विवेचन सारांश
ಭಗವಂತನು ತಿಳಿಸಿ ಹೇಳಿದ ತ್ರಿವಿಧ ಶ್ರದ್ಧೆಯುಳ್ಳ ಮನುಷ್ಯನ ಲಕ್ಷಣಗಳು

ID: 5630
कन्नड़ - ಕನ್ನಡ
ಶನಿವಾರ, 28 ಸೆಪ್ಟಂಬರ್ 2024
ಅಧ್ಯಾಯ 17: ಶ್ರದ್ಧಾತ್ರಯ ವಿಭಾಗ ಯೋಗ
1/2 (ಶ್ಲೋಕ 1-12)
ವಿವೇಚನಕಾರರು: ಗೀತಾ ಪ್ರವೀಣ ಕವಿತಾ ಜಿ ವರ್ಮ


ಇವತ್ತಿನ ಅರ್ಥವಿವೇಚನೆಯ ಕಾರ್ಯಕ್ರಮವು ಪ್ರಾರ್ಥನೆ ಮತ್ತು ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು. ವಿವೇಚಕರು ಗುರುವಂದನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸುತ್ತಾ, ಶಂಕರಾಚಾರ್ಯ ವಿರಚಿತ ಪ್ರಾರ್ಥನಾ ಶ್ಲೋಕವನ್ನು ಪಠಿಸಿ ಅದರ ಮಹಿಮೆಯನ್ನು ಹೇಳುತ್ತಾ, ಭಗವದ್ಗೀತೆ ನಮಗೆಲ್ಲ ತಾಯಿಯ ಸ್ವರೂಪ, ನಮಗೆ ಜೀವನದಲ್ಲಿ ಏನಾದರೂ ದುಃಖವಾದಾಗ, ವಿಷಾದಾಗ ನಮಗೆ ನಮ್ಮ ತಾಯಿಯ ಮಡಿಲಿನ ಹೇಗೆ ನೆನಪಾಗುತ್ತದೆಯೋ ಹಾಗೆ ಇಲ್ಲಿ ಭಗವದ್ಗೀತೆಯೂ ಆರಂಭವಾಗುವುದು. ಯುದ್ಧ ಆರಂಭಿಸುವ ಮೊದಲು ಅರ್ಜುನನ ವಿಷಾದ ಪರಿಸ್ಥಿತಿ ಹೇಗಿತ್ತೆಂದರೆ ಅವನು ಯುದ್ಧ ಮಾಡುವುದೋ ಅಥವಾ ಬೇಡವೋ ಎಂಬ ದ್ವಂದ್ವದಲ್ಲಿ ಸಿಲುಕಿ ಹಾಕಿಕೊಂಡಿದ್ದನು. ಏಕೆಂದರೆ ಎರಡೂ ಕಡೆಯ ಸೈನ್ಯದಲ್ಲಿ ತನ್ನವರೇ ಇದ್ದಾರೆ ಎಂಬುದರಿಂದ. ನಿತ್ಯಾನಿತ್ಯದ ವಿವೇಕ ಅವನಲ್ಲಿ ಇಲ್ಲವಾದಾಗ ಸಾಕ್ಷಾತ್ ಶ್ರೀ ಕೃಷ್ಣನು ಅವನಿಗೆ ಭಗವದ್ಗೀತೆಯನ್ನು ಉಪದೇಶ ಮಾಡುತ್ತಾರೆ. ಯಾವಾಗ ನಮಗೆ ಜೀವನದಲ್ಲಿ ಏನೂ ತೋಚುವುದಿಲ್ಲವೋ, ನಮ್ಮೆದುರಿಗೆ ಅಂಧಕಾರ ಆವರಿಸಿಕೊಂಡಿರುತ್ತದೆಯೋ ಆಗ ನಾವು ಭಗವದ್ಗೀತೆಗೆ ಶರಣಾಗತರಾದರೆ ನಮಗೆ ಪ್ರಕಾಶತೆ ಉಂಟಾಗುತ್ತದೆ ಮತ್ತು ಸರಿಯಾದ ದಾರಿಯಲ್ಲಿ ಹೋಗಲು ಮಾರ್ಗ ಸಿಗುತ್ತದೆ. ಗಾಂಧೀಜಿಯವರಿಗೂ ತಮ್ಮ ಜೀವನದಲ್ಲಿ ಏನೂ ತೋಚದೆ ಇದ್ದ ಪರಿಸ್ಥಿತಿಯಲ್ಲಿ ಅವರು ಗೀತಾಮಾತೆಗೆ ಶರಣು ಹೋಗುತ್ತಿದ್ದರು ಎಂದು ವಿವೇಚಕರು ತಿಳಿಸುತ್ತಾರೆ. ಇದಕ್ಕೆ ಮುಖ್ಯವಾಗಿ ಬೇಕಾದದ್ದು ಶ್ರದ್ಧೆ. ಒಬ್ಬ ಭಕ್ತನಾಗಲಿ, ಜ್ಞಾನಿಯಾಗಲಿ, ಅಥವಾ ಕರ್ಮಯೋಗಿಯಾಗಲಿ ಎಲ್ಲರಿಗೂ ಮುಖ್ಯವಾಗಿ ಇರಬೇಕಾದಂತಹ ಗುಣವೆಂದರೆ ಶ್ರದ್ಧೆ.

ಸದಾಶಿವ ಸಮಾರಂಭಮ್...  ಎಂಬ ಶ್ಲೋಕವನ್ನು ನಾವು ಪಠಿಸಿದಾಗ ನಾವು ಪೂರ್ಣ ಗುರು ಪರಂಪರೆಯನ್ನು ನೆನಪಿಗೆ ತಂದುಕೊಳ್ಳುತ್ತೇವೆ. ಆದಿ ಶಂಕರಾಚಾರ್ಯರು ಕೂಡ ಜ್ಞಾನಮಾರ್ಗದಲ್ಲಿದ್ದರು. ಅವರಿಗೆ ಅವರ ಭಗವಂತನ ಮೇಲೆ ಮತ್ತು ಗುರುವಿನ ಮೇಲೆ ಅಪಾರ ಶ್ರದ್ಧೆ ಇತ್ತು. ಹಾಗಾಗಿ ಶ್ರದ್ಧೆ ಎಂಬುದು ಅಧ್ಯಾತ್ಮ ಜೀವನಕ್ಕೆ ಬೇಕಾದ ಅತ್ಯವಶ್ಯಕವಾದ ಗುಣವಾಗಿದೆ. ಶ್ರದ್ಧೆ ಇಲ್ಲದೆ ಇದ್ದರೆ ಜೀವನದಲ್ಲಿ ಏನನ್ನೂ ಪಡೆಯಲು ಆಗುವುದಿಲ್ಲ. ಯಾವುದೇ ಶಾಸ್ತ್ರ ಗ್ರಂಥವನ್ನು ಅರಿತಾಗ ಅದರಿಂದ ತಿಳಿಯುವ ಒಂದು ಅಂಶವೆಂದರೆ ಆ ಲೇಖಕರು ಅಥವಾ ಆ ಶಾಸ್ತ್ರಜ್ಞರು ಅಪಾರ ಜ್ಞಾನವನ್ನು ಹೊಂದಿದ್ದರೂ ಕೂಡ ಶಾಸ್ತ್ರ ಗ್ರಂಥದ ಮುನ್ನುಡಿಯಲ್ಲಿ ಭಗವಂತನಿಗೆ, ಗುರುವಿಗೆ ಅರ್ಪಿಸಿ ನಿರ್ವಿಘ್ನವಾಗಿ ಶಾಸ್ತ್ರಗ್ರಂಥ ಪೂರ್ಣವಾಗಲಿ ಎಂದು ಪ್ರಾರ್ಥಿಸುತ್ತಾ ಮಂಗಳ ಚರಣವನ್ನು ಬರೆಯುತ್ತಾರೆ.

ಶ್ರದ್ಧೆಯಿಂದ ಆಗುವ ಪ್ರಯೋಜನವೇನೆಂದು ವಿವೇಚಕರು ಸುಂದರವಾದ ತೋಟಕಾಚಾರ್ಯರ ಕಥೆಯಿಂದ ಪ್ರಸ್ತುತಪಡಿಸುತ್ತಾರೆ. ತೋಟಕಾಚಾರ್ಯರು ಶ್ರೀ ಶಂಕರಾಚಾರ್ಯರ ಶಿಷ್ಯರು. ಅವರಿಗೆ ವೇದಾಧ್ಯಯನ ಮಾಡಲು ಅಷ್ಟಾಗಿ ಸಾಧ್ಯವಾಗುತ್ತಿರಲಿಲ್ಲ ಆದರೆ ಶಂಕರಾಚಾರ್ಯರ ಸೇವೆಯನ್ನು ಬಹಳ ಶ್ರದ್ಧಾ, ಭಕ್ತಿ ಮತ್ತು ನಿಷ್ಠೆಯಿಂದ ಮಾಡುತ್ತಿದ್ದರು. ಒಮ್ಮೆ ಶಂಕರಾಚಾರ್ಯರು ಎಲ್ಲಾ ಶಿಷ್ಯರನ್ನು ಕರೆದು ಪಾಠ ಮಾಡಲು ಅನುವಾದಾಗ ತೋಟಕಚಾರ್ಯರು ಇನ್ನೂ ಬಂದಿರಲಿಲ್ಲ. ಅವರ ಬರುವಿಕೆಗಾಗಿ ಶಂಕರಾಚಾರ್ಯರು ಕಾಯುತ್ತಾ ಕುಳಿತಿದ್ದಾಗ ಅವರ ಇನ್ನೊಬ್ಬ ಶಿಷ್ಯರಾದ ಮಹಾತೇಜಸ್ವಿಯಾದ ಪದ್ಮಪಾದಾಚಾರ್ಯರು, ತೋಟಕರನ್ನು ಕಾಯುವ ಅಗತ್ಯವಿಲ್ಲ ಅವನಿಗೆ ವಿದ್ಯೆ ಏನು ಸಾಕಷ್ಟು ಮಟ್ಟಿಗೆ ಇಲ್ಲವಾದ್ದರಿಂದ ನೀವು ಪ್ರಾರಂಭಿಸಿ ಎಂದು ಕೇಳಿಕೊಂಡರು. ತೋಟಕರು ಗುರುಗಳ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತಿದ್ದು ಅದು ಮುಗಿದ ನಂತರ ಪಾಠಗಳಿಗೆ ಬಂದು ಸೇರಿಕೊಂಡರು. ಶಂಕರಾಚಾರ್ಯರು ಶಿಷ್ಯರಿಗೆಲ್ಲ ಪರೀಕ್ಷೆಯನ್ನು ಏರ್ಪಡಿಸಿದರು. ತನಗೆ ಏನೂ ಬರುವುದಿಲ್ಲ ಎಂದು ತೋಟಕಾಚಾರ್ಯರಿಗೆ ಗಾಬರಿಯಾಯಿತು. ಇಲ್ಲಿ ಅನೇಕ ಶಿಷ್ಯರು ಸ್ವ-ವಿರಚಿತ ಕಾವ್ಯಗಳನ್ನು ತತ್ಕ್ಷಣದಲ್ಲಿ ಅಲ್ಲೇ ರಚಿಸಿ ಗುರುಗಳಿಗೆ ಅರ್ಪಿಸಿ ಬಿಡುವ ಜ್ಞಾನಿಗಳಾಗಿದ್ದಾರೆ, ಆದರೆ ತನಗೆ ಆ ಸಾಮರ್ಥ್ಯವಿಲ್ಲ ಎಂದು ಚಿಂತಿಸಿದರು. ಏನು ಮಾಡುವುದು ಎಂದು ತೋಚದೆ ಗುರುಗಳ ಬಳಿ ಹೋಗಿ, ಗುರುಗಳೇ ನನಗೆ ಏನೂ ಬರುವುದಿಲ್ಲ ಎಂದಾಗ ಗುರು ದೃಷ್ಟಿಯಿಂದ ಅವರಲ್ಲಿ ಅಪಾರ ಶಕ್ತಿ ಉಂಟಾಗಿ ಅಲ್ಲೇ ಶ್ಲೋಕ ರಚನೆಯನ್ನು ಮಾಡಿದರು. ಅದೇ ಸುಂದರವಾದ ತೋಟಕಾಷ್ಟಕಮ್. ಗುರುವಿನ ಮೇಲೆ ಅಪಾರ ಶ್ರದ್ಧೆ ಇದ್ದದ್ದೇ ಇದಕ್ಕೆ ಕಾರಣ. ವಿವೇಚಕರು ಈ ಕಥೆಯನ್ನು ಅವರ ಗುರುಗಳಾದ ಶ್ರೀ ಗುರು ಗೋವಿಂದ ದೇವ ಗಿರಿ ಮಹಾರಾಜರು ಕೇಳಿದಾಗ ಅವರಿಗೆ ಆದ ಆಹ್ಲಾದವನ್ನು ಹಂಚಿಕೊಂಡರು.

