರೂ ಅವನು ಏನನ್ನು ತಿನ್ನದೇ ಕಾಡಿಗೆ ಓಡಿ ಹೋದನು. ಒಂದು ಮರವನ್ನು ಏರಿ ಕುಳಿತನು. ಗುರುಗಳು, ಅಯ್ಯೋ ನನ್ನಿಂದ ಇವನು ಊಟ ಮಾಡದೇ ಇರುವ ಹಾಗಾಯಿತಲ್ಲ ಎಂದು ಬೇಸರಿಸುತ್ತಾ, ರುಚಿರುಚಿಯಾದ ಭೋಜನಗಳನ್ನು ತಟ್ಟೆಯಲ್ಲಿ ಇರಿಸಿ, ಮರದ ಕೆಳಗೆ ಇಟ್ಟು ಹೋದರು. ಮಧ್ಯ ರಾತ್ರಿಯ ಹೊತ್ತಿನಲ್ಲಿ ದರೋಡೆ ಕೋರರ ತಂಡವೊಂದು ತಾವು ಕದ್ದ ಮಾಲನ್ನು ಹಂಚಿಕೊಳ್ಳಲು ಅದೇ ಮರದ ಕೆಳಗೆ ಕುಳಿತರು. ಆ ತಟ್ಟೆಯಲ್ಲಿದ್ದ ವ್ಯಂಜನಗಳ ಪರಿಮಳವು ಅವರನ್ನು ಸೆಳೆಯಿತು. ಯಾರೋ ನಮ್ಮನ್ನು ಸಾಯಿಸಲು ವಿಷ ಬೆರೆಸಿದ ಊಟವನ್ನು ಇರಿಸಿದ್ದಾರೆ ಎಂದು ಅವರನ್ನು ಹುಡುಕಲು ಪ್ರಾರಂಭಿಸಿದರು. ಮರದ ಮೇಲೆ ಕುಳಿತಿದ್ದ ಆ ವ್ಯಕ್ತಿಯನ್ನು ಕೆಳಗೆ ಇಳಿಸಿ, ಥಳಿಸಿದರು. ನಂತರ ಆ ಊಟವನ್ನು ದರೋಡೆ ಕೋರರು ಅವನ ಬಾಯಿಗೆ ತುರುಕಿ ತುರುಕಿ ತಿನ್ನಿಸಿದರು. ಅವನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹಳ್ಳಿಗೆ ಬಂದನು. ಗುರುಗಳ ಬಳಿ ಹೋಗಿ, ಭಗವಂತ ನನಗೆ ಹೀಗೆ ಬಲವಂತದಿಂದ ಊಟ ಮಾಡಿಸುತ್ತಾನೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದನಂತೆ. ಈ ಕಥೆ ಹಾಸ್ಯದಿಂದ ಕೂಡಿದ್ದರೂ ಬಹಳ ಅರ್ಥವನ್ನು ಹೊಂದಿದೆ. ವಿವೇಚಕರು ಸಹ, ತಾವು ವೈಯಕ್ತಿಕವಾಗಿ ಈ ಭಾವದ ಅನುಭವವನ್ನು ಪಡೆದಿದ್ದೇನೆ ಎಂದು ಹೇಳಿದರು. ಹಾಗಾಗಿ ನಿತ್ಯ, ಅನನ್ಯ ಪ್ರೇಮದಿಂದ ಭಜಿಸಿದರೆ ಅವನು ಕಾಪಾಡುವುದರಲ್ಲಿ ಸಂದೇಹವೇ ಇಲ್ಲ ಎಂದರು.

9.23

ಯೇಽಪ್ಯನ್ಯದೇವತಾ ಭಕ್ತಾ, ಯಜಂತೇ ಶ್ರದ್ಧಯಾನ್ವಿತಾಃ
ತೇಽಪಿ ಮಾಮೇವ ಕೌಂತೇಯ, ಯಜಂತ್ಯವಿಧಿಪೂರ್ವಕಮ್।।23।।

ಎಲೈ ಅರ್ಜುನ ! ಶ್ರದ್ಧಾವಂತರಾದ ಸಕಾಮ ಭಕ್ತರು ಬೇರೆ ಬೇರೆ ದೇವತೆಗಳನ್ನು ಆರಾಧಿಸಿದರೂ ಅವರೂ ಸಹ ನನ್ನನ್ನೇ ಆರಾಧಿಸುತ್ತಾರೆ. ಆದರೆ ಅವರ ಆರಾಧನೆಯು ಅವಿಧಿ ಪೂರ್ವಕವಾದದ್ದೂ ಅರ್ಥಾತ್ ಅಜ್ಞಾನಪೂರ್ವಕವಾದದ್ದು.

ಎಲೈ ಅರ್ಜುನನೇ! ಶ್ರದ್ಧೆಯಿಂದ ಯುಕ್ತಾರಾದ ಸಕಾಮ ಭಕ್ತರು ಬೇರೆ ದೇವತೆಗಳನ್ನು ಪೂಜಿಸಿದರೂ ಅದು ನನ್ನ ಪೂಜೆಯೇ ಆಗಿರುತ್ತದೆ. ಆದರೆ ಅವರ ಆ ಪೂಜೆಯು ಅಜ್ಞಾನ ಪೂರ್ವಕವಾಗಿರುತ್ತದೆ.

ಈ ಶ್ಲೋಕ ಸ್ವಲ್ಪ ಗೊಂದಲವನ್ನು ಉಂಟು ಮಾಡುವಂತೆ ಅನ್ನಿಸುತ್ತದೆ. ಆದರೆ ನಮ್ಮ ಮನಸ್ಸಿಗೆ ಇದರ ಸ್ಪಷ್ಟತೆ ಬೇಕಾಗುತ್ತದೆ. ಭಗವಂತ, ಬ್ರಹ್ಮ, ಮತ್ತು ದೇವತೆಗಳು ಇವರಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ದೇವತೆಗಳನ್ನು ಪೂಜಿಸುವುದು ಅಜ್ಞಾನ ಎಂದಿಲ್ಲ ಭಗವಂತ. ಯಾರ ಜನ್ಮವಾಗಿದೆಯೋ ಅವರ ಮೃತ್ಯು ನಿಶ್ಚಯ. ದೇವತೆಗಳು ಸಹ ಹಾಗೆಯೇ. ಆದರೆ ಅವರ ಜೀವಿತಾವಧಿ ಸಹಸ್ರ ಕೋಟಿ ವರ್ಷಗಳದ್ದಾಗಿರುತ್ತದೆ. ಸೂರ್ಯದೇವನ ಅವಧಿಯು ಕೋಟಿ ವರ್ಷಗಳು. ಒಂದು ನಿರ್ದಿಷ್ಟ ಆಯಸ್ಸಿನ ನಂತರ ಸೂರ್ಯನೂ, ಬ್ರಹ್ಮನೂ ಶಾಂತರಾಗುತ್ತಾರೆ. ಬ್ರಹ್ಮನ ಆಯಸ್ಸು ೪೩೨00 × ೧000 × ೩೬೦ × ೧00 ವರ್ಷಗಳು. ಅಗ್ನಿ, ವರುಣ, ಕುಲ ದೇವತೆ, ಇವರುಗಳನ್ನು ಭಗವಂತ ನಿಯುಕ್ತಗೊಳಿಸಿದ್ದಾನೆ. ಮನುಷ್ಯ ತನ್ನ ಕಾಮನೆಗಳ ಪೂರೈಕೆಗಾಗಿ ನಿಮ್ಮನ್ನು  ಭಜಿಸುವುದರಿಂದ ನೀವು ಅವರ ಕಾಮನೆಗಳನ್ನು ಪೂರೈಸಿ ಎಂದು ಭಗವಂತ ಅವರಿಗೆ ಆದೇಶಿಸಿದ್ದಾನೆ.

ವಿಷ್ಣು, ಶಿವ, ಆದಿಶಕ್ತಿ ದುರ್ಗೆಯ ಜನ್ಮವಾಗಿಲ್ಲ, ಇವರು ಮೃತ್ಯುವನ್ನೂ ಹೊಂದುವುದಿಲ್ಲ. ಇವರ ಅವತಾರಗಳನ್ನು ಬ್ರಹ್ಮವೆನ್ನಲಾಗುತ್ತವೆ. ಅಂದರೆ ಶ್ರೀರಾಮ, ಶ್ರೀಕೃಷ್ಣ, ಆಂಜನೇಯ, ಇತ್ಯಾದಿ ಅವತಾರಗಳ ಅತಿರಿಕ್ತ, ಉಳಿದವು ದೇವತೆಗಳು. ದೇವತೆಗಳು ಸಹ ವರವನ್ನು ಕೊಡುವುದು ತನ್ನ ಶಕ್ತಿಯಿಂದಲೇ ಎನ್ನುತ್ತಾನೆ ಭಗವಂತ.

