विवेचन सारांश
ಗೀತಾ ಸಾರ - ಭಗವದ್ಗೀತೆಯ 18 ಅಧ್ಯಾಯಗಳ ಸಂಕ್ಷಿಪ್ತ ರೂಪ
ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯ ನಂತರ ಗುರುವಂದನೆಯ ಪ್ರಾರ್ಥನೆಯೊಂದಿಗೆ ವಿವೇಚನೆಯನ್ನು ಆರಂಭಿಸಲಾಯಿತು. ಹಿಂದಿನ ವಿವೇಚನೆಯಲ್ಲಿ ಶ್ರೀಕೃಷ್ಣನು ನಗುನಗುತ್ತಲೇ ಅರ್ಜುನನ್ನು ಛೇಡಿಸಿದ್ದನ್ನು ನೋಡಿದೆವು. ಗುರು ಹಿರಿಯರ ರಕ್ತ ಸಿಕ್ತ ಕೈಗಳಿಂದ ತನ್ನ ಅಣ್ಣನ ರಾಜ್ಯಾಭಿಷೇಕವನ್ನು ಹೇಗೆ ಮಾಡುವುದು? ರಾಜ ಭೋಗಗಳನ್ನು ಹೇಗೆ ಅನುಭವಿಸುವುದು? ಇವೆಲ್ಲವೂ ಉಚಿತವೇ? ಇಂತಹ ಅನೇಕ ದುರ್ಬಲ ಆಲೋಚನೆಗಳಿಂದ ಅರ್ಜುನನ ಚೈತನ್ಯ ಕೆಲಸ ಮಾಡುತಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜುನ ಶ್ರೀ ಕೃಷ್ಣನನ್ನು, "ಶ್ರೀ ಕೃಷ್ಣ ನಾನು ನಿನ್ನಲ್ಲಿ ಶರಣಾಗಿದ್ದೇನೆ, ನನ್ನನ್ನು ನಿನಗೆ ಅರ್ಪಿಸಿದ್ದೇನೆ, ನನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡು ನನಗೆ ಯಾವುದು ಶ್ರೇಯಸ್ಕರ ಎಂದು ವಿವರಿಸಿ ಉಪದೇಶವನ್ನು ಮಾಡು" ಎಂದು ಬೇಡಿಕೊಳ್ಳುತ್ತಾನೆ.
ತಲೆಬಾಗಿ ಶರಣಾಗುವವರೆಗೂ ದೇವರ ಕೃಪೆ ಸಾಧ್ಯವಿಲ್ಲ. ಯುದ್ಧದ ವಿವರಗಳನ್ನು ಸಂಜಯ ಧೃತರಾಷ್ಟ್ರನಿಗೆ ತಿಳಿಸುವಾಗ ಶ್ರೀಕೃಷ್ಣ ಎಲ್ಲವನ್ನೂ ನಗುತ್ತಲೇ ಹೇಳುತ್ತಿದ್ದಾನೆ ಎನ್ನುತ್ತಾನೆ. ಅರ್ಜುನ ಶ್ರೀಕೃಷ್ಣರ ಗೆಳೆತನ ಇಂದು ನಿನ್ನೆಯದಲ್ಲ, ಬಹಳ ವರ್ಷಗಳದ್ದು. ಅರ್ಜುನ ಶ್ರೀ ಕೃಷ್ಣನ ಶಿಷ್ಯನಷ್ಟೇ ಅಲ್ಲ, ಆಪ್ತಮಿತ್ರನೂ ಹೌದು. ಇಬ್ಬರೂ ಅನೇಕ ಪ್ರದೇಶಗಳನ್ನು ಜೊತೆಯಾಗಿ ನೋಡಿದ್ದಾರೆ, ಸಂತೋಷವನ್ನು ಹಂಚಿಕೊಂಡಿದ್ದಾರೆ, ಜೊತೆಯಾಗಿ ಊಟ ಮಾಡಿದ್ದಾರೆ, ಒಟ್ಟಿಗೆ ವಿರಮಿಸಿದ್ದಾರೆ. ಹೀಗಾಗಿ ಶ್ರೀಕೃಷ್ಣ ಅತ್ಯಂತ ಪ್ರೇಮದಿಂದ ಅರ್ಜುನನಿಗೆ ಉಪದೇಶ ಮಾಡಲು ಪ್ರಾರಂಭಿಸುತ್ತಾನೆ.
2.11
ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ(ಮ್), ಪ್ರಜ್ಞಾವಾದಾಂಶ್ಚ ಭಾಷಸೇ
ಗತಾಸೂನಗತಾಸೂಂಶ್ಚ, ನಾನುಶೋಚಂತಿ ಪಂಡಿತಾಃ॥11॥
ಶ್ರೀ ಭಗವಂತನು ಹೇಳಿದನು - ಹೇ ಅರ್ಜುನ ! ನೀನು ಯಾರಿಗಾಗಿ ಶೋಕಿಸಬೇಕಾಗಿಲ್ಲವೋ ಅವರಿಗಾಗಿ ಶೋಕಿಸುತ್ತಿರುವೆ. ಹಾಗೂ ಪಂಡಿತರಂತೆ ಮಾತುಗಳನ್ನಾಡುತ್ತಿರುವೆ, ಆದರೆ ಯಾರ ಪ್ರಾಣಗಳು ಹೋಗಿರುವವೋ, ಅವರಿಗಾಗಿ ಮತ್ತು ಯಾರ ಪ್ರಾಣಗಳು ಹೋಗಿಲ್ಲವೋ ಅವರಿಗಾಗಿಯೂ ಪಂಡಿತರಾದವರು ಶೋಕಿಸುವುದಿಲ್ಲ.
ಒಮ್ಮೊಮ್ಮೆ ನಮ್ಮ ಮನಸ್ಸು ಪಂಡಿತರಂತೆ ಮಾತನಾಡುತ್ತದೆ. ನಮ್ಮ ಬುದ್ಧಿಗೆ ನಮ್ಮ ಮನಸ್ಸು ತಿಳಿವಳಿಕೆಯನ್ನು ಹೇಳುವ ಪ್ರಯತ್ನ ಮಾಡುತ್ತದೆ, ತರ್ಕಗಳನ್ನು ಹೇಳುತ್ತದೆ. ಅರ್ಜುನನು ಸಹ ತನ್ನ ತರ್ಕದಿಂದ, ಗುರು ಹಿರಿಯರ ರಕ್ತಸಿಕ್ತ ಕೈಗಳು, ತನ್ನ ಬಂಧು ಬಾಂಧವರ ಮೃತ್ಯು, ತನ್ನ ಪರಿವಾರದ ಸ್ತ್ರೀಯರ ವೈಧವ್ಯ, ಪುರುಷರಿಲ್ಲದೆ ಹಸ್ತಿನಾಪುರದ ಮೇಲೆ ದುಷ್ಟರ ದಾಳಿ, ವರ್ಣಸಂಕರದ ದುಷ್ಪರಿಣಾಮ ಎಲ್ಲವನ್ನು ಭಗವಂತನಲ್ಲಿ ಮಂಡಿಸುತ್ತಾನೆ. ಇದಕ್ಕೂ ಮೊದಲು ಅರ್ಜುನನು ನಿದ್ರೆ ಇಲ್ಲದೆ ಅನೇಕ ರಾತ್ರಿಗಳನ್ನು ಈ ವಿಚಾರಗಳಿಂದ ಕಳೆದಿದ್ದಾನೆ, ಇದೇ ವಿಚಾರಗಳನ್ನು ಅನೇಕ ಬಾರಿ ಶ್ರೀ ಕೃಷ್ಣನೊಡನೆಯೂ ಚರ್ಚಿಸಿದ್ದಾನೆ. ಅದಕ್ಕಾಗಿ ಶ್ರೀ ಕೃಷ್ಣನು ಶಾಂತಿದೂತನಾಗಿ ದುರ್ಯೋಧನನೊಂದಿಗೆ ಯುದ್ಧಪೂರ್ವ ಸಂಧಾನವನ್ನು ಮಾಡಿದ್ದಾನೆ. ಕೌರವರ, ಧೃತರಾಷ್ಟ್ರನ, ಭೀಷ್ಮಾಚಾರ್ಯರ ಹಾಗೂ ಅನೇಕ ಕುರುಹಿರಿಯರ ಸಮ್ಮುಖದಲ್ಲಿ ಶ್ರೀ ಕೃಷ್ಣನು ಯುದ್ಧದ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾನೆ. ಕೇವಲ 5 ಗ್ರಾಮಗಳ ಬೇಡಿಕೆಯನ್ನು ಇಟ್ಟು ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಅಹಂಕಾರಿ ದುರ್ಯೋಧನನು ಈ ಪ್ರಸ್ತಾಪವನ್ನು ನಿರಾಕರಿಸಿ, ಸೂಜಿಯ ತುದಿಯಲ್ಲಿ ಹಿಡಿಯುವಷ್ಟು ಮಣ್ಣನ್ನು ಸಹ ಪಾಂಡವರಿಗೆ ಕೊಡುವುದಿಲ್ಲ ಎಂದು ಹೇಳುತ್ತಾ, ಸಂಧಾನಕ್ಕಾಗಿ ಬಂದ ಶ್ರೀ ಕೃಷ್ಣನನ್ನೇ ಬಂಧಿಸುವ ಪ್ರಯತ್ನ ಮಾಡುತ್ತಾನೆ. ತನ್ನ ಲೀಲಾ ನಾಟಕದಿಂದ ಶ್ರೀ ಕೃಷ್ಣನು ತನ್ನನ್ನು ತಾನು ಉಳಿಸಿಕೊಳ್ಳುತ್ತಾನೆ. ಯುದ್ಧ ಆರಂಭಕ್ಕೂ ಮೊದಲು ಇವೆಲ್ಲ ನಡೆದಿರುತ್ತವೆ. ಯುದ್ಧ ನಿರ್ಣಯವಾಗಿ, ತನ್ನ ಗುರುಗಳನ್ನು ಪಿತಾಮಹರನ್ನು ಸಮ್ಮುಖದಲ್ಲಿ ಕಂಡು ಅರ್ಜುನನಿಗೆ ವಿಷಾದವಾಗುತ್ತದೆ. ಅರ್ಜುನನು ತನ್ನ ತರ್ಕಗಳನ್ನು, ವಿಷಾದವನ್ನು ಕಂಬನಿಯ ಕಣ್ಣುಗಳಿಂದ ಶ್ರೀ ಕೃಷ್ಣನಲ್ಲಿ ನಿವೇದಿಸಿಕೊಂಡು, ಮಾರ್ಗದರ್ಶನ ಮಾಡುವಂತೆ ಬೇಡಿಕೊಳ್ಳುತ್ತಾನೆ. ಅರ್ಜುನನ ಈ ಮಾತಿಗೆ ಭಗವಂತನು ಉಪದೇಶ ಮಾಡುತ್ತಾ, "ಅರ್ಜುನ ನೀನು ಯಾರಿಗಾಗಿ ಶೋಕಿಸ ಬಾರದೋ ಅವರಿಗಾಗಿ ಶೋಕಿಸುತ್ತಿರುವೆ, ಪಂಡಿತನಂತೆ ಮಾತನಾಡುತ್ತಿರುವೆ, ಮೃತರಾದವರ ಬಗ್ಗೆಯಾಗಲಿ, ಜೀವಂತ ಇರುವವರ ಬಗ್ಗೆಯಾಗಲಿ ಯಾಕೆ ದುಃಖಸುತ್ತಿರುವೆ?" ಎಂದು ಕೇಳುತ್ತಾನೆ. ಮೃತ್ಯು ಅಂತಿಮ ಸತ್ಯ. ಹುಟ್ಟಿದವರೆಲ್ಲರೂ ಒಂದಲ್ಲ ಒಂದು ದಿನ ಮರಣ ಹೊಂದಲೇಬೇಕು. ಅನೇಕ ಬಾರಿ ಪ್ರಳಯವಾಗಿದೆ. ಈ ಮೊದಲು ಮೃತ್ಯುಗಳಾಗಿವೆ, ಮುಂದೆಯೂ ಆಗುತ್ತವೆ. ಇದು ಶಾಶ್ವತ ಸತ್ಯ. ಇದನ್ನು ಸ್ವೀಕರಿಸಲೇಬೇಕು. ಜ್ಞಾನಿಗಳು, ಪಂಡಿತರು, ಜೀವನ ಮರಣದ ಬಗ್ಗೆ ಶೋಕಿಸುವುದಿಲ್ಲ.