ಶ್ರದ್ಧೆ ಇಲ್ಲದ ಕಾರ್ಯ ಎಂದಿಗೂ ಸಫಲತೆಯನ್ನು ಕಾಣುವುದಿಲ್ಲ. ಯಾರ ಮೇಲೆ ನಮ್ಮ ಶ್ರದ್ದೆ ಇದೆಯೋ ನಾವು ಅವರ ಕೃಪಾ ದೃಷ್ಟಿಗೆ ಪಾತ್ರರಾಗುತ್ತೇವೆ. ಇನ್ನೊಂದು ಪ್ರಯೋಜನವೆಂದರೆ ನಮಗೆ ಯಾವ ಕಾರ್ಯದಲ್ಲಿ ಶ್ರದ್ಧೆ ಇದೆಯೋ ಆ ಕಾರ್ಯವನ್ನು ಮಾಡಲು ನಾವು ಸದಾ ತತ್ಪರರಾಗಿರುತ್ತೇವೆ. ಅದಕ್ಕೆ ಬೇಕಾದ ಶಕ್ತಿಯನ್ನು ನಮ್ಮ ಮನಸ್ಸು ಕೊಡುತ್ತದೆ. ಮಾನವನ ಮೆದುಳು ಅತ್ಯಂತ ಅದ್ಭುತವಾದದ್ದು. ಇದು ಏನನ್ನು ಬೇಕಾದರೂ ನಿರ್ಮಿಸಬಹುದು. ನಮ್ಮೊಳಗೆ ಅಪಾರವಾದ ಶಕ್ತಿ ಇದೆ. ಆದರೆ ಪ್ರೇರಣೆಯ ಕೊರತೆಯಿಂದ ಅದರ ಪೂರ್ಣ ಸದುಪಯೋಗ ಪಡೆಯಲು ಆಗುವುದಿಲ್ಲ. ಒಮ್ಮೊಮ್ಮೆ ನಮ್ಮ ಶಕ್ತಿ ತಪ್ಪು ಮಾರ್ಗದ ಕಡೆಗೆ ಹೋಗುವ ಸಂಭವವಿರುತ್ತದೆ. ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸವೆಂದು, ಅದರಿಂದ ನಮಗೆ ತುಂಬಾ ಪ್ರಯೋಜನಗಳು ಇವೆ ಎಂದು ತಿಳಿದಿದ್ದರೂ ನಮ್ಮಲ್ಲಿ ಶ್ರದ್ಧೆಯ ಅಭಾವದಿಂದ ಅದನ್ನು ಮಾಡಲಾಗುವುದಿಲ್ಲ. ಆದರೆ ಕೆಲವರು ಶ್ರದ್ಧೆಯಿಂದ ಈ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ನಮ್ಮ ಗುರಿಯತ್ತ ಸಾಗಬೇಕಾದರೆ ಆ ಕೆಲಸದ ಬಗ್ಗೆ ನಮಗೆ ಶ್ರದ್ಧೆ ಇರಬೇಕು.

ಎಲ್ಲಾ ಸಿದ್ದಾಂತಗಳ ಸಮಾಗಮವಾದ ಭಗವದ್ಗೀತೆಯ ಕಲಿಕೆ, ಸ್ವಯಂ ಪರಬ್ರಹ್ಮನಾದ ಶ್ರೀ ಕೃಷ್ಣನ ಮುಖಾರವಿಂದದಿಂದ ಹೊರಬಂದ ಶ್ಲೋಕಗಳನ್ನು ಅನುಸರಿಸುವುದರಿಂದ, ಜೀವನದಲ್ಲಿ ಗೀತೆಯನ್ನು ಓದುವುದರಿಂದ, ಓದಿಸುವುದರಿಂದ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನದ ಧ್ಯೇಯ, ನಮ್ಮ ಜೀವಿತಕಾಲಾವಧಿಯಲ್ಲಿ ಸಾಕಾರವಾಗುತ್ತದೆ. ನಮ್ಮೆಲ್ಲರ ಜೀವನದಲ್ಲಿ ಏನಾದರೊಂದು ಕೊರತೆ, ದುಃಖವಿರುತ್ತದೆ. ಆದರೆ ಆ ದುಃಖದಿಂದ ಹೊರಬರುವ ಶಕ್ತಿ ಭಗವದ್ಗೀತೆಯಿಂದ ಸಿಗುತ್ತದೆ. ಯಾವ ಸಾಧಕನು ಭಗವದ್ಗೀತೆಯ ಮಾರ್ಗದಲ್ಲಿ ನಡೆಯುತ್ತಾನೆಯೋ ಅವನ ಜೀವನದಲ್ಲಿ ದುಃಖಗಳು ಬಂದರೂ ಅವನು ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮುಂದೆ ನಡೆಯುತ್ತಾನೆ. ಭಗವದ್ಗೀತೆ ಅವನಿಗೆ ಇಂತಹ ಶಕ್ತಿ ನೀಡುತ್ತದೆ. ಆ ಶಕ್ತಿಯೊಂದಿಗೆ ನಾವೆಲ್ಲ ಸೇರಿಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು.

ಶ್ರದ್ಧಾವಾನ್ ಲಭತೇ ಜ್ಞಾನಂ. ಭಕ್ತಿ ಮಾರ್ಗದಂತೆ ಇಲ್ಲಿ ಕೂಡ ಭಗವಂತನು, ಜ್ಞಾನಮಾರ್ಗಕ್ಕೂ ಕೂಡ ಶ್ರದ್ಧೆಯ ಅವಶ್ಯಕತೆ ಇದೆ ಎಂದು ಹೇಳುತ್ತಾನೆ. ಶ್ರದ್ಧೆ ಇಲ್ಲದೆ ಜ್ಞಾನವನ್ನು ಕೂಡ ಸುಲಭವಾಗಿ ಪಡೆಯಲು ಆಗುವುದಿಲ್ಲ. ನಾಲ್ಕನೇ ಅಧ್ಯಾಯದಲ್ಲಿ ಹೇಳಿರುವಂತೆ, ಶ್ರದ್ಧೆ ಇಲ್ಲವೆಂದರೆ ಆ ವ್ಯಕ್ತಿಯ ವಿನಾಶ ನಿಶ್ಚಿತವಾಗಿರುತ್ತದೆ. ಶ್ರದ್ಧೆ ಇಲ್ಲವೆಂದರೆ ನಂಬಿಕೆಯೇ ಇಲ್ಲದಂತೆ ಹಾಗಾಗಿ ನಾವು ನಮ್ಮ ಜೀವನದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಳ್ಳುವುದು ತುಂಬಾ ಅತ್ಯವಶ್ಯಕವಾಗಿದೆ.

ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ |
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ॥ 16-23

ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ॥ 16-24 

ಶ್ಲೋಕ ೧೬.೨೩ ರಲ್ಲಿ ಹೇಳಿರುವಂತೆ ಯಾರು ಶಾಸ್ತ್ರವಿಧಿಯನ್ನು ಬಿಟ್ಟು ತನ್ನ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಾರೋ ಅವರಿಗೆ ಸಿದ್ದಿ, ಸುಖ ಪರಮ ಗತಿಯು ಕೂಡ ಲಭಿಸುವುದಿಲ್ಲ.
ಶ್ಲೋಕ ೧೬.೨೪ ರಲ್ಲಿ, ಶಾಸ್ತ್ರವನ್ನು ಪ್ರಮಾಣವಾಗಿಟ್ಟುಕೊಂಡು ಅದರಂತೆ ಕಾರ್ಯವನ್ನು ನಿರ್ವಹಿಸು ಎಂದು ಭಗವಂತನು ಹೇಳುತ್ತಾನೆ. ಇಲ್ಲಿ, ಎಲ್ಲರಿಗೂ ಸಂಶಯ ಬಂದಂತೆ, ಅರ್ಜುನನಿಗೂ ಈ ಶಾಸ್ತ್ರವೆಂದರೇನು? ಎಂಬ ಸಂಶಯ ಉಂಟಾಗುತ್ತದೆ. ಶಾಸ್ತ್ರದ ಬಗ್ಗೆ ಶ್ರದ್ಧೆ ಇದ್ದರೂ ಶಾಸ್ತ್ರ ಏನು ಎಂಬುದರ ಬಗ್ಗೆ ನಮಗೆ ಅರಿವು ಇರುವುದಿಲ್ಲ. ನಾವು ಮಾಡುತ್ತಿರುವ ಕಾರ್ಯ ಶಾಸ್ತ್ರಬದ್ಧವಾಗಿದೆಯೂ ಇಲ್ಲವೋ ಎಂದು ತಿಳಿಯುವುದು ಹೇಗೆ? ನಾವು ಒಂದು ವೇಳೆ ಶ್ರದ್ಧೆಯಿಂದ ಕಾರ್ಯ ಮಾಡುತ್ತಿದ್ದು ಶಾಸ್ತ್ರವೆಂದರೇನು ಎಂದು ಅರಿಯದೆ ಇದ್ದರೆ ಅದರ ಪರಿಣಾಮಗಳೇನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಭಗವಂತನು ಈ ಅಧ್ಯಾಯದಲ್ಲಿ ನೀಡುತ್ತಾನೆ.

17.1

ಅರ್ಜುನ ಉವಾಚ
ಯೇ ಶಾಸ್ತ್ರವಿಧಿಮುತ್ಸೃಜ್ಯ, ಯಜಂತೇ ಶ್ರದ್ಧಯಾನ್ವಿತಾಃ |
ತೇಷಾಂ(ನ್) ನಿಷ್ಠಾ ತು ಕಾ ಕೃಷ್ಣ, ಸತ್ತ್ವಮಾಹೋ ರಜಸ್ತಮಃ ।।1।।

ಅರ್ಜುನ ಹೇಳಿದನು - ಹೇ ಶ್ರೀ ಕೃಷ್ಣ ! ಯಾರು ಶಾಸ್ತ್ರವಿಧಿಗಳನ್ನು ಬಿಟ್ಟು ಕೇವಲ ಶ್ರದ್ಧಾಯುಕ್ತರಾಗಿ ದೇವಾದಿಗಳನ್ನು ಆರಾಧಿಸುವರೋ, ಅವರ ಸ್ಥಿತಿಗತಿ ಯಾವ ರೀತಿಯದು ? ಸಾತ್ತ್ವಿಕವೋ ಅಥವಾ ರಾಜಸವೋ ಇಲ್ಲವೇ ತಾಮಸವೋ?

