विवेचन सारांश
ಪುರುಷೋತ್ತಮನ ಸ್ವರೂಪ ಮತ್ತು ಅವನನ್ನು ಸೇರುವ ಬಗೆ

ID: 7017
कन्नड़ - ಕನ್ನಡ
ಶನಿವಾರ, 10 ಮೇ 2025
ಅಧ್ಯಾಯ 15: ಪುರುಷೋತ್ತಮಯೋಗ
2/2 (ಶ್ಲೋಕ 8-20)
ವಿವೇಚನಕಾರರು: ಗೀತಾ ವಿಶಾರದ ಶ್ರೀ ಡಾ. ಸಂಜಯ್ ಮಾಲ್ಪಾನಿ ಜಿ


ಸುಮಧುರ ಸುಂದರ ಪ್ರಾರ್ಥನೆ, ಪ್ರಕಾಶಮಾನವಾದ ದೀಪ ಪ್ರಜ್ವಲನೆಯೊಂದಿಗೆ ಇಂದಿನ ವಿವೇಚನ ಸತ್ರವನ್ನು ಪ್ರಾರಂಭಿಸಲಾಯಿತು.

ಪೂಜ್ಯ ಸ್ವಾಮೀಜಿ ಗೋವಿಂದ್ ದೇವ್ ಗಿರಿಜೀ ಮಹಾರಾಜರಿಗೆ ಮತ್ತು ಪೂರ್ಣ ಗುರು ಪರಂಪರೆಗೆ 
ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥ ಎಂದು ವಂದಿಸಲಾಯಿತು.

ಪುರುಷೋತ್ತಮ ಯೋಗವೆಂಬ ಈ ಅಧ್ಯಾಯದಲ್ಲಿ ಭಗವಂತನು ಈ ಸರ್ವೋಪರಿ ಜಗತ್ತಿನ ವರ್ಣನೆಯನ್ನು ಒಂದು ಬುಡ ಮೇಲಾದ ಅಶ್ವತ್ಥವೃಕ್ಷಕ್ಕೆ ಹೋಲಿಸಿದ್ದಾನೆ. ಈ ವೃಕ್ಷದ ಶಾಖೆಗಳು ನಿರಂತರ ಬೆಳೆಯುತ್ತಲೇ ಇರುತ್ತವೆ. ಸತ್ತ್ವ ಗುಣವಿರುವ ಶಾಖೆ ಮೇಲ್ಮುಖವಾಗಿ, ರಜೋಗುಣದ ಶಾಖೆ ಮಧ್ಯಭಾಗದಲ್ಲಿ ಮತ್ತು ತಮೋಗುಣದ ಶಾಖೆ ಕೆಳಮುಖವಾಗಿ ಬೆಳೆಯುತ್ತವೆ. ಈ ವೃಕ್ಷವನ್ನು ವೈರಾಗ್ಯವೆಂಬ ಆಯುಧದಿಂದ ಮಾತ್ರ ಕತ್ತರಿಸಲಾಗುತ್ತದೆ. ಭಗವಂತ ತನ್ನ ಅಸ್ತಿತ್ವವನ್ನು ಐದನೇ ಶ್ಲೋಕದಲ್ಲಿ ಹೇಳಲಾರಂಬಿಸಿದ್ದಾನೆ. ಯಾರು ಈ ಭಗವತತ್ತ್ವವನ್ನು ಅರಿಯುತ್ತಾರೋ ಅವರು ಪರಮ ಬ್ರಹ್ಮ ಪದವಿಯನ್ನು ಪಡೆಯುತ್ತಾರೆ. 

6ನೇ ಶ್ಲೋಕದಲ್ಲಿ ಭಗವಂತ ತನ್ನ ಪರಮಧಾಮದ ಬಗ್ಗೆ ತಿಳಿಸುತ್ತಿದ್ದಾನೆ. ಪೂರ್ಣ ಚರಾಚರ ಸೃಷ್ಟಿ ಅಥವಾ ಪೂರ್ಣ ಬ್ರಹ್ಮಾಂಡವನ್ನು ಪ್ರಕಾಶಿತಗೊಳಿಸುವವನು ಪರಮಾತ್ಮನೇ ಎಂದು ಹೇಳಲಾಗಿದೆ. ಮುಂದಿನ ಶ್ಲೋಕದಲ್ಲಿ ಜೀವಮಾತ್ರದಲ್ಲಿ ಹೇಗೆ ಭಗವಂತನು ಇದ್ದಾನೆ ಎಂದು ಹೇಳಲಾಗಿದೆ. ಪುರುಷೋತ್ತಮನ ಒಂದು ಅಂಶ ಆತ್ಮದ ತರಹ ನಮ್ಮಲ್ಲಿ ಇರುತ್ತದೆ. ಪ್ರಕೃತಿಯಿಂದ ಪಂಚ ಮಹಾಭೂತಗಳು ದೊರೆತು ಜೀವ ಜನ್ಮಿಸುತ್ತದೆ. ಇದರೊಳಗಿರುವ ಜೀವಾತ್ಮ ಆ ಪರಮ ತತ್ತ್ವದ ಸ್ವರೂಪದಲ್ಲಿ ನಮ್ಮಲ್ಲಿ ವಿರಾಜಮಾನವಾಗಿರುತ್ತದೆ. ಬ್ರಹ್ಮಾಂಡದಲ್ಲಿರುವುದೇ ಈ ಪಿಂಡದಲ್ಲಿಯೂ ಇದೆ ಎಂದು ಏಳನೇ ಶ್ಲೋಕದಲ್ಲಿ ಹೇಳಲಾಗಿದೆ. ಇಷ್ಟು ವಿಚಾರಗಳನ್ನು ನಾವು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ.

ಮುಂದಿನ ಶ್ಲೋಕದಲ್ಲಿ ಜೀವ ಮತ್ತು ಶರೀರದ ಸಂಯೋಗ ಮತ್ತು ವಿಯೋಗ ಹೇಗೆ ಆಗುತ್ತದೆ ಎಂದು ಹೇಳಲಾಗಿದೆ.

15.8

ಶರೀರಂ(ಯ್) ಯದವಾಪ್ನೋತಿ, ಯಚ್ಚಾಪ್ಯುತ್ಕ್ರಾಮತೀಶ್ವರಃ।
ಗೃಹೀತ್ವೈತಾನಿ ಸಂಯಾತಿ, ವಾಯುರ್ಗಂಧಾನಿವಾಶಯಾತ್॥15.8॥

ಗಾಳಿಯು ಗಂಧವಿರುವ ಸ್ಥಾನದಿಂದ ಗಂಧವನ್ನು ಹೇಗೆ ಗ್ರಹಿಸಿಕೊಂಡು ಹೋಗುತ್ತದೆಯೋ ಹಾಗೆಯೇ ದೇಹಾದಿಗಳ ಸ್ವಾಮಿಯಾದ ಜೀವಾತ್ಮನೂ ಸಹ ಮೊದಲಿನ ಶರೀರವನ್ನು ತ್ಯಜಿಸುತ್ತಾನೆ; ಅದರಿಂದ ಮನಸ್ಸಹಿತ ಈ ಇಂದ್ರಿಯಗಲನ್ನೂ ಗ್ರಹಿಸಿಕೊಂಡು ಪುನಃ ಯಾವ ಶರೀರವನ್ನು ಪಡೆಯುತ್ತಾನೋ ಅದರಲ್ಲಿ ಪ್ರವೇಶಿಸುತ್ತಾನೆ.

ವಾಯುವು ಸುಗಂಧ ವಸ್ತುವಿನಿಂದ ಪರಿಮಳವನ್ನು ಗ್ರಹಣ ಮಾಡಿ ತೆಗೆದುಕೊಂಡು ಹೋಗುವಂತೆಯೇ ದೇಹಾದಿಗಳ ಸ್ವಾಮಿಯಾದ ಜೀವಾತ್ಮನು ತ್ಯಜಿಸಿದ ಶರೀರದಿಂದ ಮನಸಹಿತ ಇಂದ್ರಿಯಗಳನ್ನು ಗ್ರಹಣ ಮಾಡಿ ಹೊಸದಾಗಿ ಸಿಗುವ ಶರೀರವನ್ನು ಪ್ರವೇಶಿಸುವನು.

ಈ ಶರೀರ ಪ್ರಕೃತಿಯಿಂದ, ಪಂಚಮಹಾಭೂತಗಳಿಂದ ಬಂದದ್ದು. ಆತ್ಮ ಹೇಗೆ ಹೊರ ಹೋಗುತ್ತದೆ ಮತ್ತು ಹೇಗೆ ಒಳಗೆ ಬರುತ್ತದೆ ಎಂದು ಈ ಶ್ಲೋಕದಲ್ಲಿ ಹೇಳಲಾಗಿದೆ.

ಆತ್ಮವು ದೇಹವನ್ನು ತ್ಯಜಿಸಿದಾಗ, ಶರೀರಕ್ಕೆ ಅಗ್ನಿ ಸ್ಪರ್ಶಿಸಲಾಗುತ್ತದೆ. ಶರೀರದ ಶೇಕಡ 70 ಭಾಗದ ಜಲತತ್ತ್ವ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಹಾಗಾದರೆ ಪಂಚಮಹಾಭೂತಗಳ ಜೊತೆಗೆ ಲಭಿಸಿದ ಮನಸ್ಸು, ಬುದ್ಧಿ, ಅಹಂಕಾರ ಎಲ್ಲಿಗೆ ಹೋಯಿತು? ಕಾಮನೆಗಳು ಪೂರ್ಣಗೊಂಡಿಲ್ಲದ ಪಕ್ಷದಲ್ಲಿ ಮನಸ್ಸು ವಿಚಾರಗಳಿಂದ ತುಂಬಿರುತ್ತದೆ, ನಿರ್ವಿಚಾರವಾಗಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಏಕ ಕಾಲಕ್ಕೆ ಒಂದೇ ವಿಚಾರ ನಡೆಯುತ್ತಿರುತ್ತದೆ. ಆದರೆ ನಮ್ಮ ಅನಿಸಿಕೆಯಂತೆ ನಮ್ಮ ಮನಸ್ಸಿನೊಳಗೆ ಏಕಕಾಲಕ್ಕೆ ಹಲವಾರು ವಿಚಾರಗಳು ಸುಳಿಯುತ್ತಿರುತ್ತದೆ ಎಂದು ಭಾವಿಸುತ್ತೇವೆ. ಆದರೆ ಹಾಗೆ ಆಗುವುದಿಲ್ಲ. ಉದಾಹರಣೆಗೆ, ಫ್ಯಾನ್ ಗರಿಷ್ಠ ವೇಗದಲ್ಲಿ ಸುತ್ತುವಾಗ ಫ್ಯಾನ್ ನಲ್ಲಿ ಹಲವಾರು ರೆಕ್ಕೆಗಳು ಇದ್ದಂತೆ ತೋರುತ್ತವೆ. ಆದರೆ ವಾಸ್ತವವಾಗಿ ಆ ಫ್ಯಾನ್ ಅಲ್ಲಿ ಮೂರು ಅಥವಾ ನಾಲ್ಕು ರೆಕ್ಕೆಗಳು ಮಾತ್ರ ಇರುತ್ತವೆ. ಅವುಗಳ ನಡುವೆ ನಿರ್ದಿಷ್ಟ ಅಂತರವಿರುತ್ತದೆ. ಹೀಗೆಯೇ ನಮ್ಮ ಯೋಚನೆಗಳು ಸಹ ಹಲವು ಇದ್ದಂತೆ ತೋರುತ್ತದೆ ಅಷ್ಟೇ.