ಉದಾಹರಣೆಗೆ ಬ್ಯಾಂಕಿನ ಉದ್ಯೋಗಿ, ಖಾತೆದಾರನಿಗೆ ತನ್ನ ಜೇಬಿನಿಂದ ಹಣ ಕೊಡುವುದಿಲ್ಲ. ಬದಲಾಗಿ ಆ ಸಂಸ್ಥೆಯ ವತಿಯಿಂದ ಹಣವನ್ನು ಕೊಡುತ್ತಾನೆ. ಹಾಗೆಯೇ ಇಲ್ಲಿ ದೇವತೆಗಳು, ಭಗವಂತನ ಶಕ್ತಿಯನ್ನು ಬಳಸಿಕೊಂಡು ವರಗಳನ್ನು ಕೊಡುತ್ತಾರೆ. ಪ್ರತಿ ದೇವತೆಗೂ ಪ್ರತ್ಯೇಕ ಕೆಲಸಗಳನ್ನು ನಿಯೋಜಿಸಲಾಗಿದೆ. ಉದಾಹರಣೆಗೆ, ವರುಣನಿಂದ ಮಳೆ, ಪವನದೇವತೆಯಿಂದ ಗಾಳಿ ಹೀಗೆ. ನಾವು ದೇವತೆಗಳನ್ನೇ ಸರ್ವಸ್ವ ಎಂದು ಕೊಂಡರೆ ಅದು ಅವಿಧಿಪೂರ್ವಕವಾಗಿರುತ್ತದೆ.

ಉದಾಹರಣೆಗೆ, ಮನೆಯಲ್ಲಿ ಕಳ್ಳತನವಾದಾಗ ಪೊಲೀಸ್ ಕಳ್ಳನನ್ನು ಹಿಡಿಯುತ್ತಾನೆ. ಅದರಿಂದ, ಪೊಲೀಸ್ ನನ್ನೇ ಪ್ರಧಾನಮಂತ್ರಿ ಎಂದು ಹೇಳಲಾಗುವುದಿಲ್ಲ. ಹಾಗೆ ದೇವತೆಗಳೇ ಭಗವಂತನಾಗುವುದಿಲ್ಲ.

9.24

ಅಹಂ(ಮ್) ಹಿ ಸರ್ವಯಜ್ಞಾನಾಂ(ಮ್), ಭೋಕ್ತಾ ಚ ಪ್ರಭುರೇವ ಚ
ನ ತು ಮಾಮಭಿಜಾನಂತಿ, ತತ್ತ್ವೇನಾತಶ್ಚ್ಯವಂತಿ ತೇ।।24।।

ಏಕೆಂದರೆ, ಎಲ್ಲಾ ಯಜ್ಞಗಳನ್ನೂ ಸ್ವೀಕರಿಸುವವನೂ ಮತ್ತು ಒಡೆಯನೂ ಸಹ ನಾನೇ. ಆದರೆ ಅವರು ಅಂತರ್ಯಾಮಿ ಪರಮೇಶ್ವರನಾದ ನನ್ನನ್ನು ತತ್ವತಃ ಅರ್ಥತ್ ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲ, ಆದುದರಿಂದ ಅವನತಿ ಪಡೆಯುತ್ತಾರೆ ಅಂದರೆ ಪುನರ್ಜನ್ಮವುಂಟಾಗುತ್ತದೆ.

ಸರ್ವ ಯಜ್ಞಗಳ ಭಕ್ತ ಮತ್ತು ಒಡೆಯನು ನಾನೇ ಆಗಿದ್ದೇನೆ. ಆದರೆ ಅವರು ಪರಮೇಶ್ವರನಾದ ನನ್ನನ್ನು ತತ್ತ್ವತಃ ತಿಳಿಯುವುದಿಲ್ಲ, ಆದ್ದರಿಂದ ಪುನರ್ಜನ್ಮವನ್ನು ಪಡೆಯುತ್ತಾರೆ.

9.25

ಯಾಂತಿ ದೇವವ್ರತಾ ದೇವಾನ್, ಪಿತೄನ್ಯಾಂತಿ ಪಿತೃವ್ರತಾಃ
ಭೂತಾನಿ ಯಾಂತಿ ಭೂತೇಜ್ಯಾ, ಯಾಂತಿ ಮದ್ಯಾಜಿನೋಽಪಿ ಮಾಮ್।।25।।

ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ.ಪಿತೃಗಳನ್ನು ಪೂಜಿಸುವವರು ಪಿತೃಗಳನ್ನು ಸೇರುತ್ತಾರೆ.ಭೂತಗಳನ್ನು ಪೂಜಿಸುವವರು ಭೂತಗಳನ್ನೇ ಪಡೆಯುತ್ತಾರೆ.ನನ್ನನ್ನು ಪೂಜಿಸುವ ಭಕ್ತರು ನನ್ನನ್ನೇ ಸೇರುತ್ತಾರೆ.ನನ್ನ ಭಕ್ತರಿಗೆ ಪುನರ್ಜನ್ಮವಿರುವುದಿಲ್ಲ.

ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ. ಪಿತೃಗಳನ್ನು ಪೂಜಿಸುವವರು ಪಿತೃಗಳನ್ನು ಸೇರುತ್ತಾರೆ. ಭೂತಗಳನ್ನು ಪೂಜಿಸುವವರು ಭೂತಗಳನ್ನೇ ಪಡೆಯುತ್ತಾರೆ. ಮತ್ತು ನನ್ನನ್ನು ಪೂಜಿಸುವವ ಭಕ್ತರು ನನ್ನನ್ನೇ ಸೇರುತ್ತಾರೆ. ಅದಕ್ಕಾಗಿ ನನ್ನ ಭಕ್ತರಿಗೆ ಪುನರ್ಜನ್ಮವಿರುವುದಿಲ್ಲ.

ಮೋಕ್ಷದ ಪ್ರಾಪ್ತಿಗಾಗಿ, ದೇವತೆಗಳನ್ನು, ಪಿತೃಗಳನ್ನು, ಭೂತಗಳನ್ನು ಪೂಜಿಸಿದರೆ ಅದು ದೊರೆಯುವುದಿಲ್ಲ. ನನ್ನನ್ನು ಪೂಜಿಸುವವರು ಮಾತ್ರ ಮೋಕ್ಷ ಹೊಂದಲು ಸಾಧ್ಯ. ಆದಿ ಶಂಕರಾಚಾರ್ಯರು ಹೇಳುವಂತೆ, ಒಬ್ಬ ಗ್ರಹಸ್ಥನಿಗೆ ಐದು ದೇವತೆಗಳ ಆರಾಧನೆ ಕಡ್ಡಾಯವಾಗಿರುತ್ತದೆ. ಅವು ಯಾವುದೆಂದರೆ, ವಿಷ್ಣುವಿನ ಯಾವುದೇ ಸ್ವರೂಪ, ಶಿವ, ಗಣೇಶ, ದೇವಿ ಹಾಗೂ ಸೂರ್ಯ. ನಮ್ಮ ಇಷ್ಟ ದೇವರನ್ನು ನಮ್ಮ ದೇವರ ಮನೆಯಲ್ಲಿ ಮಧ್ಯದಲ್ಲಿಟ್ಟು, ಉಳಿದ ದೇವತೆಗಳ ವಿಗ್ರಹ ಅಥವಾ ಚಿತ್ರವನ್ನು ಅಕ್ಕಪಕ್ಕದಲ್ಲಿ ಇಡಬೇಕು. ನಮ್ಮ ಇಷ್ಟ ದೇವರನ್ನು ಪರಬ್ರಹ್ಮ ಪರಮಾತ್ಮನೆಂದು ಪೂಜಿಸಬೇಕು.

ಯಾರಾದರೂ ಮೂರ್ತಿ ಪೂಜೆ ಮಾಡುವುದನ್ನು ಗೀತೆಯಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರೆ, ಅವರಿಗೆ ೯ನೇ ಅಧ್ಯಾಯದ ೨೬ನೇ ಶ್ಲೋಕವನ್ನು ತೋರಿಸಬೇಕು. ಈ ಶ್ಲೋಕ ವಿವೇಚಕರ ಪ್ರಿಯ ಶ್ಲೋಕವಾಗಿದೆ.