ಯಾರು ಶಾಸ್ತ್ರ ವಿಧಿಯನ್ನು ಬಿಟ್ಟು ಕೇವಲ ಶ್ರದ್ಧೆಯಿಂದ ಆರಾಧಿಸುವರೋ ಅವರ ಸ್ಥಿತಿ ಯಾವ ರೀತಿಯದು? ಶಾಸ್ತ್ರದಲ್ಲಿ ತಿಳಿಸಿರುವಂತೆ ಕಾರ್ಯವನ್ನು ನಿರ್ವಹಿಸದೆ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ಶಾಸ್ತ್ರದ ಅಧ್ಯಯನ ಮಾಡದೆ ಇರಬಹುದು, ಶಾಸ್ತ್ರದಲ್ಲಿ ಏನಿದೆ ಎಂಬುದರ ಅರಿವು ಇಲ್ಲದೆ ಇರಬಹುದು, ಎಲ್ಲರೂ ಶಾಸ್ತ್ರಗಳನ್ನು ಗ್ರಹಿಸುವಲ್ಲಿ ನಿಷ್ಣಾತರಾಗಿಲ್ಲದೆ ಇರಬಹುದು, ಕೆಲವೊಮ್ಮೆ ಶಾಸ್ತ್ರವನ್ನು ಓದಿದರೂ ಅದರ ಅರ್ಥವನ್ನು ಗ್ರಹಿಸುವಲ್ಲಿ ಸಾಧ್ಯವಾಗದೇ ಇರಬಹುದು. ಅರ್ಜುನ ಇಲ್ಲಿ ಕೇಳುತ್ತಾನೆ, "ಶಾಸ್ತ್ರವೆಂದರೆ ಏನು? ಅದನ್ನು ಅರಿಯದೆ ಇದ್ದರೂ ಅದರ ಮೇಲೆ ಶ್ರದ್ಧೆ ಇಟ್ಟು ಕಾರ್ಯನಿರ್ವಹಿಸುತ್ತಿದ್ದರೆ ಅವರುಗಳ ನಿಷ್ಠೆ ಯಾವ ಪ್ರಕಾರದಾಗಿರುತ್ತದೆ?  ಹೇ ಕೃಷ್ಣ! ಅವರು ಸತ್ವಗುಣಿ, ರಜೋಗುಣಿ ಅಥವಾ ತಮೋಗುಣಿಗಳಾಗಿರುತ್ತಾರೆಯೇ?"

ಸಾಮಾನ್ಯವಾಗಿ ನಮಗೆ ವೇದಗಳಲ್ಲಿ, ಶಾಸ್ತ್ರಗಳಲ್ಲಿ, ಗುರು ವಾಕ್ಯದ ಮೇಲೆ ಶ್ರದ್ಧೆ ಇರುತ್ತದೆ. ಆದರೆ ಕೆಲವೊಮ್ಮೆ ಮಂದಮತಿಯ ಕಾರಣದಿಂದಾಗಿ ಅದನ್ನು ಅರ್ಥ ಮಾಡಿಕೊಳ್ಳದೆ ಏನಾದರೂ ತಪ್ಪುಗಳಾದರೆ ನಾವು ಯಾವ ಗುಣಿಗಳಾಗುತ್ತೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಮೂರು ಗುಣಗಳ ಬಗ್ಗೆ ನಾವು 14ನೇ ಅಧ್ಯಾಯದಲ್ಲಿ ವಿಸ್ತಾರವಾಗಿ ನೋಡುತ್ತೇವೆ. ಭಾರತ ದರ್ಶನ ಶಾಸ್ತ್ರದ ಆಧಾರ ಈ ಮೂರು ಗುಣಗಳಿಂದ ಕೂಡಿರುತ್ತದೆ. ಗುಣತ್ರಯ ವಿಭಾಗಯೋಗ ಎನ್ನುವ ಅಧ್ಯಾಯದಲ್ಲಿ ಈ ಮೂರು ಗುಣಗಳ ವಿಸ್ತೃತ ವಿವರಣೆಯನ್ನು ಭಗವಂತನು ಕೊಡುತ್ತಾರೆ. ನಾವು ಭಗವದ್ಗೀತೆಯನ್ನು ಕಲಿಯುತ್ತಿದ್ದೇವೆ. ಈ ಗುಣಗಳ ಬಗ್ಗೆ ತಿಳಿದು ಕೊಳ್ಳುವುದು ಬಹಳ ಮಹತ್ವದ್ದಾಗಿದೆ.

17.2

ಶ್ರೀಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ, ದೇಹಿನಾಂ(ಮ್) ಸಾ ಸ್ವಭಾವಜಾ |
ಸಾತ್ತ್ವಿಕೀ ರಾಜಸೀ ಚೈವ, ತಾಮಸೀ ಚೇತಿ ತಾಂ(ಮ್) ಶೃಣು ।।2।।

ಶ್ರೀ ಕೃಷ್ಣ ಪರಮಾತ್ಮ ಹೇಳಿದನು - ಮಾನವರ ಸ್ವಭಾವದಿಂದಲೇ ಉಂಟಾದ ಶಾಸ್ತ್ರೀಯ ಸಂಸ್ಕಾರವಿಲ್ಲದ ಆ ಶ್ರದ್ಧೆಯು ಸಾತ್ತ್ವಿಕ, ರಾಜಸ ಮತ್ತು ತಾಮಸ ಎಂಬುದಾಗಿ ಮೂರು ವಿಧವಾಗಿವೆ. ಅದನ್ನು ಹೇಳುತ್ತೇನೆ ಕೇಳು.

ಭಗವಂತನು ಹೇಳುತ್ತಾನೆ, "ಶ್ರದ್ಧೆಯಲ್ಲಿ ಮೂರು ಪ್ರಕಾರಗಳಿರುತ್ತದೆ ನಮ್ಮ ಸ್ವಭಾವದಿಂದ ಈ ಗುಣಗಳು ಹುಟ್ಟಿಕೊಳ್ಳುತ್ತವೆ."

ಹಿಂದಿನ ಜನ್ಮದ ಸಂಸ್ಕಾರಗಳಿಂದ ಶ್ರದ್ಧೆ ಬರಬಹುದು. ನಾವು ಗಮನಿಸಿದರೆ ಕೆಲವು ಚಿಕ್ಕ ಮಕ್ಕಳು ಬಾಲ್ಯದಿಂದಲೇ ಪೂಜೆಯ ಕಡೆಗೆ, ಗುರುವಿನ ಕಡೆಗೆ, ಗುರು ವಾಕ್ಯದ ಕಡೆಗೆ ಒಲವು ತೋರಿಸುತ್ತಾರೆ. ಇದು ಪೂರ್ವ ಜನ್ಮದ ಶ್ರದ್ಧೆಯಿಂದಾಗಿರುತ್ತದೆ. ಇದನ್ನು ಸ್ವಭಾವಜ ಶ್ರದ್ದೆ ಎನ್ನುತ್ತಾರೆ. ಇನ್ನು ಶಾಸ್ತ್ರಜ ಶ್ರದ್ಧೆ ಎಂದರೆ ಶಾಸ್ತ್ರಗಳ ಅಧ್ಯಯನ ಮಾಡುವುದರಿಂದ ಉಂಟಾಗುವ ಶ್ರದ್ಧೆ. ನಮ್ಮ ಬಾಲ್ಯದಲ್ಲಿ ಇದ್ದ ಶ್ರದ್ದೆ ಉತ್ತಮವಾದದ್ದಾಗಿದೆ. ಈ ಶ್ಲೋಕದಲ್ಲಿ ಸ್ವಭಾವಜ ಎಂಬ ಅರ್ಥವನ್ನು ಹೀಗೆ ಕೂಡ ಗ್ರಹಿಸಿಕೊಳ್ಳಬಹುದು. ಸ್ವಭಾವದೊಂದಿಗೆ ಶ್ರದ್ಧೆ ಕೂಡ ವಿಕಸಿತಗೊಳ್ಳುತ್ತದೆ. ನಾವು ಯಾವ ಪರಿಸರದಲ್ಲಿ ಬೆಳೆಯುತ್ತೇವೆಯೋ, ಆ ಪರಿಸರದ ಪ್ರಭಾವದಿಂದಲೂ ನಮ್ಮ ಶ್ರದ್ಧೆ ಪರಿವರ್ತನೆಗೊಳ್ಳುತ್ತದೆ. ಶ್ರದ್ಧೆ ಮೂರು ಪ್ರಕಾರದಾಗಿದೆ ಎಂದು ಭಗವಂತನು ಹೇಳುತ್ತಾರೆ. ಅವೆಂದರೆ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ. ಭಗವದ್ಗೀತೆಯಲ್ಲಿ ಈ ಮೂರು ಪ್ರಕಾರಗಳು ಎಲ್ಲಾ ಹಂತಗಳಲ್ಲಿಯೂ ಸಿಗುತ್ತವೆ.

ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ |
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ || 18-40 

18ನೇ ಅಧ್ಯಾಯದ 40ನೇ ಶ್ಲೋಕ ದಲ್ಲಿ ಹೇಳಿರುವಂತೆ, ಸಂಪೂರ್ಣ ಪೃಥ್ವಿಯ ಮೇಲೆ ಈ ಮೂರು ಅಂಶಗಳು ಇಲ್ಲದೆ ಇರುವ ತತ್ತ್ವವೇ ಇಲ್ಲ. ಈ ಮೂರು ಗುಣಗಳು ಎಲ್ಲಾ ಸ್ಥಾನಗಳಲ್ಲಿಯೂ, ಶಬ್ದಗಳಲ್ಲಿಯೂ, ವಸ್ತುಗಳಲ್ಲಿಯೂ, ವಿಷಯಗಳಲ್ಲಿಯೂ ವಿದ್ಯಮಾನವಾಗಿರುತ್ತವೆ.

17.3

ಸತ್ತ್ವಾನುರೂಪಾ ಸರ್ವಸ್ಯ, ಶ್ರದ್ಧಾ ಭವತಿ ಭಾರತ |
ಶ್ರದ್ಧಾಮಯೋಽಯಂ(ಮ್) ಪುರುಷೋ, ಯೋ ಯಚ್ಛ್ರದ್ಧಃ(ಸ್) ಸ ಏವ ಸಃ ।।3।।

ಎಲೈ ಅರ್ಜುನ ! ಎಲ್ಲರ ಶ್ರದ್ಧೆಯು ಅವರವರ ಅಂತಃಕರಣಕ್ಕೆ ಅನುಗುಣವಾಗಿ ಉಂಟಾಗುತ್ತದೆ. ಈ ಮನುಷ್ಯ ಶ್ರದ್ಧಾವಂತನು, ಯಾರು ಎಂತಹ ಶ್ರದ್ಧೆಯುಳ್ಳವನಾಗಿರುತ್ತಾನೆಯೋ ಅವನು ಸ್ವತಃ ಅದರಂತೆ ಇರುತ್ತಾನೆ. ಅರ್ಥಾತ್ ಯಾರ ಶ್ರದ್ಧೆ ಹೇಗಿರುತ್ತದೆಯೋ ಹಾಗೆಯೇ ಅವರ ಸ್ವರೂಪವೂ ಇರುತ್ತದೆ.