ಶ್ರೀಭಗವಾನುವಾಚ ।
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥ (3.37)

ಕಾಮನೆಗಳು, ಕ್ರೋಧ ನಮ್ಮ ಶತ್ರುಗಳು. ಕಾಮನೆಗಳ ವಿಚಾರಗಳು ನಮ್ಮೊಂದಿಗೆ ಕೊನೆ ಘಳಿಗೆಯಲ್ಲಿ ಉಳಿದುಬಿಟ್ಟರೆ, ಕಾಮ, ಕ್ರೋಧ, ಲೋಭ, ಮದ, ಮತ್ಸರಗಳ ರೂಪದಲ್ಲಿ ವಿಕಾರಗಳು ಉಳಿದುಬಿಡುತ್ತವೆ. ಮನಸ್ಸಿನಲ್ಲಿ ಯಾವ ವಿಚಾರವೂ ಇಲ್ಲದಿರುವುದೇ ಧ್ಯಾನದ ಧಾರಣೆಯ ಅರ್ಥ. ಮನಸ್ಸಿನಲ್ಲಿ ಪರಮಾತ್ಮ ತತ್ತ್ವವಿರುತ್ತದೆ ಅಥವಾ ಇತರ ವಿಚಾರಗಳಿರುತ್ತವೆ. ಧಾರಣೆಯಲ್ಲಿ ವಿಚಾರ ಶೂನ್ಯವಾಗಿರುತ್ತದೆ. ಆ ಶೂನ್ಯದಲ್ಲಿ ಭಗವಂತನ ಅಧಿಷ್ಠಾನವಾಗುತ್ತದೆ. ವಿಚಾರಶೂನ್ಯವಾದ ಮನಸ್ಸು ವಿಮುಕ್ತಿಯನ್ನು ಹೊಂದುತ್ತದೆ. ವಿಚಾರಗಳು ಉಳಿದುಕೊಂಡರೆ ಆ ವಿಕಾರಯುಕ್ತ ಮನಸ್ಸು ಆತ್ಮಕ್ಕೆ ಅಂಟಿಕೊಂಡು ಹೊರ ಹೋಗುತ್ತದೆ. ಇನ್ನೊಂದು ಜೀವದ ಸಹಾಯವನ್ನು ಪಡೆದು ಅಲ್ಲಿ ಪ್ರವೇಶಿಸುತ್ತದೆ, ಇದನ್ನೇ ಪುನರ್ಜನ್ಮ ಎನ್ನುವುದು. ಮತ್ತೆ ಈ ಜನ್ಮ ಮರಣದ ಚಕ್ರದಲ್ಲಿ ಸಿಲುಕಿ ಹಾಕಿಕೊಳ್ಳುತ್ತೇವೆ.

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್ ।
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾಽಪಾರೇ ಪಾಹಿ ಮುರಾರೇ ॥ 22 ॥
ಭಜ ಗೋವಿಂದಂ ಭಜ ಗೋವಿಂದಂ ...

ಪುಷ್ಪಿಕದಲ್ಲಿ, ಈ ಭಗವದ್ಗೀತೆಯನ್ನು ನಾವು ಯೋಗ ಶಾಸ್ತ್ರವೆನ್ನುತ್ತೇವೆ. ಈ ಯೋಗದ ಶರಣಾಗತಿ ಹೊಂದಿದರೆ ಮಾತ್ರ ಮನಸ್ಸನ್ನು ವಿಚಾರ ಮುಕ್ತವಾಗಿ ಹೇಗೆ ಇಟ್ಟುಕೊಳ್ಳಬಹುದೆಂದು ತಿಳಿಯಬಹುದು.

ಇದನ್ನೇ ಭಗವಾನ್ ಆದಿ ಶಂಕರಾಚಾರ್ಯರು

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ।
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕೃಂಕರಣೇ ॥ 1 ॥
ಭಜ ಗೋವಿಂದಂ ಭಜ ಗೋವಿಂದಂ ...

ಗೋವಿಂದನಿಗೆ ಶರಣಾಗಬೇಕು. ಗೋವಿಂದನಿಗೆ ಶರಣಾದರೆ ಯೋಗೇಶ್ವರ ಶ್ರೀ ಕೃಷ್ಣನಿಗೆ ಶರಣಾದಂತೆ. ಅವನೇ ಯೋಗದ ಈಶ್ವರ. ಆ ಯೋಗವೇ ಭಗವದ್ಗೀತೆ.

ವಿಚಾರವನ್ನು ಹೊಂದಿದ ಆತ್ಮ, ಆ ಕಾಮನೆಗಳನ್ನು ಪೂರ್ಣಗೊಳಿಸುವ ಗರ್ಭವನ್ನು ಹುಡುಕುತ್ತಾ ಹೋಗುತ್ತದೆ. ಶೇಕಡ 80ರಷ್ಟು ಸಾಮಾನ್ಯವಾದ, ಹತ್ತರಷ್ಟು ಉತ್ಕೃಷ್ಟವಾದ ಮತ್ತು ಇನ್ನು ಉಳಿದ ಹತ್ತರಷ್ಟು ನಿಷ್ಕೃಷ್ಟವಾದ ಗರ್ಭಗಳಿರುತ್ತದೆ.

ಯಾವ ಆತ್ಮದಲ್ಲಿ ವಿಕಾರಗಳು ಅಳಿದು ಕೇವಲ ಭಗವತ್ ತತ್ತ್ವ ಉಳಿದಿರುತ್ತದೆಯೋ, ಆ ಪವಿತ್ರ ಆತ್ಮ ಜನ್ಮ ಮರಣದಿಂದ ದೂರ ಉಳಿಯುವುದು. ನಿರ್ವಾಣದ ಆ ಒಂದು ಸಮಯದಲ್ಲಿ ಭಗವತ್ ಚಿಂತನೆ ಬಂದರೆ ಮಾತ್ರ ಇದು ಸಾಧ್ಯವಾಗುವುದು. ಆದರೆ ಅದು ಬಹಳ ಕ್ಲಿಷ್ಟವಾದದ್ದು. ಆ ನಿರ್ವಾಣದ ಸಮಯದಲ್ಲಿ ನಾನು ಶರೀರವೂ ಅಲ್ಲ, ಪಂಚೇಂದ್ರಿಯವೂ ಅಲ್ಲ, ಕರ್ಮೇಂದ್ರಿಯವೂ ಅಲ್ಲ, ಮನ, ಬುದ್ಧಿ, ಅಹಂಕಾರವೂ ಅಲ್ಲ. ನಾನು ಕೇವಲ ಆತ್ಮತತ್ತ್ವವೆಂದು ಭಾವಿಸಬೇಕು. ಮನಸ್ಸನ್ನು ಸ್ಥಿರವಾಗಿರಿಸಿ ಯೋಗೇಶ್ವರ ಶ್ರೀ ಕೃಷ್ಣನನ್ನು ಸ್ಮರಿಸಿಕೊಳ್ಳಬೇಕು. ಧ್ಯಾನ ಮುದ್ರಿತನಾಗಿ ಪಿತಾಂಬರವನ್ನು ಉಟ್ಟ, ಆ ಸುಂದರ ಕಮಲ ಚರಣಗಳು, ನೀಲ ಮೇಘ ಶಾಮನನ್ನು, ಅವನ ಕರ್ಣಕುಂಡಲಗಳು, ಆ ಸುಂದರ ಶಲ್ಯ, ಅದ್ಭುತ ಕಿರೀಟ, ಆ ಹೂವಿನ ಹಾರಗಳು, ಆ ಸುಂದರ ಮುಖಾರವಿಂದ  ಪ್ರಾಣೋತ್ಕ್ರಮಣದ ಸಮಯದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಆಗ ಬಹಳ ಸಂತೋಷದಿಂದ ಈ ಜಗತ್ತಿನ ಪ್ರವಾಸವನ್ನು ಮುಕ್ತಾಯಗೊಳಿಸಬಹುದು. ಮತ್ತೆ ಇಲ್ಲಿಗೆ ಬರುವ ಅವಶ್ಯಕತೆ ಇರುವುದಿಲ್ಲ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ-ಲವಕಣಿಕಾ ಪೀತಾ ।
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ॥ 21 ॥
ಭಜ ಗೋವಿಂದಂ ಭಜ ಗೋವಿಂದಂ ...

ಪ್ರತಿದಿನ ಭಗವದ್ಗೀತೆಯ ಚಿಂತನೆ ಮಾಡುವುದು ಗಂಗಾಜಲವನ್ನು ಸೇವಿಸಿದಷ್ಟೇ ಪುಣ್ಯಕರವಾದುದ್ದು. ಬೆಳಗ್ಗೆ ಕಣ್ಣು ತೆರೆಯುವ ಸೌಭಾಗ್ಯ ದೊರೆತರೆ, ಈ ದಿನ ನೀನು ನೀಡಿದ ಕಾರ್ಯಗಳನ್ನು, ನಿಮಿತ್ತನಾಗಿ  ಮಾಡುತ್ತೇನೆ ಎನ್ನುವ ಭಾವವಿರಬೇಕು.