ನ ತ್ವೇವಾಹಂ(ಞ್) ಜಾತು ನಾಸಂ(ನ್), ನ ತ್ವಂ(ನ್) ನೇಮೇ ಜನಾಧಿಪಾಃ
ನ ಚೈವ ನ ಭವಿಷ್ಯಾಮಃ(ಸ್), ಸರ್ವೇ ವಯಮತಃ(ಫ್) ಪರಮ್॥12॥
ನಾನು ಯಾವ ಕಾಲದಲ್ಲಿಯೂ ಇರಲಿಲ್ಲವೆಂಬುದಿಲ್ಲ ( ಅಂದರೆ ಯಾವಾಗಲೂ ಇದ್ದೆ ). ಹಾಗೆಯೇ ನೀನಾಗಲೀ, ಈ ರಾಜರುಗಳಾಗಲೀ ಇರಲಿಲ್ಲವೆಂಬುದಿಲ್ಲ ( ಅಂದರೆ ಇದ್ದರು ). ಹಾಗೆಯೆ ಇನ್ನು ಮುಂದೆಯೂ ನಾವೆಲ್ಲರೂ ಇರುವುದಿಲ್ಲವೆಂಬುದೇ ಇಲ್ಲ ( ಅಂದರೆ ಇರುತ್ತೇವೆ. )
ಭಗವಾನ್ ಶ್ರೀ ಕೃಷ್ಣನು ಹೇಳುತ್ತಾನೆ, "ನಿಜವಾಗಿ ಹೇಳುವುದಾದರೆ ನಾನಾಗಲಿ ನೀನಾಗಲಿ ಇಲ್ಲಿರುವ ರಾಜ ಮಹಾರಾಜರಾಗಲಿ ಹಿಂದೆ ಇರಲಿಲ್ಲ ಎಂಬುದಿಲ್ಲ, ಮುಂದೆಯೂ ಇರಲಾರೆವು ಎಂಬುದೂ ಇಲ್ಲ." ಇಂತಹ ಅದ್ಭುತವಾದ ಮಾತುಗಳನ್ನು ಭಗವಂತನು ಹೇಳುತ್ತಿದ್ದಾನೆ. ಈ ಶರೀರವು ನಿತ್ಯವಲ್ಲ, ಆತ್ಮವು ಸತ್ಯ. ಭಗವಂತನ ಅಂಶವಾದ ಆತ್ಮವು ಪ್ರಕೃತಿಯ ನಿಯಮಾನುಸಾರ ಜನ್ಮ ಪಡೆಯುತ್ತದೆ. ನಾನು ಬಂದಿಲ್ಲ, ನೀನು ಬಂದಿಲ್ಲ, ಇಲ್ಲಿ ಬಂದಿರುವುದು ಭಗವಂತನ ಅಂಶವಾದ ಆತ್ಮ. ಆತ್ಮ ಬರುತ್ತದೆ ಹೋಗುತ್ತದೆ. ಇದು ಪ್ರಕೃತಿಯ ನಿಯಮ. ಪ್ರಕೃತಿಯ ಈ ಆಟಕ್ಕಾಗಿ ನೀನೇಕೆ ಶೋಕಿಸುತ್ತೀಯಾ ಅರ್ಜುನ. ಈ ಆತ್ಮವು ಅನೇಕ ಜನ್ಮವನ್ನು ಪಡೆಯುತ್ತದೆ. ಇದರ ಬಗ್ಗೆ ನಾಲ್ಕನೇ ಅಧ್ಯಾಯದಲ್ಲಿ ಸವಿಸ್ತಾರವಾಗಿ ವರ್ಣಿಸಲಾಗಿದೆ. ಕರ್ಮದ ಫಲವಾಗಿ ಯಾವ ಯೋನಿಯಲ್ಲಿ ಜನ್ಮ ತಾಳುವುದು ಎಂದು ನಿರ್ಧರಿಸಲಾಗುತ್ತದೆ. ಇದರ ಬಗ್ಗೆ ಚಿಂತನೆಯನ್ನು ಮಾಡಬೇಕು. ನಮ್ಮ ಮನೆಯಲ್ಲಿ ಯಾರಾದರೂ ಮೃತರಾದರೆ, ನಮಗೆ ದುಃಖವಾಗುತ್ತದೆ, ಸ್ವೀಕರಿಸಲು ಕಠಿಣವಾಗುತ್ತದೆ, ನೆನಪುಗಳು ಕಣ್ಣೀರನ್ನು ತರಿಸುತ್ತವೆ. ಆದರೆ ಕರ್ಮ ಕಾರ್ಯಗಳು ಮುಗಿದ ತಕ್ಷಣ ಎಲ್ಲರೂ ತಮ್ಮ ತಮ್ಮ ಉದ್ಯೋಗಗಳಿಗೆ ತೆರಳುತ್ತಾರೆ. ದಿನ ಕಳೆದಂತೆ ದುಃಖದ ಭಾವನೆ ಕ್ಷೀಣಿಸುತ್ತದೆ, ತಿಂಗಳುಗಳ ನಂತರ ದುಃಖ ಕಡಿಮೆಯಾಗುತ್ತದೆ, ವರ್ಷಗಳ ನಂತರ ನೆನಪುಗಳು ಕಡಿಮೆಯಾಗಿ, ಅವರ ಪುಣ್ಯತಿಥಿಯ ದಿನ ಮಾತ್ರ ನೆನಪಿಗೆ ಬರುತ್ತಾರೆ. ಜೀವನದ ಸುಖ ದುಃಖಗಳು ನಶ್ವರ. ಸುಖ ಮತ್ತು ಆನಂದ ಬೇರೆ ಬೇರೆ. ಸುಖ-ದುಃಖಗಳು ಬಹಿರಂಗದಲ್ಲಿ ನಡೆಯುವ ಘಟನೆಗಳು. ಆನಂದವು ಅಂತರಂಗದ ಅನುಭೂತಿ. ಸುಖವನ್ನು ಅನುಭವಿಸಬಹುದು, ನಿಸರ್ಗರಮ್ಯ ಪ್ರದೇಶಗಳಿಗೆ ಹೋದರೆ ಕಣ್ಣಿಗೆ ಸುಖವೆನಿಸುತ್ತದೆ, ರುಚಿಯಾದ ಪಕ್ವಾನ್ನಗಳನ್ನು ಸೇವಿಸಿದರೆ ನಾಲಿಗೆಗೆ ಸುಖವೆನಿಸುತ್ತದೆ. ಅತಿಯಾದ ಸುಖವು ಅಂತ್ಯದಲ್ಲಿ ದುಃಖಕ್ಕೆ ಕಾರಣವಾಗುತ್ತದೆ. ಆನಂದವು ಚಿರಂತರ, ಶಾಶ್ವತ ಒಳಮನಸಿನ ಅನುಭೂತಿ. ಹಿಂದಿನ ವಿವೇಚನೆಯಲ್ಲಿ ಹೇಳಿದಂತೆ ಆನಂದಕ್ಕೆ ವಿಲೋಮ ಪದವಿಲ್ಲ, ಸುಖ-ದುಃಖ, ಹರ್ಷ-ಖೇದ, ಆಸೆ-ನಿರಾಶೆ, ವಿಲೋಮ ಶಬ್ದಗಳು. ಆನಂದವು ಒಂದು ಅನುಭೂತಿಯಾಗಿದ್ದು ಪದೇ ಪದೇ ಅನುಭವಿಸಿದರೆ ಅಮಿತವಾದ ಪರಮಾನಂದವಾಗುತ್ತದೆ. ಸುಖವಾಗಲಿ ದುಃಖವಾಗಲಿ ಸ್ವಲ್ಪ ಸಮಯದ ನಂತರ ಪರಿವರ್ತನೆಯಾಗುತ್ತವೆ. ಹೀಗೆಯೇ ಯಾರೇ ಬರಲಿ ಅಥವಾ ಹೋಗಲಿ ಅದಕ್ಕಾಗಿ ದುಃಖಿಸುವುದು ಪಂಡಿತರ ಲಕ್ಷಣವಲ್ಲ. ನಿನ್ನ ಎದುರಾಳಿಗಳಾಗಿ ನಿಂತಿರುವ ಗುರು ಹಿರಿಯರು ನಿನ್ನ ಬಾಣಗಳಿಂದ ಮೃತರಾಗಬಹುದು ಆಗದೆ ಇರಬಹುದು. ಆದರೆ ಅವರ ಮೃತ್ಯು ಸಮಯ ನಿಶ್ಚಿತವಾಗಿದೆ. ನೀನಾಗಲಿ ನಾನಾಗಲಿ ಇದನ್ನು ಬಲಿಸಲು ಸಾಧ್ಯವಿಲ್ಲ. ಹೀಗೆಂದು ಪರಮ ಪುರುಷನಾದ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ.
11 ನೇ ಅಧ್ಯಾಯದಲ್ಲಿ ಹೇಳಿದಂತೆ ಇವರ ಮೃತ್ಯುವನ್ನು ನಾನಾಗಲೇ ನಿರ್ಧರಿಸಿದ್ದೇನೆ. ನೀನು ಕೇವಲ ಅವರ ಮೇಲೆ ಬಾಣ ಪ್ರಯೋಗ ಮಾಡು. ಅವರ ಮೃತ್ಯುವಿಗೆ ನೀನು ನೆಪ ಮಾತ್ರ. ಇವರೆಲ್ಲರನ್ನು ಜಯಿಸಿ ಶೂರನಾಗು. ವಿಧಿಯ ವಿಧಾನವು ನಿಶ್ಚಿತವಾಗಿದೆ. ಹಣೆಬರಹವು ಒಮ್ಮೊಮ್ಮೆ ಆಶ್ಚರ್ಯಚಕತರನ್ನಾಗಿಸುತ್ತದೆ.
11 ನೇ ಅಧ್ಯಾಯದಲ್ಲಿ ಹೇಳಿದಂತೆ ಇವರ ಮೃತ್ಯುವನ್ನು ನಾನಾಗಲೇ ನಿರ್ಧರಿಸಿದ್ದೇನೆ. ನೀನು ಕೇವಲ ಅವರ ಮೇಲೆ ಬಾಣ ಪ್ರಯೋಗ ಮಾಡು. ಅವರ ಮೃತ್ಯುವಿಗೆ ನೀನು ನೆಪ ಮಾತ್ರ. ಇವರೆಲ್ಲರನ್ನು ಜಯಿಸಿ ಶೂರನಾಗು. ವಿಧಿಯ ವಿಧಾನವು ನಿಶ್ಚಿತವಾಗಿದೆ. ಹಣೆಬರಹವು ಒಮ್ಮೊಮ್ಮೆ ಆಶ್ಚರ್ಯಚಕತರನ್ನಾಗಿಸುತ್ತದೆ.