ನಮ್ಮ ಅಂತಃಕರಣ ಹೇಗಿರುತ್ತದೆಯೋ ಹಾಗೆ ನಮ್ಮ ಶ್ರದ್ಧೆ ಇರುತ್ತದೆ. ಇಲ್ಲಿ ಭಾರತ ಎಂದು ಅರ್ಜುನನನ್ನು ಸಂಬೋಧನೆ ಮಾಡಲಾಗಿದೆ. ವ್ಯಕ್ತಿಯ ಶ್ರದ್ಧೆಯನ್ನು ಅವಲಂಬಿಸಿ ಅವನ ವ್ಯಕ್ತಿತ್ವ ಕೂಡ ನಿರ್ಮಾಣಗೊಳ್ಳುತ್ತದೆ. ಯಾವ ವ್ಯಕ್ತಿಗೆ ಆಧ್ಯಾತ್ಮಿಕತೆಯ ಕಡೆಗೆ ಶ್ರದ್ದೆ ಇರುತ್ತದೆಯೋ ಅವನಲ್ಲಿ ಅದೇ ವಿಚಾರಗಳು ಮನಸ್ಸಿಗೆ ಬರುತ್ತಿರುತ್ತವೆ. ಅವನು ಅದೇ ರೀತಿಯ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಅವನ ವ್ಯಕ್ತಿತ್ವವೇ ಅದರಂತೆ ಬದಲಾವಣೆ ಆಗಿಬಿಡುತ್ತದೆ. ಯಾರ ಶ್ರದ್ಧೆ ರಾಜಸಿಕ ಆಗಿರುತ್ತದೆಯೋ ಅವರು ಸುತ್ತಾಟಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟಿರುತ್ತಾರೆ. ತಮ್ಮನ್ನು ತಾವು ಅಲಂಕರಿಸಿಕೊಳ್ಳುವುದಕ್ಕೆ ಪ್ರಾಮುಖ್ಯತೆ ಕೊಟ್ಟಿರುತ್ತಾರೆ. ಆ ವ್ಯಕ್ತಿಯ ಶ್ರದ್ಧೆ ರಾಜಸಿಕ ಆಗಿರುವುದರಿಂದ ಅವನ ಕೆಲಸ ಕಾರ್ಯಗಳ ಮೇಲೂ ಅದರ ಪರಿಣಾಮ ಬೀರಿರುತ್ತದೆ. ಅವನು ರಾಜಸೀ ಕಾರ್ಯವನ್ನು ಮಾಡುತ್ತಿರುತ್ತಾನೆ. ಯಾವುದೇ ಕಾರ್ಯ ಮಾಡಲು ಪ್ರೇರಣೆ ಮುಖ್ಯವಾಗಿರುತ್ತದೆ. ಪ್ರೇರಣೆ ಬರುವುದು ಶ್ರದ್ಧೆಯಿಂದ, ನಮ್ಮ ಶ್ರದ್ಧೆ ಏನಾದರೂ ಸಾತ್ತ್ವಿಕವಾಗಿದ್ದರೆ ನಮ್ಮ ಜೀವನ ಸಾತ್ತ್ವಿಕತೆಯಿಂದ ಕೂಡಿರುತ್ತದೆ.
              
ವಿವೇಚಕರು ಇದನ್ನು ಒಂದು ಸುಂದರವಾದ ಕಥೆಯ ಮೂಲಕ ನಿರೂಪಿಸುತ್ತಾರೆ. ಒಂದು ರಾಜ್ಯದಲ್ಲಿ ಒಬ್ಬ ರಾಜನು ಸುಂದರ, ರಮಣೀಯ, ದ್ವಾರಕಾಧೀಶನ ವಿಗ್ರಹವನ್ನು ಮಾಡಿಸುವ ಸಲುವಾಗಿ ಆ ರಾಜ್ಯದಲ್ಲಿರುವ ಎಲ್ಲ ಮೂರ್ತಿಕಾರರಿಗೆ ಆಹ್ವಾನ ಕೊಡುತ್ತಾನೆ. ಯಾವ ಮೂರ್ತಿಕಾರ ಸುಂದರವಾದ ಮತ್ತು ರಮಣೀಯ ದ್ವಾರಕಾಧೀಶನ ವಿಗ್ರಹವನ್ನು ಕೆತ್ತಿ ಕೊಡುತ್ತಾರೋ ಅವರಿಗೆ ವಿಶೇಷವಾದ ಬಹುಮಾನಗಳನ್ನು ಕೊಡಲಾಗುವುದು ಎಂದು ಘೋಷಣೆ ಮಾಡುತ್ತಾನೆ. ಆ ರಾಜ್ಯದ ಒಬ್ಬ ಶ್ರೇಷ್ಠ ಮೂರ್ತಿಕಾರ ಮಹಾರಾಜನ ಬಳಿ ಬಂದು, "ನಾನು ನಿಮ್ಮ ಅಪೇಕ್ಷೆಯ ಮೂರ್ತಿಯನ್ನು ಕೆತ್ತಿ ಕೊಡುತ್ತೇನೆ, ಆದರೆ ನನಗೆ ಸರಿ ಎನಿಸುವ ಕಲ್ಲು ಸಿಗುವವರೆಗೂ ನಾನು ಕೆತ್ತನೆಯ ಕೆಲಸವನ್ನು ಪ್ರಾರಂಭಿಸುವುದಿಲ್ಲವೆಂಬ ಷರತ್ತನ್ನು ಇಡುತ್ತಾನೆ. ಆ ಮೂರ್ತಿಕಾರನ ವಿಶೇಷ ಗುಣವೆಂದರೆ ಅವನು ಕಲ್ಲಿನ ಜೊತೆ ವಾರ್ತಾಲಾಪನೆಯನ್ನು ನಡೆಸುತ್ತಿದ್ದನು. ರಾಜನ ಆದೇಶದ ಮೇಲೆ ಸೈನಿಕರು ಕೆತ್ತನೆಯ ಕಲ್ಲಿಗಾಗಿ ಹುಡುಕಾಟ ನಡೆಸಿ ರಾಜ್ಯ ಹೊರ ರಾಜ್ಯಗಳಿಂದ ವಿವಿಧ ಕೆತ್ತನೆಯ ಕಲ್ಲುಗಳನ್ನು ತರುತ್ತಾರೆ. ಅದನ್ನು ಪರೀಕ್ಷಿಸಿದ ಮೂರ್ತಿಗಾರ ನಾಲ್ಕು ಕಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಮೊದಲನೆಯ ಕಲ್ಲಿನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ಆ ಕಲ್ಲು ಅಳುತ್ತಾ ಆ ಮೂರ್ತಿಕಾರನಿಗೆ ನನ್ನನ್ನು ದಯಮಾಡಿ ಬಿಟ್ಟುಬಿಡು ನನಗೆ ಈ ಉಳಿ ಪೆಟ್ಟು ಸಹಿಸಲು ಆಗುವುದಿಲ್ಲ ನನಗೆ ಯಾವ ಆಕಾರವನ್ನು ಕೊಡಬೇಡ ಎಂದು ಹೇಳುತ್ತದೆ. ಮೂರ್ತಿಕಾರನು ಅದನ್ನು ಬದಿಗಿಟ್ಟು ಎರಡನೆಯ ಕಲ್ಲಿನೊಂದಿಗೆ ಕೆತ್ತನೆಯ ಕಾರ್ಯವನ್ನು ಪ್ರಾರಂಭಿಸುತ್ತಾನೆ. ಕೆಲ ದಿನಗಳು ಅದರೊಂದಿಗೆ ಕೆತ್ತನೆಯ ಕಾರ್ಯ ಮಾಡಿದಾಗ ಆ ಕಲ್ಲಿಗೆ ಅದನ್ನು ಸಹಿಸಿಕೊಳ್ಳಲಾಗದೆ ಮೂರ್ತಿಕಾರನನ್ನು ಕುರಿತು ನನ್ನಿಂದ ಇನ್ನು ಈ ಪೆಟ್ಟನ್ನು ಸಹಿಸಲು ಆಗದು ನನ್ನನ್ನು ದಯಮಾಡಿ ಬಿಟ್ಟುಬಿಡು ಎಂದು ಕೇಳಿತು. ಮೂರ್ತಿಕಾರನು ಆ ಎರಡನೆಯ ಕಲ್ಲನ್ನು ಬದಿಗೆ ಇಟ್ಟನು. ಈಗ ಮೂರ್ತಿಕಾರನು ಮೂರನೆಯ ಕಲ್ಲಿನೊಂದಿಗೆ ಕಾರ್ಯವನ್ನು ಆರಂಭಿಸಿದನು. ಆರು ತಿಂಗಳು ಸತತ ಆ ಕಲ್ಲಿನೊಂದಿಗೆ ಕೆಲಸ ಮಾಡಿದ ತರುವಾತ ಆ ಕಲ್ಲು ನೋವನ್ನು ಸಹಿಸಲಾಗದೆ ಇನ್ನು ನನ್ನಿಂದಲೂ ಈ ಪೆಟ್ಟನ್ನು ಸಹಿಸಲು ಆಗದು ನನ್ನನ್ನು ದಯಮಾಡಿ ಬಿಟ್ಟುಬಿಡು ಎಂದಿತು. ಮೂರ್ತಿಕಾರನು ಅದನ್ನು ಸಹ ಬದಿಗಿಟ್ಟು ನಾಲ್ಕನೆಯ ಕಲ್ಲಿನೊಂದಿಗೆ ಕೆತ್ತನೆಯ ಕಾರ್ಯವನ್ನು ಪ್ರಾರಂಭಿಸುತ್ತಾನೆ ಆ ಕಲ್ಲನ್ನು ಮುಟ್ಟಿದ ಮೂರ್ತಿಕಾರನಿಗೆ ಅದರ ಸಾತ್ತ್ವಿಕತೆಯ ಅನುಭವ ಉಂಟಾಗುತ್ತದೆ. ಆ ಕಲ್ಲು ಮೂರ್ತಿಕಾರನಿಗೆ ಹೇಳುತ್ತದೆ, "ನಿನಗೆ ಯಾವ ಆಕಾರ ಬೇಕೋ ಅದನ್ನು ಉಳಿಪೆಟ್ಟುಕೊಟ್ಟು ನನ್ನಲ್ಲಿ ಸಿದ್ಧ ಮಾಡಿಕೋ. ನಾನು ಪೂರ್ಣವಾಗಿ ಸಮರ್ಪಿತವಾಗಿದ್ದೇನೆ. ನನ್ನಲ್ಲಿ ಪೂರ್ಣ ಶ್ರದ್ಧೆ ಇದೆ. ನನ್ನಂತಹ ಕಲ್ಲಿನಿಂದ ಸುಂದರ ದ್ವಾರಕಾಧೀಶನ ಮೂರ್ತಿ ಮಾಡುತ್ತಿದ್ದೀಯಾ. ಇದಕ್ಕಿಂತ ಮಹತ್ವಪೂರ್ಣ ವಿಷಯವೇ ಇಲ್ಲ." ಮೂರ್ತಿಕಾರನು ಆ ಕಲ್ಲಿನೊಂದಿಗೆ ಸತತವಾಗಿ ಕಾರ್ಯನಿರ್ವಹಿಸುತ್ತಾ ಸುಂದರ ದ್ವಾರಕಾಧೀಶನ ವಿಗ್ರಹದ ಕೆತ್ತನೆಯ ಕಾರ್ಯವನ್ನು ಮಾಡುತ್ತಾನೆ. ಆ ವಿಗ್ರಹ ಹೇಗಿತ್ತೆಂದರೆ ಇನ್ನೇನು ಅದು ನಮ್ಮ ಜೊತೆಯಲ್ಲಿ ಮಾತನಾಡಿ ಬಿಡುವುದು ಎಂಬ ಭಾವವಿತ್ತು. ಇದನ್ನು ನೋಡಿದ ರಾಜನಿಗೆ ಅತ್ಯಂತ ಸಂತೋಷವಾಗಿ ತನ್ನ ಕೊರಳಿನ ಹಾರವನ್ನು ಆ ಮೂರ್ತಿಕಾರನಿಗೆ ಕೊಟ್ಟು ಪುರಸ್ಕರಿಸಿದನು. ಆಯ್ಕೆಗೊಂಡ ನಾಲ್ಕು ಕಲ್ಲುಗಳಲ್ಲಿ ಒಂದು ಕಲ್ಲು ಶ್ರದ್ಧೆಯಿಂದ ಎಲ್ಲವನ್ನು ಸಹಿಸಿಕೊಂಡು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟು, ಭಗವಂತನ ರೂಪವಾಯಿತು. ಇನ್ನು, ಆರು ತಿಂಗಳು ಉಳಿ ಪೆಟ್ಟು ತಿಂದ ಕಲ್ಲು ದೇಗುಲದ ಹೊರಗಿನ ಸಿಂಹದ ಮೂರ್ತಿಯಾಯಿತು. ಎರಡನೇ ಕಲ್ಲು ದೇಗುಲದ ನೆಲಹಾಸಿಗೆಯಾಯಿತು. ಮೊದಲನೆಯ ಕಲ್ಲನ್ನು ದೇವಸ್ಥಾನದಿಂದ ಹೊರಗೆ ಇಡಲಾಯಿತು. ಯಾರು ಎಷ್ಟನ್ನು ಸಹಿಸಿಕೊಳ್ಳುತ್ತಾರೋ ಅವರು ಅಷ್ಟೇ ಪ್ರಕಾಶಗೊಳ್ಳುತ್ತಾರೆ. ಸೂರ್ಯ ಮುಂಜಾನೆಯ ಸಮಯದಲ್ಲಿ ಅಷ್ಟೇನೂ ಪ್ರಖರವಲ್ಲದ ಕಿರಣಗಳನ್ನು ಹೊರಹೊಮ್ಮಿಸುತ್ತಾನೆ. ಮಧ್ಯಾಹ್ನ ಹಾಗಲ್ಲ, ಸೂರ್ಯನ ಕಿರಣಗಳು ಕಾದು ಪ್ರಖರ ಕಿರಣಗಳನ್ನು ಸೂಸುತ್ತದೆ.