9.26

ಪತ್ರಂ(ಮ್) ಪುಷ್ಪಂ(ಮ್) ಫಲಂ(ನ್) ತೋಯಂ(ಯ್),ಯೋ ಮೇ ಭಕ್ತ್ಯಾ ಪ್ರಯಚ್ಛತಿ।
ತದಹಂ(ಮ್) ಭಕ್ತ್ಯುಪಹೃತಮ್,ಅಶ್ನಾಮಿ ಪ್ರಯತಾತ್ಮನಃ ॥9.26॥

ತುಳಸೀ- ಬಿಲ್ವಾದಿಗಳನ್ನೂ, ಹೂವನ್ನೂ, ಹಣ್ಣುಗಳನ್ನೂ, ನೀರು ಇತ್ಯಾದಿಗಳನ್ನೂ ಯಾವ ಭಕ್ತನು ನನಗಾಗಿ ಭಕ್ತಿಯಿಂದ ಅರ್ಪಿಸುತ್ತಾನೆಯೋ ಆ ಶುದ್ಧಬುದ್ಧಿಯ ನಿಷ್ಕಾಮ ಪ್ರೇಮಿ ಭಕ್ತನು ಪ್ರೀತಿಯಿಂದ ಅರ್ಪಿಸಿದ ಆ ಪತ್ರ-ಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟವಾಗಿ ಪ್ರೀತಿ ಸಹಿತ ಸೇವಿಸುತ್ತೇನೆ ಅರ್ಥಾತ್ ಸ್ವೀಕರಿಸುತ್ತೇನೆ.

ಯಾವ ಭಕ್ತನೇ ಆಗಲಿ, ಪತ್ರ, ಪುಷ್ಪ, ಫಲ, ಜಲ ಇತ್ಯಾದಿಗಳನ್ನು ನನಗೆ ಭಕ್ತಿಯಿಂದ ಅರ್ಪಿಸುತ್ತಾನೋ ಆ ಶುದ್ಧ ಬುದ್ಧಿಯುಳ್ಳ ನಿಷ್ಕಾಮ ಪ್ರೇಮಿ ಭಕ್ತನು ಭಕ್ತಿಯಿಂದ ಅರ್ಪಿಸಿದ ಆ ಪತ್ರ ಪುಷ್ಪಾದಿಗಳನ್ನು ನಾನು ಸಗುಣ ರೂಪದಿಂದ ಪ್ರಕಟನಾಗಿ ಪ್ರೀತಿಯಿಂದ ತಿಂದುಬಿಡುವೆನು.

ದ್ರೌಪದಿಯೂ ಅಕ್ಷಯ ಪಾತ್ರೆಯಲ್ಲಿದ್ದ ಕೇವಲ ಒಂದು ಅಗುಳು ಅನ್ನವನ್ನೇ ಶ್ರೀ ಕೃಷ್ಣನಿಗೆ ಅರ್ಪಿಸಿ, ದೂರ್ವಾಸ ಮುನಿಗಳ ಮತ್ತು ಅವರ ಶಿಷ್ಯರ ಹಸಿವನ್ನು ನೀಗಿಸಿದಳು.

ಗಜೇಂದ್ರನ ಕಾಲು ಮೊಸಳೆಯ ಬಾಯಿಯಲ್ಲಿ ಸಿಲುಕಿಕೊಂಡಾಗ ಅಲ್ಲಿದ್ದ ಒಂದು ಪುಷ್ಪವನ್ನು ವಿಷ್ಣುವಿಗೆ ಅರ್ಪಿಸಿ ಆನೆ ಮೋಕ್ಷವನ್ನು ಪಡೆಯಿತು.

ಶಬರಿ ಪ್ರೀತಿಯಿಂದ ಎಂಜಲ ಹಣ್ಣುಗಳನ್ನೇ ಶ್ರೀರಾಮನಿಗೆ ಅರ್ಪಿಸಿದಳು.

ಪ್ರೇಮ, ಭಕ್ತಿ, ಶ್ರದ್ಧೆಯಿಂದ ಏನನ್ನು ಅರ್ಪಿಸಿದರೂ ಭಗವಂತನು ಸ್ವೀಕರಿಸುತ್ತಾನೆ.

ಭಗತ್ ಧನ್ನಾ ಎಂಬುವವನ ನೈಜ ಕಥೆ ಇದು. ಅವನು ೧೫ನೇ ಶತಮಾನದಲ್ಲಿ ರಾಜಸ್ಥಾನದ ಜೈಪುರ ಜಿಲ್ಲೆಯ ತೆಹಸಿಲ್ಫಾಗಿಯ ಚೌರು ಗ್ರಾಮದಲ್ಲಿ ಹಿಂದೂ ಜಾಟ್ ಕುಟುಂಬದಲ್ಲಿ ಜನಿಸಿದನು. ಅವನು ಬಹಳ ಮುಗ್ಧನಾಗಿದ್ದನು. ಅವನ ಸಹೋದರ ಆಸ್ತಿಯನ್ನೆಲ್ಲ ಇಟ್ಟುಕೊಂಡು ಇವನಿಗೆ ಕೇವಲ ಒಂದು ಹಸುವನ್ನು ನೀಡಿದನು. ಆ ಊರಿನಲ್ಲಿಯೇ ಇದ್ದ ಒಬ್ಬ ಪೂಜಾರಿಯೂ ಇವನ ಮುಗ್ದತೆಯನ್ನು ನೋಡಿ ಮೋಸ ಮಾಡಲು ಸಂಚು ಹೂಡಿದನು. ದೇವಸ್ಥಾನದಲ್ಲಿ ಭಗವಂತನು ನಿನ್ನ ಹಸುವಿನ ಹಾಲನ್ನು ಬಹಳ ಪ್ರೀತಿಯಿಂದ ಸೇವಿಸುತ್ತಾನೆ. ನಿನ್ನ ಮನೆಯ ಹಾಲನ್ನು ಎರಡು ಲೋಟವಾದರೂ ಕುಡಿದು ಬಿಡುತ್ತಾನೆ ಎಂದು ಧನ್ನಾನಿಗೆ ನಂಬಿಸುತ್ತಾನೆ. ಧನ್ನಾನು ಸಂತೋಷದಿಂದ ಭಗವಂತನು ನನ್ನ ಮನೆಯ ಹಾಲನ್ನು ಕುಡಿಯುವುದಾದರೆ ನಾನು ದಿನಾಲು ಎರಡು ಲೋಟ ಹಾಲನ್ನು ಕೊಡುತ್ತೇನೆ ಎನ್ನುತ್ತಾನೆ. ಆದರೆ ಆ ಪಂಡಿತನು ಆ ಹಾಲನ್ನು ತನ್ನ ಸ್ವಂತ ಬಳಕೆಗೆ ಬಳಸಲಾರಂಭಿಸುತ್ತಾನೆ. ಒಮ್ಮೆ ಆ ಪೂಜಾರಿಯ ಮೂರು ನಾಲ್ಕು ದಿನಗಳವರೆಗೆ ಹೊರ ಹೋಗುವ ಪ್ರಸಂಗ ಬರುತ್ತದೆ. ಧನ್ನಾನ ಬಳಿಗೆ ಬಂದು, ನಾನು ಮರಳಿ ಬರುವವರೆಗೂ ಹಾಲಿನ ಅವಶ್ಯಕತೆ ಇಲ್ಲ ಎನ್ನುತ್ತಾನೆ. ಅದಕ್ಕೆ ಧನ್ನಾ, ಭಗವಂತ ಹಾಲಿಲ್ಲದೇ ಹೀಗೆ ಇರುತ್ತಾನೆ? ನಾನೇ ಹೋಗಿ ಅವನಿಗೆ ಹಾಲು ಕುಡಿಸುತ್ತೇನೆ ಎನ್ನುತ್ತಾನೆ. ನಿನಗೆ ಗರ್ಭಗುಡಿಯ ಒಳ ಹೋಗಲು ಅನುಮತಿ ಇಲ್ಲವೆನ್ನುತ್ತಾನೆ. ಧನ್ನಾ, ಹಾಗಾದರೆ ಆ ಭಗವಂತನನ್ನೇ ನನ್ನ ಮನೆಯಲ್ಲಿ ಬಿಟ್ಟು ಹೋಗಿ ಎನ್ನುತ್ತಾನೆ. ಪೂಜಾರಿಯು ದಾರಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು, ಅದಕ್ಕೆ ಶೃಂಗಾರ ಮಾಡಿ, ಚಂದನ ಹಚ್ಚಿ ದೇವರೆಂದು, ಒಂದು ರೇಷ್ಮೆ ವಸ್ತ್ರದಲ್ಲಿ ಸುತ್ತಿ ಕೊಡುತ್ತಾನೆ. ಧನ್ನಾ ಎಂದು ಗುಡಿಗೆ ಹೋಗಿ ದೇವರನ್ನು ನೋಡಿರುವುದಿಲ್ಲ. ಇದನ್ನೇ ನಿಜವಾದ ದೇವರೆಂದು ಪ್ರೀತಿಯಿಂದ ಆದರಿಸುತ್ತಾನೆ. ಪ್ರೀತಿಯಿಂದ ಹಾಲನ್ನು ಕುಡಿಯಲು ಇಡುತ್ತಾನೆ. ಜೊತೆಗೆ ಊಟವನ್ನು ಇಡುತ್ತಾನೆ. ಆದರೆ ಭಗವಂತ ಆ ದಿನ ಏನನ್ನು ಸ್ವೀಕರಿಸುವುದೇ ಇಲ್ಲ. ಧನ್ನಾ, ಭಗವಂತ ತಿನ್ನದೇ ಇದ್ದಾಗ ನಾನು ಹೇಗೆ ತಿನ್ನಲಿ ಎಂದು ತಾನೂ ಉಪವಾಸದಲ್ಲಿರುತ್ತಾನೆ. ಮರುದಿನ ತಾನು ಸ್ನಾನ ಮಾಡಿ, ದೇವರಿಗೂ ಸ್ನಾನ ಮಾಡಿಸುತ್ತಾನೆ. ಚಂದನ ಇಲ್ಲದೆ ಇದ್ದಾಗ, ಮಣ್ಣನ್ನೇ ಚಂದನವೆಂದು ಹಚ್ಚಿ ಶೃಂಗಾರ ಮಾಡಿ ಮತ್ತೆ ಹಾಲನ್ನು ಊಟವನ್ನು ಇಡುತ್ತಾನೆ. ಆ ದಿನವು ಭಗವಂತ ಏನನ್ನೂ ಸ್ವೀಕರಿಸುವುದಿಲ್ಲ. ಇವನು ನಿರ್ಜಲ ಉಪವಾಸದಿಂದ ಇರುತ್ತಾನೆ. ಮಾರನೆಯ ದಿನವೂ ಇದೇ ದಿನಚರಿ ನಡೆಯುತ್ತದೆ. ಭಗವಂತ ಬಾರದೆ ಇದ್ದದ್ದನ್ನು ನೋಡಿ, ತನ್ನ ತಲೆಯನ್ನು ಆ ಕಲ್ಲಿಗೆ ಚಚ್ಚಿಕೊಳ್ಳುತ್ತಾನೆ. ರಕ್ತ ಸುರಿಯಲಾರಂಭಿಸುತ್ತದೆ. ಭಗವಂತ ಅವನ ಪ್ರೀತಿಗೆ ಮನಸೋತು, ಪ್ರತ್ಯಕ್ಷನಾಗಿ ತಾನು ಊಟ ಮಾಡಿ, ಅವನಿಗೂ ತಿನ್ನಿಸುತ್ತಾನೆ. ಹಲವು ದಿನಗಳವರೆಗೆ ಭಗವಂತನು ಅವನ ಜೊತೆಯೇ ಇರುತ್ತಾನೆ. ಇದು ಧನ್ನಾನ ನಿಷ್ಕಾಮ ಪ್ರೇಮ. ಈಗಲೂ ರಾಜಸ್ಥಾನದಲ್ಲಿ ಧನ್ನಾ ಹೆಸರಿನ ದೇವಸ್ಥಾನವಿದೆ.

ಭಗವಂತನಿಗೆ, ನೈವೇದ್ಯ ತೋರಿಸುವಾಗ ಪ್ರೀತಿ ಪ್ರೇಮದ ಭಾವದಲ್ಲಿ ತೋರಿಸಿದರೆ ಸಾಕು, ಅವನು ನಾನೇ ಬಂದು ತಿನ್ನುತ್ತೇನೆ ಎಂದಿದ್ದಾನೆ. ಅವನಿಗೆ ನಮ್ಮ ಭಾವದ ಹಸಿವಿದೆ.

9.27

ಯತ್ಕರೋಷಿ ಯದಶ್ನಾಸಿ, ಯಜ್ಜುಹೋಷಿ ದದಾಸಿ ಯತ್
ಯತ್ತಪಸ್ಯಸಿ ಕೌಂತೇಯ, ತತ್ಕುರುಷ್ವ ಮದರ್ಪಣಮ್।।27।।

ಎಲೈ ಅರ್ಜುನ ! ನೀನು ಯಾವ ಕೆಲಸ ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ ಯಾವುದನ್ನು ಹೋಮ ಮಾಡುತ್ತೀಯೋ, ಯಾವುದನ್ನು ದಾನ ಕೊಡುತ್ತೀಯೋ ಯಾವ ಸ್ವಧರ್ಮಾಚರಣೆ ರೂಪೀ ತಪಸ್ಸು ಮಾಡುವಿಯೋ ಅದೆಲ್ಲವನ್ನೂ ನನಗೆ ಅರ್ಪಿಸು.

ಎಲೈ  ಅರ್ಜುನ ನೀನು ಮಾಡುವ ಕರ್ಮವನ್ನು, ತಿನ್ನುವುದನ್ನು, ಮಾಡುವ ಹೋಮವನ್ನು, ಕೊಡುವ ದಾನವನ್ನು ಹಾಗೂ ಆಚರಿಸುವ ತಪಸ್ಸನ್ನು ಹೀಗೆ ಎಲ್ಲವನ್ನೂ ನನಗೆ ಅರ್ಪಣೆ ಮಾಡು.

ಕಾರ್ಯವನ್ನು ಮಾಡಿಸುವವನು ನೀನೇ, ಮಾಡುವವನು ನೀನೇ ಎಂಬ ಭಾವದಿಂದ ಕಾರ್ಯವನ್ನು ಮಾಡಬೇಕು.

9.28

ಶುಭಾಶುಭಫಲೈರೇವಂ(ಮ್), ಮೋಕ್ಷ್ಯಸೇ ಕರ್ಮಬಂಧನೈಃ
ಸಂನ್ಯಾಸಯೋಗಯುಕ್ತಾತ್ಮಾ, ವಿಮುಕ್ತೋ ಮಾಮುಪೈಷ್ಯಸಿ।।28।।

ಹೀಗೆ ಸಮಸ್ತ ಕರ್ಮಗಳನ್ನೂ ಭಗವದರ್ಪಣೆ ಮಾಡುವಂತಹ ಸಂನ್ಯಾಸಯೋಗದಿಂದ ಕೂಡಿದ ಮನಸ್ಸುಳ್ಳ ನೀನು ಶುಭಾಶುಭ ಫಲಕಾರಿ ಕರ್ಮ ಬಂಧನದಿಂದ ಮುಕ್ತನಾಗಿ ಹೋಗುವೆ ಮತ್ತು ಅವುಗಳಿಂದ ಮುಕ್ತನಾಗಿ ನನ್ನನ್ನೇ ಸೇರುವೆ.

ಹೀಗೆ ಸಮಸ್ತ ಕರ್ಮಗಳು ಭಗವಂತನಾದ ನನ್ನಲ್ಲಿ ಅರ್ಪಿತವಾಗುವಂತಹ ಸನ್ಯಾಸ ಯೋಗದಿಂದ ಕೂಡಿದ ಚಿತ್ತವುಳ್ಳ ನೀನು ಶುಭಾಶುಭಫಲ ರೂಪಿ ಕರ್ಮ ಬಂಧನದಿಂದ ಮುಕ್ತನಾಗುವೆ ಹಾಗೂ ನನ್ನನ್ನೇ ಹೊಂದುವೆ.

ಎಂಟನೇ ಅಧ್ಯಾಯದಲ್ಲಿ ಅರ್ಜುನ ಜ್ಞಾನಮಾರ್ಗದಿಂದ ಸನ್ಯಾಸ ಹೇಗೆ ದೊರೆಯುತ್ತದೆ ಎಂದಾಗ, ಭಗವಂತನು ಭಕ್ತಿ ಮಾರ್ಗದಿಂದ ಎಂದು ಹೇಳುತ್ತಾನೆ.