ಇದೇ ಸಂದರ್ಭದಲ್ಲಿ ವಿವೇಚಕರುಒಂದು ಪ್ರಸಂಗವನ್ನು ವರ್ಣಿಸುತ್ತಾರೆ. ಒಮ್ಮೆ ಸ್ನೇಹಿತರೆಲ್ಲರೂ ಸೇರಿ ಎರಡು ವಾಹನಗಳಲ್ಲಿ ಪ್ರವಾಸಕ್ಕೆ ಹೊರಟಿರುತ್ತಾರೆ. ಅದರಲ್ಲಿ ಒಬ್ಬ ಸ್ವಲ್ಪ ಸಮಯದ ನಂತರ ತನ್ನ ವಾಹನವನ್ನು ಬದಲಿಸುತ್ತಾನೆ. ಆಕಸ್ಮಿಕವಾಗಿ ಆದ ಭೀಕರ ಅಪಘಾತದಲ್ಲಿ ಮೃತನಾಗುತ್ತಾನೆ. ಆ ಮನುಷ್ಯನ ಮೃತ್ಯು ಈ ವಾಹನದ ಅಪಘಾತದಿಂದ ಆಗಬೇಕೆಂಬುದು ವಿಧಿಯ ನಿರ್ಣಯವಾಗಿತ್ತು. ಹಾಗಾಗಿ ಅವನಿಗೆ ವಾಹನ ಬದಲಿಸುವ ಪ್ರೇರಣೆಯಾಯಿತು. ಇನ್ನೊಂದು ಪ್ರಸಂಗ. ಹಿಮಾಲಯದಿಂದ ವ್ಯಕ್ತಿಯನ್ನು ಕರೆತರಲು ಯಮದೂತನಿಗೆ ಆದೇಶವಿರುತ್ತದೆ. ಆದರೆ ದಕ್ಷಿಣ ದೇಶದ ಆ ವ್ಯಕ್ತಿಯು ಹಿಮಾಲಯದಲ್ಲಿ ಹೇಗಿರುತ್ತಾನೆ ಎಂಬ ಸಂದೇಹ ಯಮದೂತನಿಗೆ. ಆ ವ್ಯಕ್ತಿಗೆ ಮರಣದ ಸೂಚನೆ ಸಿಕ್ಕಿ, ಅದರಿಂದ ತಪ್ಪಿಸಿಕೊಳ್ಳಲು ಹಿಮಾಲಯದ ಗುಹೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ. ದಕ್ಷಿಣ ದೇಶದ ವ್ಯಕ್ತಿಯು ಹಿಮಾಲಯದ ಗುಹೆಯಲ್ಲಿ ಸಿಕ್ಕದ್ದರಿಂದ ಯಮದೂತನಿಗೆ ಆಶ್ಚರ್ಯವಾಗುತ್ತದೆ. ಆ ವ್ಯಕ್ತಿಯ ಮರಣ ಹಿಮಾಲಯದ ಗುಹೆಯಲ್ಲಿ ನಿಶ್ಚಿತವಾದ ಕಾರಣ ಅವನ ಬುದ್ಧಿಯು ಅವನನ್ನು ಅಲ್ಲಿಗೆ ಕರೆತಂದಿತ್ತು.
ದೇಹಿನೋಽಸ್ಮಿನ್ಯಥಾ ದೇಹೇ, ಕೌಮಾರಂ(ಯ್) ಯೌವನಂ(ಞ್) ಜರಾ
ತಥಾ ದೇಹಾಂತರಪ್ರಾಪ್ತಿಃ(ರ್), ಧೀರಸ್ತತ್ರ ನ ಮುಹ್ಯತಿ ॥2.13॥
ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ, ಯೌವನ ಮತ್ತು ವೃದ್ಧಾವಸ್ಥೆಗಳುಂಟಾಗುತ್ತವೆಯೋ ಅಂತೆಯೇ ಬೇರೆ ಶರೀರವು ಪ್ರಾಪ್ತವಾಗುತ್ತದೆ. ಆ ವಿಷಯದಲ್ಲಿ ಧೀರ ಪುರುಷನು ಮೋಹಿತನಾಗುವುದಿಲ್ಲ.
ಈ ದೇಹದಲ್ಲಿರುವ ಜೀವಾತ್ಮನಿಗೆ ಬಾಲ್ಯ, ಕೌಮಾರ್ಯ, ಯೌವನ, ಮುಪ್ಪು, ಇವೆಲ್ಲವುಗಳು ಹೇಗೆ ಬರುತ್ತವೆಯೋ ಹಾಗೆಯೇ ದೇಹಾಂತ್ಯದ ನಂತರ ಅದು ಶರೀರವನ್ನು ಬದಲಾಯಿಸುತ್ತದೆ. ಜ್ಞಾನಿಯಾದವರು ಈ ವಿಷಯದ ಬಗ್ಗೆ ಮೋಹಗೊಳ್ಳುವದಿಲ್ಲ. ಜ್ಞಾನಿಗಳಿಗೆ ಇದರ ಬಗ್ಗೆ ತಿಳಿದಿರುತ್ತದೆ. ಈ ಶಾಶ್ವತ ಸತ್ಯದ ಅರಿವು ಇರುವವರಿಗೆ ಮರಣದ ಭಯ ಇರುವುದಿಲ್ಲ. ನಮ್ಮ ಪೂರ್ವಜರು, ಋಷಿಮುನಿಗಳು ಅನೇಕ ಕಥೆಗಳ ಸಹಾಯದಿಂದ ಶಾಶ್ವತ ಸತ್ಯದ ತಿಳಿವಳಿಕೆಯನ್ನು ಮನೆಮನೆಗೆ ಮುಟ್ಟಿಸಿದ್ದಾರೆ.
ಅಲ್ಲಾ ಉದ್ದಿನ್ ಖಿಲ್ಜಿಯು ತನ್ನಲ್ಲಿ ಮೋಹಗೊಂಡ ವಿಷಯ ಅರಿತ ರಾಣಿ ಪದ್ಮಿನಿಯು ಮರಣಕ್ಕೆ ಹೆದರದೆ ಅಗ್ನಿಗೆ ಆಹುತಿಯಾಗಿ ಜೋಹರ್ ಮಾಡಿಕೊಳ್ಳುತ್ತಾಳೆ. ಔರಂಗಜೇಬ ಶತಪ್ರಯತ್ನ ಮಾಡಿದರೂ ಛತ್ರಪತಿ ಸಂಭಾಜಿ ಮಹಾರಾಜನನ್ನು ಧರ್ಮ ಪರಿವರ್ತನೆಗೊಳಿಸಲು, ಶರಣಾಗತನಾಗಿಸಲು ಸಾಧ್ಯವಾಗಲಿಲ್ಲ. ಛತ್ರಪತಿ ಸಂಭಾಜಿಯು ಒತ್ತಡಕ್ಕೆ ಬಗ್ಗಲಿಲ್ಲ, ಹೆದರಲಿಲ್ಲ, ಯುದ್ಧ ಮಾಡಲು ಹಿಂಜರಿಯಲಿಲ್ಲ. ಛತ್ರಪತಿಯ ಒಂದೊಂದು ಅಂಗವನ್ನು ಬಿಸಿಯಾದ ಕಬ್ಬಿಣದ ಸಲಾಕೆಯ ಸಹಾಯದಿಂದ ಘಾಸಿಗೋಳಿಸಲಾಯಿತು, ಚರ್ಮವನ್ನು ಕೀಳಲಾಯಿತು, ಬೆರಳುಗಳನ್ನು ಕತ್ತರಿಸಲಾಯಿತು. ಕೊನೆಯ ಕ್ಷಣದಲ್ಲಿಯೂ, ಮರಣಯಾತನೆಯಾದರೂ ಸಹ ಅವನು ಇಸ್ಲಾಮ್ ಧರ್ಮವನ್ನು ಸ್ವೀಕರಿಸಲಿಲ್ಲ. "ಈಗ ಮೃತನಾದರೂ ನಾನು ಬೇರೆ ಶರೀರವನ್ನು ಪಡೆದು, ಮತ್ತೆ ನಿನ್ನನ್ನು ಎದುರಿಸುತ್ತೇನೆ" ಎಂದು ಅವನು ಹೇಳುತ್ತಾನೆ. ಇಂತಹ ಅನೇಕ ವೀರ ಶೂರರ ಕಥೆಗಳು ಪ್ರಚಲಿತವಾಗಿವೆ. ದೇಶಪ್ರೇಮಿಗಳಾದ ಭಗತ್ ಸಿಂಗ್, ಸುಖದೇವ್, ರಾಜ್ ಗುರು ಮಾತೃಭೂಮಿಗಾಗಿ ನಸುನಗುತ್ತಲೇ ನೇಣಿಗೆ ಶರಣಾಗುತ್ತಾರೆ. ಚಿಕ್ಕ ಮಕ್ಕಳಾದ ಜೋರಾವರ್ ಸಿಂಗ್ ಫತೇ ಸಿಂಗರು ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಗುರುಗೋವಿಂದರ ಮಕ್ಕಳಾದ ಅಜಿತ ಸಿಂಗ ಮತ್ತು ಜುಜಾರ್ ಸಿಂಗ ಯುದ್ಧದಲ್ಲಿ ವೀರಮರಣ ಹೊಂದಿದ್ದಾರೆ. ಅಜ್ಜಿಯೊಂದಿಗೆ ಸಿಕ್ಕಿಬಿದ್ದ ಈ ಚಿಕ್ಕ ಮಕ್ಕಳನ್ನು ಸೆರೆ ಹಿಡಿಯುತ್ತಾರೆ. ಮರುದಿನ ಅಜ್ಜಿಗೆ ಮರಣದಂಡನೆಯ ಶಿಕ್ಷೆ ನಿಗದಿಯಾಗಿರುತ್ತದೆ. ರಾತ್ರಿಯೆಲ್ಲಾ ಅಜ್ಜಿಯು ಆ ಇಬ್ಬರು ಚಿಕ್ಕ ಮಕ್ಕಳಿಗೆ ವೀರಶೂರರ ಕಥೆಗಳ ಮೂಲಕ ಮರಣಕ್ಕೆ ಹೆದರದಿರಿ ಎಂದು ಹೇಳುತ್ತಾಳೆ. ರಾಜ್ಯದ ಸಿಂಹಾಸನದ ಆಸೆಯನ್ನು ತೋರಿಸಿದರೂ, ಆ ಇಬ್ಬರು ಚಿಕ್ಕ ಮಕ್ಕಳು ಇಸ್ಲಾಮ್ ಧರ್ಮವನ್ನು ಸ್ವೀಕರಿಸುವುದಿಲ್ಲ. ಚಿಕ್ಕ ಮಕ್ಕಳಾದ ಕಾರಣ ಅವರಿಗೆ ಮೃತ್ಯುದಂಡ ಕೊಡುವಂತಿಲ್ಲ. ಅದಕ್ಕಾಗಿ ಗೋಡೆಯಲ್ಲಿ ಹುಗಿಯುವ ಶಿಕ್ಷೆಯನ್ನು ಕೊಡುತ್ತಾರೆ. ಹುಲಿಯಂತಹ ಮಕ್ಕಳು ಎದೆಯುಬ್ಬಿಸಿ ನಸುನಗುತ್ತಲೇ ಶಿಕ್ಷೆಯನ್ನು ಸ್ವೀಕರಿಸುತ್ತಾರೆ. ದೊಡ್ಡವನ ಕಣ್ಣಲ್ಲಿ ಕಂಬನಿ ಕಂಡ ಚಿಕ್ಕವನು, "ಏಕೆ ಮೃತ್ಯುವಿಗೆ ಹೆದರಿದೆಯಾ" ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ದೊಡ್ಡವನು, "ನಾನು ಮೃತ್ಯುವಿಗೆ ಹೆದರುವುದಿಲ್ಲ, ಮೃತ್ಯು ನನಗೆ ಹೆದರುತ್ತದೆ." ಎನ್ನುತ್ತಾನೆ.