ಮಕ್ಕಳಿಗೆ ಆಟದಲ್ಲಿ ಎಷ್ಟು ಶ್ರದ್ಧೆ ಇರುತ್ತದೆ ಎಂದರೆ ಅದು ಕಷ್ಟವಾಗುವುದಿಲ್ಲ. ಆದರೆ ಒಂದು ಕೆಲಸ ಹೇಳಿದರೆ ಅದು ತುಂಬಾ ಕಠಿಣವಾಗಿ ತೋರುತ್ತದೆ. ಕೆಲವೊಮ್ಮೆ ಆಸಕ್ತಿ ಇಲ್ಲದಿದ್ದರೂ ಶ್ರದ್ಧೆ ಇರುತ್ತದೆ. ಶ್ರದ್ದೆಯಿಂದ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು. ಮಾನವನ ಮಸ್ತಿಷ್ಕ ಮತ್ತು ಮನಸ್ಸು ಅತ್ಯಂತ ಬಲಶಾಲಿ ಆಗಿರುತ್ತದೆ. ಯಾವಾಗ ಬೇಕಾದರೂ ನಾವು ನಮ್ಮ ಆಸಕ್ತಿಯನ್ನು ವಿಕಸಿತಗೊಳಿಸಬಹುದು. ವಾತಾವರಣದಲ್ಲಿ ಅಗ್ನಿ ಇಲ್ಲದಿರುವಾಗ ಬೆಂಕಿ ಪೊಟ್ಟಣದ ಸಹಾಯದಿಂದ ಅಗ್ನಿಯನ್ನು ಪ್ರಕಟಗೊಳಿಸಬಹುದು. ಹಾಗೆ ನಮ್ಮಲ್ಲಿ ಶ್ರದ್ಧೆ ಇದ್ದರೆ ಅದರ ಫಲ ಸ್ವರೂಪ ಆಸಕ್ತಿಯನ್ನು ಪ್ರಕಟಗೊಳಿಸಬಹುದು.

17.4

ಯಜಂತೇ ಸಾತ್ತ್ವಿಕಾ ದೇವಾನ್, ಯಕ್ಷರಕ್ಷಾಂಸಿ ರಾಜಸಾಃ |
ಪ್ರೇತಾನ್ಭೂತಗಣಾಂಶ್ಚಾನ್ಯೇ, ಯಜಂತೇ ತಾಮಸಾ ಜನಾಃ ।।4।।

ಸಾತ್ತ್ವಿಕರು ದೇವತೆಗಳನ್ನೂ, ರಾಜಸ ಪುರುಷರು ಯಕ್ಷ-ರಾಕ್ಷಸರನ್ನೂ ಮತ್ತು ಇನ್ನುಳಿದ ತಾಮಸ ಮನುಷ್ಯರು ಪ್ರೇತ-ಭೂತ ಗಣಗಳನ್ನೂ ಪೂಜಿಸುತ್ತಾರೆ.

ನಮ್ಮ ದಿನಚರಿ ಪ್ರಾರಂಭವಾಗುವುದು ಪೂಜೆಯಿಂದ, ಉಪಾಸನೆಯಿಂದ. ನಮ್ಮ ಉಪಾಸನೆ ಯಾರದ್ದಾಗಿರುತ್ತದೆ ಎನ್ನುವುದು ನಮ್ಮ ಶ್ರದ್ದೆಯನ್ನು ಅವಲಂಬಿತವಾಗಿದೆ. ದೇವರನ್ನು ಯಾರೆಲ್ಲಾ ಪೂಜಿಸುತ್ತಾರೋ ಅವರು ಸಾತ್ತ್ವಿಕರಾಗಿರುತ್ತಾರೆ. ಯಕ್ಷ ಮತ್ತು ರಾಕ್ಷಸರನ್ನು ಪೂಜಿಸುವವರು ರಾಜಸಿಗಳಾಗಿರುತ್ತಾರೆ. ಅವರು ಶೀಘ್ರವಾಗಿ ಮನೋಕಾಮನೆಯ ಪೂರ್ತಿಗೋಸ್ಕರ ಯಕ್ಷ ರಾಕ್ಷಸರನ್ನು ಪೂಜಿಸುತ್ತಾರೆ. ಪ್ರೇತ ಭೂತ ಗಣಗಳ ಪೂಜೆಯನ್ನು ತಾಮಸೀ ಗುಣ ಉಳ್ಳವರು ಮಾಡುತ್ತಾರೆ. ಬೇರೆಯವರಿಗೆ ಹಾನಿ ಉಂಟು ಮಾಡಲು ಅವರು ಪ್ರೇತಭೂತಗಳ ಅನುಷ್ಠಾನವನ್ನು ಮಾಡಿ ಪೂಜೆ ಮಾಡುತ್ತಾರೆ.

17.5

ಅಶಾಸ್ತ್ರವಿಹಿತಂ(ಙ್) ಘೋರಂ(ನ್), ತಪ್ಯಂತೇ ಯೇ ತಪೋ ಜನಾಃ |
ದಂಭಾಹಂಕಾರಸಂಯುಕ್ತಾಃ(ಖ್), ಕಾಮರಾಗಬಲಾನ್ವಿತಾಃ ।।5।।

ಯಾವ ಮನುಷ್ಯರು, ಶಾಸ್ತ್ರೋಕ್ತ ವಿಧಿಗಳನ್ನು ಬಿಟ್ಟು ಮನಸ್ಸಿಗೆ ತೋಚಿದಂತೆ ಘೋರವಾದ ತಪಸ್ಸನ್ನು ಆಚರಿಸುತ್ತಾರೋ, ದಂಭ-ಅಹಂಕಾರ ಇತ್ಯಾದಿಗಳಿಂದ ಕೂಡಿದವರಾಗಿ ಕಾಮ, ಆಸಕ್ತಿ ಮತ್ತು ಬಲದ ಅಭಿಮಾನವುಳ್ಳವರೋ -.

ಶಾಸ್ತ್ರ ವಿಧಿಯನ್ನು ಬಿಟ್ಟು ಅಶಾಸ್ತ್ರ ವಿಧಿಯಿಂದ ಘೋರ ತಪಸ್ಸನ್ನು ಮಾಡುವ ವ್ಯಕ್ತಿಗಳು ತಾಮಸಿಗಳಾಗಿರುತ್ತಾರೆ.

ಇಲ್ಲಿ ವಿವೇಚಕರು ಒಂದು ಉದಾಹರಣೆ ಕೊಡುತ್ತಾರೆ. ನಾವು ವೈಷ್ಣೋದೇವೀ  ಮಂದಿರಕ್ಕೆ ಹೋಗಬೇಕಾದರೆ ತುಂಬಾ ಸಾತ್ತ್ವಿಕ ಭಾವದಿಂದ ಹೋಗಬೇಕು. ಬದಲಾಗಿ ಮಂಡಿಯ ಬಲದ ಮೇಲೆ ಮೆಟ್ಟಿಲುಗಳನ್ನು ಹತ್ತಿ ಬರುತ್ತೇನೆ ಎಂದು ಹೇಳಿ ಮಂಡಿಯಿಂದ ರಕ್ತವೆಲ್ಲ ಹರಿದು ಬರುವಂತೆ ಹೋಗಬಾರದು. ಇದನ್ನು ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ. ದೇವರ ಬಳಿ ಹೋಗುವಾಗ, ದೇವಸ್ಥಾನಕ್ಕೆ ಹೋಗುವಾಗ, ಇಲ್ಲವೇ ನಮ್ಮ ಮನೆಯಲ್ಲಿ ಪೂಜೆಗೆ ಕುಳಿತುಕೊಳ್ಳುವಾಗ ಸಾತ್ತ್ವಿಕವಾಗಿ ಶೃಂಗರಿಸಿಕೊಂಡಿರಬೇಕು. ಗಡಿಬಿಡಿಯಲ್ಲಿ ಹೋಗಿ ಪೂಜೆ, ಜಪ ಮಾಡಬಾರದು. ಪೂರ್ಣ ಸತ್ತ್ವಭಾವದಿಂದ, ಪ್ರಸನ್ನ ಭಾವದಿಂದ ಪೂಜೆ ಮಾಡಬೇಕು. ಶಾಸ್ತ್ರಕ್ಕೆ ವಿರುದ್ಧವಾಗಿ ಮಾಡುವ ವ್ಯಕ್ತಿಗಳು ದಂಭ ಮತ್ತು ಅಹಂಕಾರದಿಂದ ಕೂಡಿದವರಾಗಿ ನಾವು ಮಾಡಿದ ಕಾರ್ಯ ಇನ್ನೊಬ್ಬರು ನಮ್ಮನ್ನು ನೋಡಿ ಪ್ರಶಂಸಿಸಲಿ ಎಂಬ ಕಾರಣಕ್ಕೆ ಮಾಡಿರುತ್ತಾರೆ. ಮಂಡಿಯ ಮೇಲೆ ವೈಷ್ಣೋದೇವಿ ಮೆಟ್ಟಿಲುಗಳನ್ನು ಹತ್ತುವಾಗ, ನೋಡಿದವರು ಇವರನ್ನ ನೋಡಿ ಮಹಾಭಕ್ತರು ಎಂದಾಗ ದಂಭ ಅಹಂಕಾರದಿಂದ ಬೀಗುತ್ತಾರೆ. ಅದರ ಜೊತೆಗೆ ಅವರಲ್ಲಿ ತೀಕ್ಷ್ಣ ಕಾಮ ಮತ್ತು ರಾಗದ ಬಲದಿಂದ ಅವರು ರಕ್ತವನ್ನು ಚೆಲ್ಲಿ ತಲೆ ಕತ್ತರಿಸಿಕೊಳ್ಳುವಂತಹ ತಪ್ಪು ತಿಳಿವಳಿಕೆಯ ಕಲ್ಪನೆಯಿಂದ ಕೂಡಿದ ಕಾರ್ಯಗಳನ್ನು ಮಾಡುತ್ತಾರೆ.

17.6

ಕರ್ಶಯಂತಃ(ಶ್) ಶರೀರಸ್ಥಂ(ಮ್), ಭೂತಗ್ರಾಮಮಚೇತಸಃ |
ಮಾಂ(ಞ್) ಚೈವಾಂತಃ(ಶ್) ಶರೀರಸ್ಥಂ(ನ್), ತಾನ್ವಿದ್ಧ್ಯಾಸುರನಿಶ್ಚಯಾನ್ ।।6।।

ಶಾಸ್ತ್ರವಿರುದ್ಧವಾದ ಉಪವಾಸವಾದಿ ಘೋರ ಆಚರಣೆ ಮೂಲಕ ಶರೀರವನ್ನು ಒಣಗಿಸುವುದು ಮತ್ತು ಭಗವಂತನ ಅಂಶರೂಪಿಯಾದ ಜೀವಾತ್ಮನಿಗೆ ಕಷ್ಟ ಕೊಡುವುದು-ಜೀವ ಸಮುದಾಯವನ್ನೂ ಮತ್ತು ಅಂತರ್ಯಾಮಿ ಪರಮೇಶ್ವರನನ್ನು ಕೃಶಗೊಳಿಸುವುದು. ಶರೀರ ರೂಪದಿಂದ ಜೀವ ಸಮುದಾಯ ಮತ್ತು ಅಂತಃಕರಣದಲ್ಲಿರುವ ಅಂತರ್ಯಾಮಿಯಾದ ನನ್ನನ್ನೂ ಸಹ ದುರ್ಬಲಗೊಳಿಸುವರೋ ಆ ಅಜ್ಞಾನಿಗಳನ್ನು ಆಸುರೀ ಸ್ವಭಾವದವರೆಂದು ತಿಳಿ.