15.9

ಶ್ರೋತ್ರಂ(ಞ್) ಚಕ್ಷುಃ(ಸ್) ಸ್ಪರ್ಶನಂ(ಞ್) ಚ,ರಸನಂ(ಙ್) ಘ್ರಾಣಮೇವ ಚ।
ಅಧಿಷ್ಠಾಯ ಮನಶ್ಚಾಯಂ(ವ್), ವಿಷಯಾನುಪಸೇವತೇ॥15.9॥

ಈ ಜೀವಾತ್ಮನು ಶ್ರೋತ್ರೇಂದ್ರಿಯ ( ಕಿವಿ ) ಚಕ್ಷುರಿಂದ್ರಿಯ ( ಕಣ್ಣು ) ಮತ್ತು ತ್ವಗಿಂದ್ರಿಯ ( ಚರ್ಮ ) , ರಸನೇಂದ್ರಿಯ ( ನಾಲಿಗೆ ), ಘ್ರಾಣೇಂದ್ರಿಯ ( ಮೂಗು ) ಹಾಗೂ ಮನಸ್ಸನ್ನು ಆಶ್ರಯಿಸಿಕೊಂಡು ಅರ್ಥಾತ್ ಇವುಗಳ ಸಹಾಯದಿಂದ ವಿಷಯಗಳನ್ನು ಅನುಭವಿಸುತ್ತಾನೆ.

ಕಿವಿ, ಕಣ್ಣು, ಚರ್ಮ, ನಾಲಗೆ, ಮೂಗು ಈ ಇಂದ್ರಿಯಗಳು ಮನಸ್ಸನ್ನು ಆಶ್ರಯಿಸುತ್ತವೆ. ಮನಸ್ಸು ಯಾವ ದಿಕ್ಕಿನಲ್ಲಿ ನೋಡಬೇಕು ಎಂದು ಸೂಚಿಸುತ್ತದೆಯೋ ಕಣ್ಣು ಆ ದಿಕ್ಕಿನತ್ತ ಹೊರಳುತ್ತವೆ. ಪಂಚೇಂದ್ರಿಯಗಳು ಮನದ ಅಧೀನದಲ್ಲಿರುತ್ತವೆ. ಮನಸ್ಸನ್ನು ಇಂದ್ರಿಯಗಳ ರಾಜ ಎನ್ನಲಾಗಿದೆ. ಈ ಪಂಚೇಂದ್ರಿಯಗಳ ಸಹಾಯದಿಂದ ಕರ್ಮೇಂದ್ರಿಯಗಳು ವಿಷಯಗಳನ್ನು ಭೋಗಿಸುತ್ತವೆ.

ಪತ್ನಿ ಸೀರೆ ಖರೀದಿಸಲು ಅಂಗಡಿಗೆ ಹೋಗಬೇಕಾದರೆ ತನ್ನ ಪತಿಯನ್ನು ಕರೆದುಕೊಂಡು ಹೋಗುತ್ತಾಳೆ. ಪತಿಗೆ ಸೀರೆಯ ಅಂಗಡಿಗೆ ಹೋಗಲು ಇಷ್ಟವಿಲ್ಲದಿದ್ದರೂ ಪತ್ನಿಗೋಸ್ಕರವಾದುರೂ ಹೋಗಬೇಕಾಗುತ್ತದೆ.

ಹಾಗೆಯೇ ಪತಿಗೆ ಸಿನಿಮಾ ವೀಕ್ಷಿಸಲು ಹೋಗಬೇಕೆಂಬ ಮನಸ್ಸು ಉಂಟಾದರೆ ಪತ್ನಿಗೆ ಇಷ್ಟವಿಲ್ಲದಿದ್ದರೂ ಪತಿಗೋಸ್ಕರ ಹೋಗಬೇಕಾಗುತ್ತದೆ.

ನಮ್ಮ ಜೀವನವು ಸಹ ಹೀಗೆಯೇ. ನಮ್ಮ ಶರೀರ ಮತ್ತು ಆತ್ಮ ಸೇರಿ ಈ ಜೀವನವಾಗಿದೆ. ಈ ಶರೀರ ಎಲ್ಲಿ ಹೋಗುತ್ತದೆಯೋ, ಆತ್ಮ ಶರೀರವನ್ನು ಹಿಂಬಾಲಿಸಬೇಕಾಗುತ್ತದೆ. ಹೋದ ಜಾಗದಲ್ಲಿ ಆತ್ಮ ತಟಸ್ಥವಾಗಿದ್ದರೂ ಅದರ ಉಪಸ್ಥಿತಿ ಅಲ್ಲಿರುತ್ತದೆ.

ಹೆಂಡತಿ ಹಾಗಲಕಾಯಿ ಪಲ್ಯವನ್ನು ಮಾಡಿದಾಗ, ಪತಿಗೆ ಹಾಗಲಕಾಯಿ ಇಷ್ಟವಿಲ್ಲದಿದ್ದರೂ ಚೆನ್ನಾಗಿದೆ ಎಂದು ತಿನ್ನಲೇಬೇಕಾಗಿರುತ್ತದೆ. ಚೆನ್ನಾಗಿಲ್ಲವೆಂದು ಹೇಳಿ ಮನಸ್ಸು ಕೆಡಿಸಿಕೊಳ್ಳುವ ಬದಲು ಪ್ರೀತಿಯಿಂದ ತಿಂದರೆ ಜೀವನ ಸುಖಕರವಾಗಿರುತ್ತದೆ.

ವಿವೇಚಕರ ಸ್ನೇಹಿತರೊಬ್ಬರು ಮುಂಬೈಯಲ್ಲಿ ವಾಸವಾಗಿದ್ದಾರಂತೆ. ಆಫೀಸಿಗೆ ಹೊರಡುವ ತರಾತುರಿಯಲ್ಲಿ ಒಮ್ಮೆ ಅವರ ಕಾಲು ಬಾಗಿಲಿನ ತುದಿಗೆ ಸಿಕ್ಕಿ ಹೆಬ್ಬೆಟ್ಟಿನ ಉಗುರು ಕಿತ್ತು ಹೋಯಿತಂತೆ. ರಕ್ತ ಸುರಿಯಲಾರಂಭಿಸಿತು. ನಖ ಶಿಖಾಂತ ನೋವುಂಟಾಯಿತು. ಸಮಯದ ಅಭಾವದ ಕಾರಣ ಮನೆಯಲ್ಲೇ ಪಟ್ಟಿಯನ್ನು ಮಾಡಿ ಆಫೀಸ್ ಗೆ ತೆರಳಿದರು. ಅಲ್ಲಿಯೂ ಸಹ ವಿಪರೀತ ಕೆಲಸದ ಕಾರಣದಿಂದಾಗಿ  ಐದು ಗಂಟೆಗೆ ಹೊರಡುವ ಬದಲಿಗೆ, ಏಳು ಗಂಟೆಗೆ ಆಫೀಸ್ ನಿಂದ ಹೊರಟರು. ಲೋಕಲ್ ಟ್ರೈನಿನಲ್ಲಿ ಯಾರೋ ಅವರ ಕಾಲನ್ನು ತುಳಿದುಬಿಟ್ಟರು. ನೋವು ಸಹಿಸಲು ಅಸಾಧ್ಯವೆನಿಸಿತು. ವೈದ್ಯರ ಬಳಿಗೆ ಹೋಗಲು ನೋಡಿದಾಗ ಬಾಗಿಲು ಹಾಕಿತ್ತು. ತಣ್ಣನೆ ಕಬ್ಬಿನ ಹಾಲನ್ನು ಕುಡಿಯೋಣವೆಂದು ಹೋದಾಗ ಯಾರೋ ಪರ್ಸ್ ಕದ್ದಿರುವುದು ಗಮನಕ್ಕೆ ಬಂದಿತ್ತು. ಹೇಗೋ ಮನೆಗೆ ಬಂದು ಊಟಕ್ಕೆ ಕುಳಿತರು. ಊಟದಲ್ಲಿ ಉಪ್ಪಿಲ್ಲದಿರುವುದನ್ನು ಗಮನಿಸಿದ ಅವರು ಹೆಂಡತಿಯನ್ನು ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿ, ಅವಳಿಗೂ ಊಟವನ್ನು ಬಡಿಸಿದರು. ಆಗ ಪತ್ನಿ ಅಡುಗೆಯಲ್ಲಿ ಉಪ್ಪಿಲ್ಲದೆ ಇರುವುದು ಗಮನಿಸಿದಳು. ನಂತರ ಕ್ಷಮೆಯಾಚಿಸಿದಳು. ಹೀಗೆ ಚಿಕ್ಕ ಚಿಕ್ಕ ವಿಷಯಗಳಲ್ಲೂ ಸಿಟ್ಟು ಮಾಡಿಕೊಳ್ಳುವ ಬದಲು ಹೊಂದಾಣಿಕೆಯಿಂದ ಜೀವನ ನಡೆಸಬೇಕು.

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।
ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ॥ (12.14)

ಸಂತುಷ್ಟಿಯಿಂದ ಜೀವನ ಸಾಗಿಸಬೇಕು. ಈ ಸಂತುಷ್ಟಿಯೇ ನಮ್ಮನ್ನು ಉತ್ತಮ ಭಕ್ತನನ್ನಾಗಿ ಮಾಡುತ್ತದೆ.

15.10

ಉತ್ಕ್ರಾಮಂತಂ(ಮ್) ಸ್ಥಿತಂ(ವ್) ವಾಪಿ, ಭುಂಜಾನಂ(ವ್) ವಾ ಗುಣಾನ್ವಿತಮ್।
ವಿಮೂಢಾ ನಾನುಪಶ್ಯಂತಿ, ಪಶ್ಯಂತಿ ಜ್ಞಾನಚಕ್ಷುಷಃ॥15.10॥

ಶರೀರವನ್ನು ಬಿಟ್ಟುಹೋಗುವುದನ್ನು, ಶರೀರದಲ್ಲಿರುವುದನ್ನು, ವಿಷಯಗಳನ್ನು ಅನುಭವಿಸುವುದನ್ನು ಅಥವಾ ಮೂರು ಗುಣಗಳಿಂದ ಕೂಡಿರುವುದನ್ನೂ ಸಹ ಅಜ್ಞಾನಿಗಳು ಅರಿತುಕೊಳ್ಳಲಾರರು ; ಕೇವಲ ಜ್ಞಾನರೂಪೀ ಕಣ್ಣುಗಳುಳ್ಳವರು ಅಂದರೆ ಜ್ಞಾನಿಗಳು ಮಾತ್ರ ಯಥಾರ್ಥವಾಗಿ ತಿಳಿಯುತ್ತಾರೆ.