ನಾವು ಮಾಡಿದ ಕಾರ್ಯವನ್ನು ಭಗವಂತನಿಗೆ ಅರ್ಪಿಸಿದರೆ ಆ ಕಾರ್ಯದ ಫಲವೂ ಅವನಿಗೆ ಅರ್ಪಣೆಯಾಗುತ್ತದೆ. ಓಂ ಶ್ರೀ ಕೃಷ್ಣಾರ್ಪಣಮಸ್ತು ಎಂದು ಅವನಿಗೆ ಅರ್ಪಿಸಬೇಕು. ಯಾರು ಪೂರ್ಣ ಮನಸ್ಸಿನಿಂದ ಕರ್ಮಫಲವನ್ನು ಸಹ ನನಗೆ ಅರ್ಪಿಸುತ್ತಾನೋ ಅವನಿಗೆ ಕರ್ಮಫಲದ ಆಕಾಂಕ್ಷೆ ಬಂಧಿಸುವುದಿಲ್ಲ. ಅವನು ನನ್ನನ್ನೇ ಪ್ರಾಪ್ತಿ ಹೊಂದುತ್ತಾನೆ.

9.29

ಸಮೋಽಹಂ(ಮ್) ಸರ್ವಭೂತೇಷು,ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಂ(ಮ್) ಭಕ್ತ್ಯಾ,ಮಯಿ ತೇ ತೇಷು ಚಾಪ್ಯಹಮ್।।29।।

ನಾನು ಸಮಸ್ತ ಪ್ರಾಣಿಗಳಲ್ಲಿಯೂ ಸಮಭಾವದಿಂದ ವ್ಯಾಪಿಸಿದ್ದೇನೆ. ನನಗೆ ಯಾರೂ ಅಪ್ರಿಯರಾದವರೂ ಇಲ್ಲ ಮತ್ತು ಪ್ರಿಯರಾದವರೂ ಇಲ್ಲ. ಆದರೆ ಯಾವ ಭಕ್ತರು ನನ್ನನ್ನು ಪ್ರೀತಿ-ಭಕ್ತಿಗಳಿಂದ ಭಜಿಸುತ್ತಾರೆಯೋ ಅವರು ನನ್ನಲ್ಲಿ ಮತ್ತು ನಾನೂ ಸಹ ಅವರಲ್ಲಿ ಪ್ರತ್ಯಕ್ಷರೂಪದಿಂದ ಇರುತ್ತೇನೆ

ನಾನು ಸಮಸ್ತ ಪ್ರಾಣಿಗಳಲ್ಲಿ ಸಮಭಾವದಿಂದ ವ್ಯಾಪಿಸಿ ಇರುವೆನು. ನನಗೆ ಪ್ರಿಯರು, ಅಪ್ರಿಯರು ಯಾರೂ ಇಲ್ಲ. ಆದರೆ ಪ್ರೇಮದಿಂದ ನನ್ನನ್ನು ಭಜಿಸುವ ಭಕ್ತರು ನನ್ನಲ್ಲಿ ನೆಲೆಸಿದ್ದಾರೆ ಮತ್ತು ನಾನು ಅವರಲ್ಲಿ ಪ್ರತ್ಯಕ್ಷನಾಗಿ ಪ್ರಕಟನಾಗಿರುತ್ತೇನೆ.

ಭಗವಂತ ಈ ಶ್ಲೋಕದಲ್ಲಿ ಒಂದು ಅತ್ಯದ್ಭುತವಾದ ಮಾತನ್ನು ಹೇಳಿದ್ದಾನೆ. ಈ ಪೂರ್ಣ ಸೃಷ್ಟಿಯು ನನ್ನಿಂದಲೇ ಆಗಿದೆ. ಒಳ್ಳೆಯದು, ಕೆಟ್ಟದ್ದು, ಒಳ್ಳೆ ವ್ಯಕ್ತಿಯನ್ನು ನಾನೇ ಸೃಷ್ಟಿಸಿದೆ. ಅವರಲ್ಲಿ ಕೆಟ್ಟ ಗುಣಗಳು ಬಂದರೂ ಅದು ಸಹ ನನ್ನ ತಮೋಗುಣದಿಂದ. ಆದರೆ ನಾನು ಯಾರನ್ನು ಪ್ರೀತಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ, ಎಲ್ಲರೂ ನನ್ನವರೇ. ಒಬ್ಬ ತಾಯಿಗೆ ಇಬ್ಬರು ಮಕ್ಕಳಿದ್ದು, ಒಬ್ಬನು ಒಳ್ಳೆಯವನು, ಇನ್ನೊಬ್ಬನು ಕೆಟ್ಟವನು, ಎಂದಾದರೂ ತಾಯಿ ಮಾತ್ರ ಇಬ್ಬರನ್ನು ಪ್ರೀತಿಸುತ್ತಾಳೆ.

ಯಾರು ಅನನ್ಯ ಭಾವದಿಂದ, ನಿತ್ಯಯುಕ್ತಾ ನನ್ನನ್ನು ಪೂಜಿಸುತ್ತಾರೋ ಅವರಲ್ಲಿ ನಾನು, ನನ್ನಲ್ಲಿ ಅವರು ಪ್ರಕಟಗೊಳ್ಳುತ್ತಾರೆ. ನಮ್ಮ ಪೂಜ್ಯ ಸ್ವಾಮೀಜಿ ಹಾಗೂ ಸಿದ್ದಪುರುಷರಲ್ಲಿ ಭಗವಂತ ಪ್ರಕಟಗೊಳ್ಳುತ್ತಾನೆ. ಹಾಗಾಗಿ ನಮ್ಮಲ್ಲಿ ಸಿದ್ಧರನ್ನು, ಸಂತರನ್ನು ಭಗವಂತನಂತೆ ಪೂಜಿಸುವ ವಿಧಾನವಿದೆ.

9.30

ಅಪಿ ಚೇತ್ಸುದುರಾಚಾರೋ, ಭಜತೇ ಮಾಮನನ್ಯಭಾಕ್
ಸಾಧುರೇವ ಸ ಮಂತವ್ಯಃ(ಸ್), ಸಮ್ಯಗ್ವ್ಯವಸಿತೋ ಹಿ ಸಃ।।30।।

ಅತಿಶಯ ದುರಾಚಾರಿಯಾಗಿದ್ದರೂ ಕೂಡ ನನ್ನ ಭಕ್ತನಾಗಿ ನನ್ನನ್ನು ಭಜಿಸಿದರೆ ಅವನನ್ನು ಸಾಧು ಎಂದೇ ತಿಳಿಯಬೇಕು.ಏಕೆಂದರೆ ಅವನು ತನ್ನ ನಿರ್ಧಾರದಲ್ಲಿ ಸರಿಯಾಗಿ ನೆಲೆಸಿದ್ದಾನೆ. ಅರ್ಥಾತ್ ಪರಮೇಶ್ವರನ ಭಜನೆಗೆ ಸಮಾನವಾದುದು ಬೇರೇನೂ ಇಲ್ಲವೆಂದು ನಿಶ್ಚಯಿಸಿದ್ದಾನೆ.

ಅತಿಯಾದ ದುರಾಚಾರಿಯಾಗಿದ್ದರೂ ಕೂಡ ಅನನ್ಯ ಭಾವದಿಂದ ನನ್ನ ಭಕ್ತನಾಗಿ ನನ್ನನ್ನು ಭಜಿಸಿದರೆ ಅವನನ್ನು ಸಾಧುವೆಂದೇ ತಿಳಿಯಬೇಕು. ಏಕೆಂದರೆ ಅವನು ಯಥಾರ್ಥ ನಿಶ್ಚಯಿಯಾಗಿದ್ದಾನೆ. ಅರ್ಥಾತ್  ಪರಮೇಶ್ವರನ ಭಜನೆಗೆ ಸಮಾನವಾದದು ಬೇರೇನೂ ಇಲ್ಲವೆಂದು ಚೆನ್ನಾಗಿ ನಿಶ್ಚಯಿಸಿರುವನು.