ಶರೀರಕ್ಕೆ ಹಾನಿ ಕೊಡುತ್ತಾ, ಇಂದ್ರಿಯ ಸಮೂಹಗಳಲ್ಲಿ ಚೇತನವೇ ಇಲ್ಲವೆಂಬಂತೆ, ಜ್ಞಾನವೇ ಇಲ್ಲವೆಂಬಂತೆ, ವಿವೇಕ ಶಕ್ತಿ ಇಲ್ಲದಂತೆ, ಶರೀರದ ಒಳಗಿರುವ ನನ್ನನ್ನು ಅಂದರೆ ಪರಮಾತ್ಮನನ್ನು ಹಾನಿ ಮಾಡುವವರು ಅಸುರರು ಎಂದು ಭಾವಿಸಬೇಕು ಎಂದಿದ್ದಾನೆ ಭಗವಂತ.
           
ಮುಂದೆ ಭಗವಂತ ಭೋಜನದ ಬಗ್ಗೆ ಹೇಳುತ್ತಾನೆ. ಇಲ್ಲಿಯವರೆಗೂ ಉಪಾಸನೆಯ ಬಗ್ಗೆ ಹೇಳಿದ ಭಗವಂತ, ಮುಂದೆ ನಮ್ಮ ಭೋಜನ ಹೇಗಿರಬೇಕೆಂದು ಹೇಳುತ್ತಾನೆ. ನಮ್ಮ ಭೋಜನ ಹೇಗಿರುತ್ತದೆಯೋ ಹಾಗೆ ನಮ್ಮ ಮನಸ್ಸು ಕೂಡ ಇರುತ್ತದೆ. ನಮ್ಮ ಮನಸ್ಸು ಹೇಗಿರುತ್ತದೆಯೋ ಹಾಗೆ ನಮ್ಮ ಶ್ರದ್ಧೆ ಇರುತ್ತದೆ. ನಮ್ಮ ಶ್ರದ್ದೆ ಹೇಗಿರುತ್ತದೆಯೋ ಹಾಗೆ ನಮ್ಮ ಸ್ವಭಾವವಿರುತ್ತದೆ. ನಮ್ಮ ಸ್ವಭಾವ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಭೋಜನದ ಸೂಕ್ಷ್ಮ ರೂಪವನ್ನು ಭಗವಂತ ಭಗವದ್ಗೀತೆಯಲ್ಲಿ ಹೇಳಿದಂತೆ ಆಯುರ್ವೇದಗಳಲ್ಲಿ, ಯೋಗ ಶಾಸ್ತ್ರದಲ್ಲಿ ಕೂಡ ಹೇಳಲ್ಪಟ್ಟಿದೆ. ಯಾವ ಭೋಜನ ಉತ್ತಮವಾದುದು? ಭೋಜನದ ಸಮಯ? ಹೇಗೆ ಭೋಜನವನ್ನು ಸ್ವೀಕರಿಸಬೇಕು? ಯಾವ ಆಸನದಲ್ಲಿ ಕೂಡಬೇಕು? ಎಂದು ಎಲ್ಲವನ್ನೂ ಹೇಳಲಾಗಿದೆ.

17.7

ಆಹಾರಸ್ತ್ವಪಿ ಸರ್ವಸ್ಯ, ತ್ರಿವಿಧೋ ಭವತಿ ಪ್ರಿಯಃ |
ಯಜ್ಞಸ್ತಪಸ್ತಥಾ ದಾನಂ(ನ್), ತೇಷಾಂ(ಮ್) ಭೇದಮಿಮಂ(ಮ್) ಶೃಣು ।।7।।

ಭೋಜನವೂ ಸಹ ಎಲ್ಲರಿಗೂ ಅವರವರ ಪ್ರಕೃತಿಗೆ ಅನುಗುಣವಾಗಿ ಮೂರು ವಿಧದಲ್ಲಿ ಪ್ರಿಯವಾಗುತ್ತದೆ. ಅದರಂತೆಯೇ ಯಜ್ಞ, ತಪಸ್ಸು ಮತ್ತು ದಾನವೂ ಸಹ ಮೂರು ವಿಧ. ಅವುಗಳ ಈ ಬೇರೆ ಬೇರೆ ಭೇದಗಳನ್ನು ಕೇಳು.

ಭಗವಂತ ಹೇಳುತ್ತಾನೆ, "ಆಹಾರದಲ್ಲಿ ಮೂರು ವಿಧಗಳಿವೆ, ಯಜ್ಞ, ದಾನ,ತಪಗಳಲ್ಲಿಯೂ ಕೂಡ ಮೂರು ವಿಧಗಳಿವೆ." ಇಲ್ಲಿ ಭಗವಂತನು ಆಹಾರದ ಬಗ್ಗೆ ಹೇಳುತ್ತಾನೆ.

ಮುಂದೆ ಯಜ್ಞ ದಾನ ತಪದ ಬಗ್ಗೆ ಹೇಳುತ್ತಾನೆ.

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ || 18-5

18ನೇ ಅಧ್ಯಾಯದ 5ನೇ ಶ್ಲೋಕದಲ್ಲಿ ಕೂಡ ಈ ಯಜ್ಞ ದಾನ ತಪಗಳನ್ನು ಬಿಡಬಾರದು ಎಂದು ಹೇಳಲಾಗಿದೆ.

17.8

ಆಯುಃ(ಸ್)ಸತ್ತ್ವಬಲಾರೋಗ್ಯ,ಸುಖಪ್ರೀತಿವಿವರ್ಧನಾಃ |
ರಸ್ಯಾಃ(ಸ್) ಸ್ನಿಗ್ಧಾಃ(ಸ್) ಸ್ಥಿರಾ ಹೃದ್ಯಾ, ಆಹಾರಾಃ(ಸ್) ಸಾತ್ತ್ವಿಕಪ್ರಿಯಾಃ ।।8।।

ಆಯುಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ವೃದ್ಧಿಗೊಳಿಸುವಂತಹ ರಸಯುಕ್ತವಾಗಿ ತುಪ್ಪದಿಂದ ತಯಾರಾದ ಸ್ಥಿರವಾಗಿರುವಂತಹ ಮತ್ತು ಸ್ವಾಭಾವಿಕವಾಗಿಯೇ ಮನಸ್ಸಿಗೆ ಪ್ರಿಯವಾದ ಆಹಾರಗಳು ಅರ್ಥಾತ್ ಭೋಜನದ ಪದಾರ್ಥಗಳು ಸಾತ್ತ್ವಿಕ ಪುರುಷರಿಗೆ ಪ್ರಿಯವಾಗುತ್ತವೆ

ಭಗವಂತನು ಇಲ್ಲಿ ಸಾತ್ತ್ವಿಕ ಆಹಾರದ ಬಗ್ಗೆ ಹೇಳುತ್ತಾನೆ. ಯಾವ ವ್ಯಕ್ತಿ ಸಾತ್ತ್ವಿಕ ಆಹಾರವನ್ನು ತೆಗೆದುಕೊಳ್ಳುತ್ತಾನೋ ಅವನು ಸ್ವಭಾವದಿಂದ ಕೂಡ ಸಾತ್ತ್ವಿಕವಾಗಿರುತ್ತಾನೆ. ಅಥವಾ ಯಾರು ಸಾತ್ತ್ವಿಕವಾಗಿರುತ್ತಾನೋ ಅವನಿಗೆ ಸಾತ್ವಿಕ ಆಹಾರ ಪ್ರಿಯವಾಗಿರುತ್ತದೆ. ಅವನಿಗೆ ರಾಜಸಿಕ ಮತ್ತು ತಾಮಸಿಕ ಆಹಾರಗಳು ಇಷ್ಟವಾಗುವುದಿಲ್ಲ. 
         
ವಿವೇಚಕರು ಇಲ್ಲಿ ಗೋವಿಂದ್ ಗಿರಿ ದೇವ ಮಹಾರಾಜರ ಸಾತ್ತ್ವಿಕ ಭಾವವನ್ನು ಹೇಳುತ್ತಾರೆ. ಗುರುಗಳು ಯಾತ್ರೆಗೆ ಹೋದಾಗ ಅವರ ಭಕ್ತ ಜನರಲ್ಲಿ ಕೆಲವರು ಸಾತ್ತ್ವಿಕ ಆಹಾರದ ಜೊತೆಗೆ ಇಂದಿನ ಆಹಾರಗಳಾದ ಪಿಜ್ಜಾ, ಬರ್ಗರ್ ಗಳನ್ನು ತಂದಿಟ್ಟಾಗ ಗುರುಗಳು ಅದನ್ನು ನಿರಾಕರಿಸಿ ಸಾತ್ತ್ವಿಕವಾದುದನ್ನೇ ಸ್ವೀಕರಿಸುತ್ತಾರೆ. ಯಾಕೆಂದರೆ ಅವರ ಸ್ವಭಾವವೇ ಸಾತ್ತ್ವಿಕವಾಗಿದೆ. ಸಾತ್ತ್ವಿಕ ಆಹಾರದ ಲಕ್ಷಣಗಳನ್ನು ಭಗವಂತ ಇಲ್ಲಿ ಹೇಳಿದ್ದಾನೆ. ಯಾವ ಆಹಾರವನ್ನು ಸ್ವೀಕರಿಸಿದರೆ ಆಯಸ್ಸು, ಬುದ್ಧಿಶಕ್ತಿ ಹೆಚ್ಚುವುದೋ, ಆರೋಗ್ಯದ ರಕ್ಷಣೆಯಾಗಿ, ಸುಖ ಮತ್ತು ಪ್ರೀತಿಯು ಹೆಚ್ಚುವುದು ಆ ಎಲ್ಲಾ ಪದಾರ್ಥಗಳು ಸಾತ್ತ್ವಿಕವಾಗಿರುತ್ತವೆ. ರಾಜಸಿಕ ಮತ್ತು ತಾಮಸಿಕ ಆಹಾರವನ್ನು ಸ್ವೀಕರಿಸಿದರೆ ಸುಖ ಮತ್ತು ಪ್ರೀತಿ ಕುಂಠಿತಗೊಳ್ಳುತ್ತದೆ. ರಸಯುಕ್ತ ಆಹಾರ ಅಂದರೆ ಫಲ, ಕಂದ ಮೂಲಿಕೆಗಳು, ತುಪ್ಪ, ಹಾಲು ಮತ್ತು ಹಾಲಿನ ಉತ್ಪನ್ನಗಳು. ನಮ್ಮಲ್ಲಿ ಸ್ಥಿರವಾಗಿ ಉಳಿಯುವ ಅಂದರೆ ತುಂಬಾ ಸಮಯದ ವರೆಗೆ ಪೋಷಣೆಯನ್ನು ಕೊಡುವ ಆಹಾರ ಪದಾರ್ಥಗಳನ್ನು ಸಾತ್ತ್ವಿಕವೆನ್ನಲಾಗಿದೆ.