ಮಾತ್ರಾಸ್ಪರ್ಶಾಸ್ತು ಕೌಂತೇಯ, ಶೀತೋಷ್ಣಸುಖದುಃಖದಾಃ
ಆಗಮಾಪಾಯಿನೋಽನಿತ್ಯಾಃ(ಸ್), ತಾಂಸ್ತಿತಿಕ್ಷಸ್ವ ಭಾರತ॥14॥
ಹೇ ಕುಂತೀಪುತ್ರನೇ ! ಶೀತೋಷ್ಣಗಳನ್ನೂ ಮತ್ತು ಸುಖ-ದುಃಖಗಳನ್ನೂ ಕೊಡುವಂತಹ ಇಂದ್ರಿಯ ಮತ್ತು ವಿಷಯಗಳ ಸಂಯೋಗವಾದರೋ ಉತ್ಪತ್ತಿ - ವಿನಾಶಶೀಲ ಮತ್ತು ಅನಿತ್ಯವಾಗಿದೆ; ಆದ್ದರಿಂದ ಎಲೈ ಅರ್ಜುನ ! ಅವುಗಳನ್ನು ನೀನು ಸಹಿಸಿಕೋ.
ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಕೌoತೇಯ, ಅಂದರೆ ಕುಂತಿ ಪುತ್ರ, ಎಂದು ಸಂಬೋಧಿಸಿದ್ದಾನೆ. ಇಂದ್ರಿಯ ವಿಷಯಗಳು, ಅಂದರೆ ಶೀತ-ಉಷ್ಣ, ಸುಖ-ದುಃಖ, ಕ್ಷಣ ಕಾಲ ಕಾಣಿಸಿಕೊಳ್ಳುತ್ತವೆ. ಯಾವುದು ಬರುತ್ತದೆಯೋ ಅದು ಹೋಗುತ್ತದೆ. ಯಾವುದು ಹೋಗುತ್ತದೆಯೋ ಅದು ಬರುತ್ತದೆ. ಈ ಆಗು ಹೋಗುಗಳು ನಡೆಯುತ್ತಲೇ ಇರುತ್ತವೆ. ಇವು ಶಾಶ್ವತವಲ್ಲ. ಇವುಗಳೆಲ್ಲವನ್ನು ಸಹಿಸು. ನಿನ್ನ ಬಂಧು ಬಾಂಧವರು, ಹಿರಿಯರು, ಗುರುಗಳು, ಮರಣ ಹೊಂದುತ್ತಾರೆ ಎಂದು ಏಕೆ ಚಿಂತಿಸುವೆ. ಗಂಗಾ ನದಿಯಲ್ಲಿಯ ನೀರು ತಂಪಾದ ಕಾರಣ ನೀರೊಳಗೆ ಇಳಿಯಲು ಹೆದರುತ್ತೇವೆ, ಒಮ್ಮೆ ಇಳಿದ ನಂತರ ಹೊರಗೆ ಬರಬೇಕೆನಿಸುವುದಿಲ್ಲ. ಹರಿಯುವ ನದಿಯಲ್ಲಿ ಸ್ನಾನ ಮಾಡುವುದೇ ಒಂದು ಆನಂದ. ದೇಹಕ್ಕೆ ಆ ತಂಪಸ್ಪರ್ಶವು ಕ್ಷಣಿಕ. ಅದೇ ರೀತಿ ಇಲ್ಲಿನ ಆಗುಹೋಗುಗಳು ಕ್ಷಣಿಕ. ಎಂದು ಶ್ರೀ ಕೃಷ್ಣ ಹೇಳುತ್ತಾನೆ.
ಯಂ(ಮ್) ಹಿ ನ ವ್ಯಥಯಂತ್ಯೇತೇ, ಪುರುಷಂ(ಮ್) ಪುರುಷರ್ಷಭ
ಸಮದುಃಖಸುಖಂ(ನ್) ಧೀರಂ(ಮ್), ಸೋಽಮೃತತ್ವಾಯ ಕಲ್ಪತೇ॥15॥
ಏಕೆಂದರೆ, ಹೇ ಪುರುಷಶ್ರೇಷ್ಠನೇ ! ಸುಖದುಃಖಗಳನ್ನು ಸಮಾನವಾಗಿ ತಿಳಿಯುವ ಯಾವ ಧೀರ ಪುರುಷನನ್ನು ಈ ಇಂದ್ರಿಯ ಮತ್ತು ವಿಷಯಗಳ ಸಂಯೋಗವು ವ್ಯಾಕುಲಗೊಳಿಸುವುದಿಲ್ಲವೋ ಅವನು ಮೋಕ್ಷಕ್ಕೆ ಯೋಗ್ಯನಾಗುತ್ತಾನೆ.
ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನನ್ನು ಪುರುಷಶ್ರೇಷ್ಠ ಎಂದು ಕರೆದಿದ್ದಾನೆ. ಸುಖದಲ್ಲಿ ದುಃಖದಲ್ಲಿ ಸಮಭಾವದಿಂದ ಇರುವನು ಜ್ಞಾನಿ ಎಂದೆನಿಸಿಕೊಳ್ಳುತ್ತಾನೆ, ಇಂದ್ರಿಯಗಳ ಈ ಉಭಯ ಸ್ಥಿತಿಯಲ್ಲಿಯೂ ಯಾರು ವಿಚಲಿತನಾಗುವುದಿಲ್ಲವೋ ಅಂತಹವನು ಅಮರತ್ವ ಪಡೆಯಲು ಅರ್ಹನಾಗುತ್ತಾನೆ. ಆತನಿಗೆ ಮೃತ್ಯು ಅಟಲ ಎಂಬ ಅರಿವು ಮೂಡುತ್ತದೆ. ಮರಣ ಸಮಯ ಬಂದಾಗ ಭಯಭೀತಗೊಳ್ಳದೆ ಮರಣವನ್ನು ಎದುರಿಸುತ್ತಾನೆ. ನಸುನಗುತ್ತಲೆ ಮೃತ್ಯುವನ್ನು ಬರಮಾಡಿಕೊಳ್ಳುತ್ತಾನೆ. ಹೊಸ ಶರೀರದ ಕಲ್ಪನೆಯಿಂದ ಪುಳಕಿತಗೊಳ್ಳುತ್ತಾನೆ. ಏಕೆಂದರೆ ಜೀವನ ಅನಿತ್ಯ, ಕ್ಷಣಿಕ, ಈ ಜೀವನದ ಬಗ್ಗೆ ವ್ಯಥೆ ಪಡಬೇಕಿಲ್ಲ ಎಂದು ಅವನಿಗೆ ತಿಳಿದಿರುತ್ತದೆ.
ನಾಸತೋ ವಿದ್ಯತೇ ಭಾವೋ, ನಾಭಾವೋ ವಿದ್ಯತೇ ಸತಃ
ಉಭಯೋರಪಿ ದೃಷ್ಟೋಽನ್ತಃ(ಸ್), ತ್ವನಯೋಸ್ತತ್ತ್ವದರ್ಶಿಭಿಃ॥16॥
ಅಸದ್ವಸ್ತುವಿಗಾದರೋ ಇರುವಿಕೆಯು ಇರುವುದಿಲ್ಲ ಮತ್ತು ಸದ್ವಸ್ತುವಿಗೆ ಅಭಾವವೆಂಬುದಿಲ್ಲ ಈ ಪ್ರಕಾರವಾಗಿ ಇವೆರಡರ ತತ್ವವೂ ತತ್ವಜ್ಞಾನಿಗಳಾದ ಪುರುಷರ ಮೂಲಕ ನೋಡಲ್ಫಟ್ಟಿದೆ.
ಇಲ್ಲಿ ಶ್ರೀ ಕೃಷ್ಣನು, ಅಸತ್ಯವಾದುದಕ್ಕೆ ಅಸ್ತಿತ್ವವಿಲ್ಲ, ಅಸತ್ಯದ ಭಾವ ವಿದ್ಯಮಾನದಲ್ಲಿಲ್ಲ, ಸತ್ಯದ ಅಭಾವ ವಿದ್ಯಮಾನದಲ್ಲಿಲ್ಲ. ಅಂದರೆ ಭಾವ ಅಭಾವ ವಿದ್ಯಮಾನದಲ್ಲಿಲ್ಲ. ಮಹಾಪುರುಷರು ಈ ಎರಡು ಭಾವಗಳ ಅನುಭವ ಪಡೆದಿದ್ದಾರೆ. ಈ ದೇಹದಲ್ಲಿ ಶಾಶ್ವತವೂ ಅಮರವೂ ಆದ ಆತ್ಮವು ಬರುತ್ತದೆ ಮತ್ತು ಹೋಗುತ್ತದೆ. ನಾವು ಎಂದರೆ ದೇಹವಲ್ಲ ಆತ್ಮ, ದೇಹವು ನಶ್ವರ ಅದು ಒಂದು ದಿನ ಬಿಟ್ಟು ಹೋಗುತ್ತದೆ, ಹೀಗಾಗಿ ನಾವು ದೇಹದ ಮೇಲೆ ಚಿಂತಿಸದೆ ಆತ್ಮದ ಮೇಲೆ ಚಿಂತನೆಯನ್ನು ಮಾಡಬೇಕು. ಆತ್ಮ ವಿಶುದ್ಧ ರೂಪದಿಂದ ವಿಮುಕ್ತವಾಗಲು ಪ್ರಯತ್ನಿಸಬೇಕು. ಈ ಆತ್ಮದೊಂದಿಗೆ ನಮ್ಮ ಮನಸ್ಸು ಬುದ್ಧಿ ಅಹಂಕಾರ ಅಂಟಿಕೊಂಡರೆ ಮತ್ತೆ ಪುನರ್ಜನ್ಮ ಖಚಿತ. ಈ ಮುಳ್ಳುಗಳಿಂದ ಆತ್ಮವನ್ನು ಶುದ್ಧಗೊಳಿಸಿದರೆ ಆತ್ಮವು ಮುಕ್ತವಾಗುತ್ತದೆ. ಜ್ಞಾನಿಗಳಾದ ಋಷಿಮುನಿಗಳು ಆತ್ಮದ ಮುಕ್ತಿಯ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ಅವರು ಮರಣಕ್ಕಾಗಿ ಶೋಕಿಸುವುದಿಲ್ಲ, ಚಿಂತೆಯನ್ನು ಮಾಡುವುದಿಲ್ಲ. ಸಾಮಾನ್ಯ ಮನುಷ್ಯರು ಚಿಂತಿಸುತ್ತಾರೆ. ಈ ಪ್ರಪಂಚವು ಯಾರಿಗಾಗಿಯೂ ನಿಂತಿಲ್ಲ. ಒಬ್ಬನು ಹೋದರೆ ಹೇಗೆ ಎಂಬ ಚಿಂತೆಯು ಕಾಡುತ್ತದೆ ಆದರೆ ಅದೇ ಸ್ಥಾನಕ್ಕೆ ಮತ್ತೊಬ್ಬ ಬರುತ್ತಾನೆ. ಹೀಗೆ ಚಕ್ರವು ಉರುಳುತ್ತಿರುತ್ತದೆ. ಹೀಗಾಗಿ ಮೃತ್ಯುವನ್ನು ಸಹರ್ಷದಿಂದ ಸ್ವೀಕರಿಸಬೇಕು. ವಿವೇಚಕರು ಇಲ್ಲಿ ಒಂದು ಪ್ರಸಂಗವನ್ನು ವರ್ಣಿಸುತ್ತಾರೆ. ಜೀವಿತದ ಕೊನೆಯ ಕ್ಷಣದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ಪರಿವಾರದೊಂದಿಗೆ ಸಮಾಲೋಚನೆಯನ್ನು ಮಾಡುತ್ತಿರುತ್ತಾನೆ. ಸದೃಢವಾದ ಮಗನಿಗೆ ನಗರದಲ್ಲಿರುವ ಸಂಕುಲಗಳ ಮನೆಗಳನ್ನು ಕೊಡುತ್ತಾನೆ. ಚಿಕ್ಕವನಿಗೆ ಹತ್ತಿರದಲ್ಲಿರುವ ಮನೆಗಳನ್ನು ಹಂಚುತ್ತಾನೆ. ಹೆಂಡತಿಗೆ ತಾವು ಇರುವ ಪ್ರದೇಶವನ್ನು ಕೊಡುತ್ತಾನೆ. ಹತ್ತಿರದಲ್ಲಿಯೇ ಇದ್ದ ನರ್ಸ್ ಒಬ್ಬಳು ಆಶ್ಚರ್ಯದಿಂದ, "ನೀವು ಇಷ್ಟೊಂದು ಶ್ರೀಮಂತರೇ? ಹಾಗಿದ್ದರೆ ಹೀಗೇಕೆ ಸಾಮಾನ್ಯ ವಾರ್ಡಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ?" ಎಂದು ಕೇಳುತ್ತಾಳೆ. ಅದಕ್ಕೆ ದೊಡ್ಡ ಮಗ, "ನಾವು ಶ್ರೀಮಂತರಲ್ಲ. ನಮ್ಮ ತಂದೆಯು ಬೆಳಿಗ್ಗೆ ವೃತ್ತ ಪತ್ರಿಕೆಗಳನ್ನು ಹಂಚುವ ಕೆಲಸ ಮಾಡುತ್ತಾರೆ. ಅವರ ನಂತರ ನಾವು ಆ ಕೆಲಸವನ್ನು ಮಾಡಬೇಕು. ಅದಕ್ಕಾಗಿ ನಮಗೆ ವಲಯಗಳನ್ನು ಹಂಚುತ್ತಿದ್ದಾರೆ". ನಮ್ಮ ಮುಂದಿನ ಏಳು ಪೀಳಿಗೆಗಳ ಸುಖಕ್ಕಾಗಿ ನಾವು ಶ್ರಮಿಸುತ್ತೇವೆ ಆದರೆ ನಮ್ಮ ಮುಂದಿನ ಜನ್ಮಕ್ಕಾಗಿ ಚಿಂತನೆಯನ್ನು ಮಾಡುವುದಿಲ್ಲ. ಪ್ರಕೃತಿಯಿಂದ ಪ್ರಾಪ್ತವಾದ ಈಶರೀರವು ಪಂಚಮಹಾಭೂತಗಳಿಂದ ನಿರ್ಮಾಣವಾಗಿದೆ, ಈ ಪಂಚಮಹಾಭೂತದಲ್ಲಿಯೇ ವಿಲೀನವಾಗುವುದು. ಜ್ಞಾನಿಗಳು ಇದನ್ನು ಅರಿತುಕೊಂಡಿರುತ್ತಾರೆ. ಹೀಗಾಗಿ ಇದರ ಬಗ್ಗೆ ಚಿಂತಿಸುವುದಿಲ್ಲ.
ಅವಿನಾಶಿ ತು ತದ್ವಿದ್ಧಿ, ಯೇನ ಸರ್ವಮಿದಂ(ನ್) ತತಮ್
ವಿನಾಶಮವ್ಯಯಸ್ಯಾಸ್ಯ, ನ ಕಶ್ಚಿತ್ಕರ್ತುಮರ್ಹತಿ॥17॥
ಯಾವುದರಿಂದ ಈ ಸಂಪೂರ್ಣ ದೃಶ್ಯ ಜಗತ್ತು ವ್ಯಾಪ್ತವಾಗಿದೆಯೋ ಅದನ್ನು ನೀನು ನಾಶರಹಿತವಾದುದೆಂದು ತಿಳಿ. ಈ ಅವಿನಾಶಿಯ ವಿನಾಶವನ್ನು ಮಾಡಲು ಯಾರೂ ಕೂಡ ಸಮರ್ಥರಲ್ಲ.
ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಅವಿನಾಶಿ ಕುರಿತು ತಿಳಿಸಿದ್ದಾನೆ. ಯಾವುದರಿಂದ ಈ ಜಗತ್ತು ವ್ಯಾಪ್ತವಾಗಿದೆಯೋ ಅದು ಅವಿನಾಶಿಗ ಎಂದು ತಿಳಿದುಕೋ. ಪರಮಾತ್ಮನು ಅವಿನಾಶಿ. ಅವಿನಾಶಿಯನ್ನು ನಾಶಮಾಡಲಾಗದು. ಈ ಜಗತ್ತು ಆಗು ಹೋಗುಗಳ ಚಕ್ರದಿಂದ ವ್ಯಾಪ್ತವಾಗಿದೆ. ಸಂಸಾರವೆಂಬ ಚಕ್ರವೂ ತಿರುಗುತ್ತಿರುತ್ತದೆ. ಪರಮ ಸತ್ಯವನ್ನು ತಿಳಿದುಕೋ. ಯಾವುದು ಅವಿನಾಶಿಯೋ ಅದರ ಬಗ್ಗೆ ಚಿಂತನೆ ಮಾಡು. ಅವಿನಾಶಿ ಪರಮಾತ್ಮನ ಒಂದು ಅಂಶ, ಅಂದರೆ ಆತ್ಮ. ನೀನು ಆತ್ಮ. ಇದನ್ನು ಧ್ಯಾನದಲ್ಲಿಟ್ಟುಕೋ, ಶರೀರವು ನಶ್ವರ ಅದು ಸಮಾಪ್ತವಾಗುತ್ತದೆ.
ಅಂತವಂತ ಇಮೇ ದೇಹಾ, ನಿತ್ಯಸ್ಯೋಕ್ತಾಃ(ಶ್) ಶರೀರಿಣಃ
ಅನಾಶಿನೋಽಪ್ರಮೇಯಸ್ಯ, ತಸ್ಮಾದ್ಯುಧ್ಯಸ್ವ ಭಾರತ॥18॥
ಈ ನಾಶರಹಿತನೂ, ಅಪ್ರಮೇಯನೂ, ನಿತ್ಯ ಸ್ವರೂಪನೂ ಆಗಿರುವ ಜೀವಾತ್ಮನ ಈ ಎಲ್ಲ ಶರೀರಗಳು ನಾಶವುಳ್ಳವುಗಳೆಂದು ಹೇಳಲಾಗಿದೆ. ಅದಕ್ಕಾಗಿ ಹೇ ಭರತವಂಶೀ ಅರ್ಜುನನೇ ! ನೀನು ಯುದ್ಧಮಾಡು
ಭರತ ವಂಶಿಯಾದ ಅರ್ಜುನ, "ನೀನಂತೂ ಯುದ್ಧ ಮಾಡಲೇಬೇಕು, ಕರ್ತವ್ಯವನ್ನು ಮಾಡು, ಇವರೆಲ್ಲರ ಮೃತ್ಯು ಬರೆದಿಟ್ಟಾಗಿದೆ. ಯಾರ ಕಾಲ ಸಮೀಪಿಸಿದೆಯೋ ಅವರ ಮೃತ್ಯು ನಿಶ್ಚಿತ. ಆಶಾಶ್ವತವಾದ ಈ ಶರೀರವು ನಾಶವಾಗುತ್ತದೆ. ಈ ಶರೀರವು ಅಂತ್ಯವಾಗುತ್ತದೆ. ಅಂತ್ಯಗೊಳ್ಳುವ ಈ ಶರೀರಕ್ಕಾಗಿ ಪರಿತಪಿಸದೆ ಯುದ್ಧ ಮಾಡು."
ಯ ಏನಂ(ವ್) ವೇತ್ತಿ ಹಂತಾರಂ(ಯ್), ಯಶ್ಚೈನಂ(ಮ್) ಮನ್ಯತೇ ಹತಮ್
ಉಭೌ ತೌ ನ ವಿಜಾನೀತೋ, ನಾಯಂ(ಮ್) ಹಂತಿ ನ ಹನ್ಯತೇ ॥2.19॥
ಯಾರು ಈ ಆತ್ಮವನ್ನು ಕೊಲ್ಲುವವನೆಂದು ತಿಳಿಯುತ್ತಾನೋ, ಹಾಗೂ ಯಾರು ಇವನು ಸತ್ತವನೆಂದು ತಿಳಿಯುತ್ತಾನೋ - ಅವರಿಬ್ಬರೂ ತಿಳಿದವರಲ್ಲ, ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ ಕೊಲ್ಲುವುದೂ ಇಲ್ಲ ಮತ್ತು ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ.
ಯಾರು ಈ ಅವಿನಾಶಿ ಆತ್ಮವನ್ನು ಕೊಲ್ಲುವವನೆಂದು ತಿಳಿಯುತ್ತಾನೆಯೋ, ಮತ್ತು ಯಾರು ಇದನ್ನು ಸತ್ತವನೆಂದು ತಿಳಿಯುತ್ತಾನೆಯೋ ಇವರಿಬ್ಬರೂ ಸತ್ಯವನ್ನು ತಿಳಿದಿರುವುದಿಲ್ಲ. ಏಕೆಂದರೆ ಆತ್ಮ ಯಾರನ್ನೂ ಕೊಲ್ಲುವುದಿಲ್ಲ ಹಾಗು ನಾಶವಾಗುವುದೂ ಇಲ್ಲ. ಇದೇ ಅಂತಿಮ ಸತ್ಯ.