15.10 writeup

15.11

ಯತಂತೋ ಯೋಗಿನಶ್ಚೈನಂ(ಮ್), ಪಶ್ಯಂತ್ಯಾತ್ಮನ್ಯವಸ್ಥಿತಮ್ |
ಯತಂತೋಽಪ್ಯಕೃತಾತ್ಮಾನೋ, ನೈನಂ(ಮ್) ಪಶ್ಯಂತ್ಯಚೇತಸಃ ।।11।।

ಯೋಗಿಗಳು ಸಹ ತಮ್ಮ ಹೃದಯದಲ್ಲಿರುವ ಈ ಆತ್ಮನನ್ನು ಪ್ರಯತ್ನಶೀಲರಾಗಿಯೇ ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೆ. ಆದರೆ ತಮ್ಮ ಅಂತಃಕರಣವನ್ನು ಶುದ್ಧವಾಗಿಟ್ಟುಕೊಂಡಿಲ್ಲದ ಅಜ್ಞಾನಿಗಳು ಪ್ರಯತ್ನಶೀಲರಾಗಿದ್ದರೂ ಸಹ ಈ ಆತ್ಮವನ್ನು ತಿಳಿದುಕೊಳ್ಳಲಾರರು.

ಶರೀರವನ್ನು ಬಿಟ್ಟು ಹೋಗುವಾಗ, ಇಲ್ಲವೇ ಶರೀರದಲ್ಲಿ ಇರುವಾಗ ಅಥವಾ ವಿಷಯಗಳನ್ನು ಭೋಗಿಸುವಾಗ, ಇಲ್ಲವೇ ಮೂರು ಗುಣಗಳಿಂದ ಕೂಡಿರುವಾಗಲೂ ಆತ್ಮ ಸ್ವರೂಪವನ್ನು ಅಜ್ಞಾನಿಗಳು  ತಿಳಿಯಲಾರರು. ಕೇವಲ ಜ್ಞಾನರೂಪಿ ದೃಷ್ಟಿಯುಳ್ಳ ವಿವೇಕಿ ಜ್ಞಾನಿಗಳು ಮಾತ್ರವೇ ತತ್ತ್ವದಿಂದ ತಿಳಿಯುತ್ತಾರೆ.

ಪ್ರಯತ್ನ ಶೀಲರಾದ ಯೋಗಿ ಜನರೇ ತಮ್ಮ ಹೃದಯದಲ್ಲಿ ಸ್ಥಿತನಾಗಿರುವ ಆತ್ಮವನ್ನು ತತ್ತ್ವದಿಂದ ಬಲ್ಲರು ಆದರೆ ತಮ್ಮ ಅಂತಃಕರಣವನ್ನು ಶುದ್ಧ ಮಾಡಿಕೊಳ್ಳದ ಅಜ್ಞಾನಿ ಜನರು ಪ್ರಯತ್ನ ಮಾಡಿದರೂ ಈ ಆತ್ಮ ಸ್ವರೂಪವನ್ನು ತಿಳಿಯಲಾರರು. ಈ ಭಾವ ಸಂಶುದ್ದಿ ಎನ್ನುವುದು ದೈವೀ ಗುಣ. ಮುಂದಿನ ಸ್ತರ L2 ನಲ್ಲಿ ನಾವು ದೈವೀ ಗುಣಗಳ ಬಗ್ಗೆ ತಿಳಿಯುವವರಿದ್ದೇವೆ. ಯಾರು ತಮ್ಮ ಭಾವವನ್ನು ಶುದ್ಧವಾಗಿಟ್ಟುಕೊಳ್ಳುತ್ತಾರೋ ಅವರು ಆತ್ಮತತ್ತ್ವವನ್ನು ಅರಿಯುತ್ತಾರೆ. ಅಂಥವರ ಉತ್ಕ್ರಮಣವಾದಾಗ ಅವರು ಮುಕ್ತಿಯನ್ನು ಹೊಂದುತ್ತಾರೆ.

15.12

ಯದಾದಿತ್ಯಗತಂ(ನ್) ತೇಜೋ, ಜಗದ್ಭಾಸಯತೇಽಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೌ, ತತ್ತೇಜೋ ವಿದ್ಧಿ ಮಾಮಕಮ್ ।।12।।

ಸೂರ್ಯನಲ್ಲಿಯೂ, ಚಂದ್ರನಲ್ಲಿಯೂ ಮತ್ತು ಅಗ್ನಿಯಲ್ಲಿಯೂ ಇರುವ ಇಡೀ ಜಗತ್ತನ್ನೇ ಪ್ರಕಾಶಪಡಿಸುವಂತಹ ತೇಜಸ್ಸನ್ನು ನನ್ನದೇ ಆದ ತೇಜಸ್ಸೆಂದು ತಿಳಿ.

ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುವ ಸೂರ್ಯನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ನನ್ನದೇ ಎಂದು ನೀನು ತಿಳಿ.

ನಾವು ಹಲವು ಬಗೆಯ ಪ್ರಕಾಶವನ್ನು ನೋಡಿರುತ್ತೇವೆ. ನಮ್ಮ ಮನೆಯನ್ನು ಬೆಳಗಿಸುವ ಪ್ರಕಾಶ ಒಂದು ತರಹದ ಪ್ರಕಾಶವಾದರೆ, ಇತ್ತೀಚಿಗೆ ಪಾಕಿಸ್ತಾನ ದ್ರೋಣ್ ಗಳನ್ನು ನಮ್ಮಡೆಗೆ ಕಳುಹಿಸಿದಾಗ ನಮ್ಮ ಸುದರ್ಶನ ಎಸ್ 4೦೦ ಕಳುಹಿಸಿದ ಲೇಸರ್ ಪ್ರಕಾಶದಿಂದ ಅದನ್ನು ನೆಲಕ್ಕೆ ಉರುಳಿಸಲಾಯಿತು. ಈ ಲೇಸರ್ ಸಹ ಒಂದು ಪ್ರಕಾಶ. ಎಕ್ಸ್ರೇನಲ್ಲಿರುವುದು ಸಹ ಒಂದು ತರಹದ ಪ್ರಕಾಶವೇ. ಮನೆಯಲ್ಲಿ ಹಚ್ಚುವ ದೀಪದ ಬೆಳಕು ಸಹ ಪ್ರಕಾಶವೇ. ನಮ್ಮ ಯಜ್ಞದ ಅಗ್ನಿ, ಒಲೆಯ ಉರಿ ಇವೆಲ್ಲವೂ ಭಗವಂತನ ಪ್ರಕಾಶವೇ ಆಗಿವೆ.

15.13

ಗಾಮಾವಿಶ್ಯ ಚ ಭೂತಾನಿ, ಧಾರಯಾಮ್ಯಹಮೋಜಸಾ |
ಪುಷ್ಣಾಮಿ ಚೌಷಧೀಃ(ಸ್) ಸರ್ವಾಃ(ಸ್), ಸೋಮೋ ಭೂತ್ವಾ ರಸಾತ್ಮಕಃ ।।13।।

ಮತ್ತು ನಾನೇ ಭೂಮಿಯಲ್ಲಿ ಪ್ರವೇಶಿಸಿ ನನ್ನ ಶಕ್ತಿಯಿಂದ ಎಲ್ಲಾ ಜೀವಿಗಳನ್ನೂ ಧರಿಸುತ್ತೇನೆ ಮತ್ತು ರಸ ಸ್ವರೂಪೀ ಅರ್ಥಾತ್ ಅಮೃತಮಯನಾದ ಚಂದ್ರನಾಗಿ ಸಕಲ ವನಸ್ಪತಿಗಳನ್ನೆಲ್ಲಾ ಪುಷ್ಟಿಗೊಳಿಸುತ್ತೇನೆ.

ನಾನೇ ಪೃಥ್ವಿಯಲ್ಲಿ ಪ್ರವೇಶಿಸಿ ನನ್ನ ಶಕ್ತಿಯಿಂದ ಎಲ್ಲಾ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸರೂಪಿ ಅರ್ಥಾತ್ ಅಮೃತಮಯ ಚಂದ್ರನಾಗಿ ಸಂಪೂರ್ಣ ವನಸ್ಪತಿಗಳನ್ನು ಪೋಷಿಸುತ್ತೇನೆ.

ಇಲ್ಲಿ ಬಹಳ ಮಹತ್ತರವಾದ ವಿಷಯವನ್ನು ಹೇಳಲಾಗಿದೆ. ನಮ್ಮಲ್ಲಿರುವ ಪಂಚ ಮಹಾಭೂತವೇ ಹೊರಗೂ ಇರುವುದು. ನಮ್ಮ ಅಸ್ಥಿ ಮೂಳೆಗಳೆಲ್ಲ ಪೃಥ್ವಿ ತತ್ತ್ವದಿಂದ ಉಂಟಾಗಿವೆ. ನಮ್ಮಲ್ಲಿರುವ ಅವಕಾಶವು ಆಕಾಶ ತತ್ತ್ವದಿಂದ ಆಗಿದೆ. ಶೇಕಡ 70 ಭಾಗವು ನೀರಿನಿಂದ ಉಂಟಾಗಿದೆ. ಭೂಮಿಯು ಸಹ ಶೇಕಡ 70 ಭಾಗ ನೀರಿನಿಂದ ಆವೃತವಾಗಿವೆ. ಅಮಾವಾಸ್ಯೆ, ಪೂರ್ಣಿಮೆಯ ದಿನ ಚಂದ್ರ ಸಮುದ್ರದ ಅಲೆಗಳನ್ನು ಆಕರ್ಷಿಸುತ್ತಾನೆ. ಅದೇ ಚಂದ್ರನ ಪ್ರಭಾವದಿಂದ ಶಿಥಿಲ ಮನಸ್ಸಿನ ಜನರಲ್ಲಿ ಭಾವನೆಗಳಲ್ಲಿ ಏರುಪೇರು ಆಗುತ್ತದೆ. ಅವರಲ್ಲಿ ವಿಚಿತ್ರ ಬದಲಾವಣೆಗಳನ್ನು ಕಾಣಬಹುದು. ಆದರೆ ಯೋಗಿ ಜನರು ಸೂರ್ಯಗ್ರಹಣ, ಚಂದ್ರಗ್ರಹಣದಲ್ಲಿ ಜಪತಪಗಳನ್ನು ಮಾಡಿ ವಿಶೇಷ ಶಕ್ತಿಗಳನ್ನು ಪಡೆದುಕೊಳ್ಳುತ್ತಾರೆ. ಕೆಲವೊಮ್ಮೆ ನಮ್ಮಲ್ಲಿ ಸಕಾರಾತ್ಮಕ, ನಕಾರಾತ್ಮಕ ವೈಪರಿತ್ಯವನ್ನು ಉಂಟಾಗುತ್ತದೆ. ನಮ್ಮಲ್ಲಿರುವ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು ಮುಂದುವರೆದರೆ ಮೋಕ್ಷದ ಹಾದಿಯಲ್ಲಿ ಹೋಗಬಹುದು.