17.9

ಕಟ್ವಮ್ಲಲವಣಾತ್ಯುಷ್ಣ, ತೀಕ್ಷ್ಣರೂಕ್ಷವಿದಾಹಿನಃ |
ಆಹಾರಾ ರಾಜಸಸ್ಯೇಷ್ಟಾ, ದುಃಖಶೋಕಾಮಯಪ್ರದಾಃ ।।9।।

ಕಹಿ, ಹುಳಿ, ಉಪ್ಪುಳ್ಳ, ಅತಿ ಬಿಸಿಯಾದ, ತೀಕ್ಷ್ಣ ಅರ್ಥಾತ್ ಖಾರವಾದ, ಹುರಿದ, ದಾಹವನ್ನುಂಟುಮಾಡುವ ಮತ್ತು ದುಃಖ, ಚಿಂತೆ ಮತ್ತು ರೋಗಾದಿಗಳನ್ನು ಉಂಟುಮಾಡುವಂತಹ ಆಹಾರ ಪದಾರ್ಥ ಅರ್ಥಾತ್ ಭೋಜನದ ಪದಾರ್ಥಗಳು ರಾಜಸ ಪುರುಷರಿಗೆ ಪ್ರಿಯವಾಗುತ್ತವೆ

ಭಗವಂತ ಇಲ್ಲಿ ರಾಜಸಿಕ ಭೋಜನದ ಬಗ್ಗೆ ಹೇಳುತ್ತಿದ್ದಾನೆ. ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತೆಗೆದುಕೊಳ್ಳದೆ ಹಿತಮಿತವಾಗಿ ಸೇವಿಸಬಹುದು ಎಂದಿದ್ದಾನೆ. ಅತೀ ಕಹಿಯಾಗಿರುವ, ಅತೀ ಹುಳಿಯಾಗಿರುವ, ಅತೀ ಉಪ್ಪಿನಿಂದ ಕೂಡಿದ, ಅತೀ ಉಷ್ಣವಾದ, ಅತೀ ಖಾರವಾದ, ಅತೀ ಒಣಗಿರುವ ಪದಾರ್ಥ, ಯಾವ ಪದಾರ್ಥವನ್ನು ತಿಂದರೆ ಹೊಟ್ಟೆಯಲ್ಲಿ ಉರಿ ಆಗುವುದೋ ಇವೆಲ್ಲಾ ರಾಜಸಿಕ ಭೋಜನವಾಗಿರುತ್ತದೆ. ಈ ಭೋಜನವನ್ನು ಸ್ವೀಕರಿಸುವವರು ರಾಜಸಿಕರಾಗಿರುತ್ತಾರೆ. ಅಥವಾ ಸ್ವಭಾವದಿಂದ ರಾಜಸಿಕರಾದವರು ಈ ತರಹದ ಭೋಜನವನ್ನು ಇಷ್ಟಪಡುತ್ತಾರೆ. ನಮ್ಮಲ್ಲಿ ಈ ತರಹದ ಭೋಜನದ ಬಯಕೆ ಇದ್ದರೆ ನಾವು ರಾಜಸಿಕರೆಂದು ಯೋಚಿಸದೆ ನಿಧಾನವಾಗಿ ಕಡಿಮೆ ಮಾಡಿಕೊಳ್ಳಬೇಕು ಎಂದು ವಿವೇಚಕರು ಸಲಹೆ ನೀಡುತ್ತಾರೆ. ಭಗವಂತನು ಹೇಳಿದಂತೆ, ಅತಿಯಾದದ್ದನ್ನು ಬಿಟ್ಟು ನಿಧಾನವಾಗಿ ಸಾತ್ವಿಕದ ಕಡೆಗೆ ಬರಬಹುದು ಎಂದಿದ್ದಾರೆ.

17.10

ಯಾತಯಾಮಂ(ಙ್) ಗತರಸಂ(ಮ್),ಪೂತಿ ಪರ್ಯುಷಿತಂ(ಞ್) ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂ(ಮ್),ಭೋಜನಂ ತಾಮಸಪ್ರಿಯಮ್ ।।10।।

ಯಾವ ಭೋಜನವು ಸರಿಯಾಗಿ ಪಕ್ವವಾಗಿರುವುದಿಲ್ಲವೋ, ರಸಹೀನವಾಗಿದೆಯೋ, ದುರ್ಗಂಧಮಯವಾಗಿರುವುದೋ, ಹಳಸಿಹೋದದ್ದೋ, ತಿಂದುಳಿದುದೋ ಹಾಗು ಅಪವಿತ್ರವಾದುದೋ. ಅವುಗಳೆಲ್ಲಾ ತಾಮಸ ಪುರುಷರಿಗೆ ಪ್ರಿಯವಾಗಿರುತ್ತದೆ

ಇಲ್ಲಿ ಭಗವಂತನು ತಾಮಸಿಕ ಭೋಜನದ ಬಗ್ಗೆ ಹೇಳುತ್ತಾನೆ. ಆಹಾರ ತಯಾರಿಸಿದ ಮೂರು ಯಾಮಗಳ ಒಳಗೆ ಅದನ್ನು ಸೇವಿಸುವುದು ಅತಿ ಉತ್ತಮ. ಇಲ್ಲವಾದರೆ ಅದು ತನ್ನ ರಸವನ್ನು ಕಳೆದುಕೊಳ್ಳುತ್ತದೆ. ಆಹಾರದಿಂದ ದುರ್ಗಂಧ ಬರುತ್ತಿದ್ದರೆ ಆ ಭೋಜನವನ್ನು ಸ್ವೀಕರಿಸಬಾರದು. ಬಹಳ ಕಾಲದವರೆಗೆ ಇಟ್ಟಂತಹ ಭೋಜನ ತಾಮಸಿಕ ಎಂದೆನಿಸಿಕೊಳ್ಳುತ್ತದೆ. ಎಂಜಲು ಪದಾರ್ಥಗಳು, ಮಾಂಸಹಾರ ಮತ್ತು ಈ ತರಹದ ಭೋಜನಗಳು ತಾಮಸೀ ಭೋಜನವೆನಿಸಿಕೊಳ್ಳುತ್ತವೆ.

17.11

ಅಫಲಾಕಾಂಕ್ಷಿಭಿರ್ಯಜ್ಞೋ, ವಿಧಿದೃಷ್ಟೋ ಯ ಇಜ್ಯತೇ |
ಯಷ್ಟವ್ಯಮೇವೇತಿ ಮನಃ(ಸ್), ಸಮಾಧಾಯ ಸ ಸಾತ್ತ್ವಿಕಃ ।।11।।

ಶಾಸ್ತ್ರೋಕ್ತವಾಗಿ ನಿಯಮಿಸಲ್ಪಟ್ಟು ಮಾಡಲೇಬೇಕಾದ ಕರ್ತವ್ಯವಾಗಿದೆ - ಎಂಬುದಾಗಿ ಮನಸ್ಸನ್ನು ದೃಢಪಡಿಸಿಕೊಂಡು ಫಲಾಪೇಕ್ಷೆಯಿಲ್ಲದೆ ಇರುವಂತಹ ವ್ಯಕ್ತಿಯಿಂದ ಯಾವ ಯಜ್ಞ ಮಾಡಲ್ಪಡುವುದೋ ಅದು ಸಾತ್ತ್ವಿಕ (ಯಜ್ಞ) ವಾಗಿದೆ

ಇಲ್ಲಿ ಭಗವಂತ ಯಜ್ಞಗಳ ಬಗ್ಗೆ ವಿವರಿಸಿದ್ದಾನೆ. ಫಲದ ಆಕಾಂಕ್ಷೆ ಇಲ್ಲದೆ ಮಾಡುವ ಯಜ್ಞ ಸಾತ್ತ್ವಿಕ ಯಜ್ಞವಾಗಿರುತ್ತದೆ. ಯಜ್ಞವೆಂದರೆ ಹೋಮಕುಂಡದಲ್ಲಿ ಅಗ್ನಿಗೆ ಹಾಕುವ ಸಮಿತ್ತು, ಹವಿಸ್ಸು ಮಾತ್ರವಾಗಿರದೆ ನಾವು ನಿತ್ಯ ಮಾಡುವ ಕಾರ್ಯ ಕೂಡ ಯಜ್ಞವಾಗಿರುತ್ತದೆ. ಭಗವಾನ್ ಶ್ರೀ ಕೃಷ್ಣ ಪ್ರೀತ್ಯರ್ಥಮ್ ಕರೋಮಿ ಎಂಬ ಭಾವನೆಯಿಂದ ನಾವು ಏನೇ ಮಾಡಿದರೂ ಅದು ಭಗವಂತನ ಪ್ರೀತಿಗಾಗಿ, ಪ್ರಸನ್ನತೆಗಾಗಿ ಎಂದು ತಿಳಿದು ಮಾಡಬೇಕಾಗುತ್ತದೆ. ಅದು ನನ್ನ ಸ್ವಾರ್ಥಕ್ಕಾಗಿ ಅಲ್ಲ ಎಂದು ತಿಳಿಯಬೇಕಾಗುತ್ತದೆ. ಆ ಕರ್ಮವೇ ನಿಜವಾದ ಯಜ್ಞವಾಗಿರುತ್ತದೆ.
           
ವಿವೇಚಕರು ಇಲ್ಲಿ ಗೀತಾ ಪರಿವಾರದ ಸೇವಿಗಳ ಉದಾಹರಣೆ ಕೊಡುತ್ತಾರೆ. ನಮ್ಮಲ್ಲಿ, ಬನ್ನಿ ಗೀತಾ ಸೇವಿಯಾಗೋಣ ಎಂಬ ಕಾರ್ಯಕ್ರಮದಡಿಯಲ್ಲಿ ಸಾವಿರಾರು ಕಾರ್ಯಕರ್ತರು ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಪ್ರಶಿಕ್ಷಕರಾಗಿ, ತಾಂತ್ರಿಕ ಸಹಾಯಕರಾಗಿ, ಗ್ರೂಪ್ ಕೊಆರ್ಡಿನೇಟರ್ ಆಗಿ, ಬ್ಯಾಚ್ ಕೋ ಆರ್ಡಿನೇಟರ್ ಆಗಿ, ಸಂದೇಶಗಳನ್ನು ಗುಂಪಿನಲ್ಲಿ ರವಾನಿಸುವವರಾಗಿ, ಹಾಗೂ ಇನ್ನಿತರ ವಿಭಾಗಗಳಲ್ಲಿ ಹನ್ನೆರಡು ಸಾವಿರಕ್ಕಿಂತ ಹೆಚ್ಚಿನ ಸೇವಾ ಕರ್ತರು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೆಲಸ ಆ ಕಾರ್ಯಕರ್ತರ ಯಜ್ಞವಾಗಿದೆ. ಇದರ ಪರವಾಗಿ ಅವರಿಗೆ ಯಾವುದೇ ಪ್ರಶಂಸೆ ಪಾರಿತೋಷಕಗಳು ಸಿಗುವುದಿಲ್ಲ, ಸನ್ಮಾನಗಳು ಕೂಡ ಸಿಗುವುದಿಲ್ಲ. ಏಕೆಂದರೆ ನಾವೆಲ್ಲ ಓಂ ಶ್ರೀ ಕೃಷ್ಣಾರ್ಪಣಮಸ್ತು ಎಂಬ ಭಾವನೆಯಿಂದ ಎಲ್ಲವನ್ನು ಅವನಿಗೆ ಅರ್ಪಿಸಿಬಿಡುತ್ತೇವೆ. ಇಲ್ಲಿ ಗೀತೆಯನ್ನು ಓದಿ, ಓದಿಸಿರಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂಬುದು ಮಹಾಯಜ್ಞವಾಗಿದೆ. ಇಲ್ಲಿ ವಿವೇಚಕರು ಎಲ್ಲಾ ಸಾಧಕರಲ್ಲಿ ಮನವಿ ಮಾಡಿಕೊಳ್ಳುತ್ತಾ, ನೀವು L1 ನಿಂದ L4 ತನಕ ಎಲ್ಲಾ ಸ್ತರಗಳನ್ನು ಮುಗಿಸಿ ಮತ್ತೆ ಈ ಸ್ತರಗಳನ್ನು ಪುನರಾವರ್ತನೆ ಮಾಡಿ, 18 ಬಾರಿ ಪೂರ್ಣಗೊಳಿಸಿದಾಗ ಈ ಭಗವದ್ಗೀತೆಯ ಸಾರವನ್ನು ತಿಳಿಯಬಹುದು ಎಂದು ಹೇಳಿದರು.
            