ಅರ್ಜುನ ಅವರನ್ನು ಕೊಲ್ಲಲು ನೀನಾರು? ನೀನು ಧನುರ್ಧಾರಿ, ಬಾಣಗಳನ್ನು ಚಲಾಯಿಸು. ಅಂತ್ಯ ಸಮಯ ಬಂದಿಲ್ಲದಿದ್ದರೆ ನಿನ್ನ ಬಾಣಗಳಿಂದಲೂ ಎದುರಾಳಿ ತಪ್ಪಿಸಿಕೊಳ್ಳಬಹುದು. ಇಲ್ಲಿ ವಿವೇಚಕರು ತಮ್ಮ ಸ್ವಂತ ಅನುಭವವನ್ನು ವರ್ಣಿಸುತ್ತಾರೆ. ಒಮ್ಮೆ ಆಗಂತುಕರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾಗ, ಆಸ್ಪತ್ರೆಯಲ್ಲಿ ಇವರ ಗಾಯಗಳನ್ನು ಕಂಡ ವೈದ್ಯರು ದೊಡ್ಡ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಸಮಯದ ಅಭಾವದ ಕಾರಣ ವಿಮಾನಯಾನ ಸೂಕ್ತ ಎಂದೂ ಹೇಳಿದ್ದರು. ನಾಶಿಕ್ ನಗರದ ವಿಮಾನ ನಿಲ್ದಾಣವು ಭಾರತ ದೇಶದ ಸೈನ್ಯದ ನಿಯಂತ್ರಣದಲ್ಲಿತ್ತು. ಸರ್ಕಾರದ ಅನುಮತಿಯನ್ನು ಪಡೆದು ವಿಮಾನದಿಂದ ಗಾಯಗೊಂಡ ವಿವೇಚಕರನ್ನು ಮುಂಬೈ ಆಸ್ಪತ್ರೆಗೆ ರವಾನಿಸಲಾಯಿತು. ಅನೇಕ ಶಸ್ತ್ರ ಚಿಕಿತ್ಸೆಗಳ ನಂತರ ಎಚ್ಚರಗೊಂಡ ವಿವೇಚಕರು ವೈದ್ಯರನ್ನು ಕೇಳಿದಾಗ ವೈದ್ಯರು, "ನಿಮಗೆ ತುಂಬಾ ಗಾಯಗಳಾಗಿವೆ. ಹೊಡೆಯುವವನಿಗಿಂತ ಉಳಿಸುವವನಾದ ಆ ಪರಮಾತ್ಮ ದೊಡ್ಡವನು. ಭಗವಂತನ ಕೃಪೆ ನಿಮ್ಮ ಮೇಲಿದೆ." ಎಂದರು. ಅದು ನನ್ನ ಅಂತ್ಯದ ಸಮಯವಾಗಿರಲಿಲ್ಲ, ಆದ್ದರಿಂದ ನಾನು ಬದುಕುಳಿದೆ. ಅಂತ್ಯಸಮಯ ಬರುವ ತನಕ ಯಾರೂ ಕೊಲ್ಲಲು ಸಾಧ್ಯವಿಲ್ಲ, ಬಂದರೆ ಯಾರೂ ಉಳಿಸಲು ಸಾಧ್ಯವಿಲ್ಲ.
ಅರ್ಜುನ ಅವರನ್ನು ಕೊಲ್ಲಲು ನೀನಾರು? ನೀನು ಧನುರ್ಧಾರಿ, ಬಾಣಗಳನ್ನು ಚಲಾಯಿಸು. ಅಂತ್ಯ ಸಮಯ ಬಂದಿಲ್ಲದಿದ್ದರೆ ನಿನ್ನ ಬಾಣಗಳಿಂದಲೂ ಎದುರಾಳಿ ತಪ್ಪಿಸಿಕೊಳ್ಳಬಹುದು. ಇಲ್ಲಿ ವಿವೇಚಕರು ತಮ್ಮ ಸ್ವಂತ ಅನುಭವವನ್ನು ವರ್ಣಿಸುತ್ತಾರೆ. ಒಮ್ಮೆ ಆಗಂತುಕರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾಗ, ಆಸ್ಪತ್ರೆಯಲ್ಲಿ ಇವರ ಗಾಯಗಳನ್ನು ಕಂಡ ವೈದ್ಯರು ದೊಡ್ಡ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಸಮಯದ ಅಭಾವದ ಕಾರಣ ವಿಮಾನಯಾನ ಸೂಕ್ತ ಎಂದೂ ಹೇಳಿದ್ದರು. ನಾಶಿಕ್ ನಗರದ ವಿಮಾನ ನಿಲ್ದಾಣವು ಭಾರತ ದೇಶದ ಸೈನ್ಯದ ನಿಯಂತ್ರಣದಲ್ಲಿತ್ತು. ಸರ್ಕಾರದ ಅನುಮತಿಯನ್ನು ಪಡೆದು ವಿಮಾನದಿಂದ ಗಾಯಗೊಂಡ ವಿವೇಚಕರನ್ನು ಮುಂಬೈ ಆಸ್ಪತ್ರೆಗೆ ರವಾನಿಸಲಾಯಿತು. ಅನೇಕ ಶಸ್ತ್ರ ಚಿಕಿತ್ಸೆಗಳ ನಂತರ ಎಚ್ಚರಗೊಂಡ ವಿವೇಚಕರು ವೈದ್ಯರನ್ನು ಕೇಳಿದಾಗ ವೈದ್ಯರು, "ನಿಮಗೆ ತುಂಬಾ ಗಾಯಗಳಾಗಿವೆ. ಹೊಡೆಯುವವನಿಗಿಂತ ಉಳಿಸುವವನಾದ ಆ ಪರಮಾತ್ಮ ದೊಡ್ಡವನು. ಭಗವಂತನ ಕೃಪೆ ನಿಮ್ಮ ಮೇಲಿದೆ." ಎಂದರು. ಅದು ನನ್ನ ಅಂತ್ಯದ ಸಮಯವಾಗಿರಲಿಲ್ಲ, ಆದ್ದರಿಂದ ನಾನು ಬದುಕುಳಿದೆ. ಅಂತ್ಯಸಮಯ ಬರುವ ತನಕ ಯಾರೂ ಕೊಲ್ಲಲು ಸಾಧ್ಯವಿಲ್ಲ, ಬಂದರೆ ಯಾರೂ ಉಳಿಸಲು ಸಾಧ್ಯವಿಲ್ಲ.
ನ ಜಾಯತೇ ಮ್ರಿಯತೇ ವಾ ಕದಾಚಿನ್,
ನಾಯಂ(ಮ್) ಭೂತ್ವಾ ಭವಿತಾ ವಾ ನ ಭೂಯಃ ಅಜೋ ನಿತ್ಯಃ(ಶ್) ಶಾಶ್ವತೋಽಯಂ(ಮ್) ಪುರಾಣೋ,
ನ ಹನ್ಯತೇ ಹನ್ಯಮಾನೇ ಶರೀರೇ॥20॥
ಈ ಆತ್ಮನು ಯಾವುದೇ ಕಾಲದಲ್ಲಿಯೂ ಹುಟ್ಟುವುದಿಲ್ಲ, ಸಾಯುವುದೂ ಇಲ್ಲ ಹಾಗೂ ಉತ್ಪತ್ತಿಯಾಗಿ ಮತ್ತೆ ಇರುತ್ತಾನೆಂಬುದೂ ಇಲ್ಲ; ಏಕೆಂದರೆ ಇವನು ಜನ್ಮರಹಿತನೂ ನಿತ್ಯನೂ, ಸನಾತನನೂ ಮತ್ತು ಪುರಾತನನೂ ಆಗಿದ್ದಾನೆ, ಶರೀರವು ಕೊಲ್ಲಲ್ಪಟ್ಟರೂ ಕೂಡ ಇವನು ಕೊಲ್ಲಲ್ಪಡುವುದಿಲ್ಲ.
ಆತ್ಮ ಜನಿಸುವುದಿಲ್ಲ, ಮರಣಿಸುವುದೂ ಇಲ್ಲ. ಜನ್ಮವಿಲ್ಲದ ನಿತ್ಯವಾದ ಶಾಶ್ವತವಾದ ಈ ಆತ್ಮವು ಕೊನೆಗೊಳ್ಳುವುದಿಲ್ಲ. ಈ ಶರೀರವು ಪಂಚ ಮಹಾಭೂತದಲ್ಲಿ ವಿಲೀನವಾಗುತ್ತದೆ. ಆದರೆ ಆತ್ಮವು ಅಮರ. ಅರ್ಜುನನು ನಶ್ವರವಾದ ಶರೀರಗಳ ಮರಣದ ಚಿಂತನೆಯನ್ನು ಮಾಡಿ ಶೋಕದಲ್ಲಿದ್ದಾನೆ.
ವೇದಾವಿನಾಶಿನಂ(ನ್) ನಿತ್ಯಂ(ಮ್), ಯ ಏನಮಜಮವ್ಯಯಮ್
ಕಥಂ(ಮ್) ಸ ಪುರುಷಃ(ಫ್) ಪಾರ್ಥ, ಕಂ(ಙ್) ಘಾತಯತಿ ಹಂತಿ ಕಮ್ ॥2.21॥
ಹೇ ಪೃಥಾಪುತ್ರನಾದ ಅರ್ಜುನನೇ ! ಯಾವ ಪುರುಷನು ಈ ಆತ್ಮವನ್ನು ನಾಶರಹಿತನೂ, ನಿತ್ಯನೂ ಅಜನ್ಮನೂ ಮತ್ತು ಅವ್ಯಯನೆಂದೂ ತಿಳಿಯುತ್ತಾನೆಯೋ, ಆ ಪುರುಷನು ಯಾರನ್ನು ಹೇಗೆ ಕೊಲ್ಲಿಸುತ್ತಾನೆ ಮತ್ತು ಯಾರನ್ನು ಹೇಗೆ ಕೊಲ್ಲುತ್ತಾನೆ ?
ಪರಮ ಪುರುಷನಾದ ಶ್ರೀ ಕೃಷ್ಣನು ಅರ್ಜುನನಿಗೆ, "ಹೇ ಪಾರ್ಥ! ಆತ್ಮ ಅವಿನಾಶಿ, ನಿತ್ಯ ಶಾಶ್ವತ, ಜನನ ಮರಣಗಳ ರಹಿತ ಎಂದು ತಿಳಿದವರು ಹೇಗೆ ಯಾರನ್ನು ಕೊಲ್ಲುತ್ತಾರೆ? ಹೇಗೆ ಕೊಲ್ಲುತ್ತಾರೆ?" ಎಂದು ಪ್ರಶ್ನಿಸುತ್ತಾನೆ. ಪರಮಾತ್ಮನ ಈ ಆತ್ಮತತ್ತ್ವವನ್ನು ಯಾರಿಂದಲೂ ದಹಿಸಲು ಸಾಧ್ಯವಿಲ್ಲ, ಅಳಿಸಲು ಸಾಧ್ಯವಿಲ್ಲ, ಶಸ್ತ್ರಗಳಿಂದ ಗಾಯಗೊಳಿಸಲು ಸಾಧ್ಯವಿಲ್ಲ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ,
ನವಾನಿ ಗೃಹ್ಣಾತಿ ನರೋಽಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ,
ನ್ಯನ್ಯಾನಿ ಸಂಯಾತಿ ನವಾನಿ ದೇಹೀ॥22॥
ಹೇಗೆ ಮನುಷ್ಯನು ಹಳೆಯದಾದ ವಸ್ತ್ರಗಳನ್ನು ತ್ಯಾಗ ಮಾಡಿ ಬೇರೆಯ, ಹೊಸದಾದ ವಸ್ತ್ರಗಳನ್ನು ಧರಿಸುತ್ತಾನೋ, ಹಾಗೆಯೇ ಜೀವಾತ್ಮನು ಹಳೆಯದಾದ ಶರೀರಗಳನ್ನು ತ್ಯಾಗಮಾಡಿ ಬೇರೆಯಾದ ಹೊಸ ಶರೀರಗಳನ್ನು ಪಡೆಯುತ್ತಾನೆ.
ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ಶರೀರವನ್ನು ಹಳೆಯ ಬಟ್ಟೆಗೆ ಹೋಲಿಸಿದ್ದಾರೆ. ಮನುಷ್ಯನು ಹೇಗೆ ತನ್ನ ಹಳೆಯ ಬಟ್ಟೆಗಳನ್ನು ತೊರೆದು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಾನೆಯೋ ಹಾಗೆಯೇ ಆತ್ಮವೂ ಸಹ ಜೀರ್ಣವಾದ ಶರೀರಗಳನ್ನು ತೊರೆದು ಹೊಸ ಶರೀರವನ್ನು ಪ್ರವೇಶಿಸುತ್ತದೆ.