ಯೋಗದ ಮೂಲಕ ನಮ್ಮ ಸಕಾರಾತ್ಮಕ ವೃತ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ಮೂಗಿನ  ಬಲ ನಾಸಿಕವನ್ನು ಸೂರ್ಯನಾಡಿ ಮತ್ತು ಎಡ ನಾಸಿಕವನ್ನು ಚಂದ್ರನಾಡಿ ಎನ್ನಲಾಗುತ್ತದೆ. ನಮ್ಮ ಮೆದುಳಿನ ಯಾವ ಭಾಗ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ಒಂದು ಪ್ರಯೋಗ ಮಾಡಬಹುದು. ನಮ್ಮ ಕೈ ಮೇಲೆ ನಮ್ಮ ಉಸಿರನ್ನು ಬಿಟ್ಟು ಪರೀಕ್ಷಿಸಿದಾಗ ಕೇವಲ ಒಂದು ಮೂಗಿನ ಹೊಳ್ಳೆಯಿಂದ ಹೆಚ್ಚಿನ ಗಾಳಿ ಬರುತ್ತದೆ. ನಮಗೆ ಶೀತವಾಗಿರದಿದ್ದರೂ ಏಕೆ ಹೀಗೆ? ಯಾವ ನಾಸಿಕದಿಂದ ಕಡಿಮೆ ಉಸಿರು ಬರುತ್ತಿದೆಯೋ ಅದರ ವಿರುದ್ಧ ಮೆದುಳು ವಿಶ್ರಾಂತಿ ಸ್ಥಿತಿಯಲ್ಲಿದೆ ಎಂದು ಅರ್ಥ. ನಮ್ಮ ಎಡ ಭಾಗದ ಮೆದುಳಿನಲ್ಲಿ ತಾರ್ಕಿಕ ಕ್ರಿಯೆಗಳು ನಡೆಯುತ್ತವೆ. ಈ ಭಾಗದ ಮೆದುಳನ್ನು ಸಕ್ರಿಯಗೊಳಿಸಲು ತರಗತಿಯಲ್ಲಿ ಪ್ರಾಣಾಯಾಮವನ್ನು ಹೇಳಿಕೊಡಲಾಗುತ್ತದೆ. ಗಣಿತ ವಿಷಯದಲ್ಲಿ ಚುರುಕಾಗಿರಲು ಎಡ ಮೆದುಳಿನ ಸಕ್ರಿಯತೆ ಬಹಳ ಮುಖ್ಯವಾದದ್ದು. ನಮ್ಮಲ್ಲಿ ಸಂಧ್ಯಾವಂದನೆಯ ಮಹತ್ತ್ವವೇ ಇದಾಗಿದೆ. ಸೂರ್ಯೋದಯ, ಮಧ್ಯಾಹ್ನ, ಸೂರ್ಯಾಸ್ತ ಈ ಮೂರು ಸಮಯದಲ್ಲಿ ತನ್ನಿಂದ ತಾನೇ ಎರಡು ನಾಸಿಕಗಳು ತೆಗೆದುಕೊಳ್ಳುತ್ತವೆ. ಸ್ವಲ್ಪ ನೀರಿನೊಂದಿಗೆ ಆಚಮನ ಮಾಡಿ ಗಂಟಲನ್ನು ಒದ್ದೆಯಾಗಿಸಿಕೊಳ್ಳಲಾಗುತ್ತದೆ. ದೀರ್ಘ ಉಸಿರನ್ನು ಬಿಡುತ್ತ ಓಂಕಾರದ ಧ್ವನಿ ಮಾಡಿ ಪೂರ್ಣ ಶರೀರವನ್ನು ಕಂಪಾಯಮಾನವಾಗಿ ಮಾಡಲಾಗುತ್ತದೆ. ನಂತರ ಅನುಲೋಮ, ವಿಲೋಮ ಮಾಡಲಾಗುತ್ತದೆ. ಮಕ್ಕಳಲ್ಲಿ ಈ ಪ್ರಾಣಾಯಾಮವನ್ನು ಮಾಡಿಸಿ 10 ಮತ್ತು 12ನೇ ತರಗತಿಯ ಅಂಕಗಳನ್ನು ಪರಿಶೀಲಿಸಲಾಯಿತು. ಹತ್ತನೇ ತರಗತಿಗಿಂತ 12ನೇ ತರಗತಿಯಲ್ಲಿ ಶೇಕಡ 10.33 ಅಂಕಗಳ ಹೆಚ್ಚಳಿಕೆಯಾಗಿತ್ತು.

ಸ್ವಲ್ಪ ದಪ್ಪ ಇರುವ ಮಕ್ಕಳಿಗೆ ಒಂದು ಪ್ರಯೋಗವನ್ನು ನೀಡಲಾಯಿತು. ಊಟಕ್ಕೆ ಮೊದಲು ಚಂದ್ರನಾಡಿಯ ನಾಸಿಕವನ್ನು ಮುಚ್ಚಿ 27 ಬಾರಿ ಬಲನಾಸಿಕದಿಂದ ಉಸಿರನ್ನು ತೆಗೆದುಕೊಂಡು ಬಿಡಲು ಹೇಳಲಾಯಿತು. 27 ನಕ್ಷತ್ರಗಳಿರುವ ಕಾರಣದಿಂದಾಗಿ 27 ಬಾರಿ ಉಸಿರನ್ನು ತೆಗೆದುಕೊಳ್ಳಲು ಹೇಳಲಾಯಿತು. ಹೀಗೆ ಮಾಡಿದ್ದರ ಪರಿಣಾಮವಾಗಿ ಶರೀರದ ಒಳಗೆ ಬಿಸಿ ಉಂಟಾಗಿ ತಿಂದಂತಹ ಆಹಾರ ಜೀರ್ಣಿಸಲು ಸುಲಭವಾಯಿತು. ಊಟ ಆದ ನಂತರ ಅತೀ ಶೀತವಾದ ನೀರನ್ನು ಕುಡಿಯುವುದು, ಐಸ್ ಕ್ರೀಮ್ ತಿನ್ನುವುದು ಮಾಡಬಾರದು.  ಜಠರಾಗ್ನಿ ಬಿಸಿ ಇರುವ ಕಾರಣ ಈ ಅತಿಯಾದ ತಂಪಿನ ಪದಾರ್ಥ ಸೇರಿದಾಗ ಪಚನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ತಿಂದಂತಹ ಆಹಾರ ಅರಗದೆ ಕೊಬ್ಬಾಗಿ ಪರಿವರ್ತಿತಗೊಳ್ಳುತ್ತದೆ. ನಾವು ಕೇವಲ  ಪಾಶ್ಚತ್ಯರ ಅಂಧಾನುಕರಣೆ ಮಾಡುತ್ತಿದ್ದೇವೆ.

ಭಗವದ್ಗೀತೆಯ ಈ ಲರ್ನ್ ಗೀತಾ ತರಗತಿಗಳು ನಮಗೆ ಎಲ್ಲಾ ದಾರಿಗಳನ್ನು ತೋರಿಸುವುದರಿಂದ ಇದರ ತರಗತಿಗಳನ್ನು ಬಿಡಬೇಡಿ ಎಂದು ವಿವೇಚಕರು ಹೇಳಿದ್ದಾರೆ. ಮೇ 30 ರಿಂದ ಎಲ್ 1 ನ ಹೊಸ ತರಗತಿಗಳು ಪ್ರಾರಂಭವಾಗಲಿದೆ. ನಿಮ್ಮ ಪರಿವಾರದ ಜನರನ್ನು, ಬಂದು ಮಿತ್ರರನ್ನು ಸೇರಿಸಲು ಮನವಿ ಮಾಡಿಕೊಂಡಿದ್ದಾರೆ. ಭಗವದ್ಗೀತೆಗಿಂತ ಸುಲಭವಾದ ಶಾಸ್ತ್ರ ಇನ್ನೊಂದಿಲ್ಲ.

15.14

ಅಹಂ(ವ್) ವೈಶ್ವಾನರೋ ಭೂತ್ವಾ, ಪ್ರಾಣಿನಾಂ(ನ್) ದೇಹಮಾಶ್ರಿತಃ।
ಪ್ರಾಣಾಪಾನಸಮಾಯುಕ್ತಃ(ಫ್), ಪಚಾಮ್ಯನ್ನಂ(ಞ್) ಚತುರ್ವಿಧಮ್॥15.14॥

ನಾನು ಎಲ್ಲಾ ಪ್ರಾಣಿಗಳ ಶರೀರದಲ್ಲಿ ಇದ್ದುಕೊಂಡು ವೈಶ್ವಾನರ ಅಗ್ನಿರೂಪಿಯಾಗಿದ್ದು ಪ್ರಾಣ ಮತ್ತು ಅಪಾನಗಳಿಂದ ಕೂಡಿದವನಾಗಿ ನಾಲ್ಕು ವಿಧದ ಅನ್ನವನ್ನು ಜೀರ್ಣವಾಗುವಂತೆ ಮಾಡುತ್ತೇನೆ.

ನಮ್ಮ ಶರೀರದಲ್ಲಿರುವ ಅಗ್ನಿಯು ಭಗವಂತನೇ ಆಗಿದ್ದಾನೆ ಎಂದು ಹೇಳಿದ್ದಾನೆ. ಯಜ್ಞದ ಅಗ್ನಿ, ದೀಪದ ಅಗ್ನಿ, ಓಲೆಯ ಅಗ್ನಿ, ನಮ್ಮ ಶರೀರದಲ್ಲಿ ಒಂದಲ್ಲ ಹಲವು ಬಗೆಯ ಅಗ್ನಿಗಳಿವೆ. ಭೀಮನಿಗೆ ವೃಕೋದರ ಎಂದು ಹೇಳಲಾಗುತ್ತದೆ. ಏಕೆಂದರೆ ಭೀಮನಲ್ಲಿ ವೃಕೋದರ ಎನ್ನುವ ಅಗ್ನಿ ಹೆಚ್ಚಿನ ಪ್ರಮಾಣದಲ್ಲಿತ್ತು. ಈ ಅಗ್ನಿಯ ಕಾರಣದಿಂದಲೇ ಎಷ್ಟೇ ಪ್ರಮಾಣದ ಭೋಜನವನ್ನು ಸ್ವೀಕರಿಸಿದರೂ ಅದು ಪಚನವಾಗುತ್ತದೆ.