ಫಲದ ಆಕಾಂಕ್ಷೆ ಇಲ್ಲದೆ ಯಾರು ಯಜ್ಞವನ್ನು ಮಾಡುತ್ತಾನೋ, ಯಾರು ವೇದಶಾಸ್ತ್ರಗಳಲ್ಲಿ ಹೇಳಿರುವಂತೆ ಕಾರ್ಯವನ್ನು ಮಾಡುತ್ತಾನೋ, ಯಾವ ಸಮಯದಲ್ಲಿ, ಯಾವ ಕಾರ್ಯಗಳನ್ನು ಮಾಡಬೇಕೊ ಅವುಗಳನ್ನು ಮಾಡುತ್ತಾ, ಅವುಗಳನ್ನು ಕರ್ತವ್ಯ ಭಾವನೆಯಿಂದ ಮಾಡುತ್ತಿದ್ದೇವೆ ಎಂಬುದು ತಿಳಿದರೆ ಅದು ಸಾತ್ತ್ವಿಕ ಯಜ್ಞವಾಗುತ್ತದೆ. ತನಗೆ ಇಷ್ಟ ಬಂದಂತೆ ಮುಹೂರ್ತಗಳನ್ನು ಬದಲಾವಣೆ ಮಾಡಬಾರದು. ಇವೆಲ್ಲ ಅವಿಧಿಪೂರ್ವಕವಾಗಿರುತ್ತದೆ ಎಂದಿದ್ದಾರೆ.
         
ಇಲ್ಲಿ ವಿವೇಚಕರು ಕರ್ತವ್ಯ ಭಾವನೆ ಮತ್ತು ಕೆಲಸ ಮಾಡುವುದು ಇವೆರಡರಲ್ಲಿ ಏನು ಅಂತರವಿದೆ ಎಂದು ಉದಾಹರಣೆಯೊಂದಿಗೆ ವಿವರಿಸಿದರು. ಒಬ್ಬ ಉದ್ಯಮಿ ಕೆಲಸ ಮಾಡುವಾಗ ಕರ್ತವ್ಯ ಭಾವನೆಯಿಂದ ಕೆಲಸ ಮಾಡುತ್ತಾನೆ. ಸಮಯದ ಕಡೆ ಗಮನಕೊಡದೆ ಕಾರ್ಯ ಪೂರ್ಣಗೊಳಿಸುವಲ್ಲಿ ತತ್ಪರನಾಗಿರುತ್ತಾನೆ. ಆದರೆ ಅಲ್ಲಿ ಕೆಲಸ ಮಾಡುವವ ಕಾರ್ಯದ ಪೂರ್ಣತೆಯ ಬಗ್ಗೆ ಯೋಚಿಸದೆ ತನ್ನ ಕೆಲಸದ ಸಮಯ ಮುಗಿಯುವವರೆಗೆ ಮಾತ್ರ ಕೆಲಸ ಮಾಡುತ್ತಾನೆ. ಆತನ ಕರ್ತವ್ಯ ಭಾವನೆ ಕಚೇರಿಯ ಸಮಯದವರೆಗೆ ಮಾತ್ರ ಸೀಮಿತವಾಗಿರುತ್ತದೆ. ಹಾಗಾಗಿ ನಮಗೆ ಕರ್ತವ್ಯ ಭಾವನೆ ಮುಖ್ಯವಾಗಿರುತ್ತದೆ. ನಮಗೆ ದೊರೆತಂತಹ ಕೆಲಸವನ್ನು ಕರ್ತವ್ಯ ಭಾವನೆಯಿಂದ ಮಾಡಿದರೆ ಅದು ಸಾತ್ತ್ವಿಕ ಯಜ್ಞವಾಗುತ್ತದೆ ಎಂದು ಹೇಳಿದರು.              

17.12

ಅಭಿಸಂಧಾಯ ತು ಫಲಂ(ನ್), ದಂಭಾರ್ಥಮಪಿ ಚೈವ ಯತ್ |
ಇಜ್ಯತೇ ಭರತಶ್ರೇಷ್ಠ, ತಂ(ಮ್) ಯಜ್ಞಂ(ಮ್) ವಿದ್ಧಿ ರಾಜಸಮ್ ।।12।।

ಆದರೆ, ಎಲೈ ಅರ್ಜುನ ! ಕೇವಲ ದಂಭಾಚಾರಕ್ಕಾಗಿಯೋ ಅಥವಾ ಫಲವನ್ನು ಪಡೆಯುವ ಉದ್ದೇಶವಿಟ್ಟುಕೊಂಡು ಮಾಡಲಾಗುವ ಯಜ್ಞವನ್ನು ನೀನು ರಾಜಸವೆಂದು ತಿಳಿ

ಫಲದ ನಿರೀಕ್ಷೆಯಿಂದ ಮಾಡಿದ ಕೆಲಸ ರಾಜಸಿಕವಾಗಿರುತ್ತದೆ. ತೋರಿಕೆಗೋಸ್ಕರ ಮಾಡುವ ಕಾರ್ಯ ರಾಜಸಿಕವಾಗಿರುತ್ತದೆ. ಇಲ್ಲಿ ವಿವೇಚಕರು ಉದಾಹರಣೆಯಾಗಿ, ಭಗವದ್ಗೀತೆಯ ೧೮ ಅಧ್ಯಾಯಗಳನ್ನು ಕಂಠಸ್ಠೀಕರಣ ಮಾಡಿ ಬೇರೆಯವರಿಗೆ ತೋರಿಸುವ ಸಲುವಾಗಿ ಬೀಗುತ್ತಾ ದಂಭದಿಂದ ಹೇಳಿಕೊಳ್ಳುವುದನ್ನು ಉಲ್ಲೇಖಿಸಿದರು. ಪ್ರಾರಂಭಿಕ ಹಂತಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ಆದರೆ ನಂತರದಲ್ಲಿ ಇದು ಭಗವಂತನು ನನಗೆ ದಯಪಾಲಿಸಿದ ಗೀತೆ, ಇದನ್ನು ಕಲಿಯುತ್ತಿದ್ದೇನೆ ಎಂದುಕೊಳ್ಳಬೇಕು. ಇವೆಲ್ಲ ರಾಜಸಿಕ ಗುಣಗಳನ್ನು ತೋರಿಸುತ್ತದೆ. ಸಾತ್ತ್ವಿಕ ಮತ್ತು ರಾಜಸಿಕ ಗುಣಗಳು ವಿರುದ್ಧ ದಿಕ್ಕುಗಳಂತೆ. ತಾಮಸಿಕ ಯಜ್ಞ ಎಂದರೇನು? ದಾನ ಮತ್ತು ತಪದ ಬಗ್ಗೆ ಮುಂದಿನ ಸತ್ರಗಳಲ್ಲಿ ನೋಡೋಣ ಎಂದು ಹೇಳಿ ವಿವೇಚಕರು ಇವತ್ತಿನ ಪ್ರಶ್ನೋತ್ತರ ಅವಧಿಯನ್ನು ಆರಂಭಗೊಳಿಸಿದರು.

ಪ್ರಶ್ನೋತ್ತರಗಳು
ಭೂಪೇಂದ್ರ ಅಣ್ಣ 
ಪ್ರಶ್ನೆ
- ಯಜ್ಞ ಮತ್ತು ತಪದಲ್ಲಿ ಏನು ಅಂತರವಿದೆ?
ಉತ್ತರ - ಯಜ್ಞವೆಂದರೆ ನಾವು ಮಾಡುವ ಕಾರ್ಯ. ಇದಲ್ಲದೆ ೧೨ ತರಹದ ಯಜ್ಞಗಳಿವೆ. ನಾವು ಮಾಡುವ ಹೋಮ ಹವನಗಳು ಯಜ್ಞದ ಒಂದು ರೂಪವಾಗಿರುತ್ತದೆ. ಜನಹಿತಕ್ಕಾಗಿ ಮಾಡುವ ಕಾರ್ಯ ಕೂಡ ಯಜ್ಞವಾಗಿರುತ್ತದೆ. ತಪ ಎಂದರೆ ತನ್ನ ಆತ್ಮಕ್ಕಾಗಿ ತನ್ನ ಸ್ವಯಂಗಾಗಿ ತಮ್ಮನ್ನು ತಾವು ಮೇಲೆತ್ತಿಕೊಳ್ಳಲು ಮಾಡುವ ಕ್ರಿಯೆ. ನಮ್ಮ ಮನಸ್ಸನ್ನು ದುಃಖಿಸದಿರುವಂತೆ ಇಟ್ಟುಕೊಳ್ಳುವುದು ಕೂಡ ಒಂದು ತಪವಾಗಿದೆ. ತಪದಲ್ಲಿ ಕೂಡ ಮೂರು ನಾಲ್ಕು ವಿಧಾನಗಳಿವೆ.

೨) ಉಷ ಅಕ್ಕ
ಪ್ರಶ್ನೆ - ಭಗವಂತನನ್ನು ಪ್ರಾರ್ಥಿಸುವಾಗ ಮನಸ್ಸು ಚಂಚಲವಾಗದಂತೆ ಏನು ಮಾಡಬೇಕು?
ಉತ್ತರ - ಪೂಜೆಯ ಸಮಯದಲ್ಲಿ ಉಸಿರಾಟದ ಮೇಲೆ ಸ್ವಲ್ಪ ಗಮನ ಇಡಬೇಕು. ನಮ್ಮ ಇಷ್ಟ ದೇವರ ಪ್ರತಿಮೆಯನ್ನು ಮನಸ್ಸಿನಲ್ಲಿ ಸದಾ ನೆನಪಿಸಿಕೊಳ್ಳುತ್ತಿರಬೇಕು. ಆಗ ಮನಸ್ಸಿನ ಕೆಲ ವಿಚಾರಗಳು ಸ್ವಲ್ಪಮಟ್ಟಿಗೆ ಶಾಂತವಾಗುತ್ತವೆ. ಆದರೆ ಪೂರ್ಣವಾಗಿ ಹೋಗುವುದಿಲ್ಲ. ಈ ಅಭ್ಯಾಸವನ್ನು ನಿರಂತರವಾಗಿ ಇಟ್ಟುಕೊಂಡು ಬಂದರೆ ಮನಸ್ಸನ್ನು ಸ್ಥಿರವಾಗಿಸಬಹುದು.

೩) ಅರ್ಚನ ಅಕ್ಕ
ಪ್ರಶ್ನೆ - ಪಿತೃಪಕ್ಷದಲ್ಲಿ ಭಗವದ್ಗೀತೆಯ ಯಾವ ಅಧ್ಯಾಯವನ್ನು ಓದಬೇಕು? 
ಉತ್ತರ - ಪಿತೃಪಕ್ಷದಲ್ಲಾಗಲಿ ಅಥವಾ ಇನ್ನಿತರ ಯಾವುದೇ ಸಮಯದಲ್ಲಾಗಲಿ ಪೂರ್ಣ ಭಗವದ್ಗೀತೆಯನ್ನು ಓದಿದರೆ ತುಂಬಾ ಒಳ್ಳೆಯದು. ಪಿತೃಪಕ್ಷದಲ್ಲಿ ಅಧ್ಯಾಯ ಎರಡು, ಎಂಟು ಮತ್ತು ಹದಿನೈದರ ಪಠಣೆಯನ್ನು ಮಾಡಬಹುದು.

ಈ ಎಲ್ಲಾ ಸಾಧಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ, ಹನುಮಾನ ಚಾಲೀಸಾ ಪಠಣೆ ಮತ್ತು ಸಮಾಪನೆ ಪ್ರಾರ್ಥನೆಯೊಂದಿಗೆ ಇವತ್ತಿನ ವಿವೇಚನೆ ಸತ್ರವನ್ನು ಮುಕ್ತಾಯಗೊಳಿಸಲಾಯಿತು.