ನೈನಂ(ಞ್) ಛಿಂದಂತಿ ಶಸ್ತ್ರಾಣಿ, ನೈನಂ(ನ್) ದಹತಿ ಪಾವಕಃ
ನ ಚೈನಂ(ಙ್) ಕ್ಲೇದಯಂತ್ಯಾಪೋ, ನ ಶೋಷಯತಿ ಮಾರುತಃ॥23॥
ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಇದನ್ನು ಬೆಂಕಿಯು ಸುಡಲಾರದು, ಇದನ್ನು ಜಲವು ನೆನೆಯಿಸಲಾರದು ಮತ್ತು ವಾಯುವು ಒಣಗಿಸಲಾರದು.
ಭಗವಂತನು ಇಲ್ಲಿಯೂ ಆತ್ಮದ ವರ್ಣನೆಯನ್ನು ಮಾಡುತ್ತಿದ್ದಾನೆ. ಇಲ್ಲಿ ವಿವೇಚಕರು ಪಾದರಸವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ. ಪಾದರಸವನ್ನು ವಿಭಜಿಸಿದರೂ ಅದು ಮತ್ತೆ ಒಂದಾಗಿ ತನ್ನ ಮೂಲ ರೂಪ ಪಡೆಯುತ್ತದೆ. ಈ ಆತ್ಮವನ್ನು ಶಸ್ತ್ರಗಳಿಂದ ಕತ್ತರಿಸಲಾಗುವುದಿಲ್ಲ, ಅಗ್ನಿಯು ಸುಡಲಾರದು, ಜಲದಿಂದ ನೆನೆಸಲಾರದು, ಗಾಳಿಯಿಂದ ಒಣಗಿಸಲಾಗದು. ಶ್ರೀ ಕೃಷ್ಣನು ಅರ್ಜುನನಿಗೆ ಈ ಆತ್ಮತತ್ತ್ವವನ್ನು ತಿಳಿಸಿಕೊಡುತ್ತಾ, ಆತ್ಮದ ಗುಣಲಕ್ಷಣಗಳನ್ನು ವಿವರಿಸುತ್ತಿದ್ದಾನೆ. ಗಾಳಿಯು ಕಾಣುವುದಿಲ್ಲ ಆದರೂ ನಾವು ಅದರ ಮಾಪಕವನ್ನು ಕಂಡುಹಿಡಿದಿದ್ದೇವೆ. ಆತ್ಮವು ಕಾಣುವುದಿಲ್ಲ, ನಾವು ಇನ್ನೂ ಅಂತಹ ಉಪಕರಣಗಳನ್ನು ಶೋಧಿಸಿಲ್ಲ. ಪ್ರಯೋಗ ಶಾಲೆಯಲ್ಲಿ ಆತ್ಮಕ್ಕೆ ಸಂಬಂಧಪಟ್ಟ ಪ್ರಯೋಗಗಳನ್ನು ಮಾಡಿದ್ದಾರೆ. ಅಂತ್ಯ ಸಮಯ ಬಂದಂತಹ ಒಬ್ಬ ವ್ಯಕ್ತಿಯನ್ನು ಗಾಜಿನ ಪೆಟ್ಟಿಗೆಯಲ್ಲಿ ಇಟ್ಟಿರುತ್ತಾರೆ. ಪೆಟ್ಟಿಗೆಯಲ್ಲಿರುವ ಪ್ರಾಣವಾಯುವಿನ ಸಹಾಯದಿಂದ ಆ ವ್ಯಕ್ತಿಯು ಕೆಲ ಕ್ಷಣ ಬದುಕಿರುತ್ತಾನೆ. ಎಲ್ಲ ಕಡೆಯಿಂದಲೂ ಸುಭದ್ರವಾಗಿ ಮುಚ್ಚಲ್ಪಟ್ಟ ಗಾಜಿನ ಪೆಟ್ಟಿಗೆಯನ್ನು ವಿಜ್ಞಾನಿಗಳು ವೀಕ್ಷಿಸುತ್ತಿರುತ್ತಾರೆ. ಅದೇ ಸಮಯದಲ್ಲಿ ಸರಿಯಾಗಿ ಗಾಜಿನಪೆಟ್ಟಿಗೆಯ ಸೀಳುತ್ತದೆ. ಆ ಸ್ಥಳದಿಂದ ಆತ್ಮವೂ ಮುಕ್ತವಾಗುತ್ತದೆ.
ಅಚ್ಛೇದ್ಯೋಽಯಮದಾಹ್ಯೋಽಯಮ್, ಅಕ್ಲೇದ್ಯೋಽಶೋಷ್ಯ ಏವ ಚ
ನಿತ್ಯಃ(ಸ್) ಸರ್ವಗತಃ(ಸ್) ಸ್ಥಾಣುಃ(ರ್), ಅಚಲೋಽಯಂ(ಮ್) ಸನಾತನಃ॥24॥
ಏಕೆಂದರೆ ಈ ಆತ್ಮವು ಅಚ್ಛೇದ್ಯವೂ, ಅದಾಹ್ಯವೂ, ಅಕ್ಲೇದ್ಯವೂ ಮತ್ತು ನಿಸ್ಸಂದೇಹವಾಗಿ ಅಶೋಷ್ಯವಾಗಿದೆ. ಹಾಗೂ ಈ ಆತ್ಮವು ನಿತ್ಯವೂ, ಸರ್ವವ್ಯಾಪಿಯೂ, ಅಚಲವೂ, ಸ್ಥಿರವಾಗಿದ್ದು ಸನಾತನವಾಗಿದೆ.
ಈ ಶ್ಲೋಕದಲ್ಲಿಯೂ ಆತ್ಮದ ವರ್ಣನೆಯನ್ನು ಮಾಡುತ್ತಾ ಶ್ರೀ ಕೃಷ್ಣನು, ಈ ಆತ್ಮವು ನಿತ್ಯವೂ, ಸ್ಥಿರವೂ, ಸನಾತನವೂ ಆಗಿದೆ. ಈ ಆತ್ಮವನ್ನು ಬೇಧಿಸಲು, ಬೆಂಕಿಯಿಂದ ಸುಡಲು, ನೀರಿನಿಂದ ನೆನೆಸಲು, ಗಾಳಿಯಿಂದ ಒಣಗಿಸಲು ಸಾಧ್ಯವಿಲ್ಲ. ಹೀಗಾಗಿ, ಹೇ ಅರ್ಜುನ, ಈ ಯುದ್ಧದಲ್ಲಿ ಸಾಯುವುದು ನಿನ್ನ ಗುರುಗಳ, ಪಿತಾಮಹರ, ಬಂಧು ಬಾಂಧವರ ಶರೀರಗಳು. ಇವರೆಲ್ಲರ ಅವಿನಾಶಿಯಾದ ಆತ್ಮಗಳು ಯಾವಾಗಲೂ ಇರುತ್ತವೆ.
ಮರಣದ ನಂತರ ವ್ಯಕ್ತಿಯನ್ನು ದೇಹವೆಂದು ಸಂಬೋಧಿಸುತ್ತಾರೆ, ಹೆಸರು ಹಿಡಿದು ಕರೆಯುವುದಿಲ್ಲ. ದೇಹವನ್ನು ಎತ್ತಿ ಚಿತೆಯ ಮೇಲೆ ಇಡಿರಿ ಎನ್ನುತ್ತಾರೆ. ನಮ್ಮ ದೇಹದಲ್ಲಿ ಅನೇಕ ಪ್ರಕಾರದ ಅಗ್ನಿಗಳಿವೆ. ಜಠರಾಗ್ನಿ ಅವುಗಳಲ್ಲೊಂದು. ಅಂತ್ಯ ಕಾರ್ಯದಲ್ಲಿ ಅಗ್ನಿಸ್ಪರ್ಶ ಮಾಡಿ ದೇಹದಲ್ಲಿರುವ ಅಗ್ನಿಯನ್ನು ಆಕಾಶದಲ್ಲಿ ವಿಲೀನಗೊಳಿಸಲಾಗುತ್ತದೆ. ನೀರಿನಿಂದ ತುಂಬಿದ ಮಣ್ಣಿನ ಗಡಿಗೆಯಲ್ಲಿಯನ್ನು ಹೆಗಲ ಮೇಲಿಟ್ಟುಕೊಂಡು, ಮೂರು ಬಾರಿ ಪ್ರದಕ್ಷಿಣೆ ಮಾಡಿ, ಅದನ್ನು ಭಗ್ನಗೊಳಿಸಲಾಗುತ್ತದೆ. ದೇಹದಲ್ಲಿರುವ ಆಕಾಶವನ್ನು ಹೊರಗಿನ ಆಕಾಶದೊಂದಿಗೆ ಸೇರಿಸುವ ಸಂಕೇತವಾಗಿ ಗಡಿಗೆಯನ್ನು ಒಡೆಯಲಾಗುತ್ತದೆ.
ಆತ್ಮದ ಅಮರತ್ವದ ಬಗ್ಗೆ ತಿಳಿದುಕೋ ಎಂದು ಅರ್ಜುನನಿಗೆ ಶ್ರೀ ಕೃಷ್ಣ ಪರಮಾತ್ಮನು ಉಪದೇಶಸುತ್ತಾನೆ. ಎಲ್ಲದರ ವಿವರಗಳನ್ನು ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ.
ಪ್ರಶ್ನೋತ್ತರ
ಹನುಮಾನ್ ಪ್ರಸಾದ್ ಅಣ್ಣ
ಪ್ರಶ್ನೆ : 13ನೇ ಮತ್ತು 14ನೇ ಶ್ಲೋಕದ ವಿವರಗಳನ್ನು ಇನ್ನೊಮ್ಮೆ ವಿವರಿಸಿ.
ಹನುಮಾನ್ ಪ್ರಸಾದ್ ಅಣ್ಣ
ಪ್ರಶ್ನೆ : 13ನೇ ಮತ್ತು 14ನೇ ಶ್ಲೋಕದ ವಿವರಗಳನ್ನು ಇನ್ನೊಮ್ಮೆ ವಿವರಿಸಿ.
ಉತ್ತರ : ಶರೀರಕ್ಕೆ ಬಾಲ್ಯ, ಕೌಮಾರ್ಯ, ತಾರುಣ್ಯ ಮತ್ತು ಮುಪ್ಪು ಹೇಗೆ ಬರುತ್ತವೆಯೋ ಹಾಗೆಯೇ ಈ ಶರೀರ ಬಿಟ್ಟು ಬೇರೆ ಶರೀರವು ಪ್ರಾಪ್ತಿಯಾಗುತ್ತದೆ. ಜ್ಞಾನಗಳು ಇದರ ಬಗ್ಗೆ ಅರಿತುಕೊಂಡು ಮೋಹಕ್ಕೆ ಒಳಗಾಗುವುದಿಲ್ಲ. ಶೀತ ಉಷ್ಣಗಳು ಹೇಗೆ ಸ್ಪರ್ಶದ ಕ್ಷಣಿಕ ಅನುಭವಗಳೊ ಹಾಗೆಯೇ ಸುಖ ದುಃಖಗಳು ಕ್ಷಣಿಕ ಅವುಗಳನ್ನು ಸಹಿಸಿಕೊಳ್ಳಬೇಕು.
ಶೈಲಜಾ ಅಕ್ಕ
ಪ್ರಶ್ನೆ : ಭಗವಂತನು ಅರ್ಜುನನಿಗೆ ಮೊದಲೇ ಮೃತರಾದವರನ್ನು ಕೊಲ್ಲಲು ಸಂಕೋಚ ಪಡಬೇಡ ಎಂದಿದ್ದಾನೆ. ಹಾಗಾದರೆ ಆತ್ಮಹತ್ಯೆ ಕೊಲೆಗಟಕರನ್ನು ಪಾಪದ ದೃಷ್ಟಿಯಿಂದ ಏಕೆ ನೋಡುತ್ತೇವೆ?