ವೈಶ್ವಾನರ ಎಂಬ ನಮ್ಮ ಶರೀರದೊಳಗಿರುವ ಅಗ್ನಿಯನ್ನು ಭಗವಂತನೇ ಪ್ರಜ್ವಲಿಸುತ್ತಾನೆ. ಪ್ರಾಣ ಮತ್ತು ಅಪಾನಗಳಿಂದ ಕೂಡಿದವನಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣಗೊಳಿಸುತ್ತಾನೆ. ಆಕಾಶ ತತ್ತ್ವದಿಂದ ಶಬ್ದ ಉಂಟಾಗುತ್ತದೆ. ಕೊಳಲಿನ ಶಬ್ದ, ತಬಲದ ಶಬ್ದ, ಗಿಟಾರಿನ ಶಬ್ದ ಬೇರೆ ಬೇರೆಯಾಗಿರುತ್ತದೆ. ಶಬ್ದ ಎಂದ ಮಾತ್ರಕ್ಕೆ ಒಂದೇ ಸ್ವರೂಪದಲ್ಲಿ ಇರುವುದಿಲ್ಲ. ಹಾಗೆಯೇ ಸೂರ್ಯನ ಗುಣ ಪ್ರಕಾಶ. ನೀರಿಗೆ ಯಾವ ಆಕಾರ ಕೊಡುತ್ತೇವೆಯೋ ಆ ಆಕಾರವನ್ನು ಅದು ಪಡೆದುಕೊಳ್ಳುತ್ತದೆ.

ಭಗವಂತನು ನಾವು ಸೇವಿಸಿದ್ದನ್ನು ನಾಲ್ಕು ವಿಧಗಳಲ್ಲಿ ಅರಗಿಸುತ್ತಾನೆ.

ನಾಲ್ಕು ಪ್ರಕಾರದ ಆಹಾರಗಳಿವೆ
1) ಅಗಿದು ತಿನ್ನುವಂತದು ಭಕ್ಷ್ಯ. ಉದಾಹರಣೆಗೆ ರೊಟ್ಟಿ.
2) ಕುಡಿಯುವಂತಹದು ಭೋಜ್ಯ. ಉದಾಹರಣೆಗೆ ಹಾಲು.
3) ನೆಕ್ಕಿಕೊಳ್ಳುವಂಥದ್ದು ಲೆಹ್ಯ. ಉದಾಹರಣೆಗೆ ಚಟ್ನಿ.
4) ಹೀರಿಕೊಳ್ಳುವಂತದ್ದು ಚೋಷ್ಯ. ಉದಾಹರಣೆಗೆ ಕಬ್ಬು.
ಈ ನಾಲ್ಕು ಬಗೆಯ ಆಹಾರಗಳನ್ನು ಪಚಿಸುವವನು ನಾನೇ ಎಂದಿದ್ದಾನೆ ಭಗವಂತ.

15.15

ಸರ್ವಸ್ಯ ಚಾಹಂ(ಮ್) ಹೃದಿ ಸನ್ನಿವಿಷ್ಟೋ,
ಮತ್ತಃ(ಸ್) ಸ್ಮೃತಿರ್ಜ್ಞಾನಮಪೋಹನಂ(ಞ್)ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ,
ವೇದಾಂತಕೃದ್ವೇದವಿದೇವ ಚಾಹಮ್ ।।15।।

ನಾನು ಎಲ್ಲಾ ಜೀವಿಗಳ ಹೃದಯದಲ್ಲಿ ಅಂತರ್ಯಾಮೀರೂಪದಿಂದ ಇದ್ದೇನೆ. ನನ್ನಿಂದಲೇ ಸ್ಮೃತಿ, ಜ್ಞಾನ ಮತ್ತು ಅಪೋಹನ ( ಸಂಶಯ, ವಿಪರ್ಯಾಸಾದಿ ದೋಷಗಳ ನಿವಾರಣೆ ) ನನ್ನಿಂದ ಉಂಟಾಗುತ್ತವೆ. ವೇದೆಗಳ ಮೂಲಕ ತಿಳಿದುಕೊಳ್ಳಬೇಕಾದ ಶ್ರೇಷ್ಠನೂ ನಾನೇ ; ವೇದಾಂತದ ರಚನಾಕಾರ ಮತ್ತು ವೇದಗಳನ್ನು ತಿಳಿದವನೂ ಸಹ ನಾನೇ.

ನಾನೇ ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದೇನೆ. ನನ್ನಿಂದಲೇ ಸ್ಮೃತಿಜ್ಞಾನ ಉಂಟಾಗಿ ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲ ವೇದಗಳ ಮೂಲಕ ತಿಳಿಯಲು ನಾನೇ ಯೋಗ್ಯನಾಗಿದ್ದೇನೆ. ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನು ನಾನೇ ಆಗಿದ್ದೇನೆ.

ಇಲ್ಲಿ ವಿವೇಚಕರು ಒಂದು ಸುಂದರ ಭಜನೆಯ ಎರಡು ಸಾಲುಗಳನ್ನು ಹಾಡಿದರು. ಅದರ ಅರ್ಥ,

ನಾನು ಯಾರನ್ನು ಭೇಟಿ ಮಾಡಿದರೂ ಅವರಲ್ಲಿ ನಿನ್ನದೇ ಅಂಶವನ್ನು ಕಾಣುತ್ತೇನೆ ಎಂಬ ಭಾವ ಬಂದರೆ ನಮ್ಮಲ್ಲಿರುವ ಶತ್ರು ಬುದ್ಧಿಯು ಕಡಿಮೆಯಾಗುತ್ತದೆ.

11ನೇ ಅಧ್ಯಾಯದಲ್ಲಿ ಭಗವಂತ ತನ್ನ ವಿರಾಟ್ ರೂಪವನ್ನು ಅರ್ಜುನನಿಗೆ ತೋರಿಸುತ್ತಾನೆ. ಕರ್ಣ, ಭೀಷ್ಮ, ದ್ರೋಣ, ಕೌರವರು ಭಗವಂತನ ಬಾಯಿಯಲ್ಲಿ ಸಿಲುಕಿ ಹಾಕಿಕೊಂಡು ಅಗ್ನಿಯಲ್ಲಿ ಭಸ್ಮವಾಗುತ್ತಾರೆ. ಇದನ್ನು ನೋಡಿ ಅರ್ಜುನ ಭಯಗ್ರಸ್ತನಾಗುತ್ತಾನೆ.

ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯತಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥ (11.34)

ಭಗವಂತನು ಅರ್ಜುನನ್ನು ಕುರಿತು, ನಾನು ಈಗಾಗಲೇ ಅವರನ್ನು ಸಾಯಿಸಿದ್ದೇನೆ. ನೀನು ಕ್ಷತ್ರಿಯ. ಯುದ್ಧ ಮಾಡುವುದು ನಿನ್ನ ಧರ್ಮ. ಅನೈತಿಕತೆಯಿಂದ ವರ್ತಿಸುವ ದೃಷ್ಟಿಯನ್ನು ಸಂಹಾರ ಮಾಡು ಇದರಿಂದ ಯಾವುದೇ ಪಾಪ ಉಂಟಾಗುವುದಿಲ್ಲ ಎಂದಿದ್ದಾನೆ. 

ಪಾಪಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆಯುತ್ತಿದೆ. ವಿವೇಕರು ಹರಿಯಾಣದ ಪಂಚಕುಲದ ಐಟಿಬಿಪಿಯಲ್ಲಿ ಬಾರ್ಡರ್ ಪೊಲೀಸ್ ಟ್ರೈನಿಂಗ್ ಸೆಂಟರ್ ನಲ್ಲಿ ಭಗವದ್ಗೀತೆಯ ಬಗ್ಗೆ ಮಾತನಾಡಿದರಂತೆ. ಭಗವದ್ಗೀತೆ ಯುದ್ಧವನ್ನು ಗೆಲ್ಲಿಸುವ ಶಾಸ್ತ್ರ. ಯುದ್ಧ ಕರ್ತವ್ಯ ಭಾವನೆಯಿಂದ ಮಾಡಬೇಕೇ ಹೊರತು ಶತ್ರುತ್ವ ಭಾವದಿಂದಲ್ಲ.

ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ॥ (11.55)
ಕೌರವರು ದ್ರೌಪದಿಯ  ವಸ್ತ್ರಾಪಹರಣ ಮಾಡಿದರು, ಭೀಮನನ್ನು ವಿಷಕೊಟ್ಟು ಕೊಲ್ಲಲು ಪ್ರಯತ್ನಿಸಿದರು, ನಿಮ್ಮನ್ನು ಅರಗಿನ ಮನೆಯಲ್ಲಿ ಸುಟ್ಟುಹಾಕಲು ಪ್ರಯತ್ನಿಸಿದರು. 17 ಬಾರಿ ನೀನು ದುರ್ಯೋಧನ, ದುಶ್ಯಾಸನನ್ನು ಸೋಲಿಸಿದ್ದೀಯ. ಬಹಳಷ್ಟು ಸಹಿಸಿದ್ದೀಯ. ಶತ್ರುತ್ವ ಭಾವದಿಂದ ಅಲ್ಲದೆ ಕರ್ತವ್ಯ ಭಾವದಿಂದ ಯುದ್ಧ ಮಾಡು. ಕ್ಷತ್ರಿಯನಿಗೆ ಯುದ್ಧ ಒಂದು ಅವಕಾಶವಿದ್ದಂತೆ. ಮರಣ ಹೊಂದಿದರೆ ವೀರಗತಿ, ಸ್ವರ್ಗವನ್ನು ಹೊಂದಬಹುದು. ವಿಜಯ ಹೊಂದಿದರೆ ಈ ರಾಜ್ಯಭಾರದ ಭೋಗವನ್ನು ಅನುಭವಿಸಬಹುದು. ಹೇ ಅರ್ಜುನ, ಯುದ್ಧ ಮಾಡು, ಇದು ಪಾಪವಲ್ಲ. ಎಂದು ಭಗವಂತ ಹೇಳುತ್ತಾನೆ.