ಪಾಪಿಗಳಲ್ಲಿ ಪಾಪಿಯಾದವನು ಸಹ ಅನನ್ಯ ಭಾವದಿಂದ ನನ್ನನ್ನು ಭವಿಸಿದರೆ ಅವನನ್ನು ಸಾಧು ಎಂದು ತಿಳಿಯಬೇಕು. ಅವನು ಹಿಂದೆ ಏನು ಆಗಿದ್ದ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬಾರದು. ಇನ್ನು ನನ್ನ ಜೀವನದಲ್ಲಿ ಪಾಪವನ್ನು ಮಾಡುವುದಿಲ್ಲವೆಂದು ಯಾರು ನಿಶ್ಚಯಿಸುತ್ತಾನೋ, ಅವನನ್ನು ಭಗವಂತ ಕ್ಷಮಿಸುತ್ತಾನೆ ಅಷ್ಟು ದಯಾಳು ನಮ್ಮ ಭಗವಂತ.

9.31

ಕ್ಷಿಪ್ರಂ(ಮ್) ಭವತಿ ಧರ್ಮಾತ್ಮಾ, ಶಶ್ವಚ್ಛಾಂತಿಂ(ನ್) ನಿಗಚ್ಛತಿ
ಕೌಂತೇಯ ಪ್ರತಿಜಾನೀಹಿ, ನ ಮೇ ಭಕ್ತಃ(ಫ್) ಪ್ರಣಶ್ಯತಿ।।31।।

ಅವನು ಬಹುಬೇಗ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತವಾದ ಪರಮ ಶಾಂತಿಯನ್ನು ಪಡೆಯುತ್ತಾನೆ. ಎಲೈ ಅರ್ಜುನ ! ನನ್ನ ಭಕ್ತನು ನಾಶವಾಗುವುದಿಲ್ಲ ಎಂಬ ದೃಢ ಸತ್ಯವನ್ನು ತಿಳಿದುಕೋ

ಅವನು ಬೇಗನೆ ಧರ್ಮಾತ್ಮನಾಗಿ ಸದಾ ಕಾಲ ಇರುವಂತಹ ಪರಮ ಶಾಂತಿಯನ್ನು ಪಡೆಯುತ್ತಾನೆ. ಎಲೈ  ಅರ್ಜುನನೇ! ನನ್ನ ಭಕ್ತನು ನಾಶವಾಗುವುದಿಲ್ಲ ಎಂಬ ಸತ್ಯವನ್ನು ನೀನು ನಿಶ್ಚಯವಾಗಿ ತಿಳಿ.

ಆ ಪಾಪಿಯಾದವನು ಇನ್ನು ಮುಂದೆ ಪಾಪ ಎಸೆಗುವುದಿಲ್ಲವೆಂದು ನಿಶ್ಚಯಿಸಿದ ತಕ್ಷಣ ಅವನು ಧರ್ಮಾತ್ಮನಾಗುತ್ತಾನೆ. ಅವನು ಪರಮಾಶಾಂತಿಯನ್ನು ಹೊಂದುತ್ತಾನೆ. ಹೇ ಅರ್ಜುನ! ನನ್ನ ಭಕ್ತನು ಎಂದೂ ನಾಶವನ್ನು ಹೊಂದುವುದಿಲ್ಲ. ಒಮ್ಮೆ ನಾವು ಈ ಗೀತೆಯನ್ನು ಹಿಡಿದು ಓದಿದರೆ, ಭಗವಂತನಿದ್ದಾನೆ ಎಂದು ತಿಳಿದರೆ, ನಾವು ಸಹ ಭಗವಂತನ ಭಕ್ತರಾಗುತ್ತೇವೆ. ನಾವು ಅವನ ಭಕ್ತರೆಂದ ಮೇಲೆ ನಾಶ ಹೊಂದಲು ಸಾಧ್ಯವಿಲ್ಲ.

ಒಮ್ಮೆ ಪೂಜ್ಯ ಬ್ರಹ್ಮಲಿಂಗ ಸರಸ್ವತಿಗಳು ಋಷಿಕೇಶದಲ್ಲಿ ಸತ್ಸಂಗ ನಡೆಸುತ್ತಿದ್ದಾಗ ನಮ್ಮ ವಿವೇಚಕರು ಸಹ ಅಲ್ಲಿ ಉಪಸ್ಥಿತರಿದ್ದರಂತೆ. ಇದು ಅವರ ಬಾಲ್ಯದ ಘಟನೆ. ಪೂಜ್ಯ ಗುರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಇಲ್ಲಿ ಕುಳಿತ ನಿಮ್ಮೆಲ್ಲರ ಮುಕ್ತಿ ನಿಶ್ಚಿತ. ನೀವು ಭಗವಂತನ ಪರಮಧಾಮಕ್ಕೆ ಹೋಗುತ್ತೀರಾ ಎಂದರಂತೆ. ಸಂತ ಕೋಟಿಗಳಲ್ಲಿ ಇವರ ಹೆಸರನ್ನು ಬಹಳ ಆದರದಿಂದ ತೆಗೆದುಕೊಳ್ಳಲಾಗುತ್ತದೆ. ಈ ತರಹದ ನುಡಿಗಳನ್ನು ಅವರ ಬಾಯಿಂದ ಕೇಳಿ ಜನ ಆಶ್ಚರ್ಯ ಚಕಿತರಾದರು. ಈಗೊಂದು ವಿಮಾನ ಬಂದು ನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತದೆ ಎಂದು ಭಾವಿಸಿದರು. ಏಕೆಂದರೆ ಗುರುಗಳ ವಾಕ್ಯ ಎಂದಿಗೂ ಸುಳ್ಳಾಗುವುದಿಲ್ಲ. ಪೂರ್ಣ ಸಭೆ ಮೌನದಿಂದ ಕುಳಿತಿತ್ತು. ನಂತರ ಸ್ವಾಮೀಜಿಗಳು ಆ ಧಾಮವನ್ನು ತಲುಪಲು ಎಷ್ಟು ಹೊತ್ತು ಹಿಡಿಯುತ್ತದೆ ಎನ್ನುವುದು ನಿಮ್ಮ ಕರ್ಮಗಳ ಮೇಲೆ ನಿಶ್ಚಿತವಾಗಿದೆ ಎಂದರು. ನೀವು ನಾಳೆಯೂ ಹೋಗಬಹುದು, ಈ ಜನ್ಮದಲ್ಲೇ ಹೋಗಬಹುದು ಅಥವಾ ಮುಂದಿನ ಜನ್ಮದಲ್ಲೂ ಹೋಗಬಹುದು ಎಂದರು. ಆದರೆ ನೀನು ಗೀತೆಯನ್ನು ಭಕ್ತಿಯಿಂದ ಓದುತ್ತಿದ್ದೀಯಾ ಎಂದಾದರೆ, ನೀನು ಹೋಗುವುದು ನಿಶ್ಚಿತ ಎಂದರಂತೆ. ನಾವು ಕೂಡ ಗೀತೆಯನ್ನು ಹಿಡಿದು, ಸರಿಯಾದ ದಾರಿಯಲ್ಲಿ ನಡೆಯುತ್ತಿರುವುದರಿಂದ ನಮ್ಮ ಮುಕ್ತಿಯೂ ನಿಶ್ಚಿತ. ಅದು ಯಾವಾಗ ಬೇಕಾದರೂ ಆಗಬಹುದು. ನನ್ನ ಭಕ್ತರು ನಾಶ ಹೊಂದುವುದಿಲ್ಲವೆಂದು ಭಗವಂತನೇ ಹೇಳಿದ್ದಾನೆ. ನ ಮೇ ಭಕ್ತಃ ಪ್ರಣಶ್ಯತಿ. ಅವನು ದುರ್ಗತಿ ಹೊಂದುವುದಿಲ್ಲ. ಇದು ನೂರಕ್ಕೆ ನೂರು ಸತ್ಯ. ಹಾಗಾಗಿ ಗೀತೆಯನ್ನು ಎಂದೂ ಕೈ ಬಿಡಬೇಡಿ ಎಂದು ವಿವೇಚಕರು ಹೇಳಿದರು. ಹೀಗಾಗಿ ಗೀತೆಯನ್ನು ಓದಿ ಮೋಕ್ಷ ಸಿಗದೇ ಹೋದರೂ, ಭಗವಂತನೇ ಹೇಳಿದಂತೆ, ಇದು ವ್ಯರ್ಥವಾಗುವುದಿಲ್ಲ.

ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಽಭಿಜಾಯತೇ ll (೬.೪೧)

ಅವನು ಪುಣ್ಯಶಾಲಿ ಶ್ರೀಮಂತರ ಮನೆಯಲ್ಲಿ ಜನ್ಮ ತಾಳುತ್ತಾನೆ. ಅಲ್ಲಿಂದ ಮತ್ತೆ ತನ್ನ ಹಾದಿಯನ್ನು ಮುಂದುವರೆಸುತ್ತಾನೆ.