ಉತ್ತರ : ಆತ್ಮಹತ್ಯೆ ಕೊಲೆ ಇವು ನೈಸರ್ಗಿಕವೇ? ಆತ್ಮಹತ್ಯೆಯು ಕ್ಷಣಿಕ ಅವಿವೇಕದ ಪರಿಣಾಮ. ವಿವೇಕವನ್ನು ಕಳೆದುಕೊಳ್ಳುವುದು ನರಕಕ್ಕೆ ಹೋಗುವಂತೆ. ದ್ವೇಷ, ಕೋಪ ಸಿಟ್ಟುಗಳು ಸಹ ವಿವೇಕವನ್ನು ಕ್ಷೀಣಿಸುವುದಾಗಿದೆ. ಕಾಮ, ಕ್ರೋಧ ಲೋಭಗಳು ನರಕದ ಮೂರು ದ್ವಾರಗಳು. ಕ್ರೋಧದಲ್ಲಿ ನಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ, ವಿವೇಕವನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ಆತ್ಮಹತ್ಯೆಯನ್ನು ಪಾಪಕರ್ಮವೆಂದು ಹೇಳಲಾಗಿದೆ. ಈ ಜನ್ಮದ ಅವನ ಕರ್ಮದ ಅನುಸಾರ ಮುಂದಿನ ಜನ್ಮವು ನಿರ್ಧಾರವಾಗುತ್ತದೆ. ಎಂಟನೆಯ ಅಧ್ಯಾಯದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಭಜರಂಗ ಅಣ್ಣ
ಪ್ರಶ್ನೆ : ಭಗವದ್ಗೀತೆಯಂತಹ ಮಹಾನ್ ಗ್ರಂಥವಿದ್ದರೂ ಎಷ್ಟೋ ವರ್ಷಗಳವರೆಗೆ ನಾವು ಮುಸ್ಲಿಮರ ಗುಲಾಮರಾಗಿದ್ದೆವು, ಧರ್ಮಾಚಾರ್ಯರ ಮುಂದಿನ ನಡೆ ಏನು?
ಉತ್ತರ : ನಮ್ಮಲ್ಲಿ ಭಗವದ್ಗೀತೆ ಇದ್ದ ಕಾರಣ ನಾವು ಬದುಕುಳಿದಿದ್ದೇವೆ. ನಮ್ಮ ಸನಾತನ ಧರ್ಮವನ್ನು ಮರೆತಿದ್ದೇವೆ. ಶಕ್ತಿಯ ಆರಾಧನೆಯನ್ನು ಬಿಟ್ಟಿದ್ದೇವೆ. ಹೀಗಾಗಿ ಪರಧರ್ಮದವರು ನಮ್ಮ ಮೇಲೆ ದಾಳಿಯನ್ನು ಮಾಡಿದ್ದಾರೆ. ಆದರೂ ನಮ್ಮ ಮನೆ ಮನೆಗಳಲ್ಲಿ ಭಗವದ್ಗೀತೆಯ ಶ್ಲೋಕಗಳು ಪಠಿಸಲ್ಪಡುತ್ತವೆ, ಜ್ಞಾನೇಶ್ವರಿಯನ್ನು ಪಠಿಸಲಾಗುತ್ತದೆ. ಹಿಂದೆ ನಾವು ಮಾಡಿದ ತಪ್ಪಿನಿಂದ ಗುಲಾಮರಾಗಿದ್ದೆವು. ಆದರೂ ಕೆಲವೊಂದು ಮನೆಯಲ್ಲಿ ದೇಶಪ್ರೇಮಿಗಳು ಹುಟ್ಟಿದ್ದಾರೆ. ಭಗತ್ ಸಿಂಗ್, ಸುಖದೇವ, ಝಾನ್ಸಿ ರಾಣಿ, ಮಹಾರಾಣಾ ಪ್ರತಾಪ್, ಛತ್ರಪತಿ ಸಂಭಾಜಿ ಇವರೆಲ್ಲರ ಶೂರ ಕಥೆಗಳನ್ನು ಕೇಳಿದ್ದೇವೆ. ನಮ್ಮ ದೇಶದಲ್ಲಿ ಮಹಿಳೆಯರ ಕಾರಣದಿಂದ ಅನೇಕ ದೇಶಭಕ್ತರು ಜನಿಸಿದ್ದಾರೆ. ಮಹಿಳೆಯರು ಮನೆಯಲ್ಲಿ ಸನಾತನ ಧರ್ಮವನ್ನು ಜೀವಂತವಿಟ್ಟಿದ್ದಾರೆ. ಮಕ್ಕಳಿಗೆ ಸಂಸ್ಕಾರವನ್ನು ಕೊಟ್ಟಿದ್ದಾರೆ. ಜೀಜಾ ಬಾಯಿಯರಂತಹ ಸ್ತ್ರೀಯರು ಹಿಂದೂ ಧರ್ಮಕ್ಕಾಗಿ ಮಕ್ಕಳನ್ನು ಬೆಳೆಸಿದ್ದಾರೆ. ಅದಕ್ಕಾಗಿ ಗೀತಾ ಪರಿವಾರ, "ಪ್ರತಿ ಮನೆಯಲ್ಲೂ ಗೀತೆ, ಪ್ರತಿ ಕರದಲ್ಲೂ ಗೀತೆ" ಎಂಬ ಗುರಿ ಹೊಂದಿದೆ.
ಪ್ರಶ್ನೆ : ಮೇಲು ಕೀಳು ಎಂಬ ಭಾವನೆಯಿಂದ ನಾವು ಗುಲಾಮರಾದೇವೇನು?
ಉತ್ತರ : ಶ್ರೀ ಕೃಷ್ಣನು ಅವರವರ ಗುಣದ ಮತ್ತು ಕರ್ಮದ ಅನುಸಾರವಾಗಿ 4 ವರ್ಣಗಳನ್ನು ಸೃಷ್ಟಿಸಿದ್ದಾನೆಯೇ ವಿನಃ ಜನ್ಮದಿಂದಲ್ಲ. ರೋಗಿಗಳ ಸೇವೆಯನ್ನು ಮಾಡುವ ಬ್ರಾಹ್ಮಣ ವೈದ್ಯನು ಶೂದ್ರನಾಗುತ್ತಾನೆ. ಶೂದ್ರ ಮನೆತನದಲ್ಲಿ ಜನಿಸಿದ ಶಿಕ್ಷಕನು ವಿದ್ಯಾದಾನ ಮಾಡಿ ಬ್ರಾಹ್ಮಣನಾಗುತ್ತಾನೆ. ನಮ್ಮ ಮೇಲೆ ಪ್ರಭುತ್ವ ಸ್ಥಾಪಿಸಲು ವ್ಯವಸ್ಥಿತವಾಗಿ ನಡೆದು ಬಂದ ನಮ್ಮ ಸನಾತನ ಧರ್ಮವನ್ನು ಬಿಟಿಷರು ನುಚ್ಚುನೂರು ಮಾಡಿದ್ದಾರೆ.
ಅರುಣ್ ಅಣ್ಣ
ಪ್ರಶ್ನೆ : 19ನೇ ಶ್ಲೋಕದ ಪ್ರಕಾರ ಕೊಲೆಗಾರ ಯಾರು? 16ನೇ ಶ್ಲೋಕದ ಪ್ರಕಾರ ಸತ್ಯದ ಅಭಾವ ಅಂದರೇನು?
ಪ್ರಶ್ನೆ : 19ನೇ ಶ್ಲೋಕದ ಪ್ರಕಾರ ಕೊಲೆಗಾರ ಯಾರು? 16ನೇ ಶ್ಲೋಕದ ಪ್ರಕಾರ ಸತ್ಯದ ಅಭಾವ ಅಂದರೇನು?
ಉತ್ತರ : ಇಲ್ಲಿ ಯಾರು ಕೊಲೆಗಾರರಿಲ್ಲ. 19ನೇ ಶ್ಲೋಕದಲ್ಲಿ ಅವಿನಾಶಿ ಆತ್ಮವೂ ಯಾರನ್ನೂ ಕೊಲ್ಲುವುದಿಲ್ಲ, ಯಾರಿಂದಲೂ ನಾಶವಾಗಿವುದಿಲ್ಲ ಎಂದು ತಿಳಿಸಲಾಗಿದೆ. ನೀರು ಆವಿಯಾಗಿ, ಮೋಡವಾಗಿ, ಮಳೆಸುರಿದು, ನದಿಯಲ್ಲಿ ನೀರು ಹರಿದು, ಅದು ಸಮುದ್ರಕ್ಕೆ ಸೇರಿ ಮತ್ತೆ ಆವಿಯಾಗುತ್ತದೆ. ಇದು ಒಂದು ಪೂರ್ತಿ ಪ್ರಕೃತಿಯ ಚಕ್ರ. ಅಸತ್ ವಸ್ತುವಿಗೆ ಅಸ್ತಿತ್ವವಿಲ್ಲ. ಅದೇ ರೀತಿ ಸತ್ ವಸ್ತುವಿಗೆ ಅಭಾವವಿಲ್ಲ. ಇಲ್ಲಿ ಎರಡು ನಕಾರಾತ್ಮಗಳು ಸೇರಿ ಸಕಾರಾತ್ಮಕವಾಗಿದೆ.
ಸುನೀತಾ ದಿದಿ
ಪ್ರಶ್ನೆ : ಈ ಜನ್ಮದಲ್ಲಿ ಮನುಷ್ಯ ನಾದವನು ಮುಂದಿನ ಜನ್ಮದಲ್ಲಿ ಏನಾಗಬಹುದು?
ಪ್ರಶ್ನೆ : ಈ ಜನ್ಮದಲ್ಲಿ ಮನುಷ್ಯ ನಾದವನು ಮುಂದಿನ ಜನ್ಮದಲ್ಲಿ ಏನಾಗಬಹುದು?
ಉತ್ತರ : ಮುಂದಿನ ಜನ್ಮ ಯಾವುದೆಂಬುದನ್ನು ಈ ಜನ್ಮದ ಕರ್ಮವೂ, ಈ ಜನ್ಮದಲ್ಲಿ ನೀವು ಯಾವ ದಾರಿಯನ್ನು ನಡೆದಿದ್ದೀರಿ ಯಾವ ಕಾರ್ಯಗಳು ಮಾಡಿದ್ದೀರಿ ಇವೆಲ್ಲವೂ ನಿರ್ಧರಿಸುತ್ತದೆ. ಮನುಷ್ಯ ಜನ್ಮದಲ್ಲಿ ನಮಗೆ ಆತ್ಮಮುಕ್ತಿಯ ಆಯ್ಕೆ ಇದೆ. ಬೇರೆ ಪ್ರಾಣಿ ಪಕ್ಷಿಗಳಲ್ಲಿ ಈ ಜ್ಞಾನವಿರುವುದಿಲ್ಲ. ಹೀಗಾಗಿ ಜನನ ಮತ್ತು ಮರಣದ ನಡುವೆ ಹೇಗೆ ಜೀವಿಸಬೇಕೆಂಬ ಆಯ್ಕೆ ಇದೆ. ಪರೋಪಕಾರದಲ್ಲಿ ಸತ್ಕಾರ್ಯದಲ್ಲಿ ಈ ಜನ್ಮವನ್ನು ಜೀವಿಸಿದರೆ ಬಹುಶಃ ಮುಂದಿನ ಜನ್ಮವು ಮಾನವ ರೂಪದಲ್ಲಿ ಆಗಬಹುದು.