ಶ್ಲೋಕ 16, 17, 18 ರಲ್ಲಿ ಪುರುಷೋತ್ತಮ ತಾನೇ ಎಂದು ಭಗವಂತ ವರ್ಣಿಸಿದ್ದಾನೆ.

15.16

ದ್ವಾವಿಮೌ ಪುರುಷೌ ಲೋಕೇ, ಕ್ಷರಶ್ಚಾಕ್ಷರ ಏವ ಚ |
ಕ್ಷರಃ(ಸ್) ಸರ್ವಾಣಿ ಭೂತಾನಿ, ಕೂಟಸ್ಥೋಽಕ್ಷರ ಉಚ್ಯತೇ ।।16।।

ಈ ಜಗತ್ತಿನಲ್ಲಿ ವಿನಾಶೀ ಮತ್ತು ಅವಿನಾಶೀ ಎಂದು ಎರಡು ಪ್ರಕಾರದ ಪುರುಷರಿದ್ದಾರೆ. ಅವರಲ್ಲಿ ಸಮಸ್ತ ಜೀವಿಗಳ ಶರೀರವು ನಾಶವಾಗುವಂತಹದು ಮತ್ತು ಜೀವಾತ್ಮನು ಅವಿನಾಶೀ ಎಂದು ಹೇಳಲಾಗುತ್ತದೆ.

ಈ ಜಗತ್ತಿನಲ್ಲಿ ನಾಶವಾಗುವ ಮತ್ತು ನಾಶವಾಗದಿರುವ ಎರಡು ಪ್ರಕಾರದ ಪುರುಷರಿದ್ದಾರೆ. ಇದರಲ್ಲಿ ಸಂಪೂರ್ಣ ಭೂತ ಪ್ರಾಣಿಗಳ ಶರೀರಗಳು ನಾಶವಾಗುವಂತಹದು ಮತ್ತು ಜೀವಾತ್ಮನು ಅವಿನಾಶೀ ಎಂದು ಹೇಳಲಾಗಿದೆ.

15.17

ಉತ್ತಮಃ(ಫ್) ಪುರುಷಸ್ತ್ವನ್ಯಃ(ಫ್), ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ, ಬಿಭರ್ತ್ಯವ್ಯಯ ಈಶ್ವರಃ ।।17।।

ಇವರಿಬ್ಬರಿಗಿಂತಲೂ ಉತ್ತಮನಾದ ಪುರುಷನಾದರೋ ಬೇರೊಬ್ಬನುಂಟು. ಅವನು ಮೂರು ಲೋಕಗಳಲ್ಲಿ ಪ್ರವೇಶಿಸಿ ಎಲ್ಲರ ರಕ್ಷಣೆ - ಪಾಲನೆ ಮಾಡುತ್ತಾನೆ ; ಆ ಅವಿನಾಶೀ ಪರಮೇಶ್ವರನನ್ನು ಪರಮಾತ್ಮಾ ಎಂದು ಹೇಳಲಾಗಿದೆ.

ಇವರಿಬ್ಬರಿಗಿಂತ ಉತ್ತಮ ಪುರುಷನಾದರೋ ಬೇರೆಯೇ ಆಗಿದ್ದಾನೆ. ಅವನು ಮೂರು ಲೋಕಗಳಲ್ಲಿ ಪ್ರವೇಶ ಮಾಡಿ ಎಲ್ಲರ ಧಾರಣೆ ಪೋಷಣೆ ಮಾಡುತ್ತಾನೆ. ಹಾಗೆಯೇ ಅವನನ್ನು ಅವಿನಾಶೀ ಪರಮೇಶ್ವರ ಮತ್ತು ಪರಮಾತ್ಮ ಎಂದು ಹೇಳಲಾಗಿದೆ.

15.18

ಯಸ್ಮಾತ್ಕ್ಷರಮತೀತೋಽಹಮ್, ಅಕ್ಷರಾದಪಿ ಚೋತ್ತಮಃ |
ಅತೋಽಸ್ಮಿ ಲೋಕೇ ವೇದೇ ಚ, ಪ್ರಥಿತಃ(ಫ್) ಪುರುಷೋತ್ತಮಃ ।।18।।

ಏಕೆಂದರೆ ನಾನು ನಾಶಯುತ ಜಡವರ್ಗವಾದ ಕ್ಷೇತ್ರದಿಂದ ಸಂಪೂರ್ಣವಾಗಿ ಅತೀತನಾಗಿದ್ದೇನೆ ಮತ್ತು ಅವಿನಾಶೀ ಜೀವಾತ್ಮನಿಗಿಂತಲೂ ಸಹ ಉತ್ತಮನಾಗಿದ್ದೇನೆ. ಆದುದರಿಂದ ಲೋಕದಲ್ಲಿ ಮತ್ತು ವೇದದಲ್ಲಿಯೂ ಸಹ ಪುರುಷೋತ್ತಮನೆಂದು ಪ್ರಸಿದ್ಧನಾಗಿದ್ದೇನೆ.

ಏಕೆಂದರೆ ನಾಶವಾಗುವ ಜಡ ವರ್ಗ ಕ್ಷೇತ್ರಕ್ಕಿಂತ ನಾನು ಸರ್ವಥಾ ಅತೀತನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ. ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿಯೂ ಪುರುಷೋತ್ತಮ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದೇನೆ. ಭಗವದ್ಗೀತೆಯಲ್ಲಿ ಮಾತ್ರ ಶ್ರೀ ಭಗವಾನುವಾಚ ಎಂದು ಹೇಳಲಾಗಿದೆ. ಅಂದರೆ ಭಗವತ್ ತತ್ತ್ವ ಶ್ರೀ ಕೃಷ್ಣನ ಮುಖದಿಂದ ಪ್ರವಾಹಿತವಾಗಿದೆ. ಪುರುಷೋತ್ತಮನ ಅವತಾರ ಶ್ರೀ ಕೃಷ್ಣನ ರೂಪದಲ್ಲಿ ಪ್ರಕಟಗೊಂಡಿದೆ.

15.19

ಯೋ ಮಾಮೇವಮಸಮ್ಮೂಢೋ, ಜಾನಾತಿ ಪುರುಷೋತ್ತಮಮ್ |
ಸ ಸರ್ವವಿದ್ಭಜತಿ ಮಾಂ(ಮ್), ಸರ್ವಭಾವೇನ ಭಾರತ ।।19।।

ಎಲೈ ಅರ್ಜುನ ! ಈ ರೀತಿ ಯಥಾರ್ಥವಾಗಿ ಯಾವ ಜ್ಞಾನಿಯು ನನ್ನನ್ನು ಪುರುಷೋತ್ತಮನೆಂದು ತಿಳಿದುಕೊಳ್ಳುತ್ತಾನೆಯೋ, ಆ ಸರ್ವಜ್ಞನು ಎಲ್ಲಾ ಬಗೆಯಿಂದಲೂ ನಿರಂತರ ವಾಸುದೇವ ಪರಮಾತ್ಮನಾದ ನನ್ನನ್ನೇ ಭಜಿಸುತ್ತಾನೆ.

ಯಾವ ಜ್ಞಾನಿ ಪುರುಷನು ನನ್ನನ್ನು ಈ ರೀತಿಯಾಗಿ ತತ್ತ್ವದಿಂದ ಪುರುಷೋತ್ತಮನೆಂದು ತಿಳಿಯುತ್ತಾನೋ, ಆ ಸರ್ವಜ್ಞನಾದವನು ಎಲ್ಲಾ ವಿಧದಿಂದ ನಿರಂತರವಾಗಿ ವಾಸುದೇವ ಪರಮೇಶ್ವರನಾದ ನನ್ನನ್ನೇ ಭಜಿಸುತ್ತಾನೆ. (ಮೂಢ - ಅಜ್ಞಾನಿ: ಅಮುೂಢ - ಜ್ಞಾನಿ)

15.20

ಇತಿ ಗುಹ್ಯತಮಂ(ಮ್) ಶಾಸ್ತ್ರಮ್, ಇದಮುಕ್ತಂ(ಮ್) ಮಯಾನಘ |
ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್, ಕೃತಕೃತ್ಯಶ್ಚ ಭಾರತ ।।20।।

ಎಲೈ ಪಾಪರಹಿತನಾದ ಅರ್ಜುನ ! ಈ ರೀತಿ ಅತ್ಯಂತ ರಹಸ್ಯಮಯವಾದ ಈ ಶಾಸ್ತ್ರವು ನನ್ನಿಂದ ಹೇಳಲ್ಪಟ್ಟಿತು. ಇದನ್ನು ಯಥಾರ್ಥವಾಗಿ ತಿಳಿದುಕೊಂಡವನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗುತ್ತಾನೆ. ಅರ್ಥತ್ ಅವನು ಮಾಡಬೇಕಾದದ್ದು ಏನೂ ಸಹ ಉಳಿದುಕೊಂಡಿರುವುದಿಲ್ಲ.

ಎಲೈ ನಿಷ್ಪಾಪನಾದ ಅರ್ಜುನ! ಹೀಗೆ ಈ ಅತಿರಹಸ್ಯಮಯ ಗೋಪ್ಯವಾದ ಶಾಸ್ತ್ರವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ತ್ವತಃ ತಿಳಿದ ಮನುಷ್ಯನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗುತ್ತಾನೆ.

ಇದನ್ನು ಗುಹ್ಯತಮ ಎಂದು ಏಕೆ ಹೇಳಿದ್ದಾನೆ? ಇದೇನು ಕ್ಲಿಷ್ಟಕರವಾಗಿಲ್ಲ, ಸುಲಭವೇ ಇದೆ. ಹಲವಾರು ಜನರಿಗೆ ಈ ದಾರಿಯಲ್ಲಿ ಬರಲು ಮನಸ್ಸೇ ಆಗುವುದಿಲ್ಲ. ಹಾಗಾಗಿ ಇದನ್ನು ಗುಹ್ಯತಮಂ ಎನ್ನಲಾಗಿದೆ. ಕೆಲವರಲ್ಲಿ ಮಾತ್ರ ಇದರಲ್ಲಿ ಏನಿದೆ ಎಂದು ತಿಳಿಯುವ ಭಾವ ಜಾಗೃತವಾಗುತ್ತದೆ. ಅದರಲ್ಲಿ ನಾವು ಒಬ್ಬರು. ಲರ್ನ್ ಗೀತಾ ತರಗತಿಗೆ ಸೇರಿಕೊಂಡು ಇದನ್ನು ಕಲಿಯಲು ಮತ್ತು ತಿಳಿಯಲು ಆರಂಭಿಸಿದ್ದೇವೆ.