9.32

ಮಾಂ(ಮ್) ಹಿ ಪಾರ್ಥ ವ್ಯಪಾಶ್ರಿತ್ಯ, ಯೇಽಪಿ ಸ್ಯುಃ(ಫ್) ಪಾಪಯೋನಯಃ
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ(ಸ್),ತೇಽಪಿ ಯಾಂತಿ ಪರಾಂ(ಙ್) ಗತಿಮ್।।32।।

ಏಕೆಂದರೆ, ಎಲೈ ಅರ್ಜುನ ! ಸ್ತ್ರೀಯರು, ವೈಶ್ಯರು, ಶೂದ್ರಾದಿಗಳು ಮತ್ತು ಪಾಪಯೋನಿಜರೂ ಸಹ ಯಾರೇ ಆಗಲಿ ಅವರೂ ಸಹ ನನಗೆ ಶರಣಾಗತರಾಗಿ ಪರಮ ಗತಿಯನ್ನು ಪಡೆಯುತ್ತಾರೆ.

ಅನೇಕರು ಈ ಶ್ಲೋಕದ ಅರ್ಥವನ್ನು ತಪ್ಪಾಗಿ ತಿಳಿದುಕೊಳ್ಳುತ್ತಾರೆ.

ಎಲೈ ಅರ್ಜುನ! ಸ್ತ್ರೀಯರು, ವೈಶ್ಯರು, ಶೂದ್ರರು, ಹಾಗೆ ಪಾಪ ಯೋನಿಗಳು ಅರ್ಥಾತ್ ಚಾಂಡಾಲಾದಿ ಯಾರೇ ಇರಲಿ ಅವರು ಕೂಡ ನನ್ನಲ್ಲಿ ಶರಣಾಗಿ ಪರಮ ಗತಿಯನ್ನೇ ಹೊಂದುತ್ತಾರೆ.

ಸ್ತ್ರೀಯರು, ವೈಶ್ಯರು, ಶೂದ್ರರು ಮತ್ತು ಪಾಪಯೋನಿಯಲ್ಲಿ ಜನಿಸಿದವರು ಒಂದೇ ಎಂದು ಹಲವರು ತಪ್ಪಾಗಿ ಭಾವಿಸಿರುತ್ತಾರೆ. ಆದರೆ ಇದರ ಅರ್ಥ ಹಾಗಲ್ಲ.

ಭಗವಂತ ಇಲ್ಲಿ ನೇರವಾಗಿ ಘೋಷಣೆ ಮಾಡುತ್ತಿದ್ದಾನೆ. ನನ್ನನ್ನು ಯಾರು ಬೇಕಾದರೂ ಪ್ರಾಪ್ತಿಗೊಳಿಸಿಕೊಳ್ಳಬಹುದೆಂದು. ನಾವು ಕೇಳಿರಬಹುದು, ಸ್ತ್ರೀ ಮೋಕ್ಷಕ್ಕೆ ಅರ್ಹಳಲ್ಲ, ಅವಳನ್ನು ಗುರು ಎಂದು ಭಾವಿಸಬಾರದು ಎಂದು. ಅವಳು ತನ್ನ ಗಂಡನ ಸೇವೆಯನ್ನು ಮಾಡಿದರಷ್ಟೇ ಅವಳ ಮುಕ್ತಿ ಎನ್ನುವ ತಪ್ಪು ಭಾವನೆಗಳಿದ್ದವು. ಸ್ತ್ರೀ ಮೋಕ್ಷ ಹೊಂದಬೇಕಾದರೆ ಅವಳು ಪುರುಷ ಜನ್ಮ ತಾಳಿ ಬರಬೇಕು ಎಂಬ ಕಲ್ಪನೆ ಇತ್ತು. ಆದರೆ ಭಗವಂತ ಇಲ್ಲಿ ಸ್ಪಷ್ಟಪಡಿಸುತ್ತಿದ್ದಾನೆ ಯಾವುದೇ ಯೋನಿಯಲ್ಲಿದ್ದರೂ, ನೀನು ನನ್ನ ಭಜನೆಯ ಮಹಿಮೆಯಿಂದ ನನ್ನನ್ನು ಪಡೆಯಬಹುದು ಎಂದನು.

9.33

ಕಿಂ(ಮ್) ಪುನರ್ಬ್ರಾಹ್ಮಣಾಃ(ಫ್) ಪುಣ್ಯಾ,ಭಕ್ತಾ ರಾಜರ್ಷಯಸ್ತಥಾ
ಅನಿತ್ಯಮಸುಖಂ(ಮ್) ಲೋಕಮ್,ಇಮಂ(ಮ್) ಪ್ರಾಪ್ಯ ಭಜಸ್ವ ಮಾಮ್।।33।।

ಪುಣ್ಯಶೀಲರಾದ ಬ್ರಾಹ್ಮಣರು ಮತ್ತು ರಾಜರ್ಷಿ ಭಕ್ತಜನರು ನನ್ನಲ್ಲಿ ಶರಣಾಗಿ ಪರಮಗತಿಯನ್ನು ಪಡೆಯುತ್ತಾರೆ ಎಂಬುದನ್ನು ಹೇಳುವುದೇನಿದೆ? ಅದಕ್ಕಾಗಿ ಸುಖರಹಿತ ಮತ್ತು ಕ್ಷಣಭಂಗುರವಾದ ಈ ಮನುಷ್ಯ ಶರೀರವನ್ನು ಪಡೆದ ನೀನು ನಿರಂತರವಾಗಿ ನನ್ನನ್ನೇ ಭಜಿಸು.

ಪುಣ್ಯಶೀಲರದ ಬ್ರಾಹ್ಮಣರು ಹಾಗೆಯೇ ರಾಜರ್ಷಿ ಭಕ್ತ ಜನರು ನನ್ನಲ್ಲಿ ಶರಣಾಗಿ ಪರಮ ಗತಿಯನ್ನು ಪಡೆಯುತ್ತಾರೆ ಎಂಬುದರಲ್ಲಿ ಹೇಳುವುದೇನಿದೆ? ಅದಕ್ಕಾಗಿ ಸುಖರಹಿತ ಮತ್ತು ಕ್ಷಣ ಭಂಗುರವಾದ ಈ ಮನುಷ್ಯ ಶರೀರವನ್ನು ಪಡೆದ ನೀನು ನಿರಂತರ ನನ್ನನ್ನೇ ಭಜಿಸು.

ಹೇ ಅರ್ಜುನ! ನೀನು ರಾಜರ್ಷಿಯ ಕುಲದಲ್ಲಿ ಹುಟ್ಟಿದವನು. ನಿನ್ನ ತಂದೆ ಪಾಂಡು ರಾಜರ್ಷಿ. ಬ್ರಾಹ್ಮಣ ಮತ್ತು  ರಾಜರ್ಷಿಯರು ಅಲ್ಲದೆ, ಯಾವುದೇ ಯೋನಿಯಲ್ಲಿ ಹುಟ್ಟಿದವರು ಸದಾ ನನನ್ನೇ ಭಜಿಸುವುದರಿಂದ ನನ್ನನ್ನೇ ಸೇರುತ್ತಾರೆ.

9.34

ಮನ್ಮನಾ ಭವ ಮದ್ಭಕ್ತೋ, ಮದ್ಯಾಜೀ ಮಾಂ(ನ್) ನಮಸ್ಕುರು
ಮಾಮೇವೈಷ್ಯಸಿ ಯುಕ್ತ್ವೈವಮ್, ಆತ್ಮಾನಂ(ಮ್) ಮತ್ಪರಾಯಣಃ।।34।।

ಕೇವಲ ಸಚ್ಚಿದಾನಂದಘನ ವಾಸುದೇವ ಪರಮಾತ್ಮನಾದ ನನ್ನಲ್ಲೇ ಅನನ್ಯ ಪ್ರೇಮದಿಂದ ನಿರಂತರ ದೃಢ ಮನಸ್ಸುಳ್ಳವನಾಗು, ನನ್ನನೇ ಶ್ರದ್ಧಾ-ಪ್ರೇಮಗಳಿಂದ, ನಿಷ್ಕಾಮ ಭಾವದಿಂದ, ನಾಮ, ಗುಣ, ಪ್ರಭಾವಗಳ ಶ್ರವಣ, ಕೀರ್ತನೆ, ಮನನ ಮತ್ತು ಅಧ್ಯಯನ- ಅಧ್ಯಾಪನದ ಮೂಲಕ ನಿರಂತರ ಭಜಿಸುತ್ತಿರು. ಕಾಯೇನ-ವಾಚಾ-ಮನಸಾ ಸರ್ವಸ್ವವನ್ನೂ ಅರ್ಪಿಸಿ ಅತ್ಯಂತ ಶ್ರದ್ಧಾ-ಭಕ್ತಿ-ಪ್ರೇಮದಿಂದ ವಿಹ್ವಲನಾಗಿ ನನ್ನ ಆರಾಧನೆ ಮಾಡು. ಎಲ್ಲರ ಆಶ್ರಯರೂಪೀ ವಾಸುದೇವನಾದ ನನಗೆ ನಮಸ್ಕಾರ ಮಾಡು. ಈ ಪ್ರಕಾರ ನನಗೆ ಶರಣಾಗಿ ನೀನು ಆತ್ಮನನ್ನು ನನ್ನಲ್ಲಿ ಒಂದೇ ಭಾವದಿಂದ ನಿಯುಕ್ತಗೊಳಿಸಿ ನನ್ನನ್ನೇ ಸೇರಿಕೊಳ್ಳುವೆ.

೯ನೇ ಅಧ್ಯಾಯದ ೩೪ನೇ ಶ್ಲೋಕ ಹಾಗೂ ೧೮ನೇ ಅಧ್ಯಾಯದ ೬೫ನೇ ಶ್ಲೋಕದ ಮೊದಲ ಎರಡು ಚರಣಗಳು ಒಂದೇ ಆಗಿವೆ.

ಮನ್ಮನಾ ಭವ ಮದ್ಭಕ್ತೋ ಮದ್ಯಾಜಿ ಮಾನ್ ನಮಸ್ಕುರು |
ಮಾಮೇವೈಶ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋತಿ ಮೇ || (೧೮. ೬೫)

ಇಲ್ಲಿ ಮಾಮ್ ಎಂದರೆ ಶ್ರೀಕೃಷ್ಣನೆಂದಲ್ಲ. ಅದು ನಮ್ಮ ಇಷ್ಟದೈವ. ಇಲ್ಲಿ ಶ್ರೀ ಕೃಷ್ಣ ಉವಾಚ ಎಂದು ಹೇಳಿಲ್ಲ. ಇಲ್ಲಿ ಶ್ರೀ ಭಗವಾನುವಾಚ ಎಂದು ಹೇಳಲಾಗಿದೆ. ಮಹಾಭಾರತದ ಶ್ಲೋಕಗಳಲ್ಲಿ ಭಗವದ್ಗೀತೆಯನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಶ್ರೀ ಕೃಷ್ಣ ಉವಾಚ, ಕೇಶವ ಉವಾಚ, ವಾಸುದೇವ ಉವಾಚ ಎಂದು ಹೇಳಲಾಗಿದೆ.

ವಿವೇಚಕರು, ಈ ಅಧ್ಯಾಯದ ವಿವೇಚನೆ ಮಾಡುವ ಯಾವ ಕ್ಷಮತೆಯೂ ತಮ್ಮಲ್ಲಿ ಇಲ್ಲವೆಂದಿದ್ದಾರೆ. ಈ ವಿವೇಚನೆ ಕೇವಲ ಪೂಜ್ಯ ಗುರುಗಳ ಆಶೀರ್ವಾದದಿಂದ, ಅವರಿಂದ ಕೇಳಿದ ಹಾಗೂ ತಮ್ಮ ಪೂಜ್ಯ ತಂದೆಯವರಿಂದ, ಸಂತರಿಂದ ಕೇಳಿ ಹೇಳಿದ ವಿವೇಚನೆಯಾಗಿದೆ ಎಂದಿದ್ದಾರೆ. ಏನಾದರೂ ಲೋಪ ದೋಷವಾಗಿದ್ದಲ್ಲಿ ಕ್ಷಮಿಸಿ ಎಂದಿದ್ದಾರೆ. ಇದರಲ್ಲಿ ಏನಾದರೂ ಮಹತ್ತರವಾಗಿ ಕಂಡ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜೀವನವನ್ನು  ಅರ್ಥಗೊಳಿಸಿಕೊಳ್ಳೋಣ ಎಂದು ಹೇಳುತ್ತಾ, ಈ ವಿವೇಚನೆಯನ್ನು ಶ್ರೀ ಕೃಷ್ಣನ ಪಾದಾರವಿಂದಗಳಿಗೆ ಅರ್ಪಿಸಲಾಯಿತು. ಒಂದು ನಿಮಿಷದ ಹರಿ ಸಂಕೀರ್ತನೆಯನ್ನು ಮಾಡಲಾಯಿತು. ನಂತರ ಪ್ರಶ್ನೋತ್ತರಗಳನ್ನು ತೆಗೆದುಕೊಳ್ಳಲಾಯಿತು.

ಶ್ರೀ ಯೋಗೇಶ್ವರ ಶ್ರೀ ಕೃಷ್ಣ ಭಗವಾನ್ ಕೀ ಜೈ.

ಓಂ ತತ್ಸತ್ ಶ್ರೀ ಕೃಷ್ಣಾರ್ಪಣಮಸ್ತು

ಪ್ರಶ್ನೋತ್ತರಗಳು

೧) ಚಂಚಲ ಅಕ್ಕ
ಪ್ರಶ್ನೆ : ಈರುಳ್ಳಿ ಬೆಳ್ಳುಳ್ಳಿ ಹಾಕಿದ ಪದಾರ್ಥವನ್ನು ಭಗವಂತನ ನೈವೇದ್ಯಕ್ಕೆ ಇಡಬಹುದೇ?
ಉತ್ತರ : ಇಲ್ಲ, ಖಂಡಿತ ಇಡಬಾರದು. ಅದರ ಬದಲು ಹಣ್ಣು, ದ್ರಾಕ್ಷಿ, ಗೋಡಂಬಿ, ಸಿಹಿಯನ್ನು ಇಡಬಹುದು.

೨) ಮಂದಾಕಿನಿ ಅಕ್ಕ
ಪ್ರಶ್ನೆ : ಶ್ಲೋಕಗಳಲ್ಲಿ ಭಾರತ ಎನ್ನುವುದರ ಅರ್ಥವೇನು?
ಉತ್ತರ : ಭಾರತ ಎಂದರೆ ಭರತವಂಶಿ. ಶಂತನುವಿನ ತಂದೆಯ ಹೆಸರು ಭರತ. ಅವನಿಂದ ಬಂದ ವಂಶವಾದ್ದರಿಂದ ಭಾರತ ಎನ್ನಲಾಗಿದೆ. ವೇದವ್ಯಾಸರು ಯುಧಿಷ್ಠಿರ ಮತ್ತು ಅರ್ಜುನ ಇಬ್ಬರಿಗೂ ಭಾರತ ಎಂದಿದ್ದಾರೆ. ದುರ್ಯೋಧನನನ್ನು ಸಹ ಭಾರತ ಎನ್ನುತ್ತಾರೆ. ಯಾಕೆಂದರೆ ಅವನು ಅದೇ ವಂಶಕ್ಕೆ ಸೇರಿದ್ದಾನೆ. ಪಾಂಡವ ಎಂದರೆ ಕೇವಲ ಅರ್ಜುನನಲ್ಲ. ಆ ಐದು ಜನರು ಪಾಂಡವರಾಗಿರುತ್ತಾರೆ.


ಸಮಾಪನ ಪ್ರಾರ್ಥನೆ, ಹನುಮಾನ್ ಚಾಲೀಸಾ ಪಠಣೆಯೊಂದಿಗೆ ಇಂದಿನ ವಿವೇಚನಾ ಸತ್ರವನ್ನು ಮುಕ್ತಾಯಗೊಳಿಸಲಾಯಿತು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಯ್) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ
ರಾಜವಿದ್ಯಾರಾಜಗುಹ್ಯಯೋಗೋ ನಾಮ ನವಮೋಽಧ್ಯಾಯಃ॥

ಇತಿ ಶ್ರೀಮದ್ಭಗವದ್ಗೀತಾರೂಪೀ ಉಪನಿಷದ್ ಬ್ರಹ್ಮವಿದ್ಯಾ ಹಾಗೂ ಯೋಗಶಾಸ್ತ್ರ ವಿಷಯದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ ರಾಜವಿದ್ಯಾ-ರಾಜಗುಹ್ಯಯೋಗ ಎಂಬ ಒಂಬತ್ತನೇ ಅಧ್ಯಾಯ ಸಂಪೂರ್ಣ