ನನ್ನಿಂದ ಹೇಳಲ್ಪಟ್ಟ ಈ ಪುರುಷೋತ್ತಮ ಯೋಗವನ್ನು ತಿಳಿಯುವ ಮನುಷ್ಯ ಕೃತಕೃತ್ಯನಾಗುತ್ತಾನೆ ಎಂದು ಭವವಂತ ಹೇಳಿದ್ದಾನೆ.

ಈ ವಿಷಯದ ಚಿಂತನೆ ನಿರಂತರ ಮನಸ್ಸಿನಲ್ಲಿ ನಡೆಯುತ್ತಲಿರಲಿ. ಗೀತೆ ಪ್ರತಿದಿನ, ಪ್ರತಿಕ್ಷಣ ನಮ್ಮಲ್ಲಿ ಪ್ರತಿಧ್ವನಿಸುತ್ತಿರಲಿ. ಆಗ ನಮ್ಮ ಜೀವನ ಪರಿವರ್ತನೆಗೊಂಡು ಆನಂದ ಸದಾ ಕಲರವವನ್ನು ಮೂಡಿಸುತ್ತದೆ ಎಂದು ಹೇಳಿ ಪುರುಷೋತ್ತಮ ಯೋಗದ ವಿವೇಚನೆಯನ್ನು ಮುಕ್ತಾಯಗೊಳಿಸಿ ಪ್ರಶ್ನೋತ್ತರಗಳನ್ನು ತೆಗೆದುಕೊಳ್ಳಲಾಯಿತು.



ಪ್ರಶ್ನೋತ್ತರಗಳು

1) ವಿದ್ಯಾಸಾಗರ್ ಮಿಶ್ರ ಅಣ್ಣ
ಪ್ರಶ್ನೆ : ಕಾಮ, ಕ್ರೋಧ, ಲೋಭ ಇವುಗಳನ್ನು ತ್ಯಜಿಸಿದ ನಂತರವೇ ಈ ಅಧ್ಯಾತ್ಮದ ಮಾರ್ಗದಲ್ಲಿ ನಡೆಯಬೇಕಾ?
ಉತ್ತರ : ಇವೆರಡೂ ಪರಸ್ಪರ ಸಂಬಂಧವನ್ನು ಹೊಂದಿವೆ. ಇದು ಒಂದು ಚಕ್ರವಿದ್ದಂತೆ. ನಾವು ಶ್ಲೋಕದ ಪ್ರತಿ ಚರಣವನ್ನು ಹೇಳುವಾಗ ಉಸಿರನ್ನು ಎಳೆದುಕೊಳ್ಳುವುದು, ಹೊರಗೆ ಬಿಡುವುದು ಮಾಡುತ್ತೇವೆ. ಇದೇ ಪ್ರಾಣಾಯಾಮ. ನಮ್ಮ ದೇಹದಲ್ಲಿ ಆಕ್ಸಿಜನ್ ನ ಸ್ತರ ಹೆಚ್ಚಾಗುತ್ತಾ ಹೋಗುತ್ತದೆ. ಆಗ ನಮ್ಮ ವಿವೇಕವು ಜಾಗೃತ ಹೊಂದುತ್ತದೆ. ನಮ್ಮ ಕಾಮನೆಗಳನ್ನು ದಮನ ಮಾಡಬೇಕು. ಇಂದು ನಾನು ನನ್ನ ಹಸಿವನ್ನು ದಮನ ಮಾಡಿ ಉಪವಾಸವಿರುತ್ತೇನೆ ಎಂದು ನಿಶ್ಚಯಿಸಬೇಕು. ನಾವು ಒಂದು ಹೆಜ್ಜೆ ಭಗವಂತನ ಕಡೆಗೆ ನಡೆದರೆ ಅವನು ಹತ್ತು ಹೆಜ್ಜೆ ಮುಂದಿಟ್ಟು ನಮ್ಮ ಬಳಿಗೆ ಬರುತ್ತಾನೆ. ಅವನು ನಮ್ಮ ಪ್ರೇಮಭಾವಕ್ಕಾಗಿ ಕಾಯುತ್ತಿರುತ್ತಾನೆ.

ಇನ್ನೊಬ್ಬರ ಬಗ್ಗೆ ಕ್ರೋಧವನ್ನು ಬೆಳೆಸಿಕೊಂಡರೆ ನಷ್ಟವಾಗುವುದು ನಮಗೇ ಹೊರತು ಅವರಿಗಲ್ಲ. ನಮ್ಮಲ್ಲಿ ಉಂಟಾಗುವ ರಕ್ತದೊತ್ತಡ, ಡಯಾಬಿಟಿಸ್ ಈ ಕ್ರೋಧದ ಪರಿಣಾಮದಿಂದಲೇ ಆಗಿದೆ.

ತ್ರಿವಿಧಂ ನರಕಸ್ಯೆದಂ ದ್ವಾರಂ ನಾಶನಮಾತ್ಮನಃ।
ಕಾಮಃ ಕ್ರೋಧಸ್ತಥಾ ಲೋಭಃ ತಸ್ಮಾದೇಶತ್ಯಂ ತ್ಯಜೇತ್ ॥ (16.21)

ಕಾಮ, ಕ್ರೋಧ, ಲೋಭ ಈ ಮೂರನ್ನು ತ್ಯಜಿಸಲೇಬೇಕು. ಇಲ್ಲದಿದ್ದರೆ ಇದು ನರಕದ ಬಾಗಿಲಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ನಮ್ಮ ಲಗಾಮನ್ನು ಭಗವಂತನಿಗೆ ಕೊಟ್ಟಾಗ, ನಮ್ಮ ಪಂಚೇಂದ್ರಿಯಗಳನ್ನು ಸಹ ಅವನು ಸರಿಯಾಗಿ ನಿಯಂತ್ರಣದಲ್ಲಿ ಇಡುತ್ತಾನೆ.

2) ಸಂಗೀತ ಅಕ್ಕ
ಪ್ರಶ್ನೆ : ತಪ್ಪು ಮಾಡುತ್ತಿರುವವರನ್ನು ಭಕ್ತಿ ಮಾರ್ಗದ ಕಡೆಗೆ ಕರೆದುಕೊಂಡು ಬರಬಹುದೇ?
ಉತ್ತರ : ಪ್ರಪಂಚದಲ್ಲಿ ನೂರಕ್ಕೆ ನೂರು ಪ್ರತಿಶತ ಸರಿಯಾದ ವ್ಯಕ್ತಿ ಯಾರೂ ಇರುವುದಿಲ್ಲ. ಎಲ್ಲರಲ್ಲಿಯೂ ದೋಷ ಇದ್ದೇ ಇರುತ್ತದೆ. ಅವರನ್ನು ಕಲಿಕೆಗೆ ಕರೆದುಕೊಂಡು ಬಂದಾಗ ಅವರು ಕಲಿತರೆ ಬಹಳ ಸಂತೋಷ. ಕಲಿಯದಿದ್ದರೆ ಬೇಸರಿಸಬೇಡಿ. ಅವರ ಪ್ರಾರಬ್ಧ ಕರ್ಮ ಇನ್ನು ಮುಗಿದಿಲ್ಲವೆಂದು ತಿಳಿಯಿರಿ.

3) ಬೇಬಿ ಮೋದಿ ಅಕ್ಕ
ಪ್ರಶ್ನೆ : ಜಪಮಾಲೆ ಮಾಡುವಾಗ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಹೇಗೆ?
ಉತ್ತರ : ಇದು ಸಾಮಾನ್ಯ, ಎಲ್ಲರೊಂದಿಗೂ ಹೀಗೆ ಆಗುತ್ತದೆ. ಜಪಮಾಲೆ ಮಾಡುವಾಗ ಮನಸ್ಸು ಚಂಚಲಗೊಳ್ಳುತ್ತಿರುತ್ತದೆ. ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನ ಮಾಡುತ್ತೀರಿ. ಪ್ರತಿಯೊಂದು ಮಣಿಯನ್ನು ಮುಂದೆ ಮಾಡಿದಂತೆಲ್ಲ ಉಸಿರನ್ನು ದೀರ್ಘವಾಗಿ ಎಳೆದುಕೊಂಡು ಬಿಡಿ. ಹೀಗೆ ಮಾಡುವುದರಿಂದ ಏಕಾಗ್ರತೆಯು ಹೆಚ್ಚಾಗಿ, ಮನಸ್ಸು ಜಪಮಾಲೆಯಲ್ಲಿ ಇರುತ್ತದೆ.

3) ಶಕುಂತಲಾ ಅಕ್ಕ
ಪ್ರಶ್ನೆ : ನಮ್ಮ ಜೊತೆ ನಡೆಯುವ ಒಳ್ಳೆಯ ಅಥವಾ ಕೆಟ್ಟ ಘಟನೆಗಳು ಪೂರ್ವ ಜನ್ಮದ ಫಲ ಎಂದು ಹೇಳುತ್ತಾರೆ. ಇದು ಯಾವ ಜನ್ಮದ ಫಲ?
ಉತ್ತರ : ಉದಾಹರಣೆಗೆ, ನಮ್ಮ ಅಕೌಂಟಿನಲ್ಲಿ ಹಿಂದಿನ ತಿಂಗಳ ಸಂಬಳದ ಜೊತೆಗೆ, ಈ ತಿಂಗಳ ಸಂಬಳವೂ ಸೇರಿತು ಎಂದು ಭಾವಿಸೋಣ. ನಾವು ಈಗ ಹಣವನ್ನು ಖರ್ಚು ಮಾಡುವಾಗ ಇದು ಹಿಂದಿನ ತಿಂಗಳ ದುಡ್ಡೋ ಅಥವಾ ಈ ತಿಂಗಳು ದುಡ್ಡೋ ಎಂದು ಹೇಳಲಾಗುತ್ತದೆಯೇ? ಇಲ್ಲ. ಎರಡು ತಿಂಗಳ ಹಣವನ್ನು ಒಟ್ಟಿಗೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ನಮ್ಮ ಜೀವನದ  ಅಧ್ಯಾತ್ಮಿಕದ ಅಕೌಂಟ್ ಇರುತ್ತದೆ. ಹಿಂದಿನ ಜನ್ಮದ್ದು, ಈ ಜನ್ಮದ್ದು ಎಲ್ಲಾ ಅಲ್ಲೇ ಸೇರಿರುತ್ತದೆ.

ರಾಮಕೃಷ್ಣ ಪರಮಹಂಸರು ಮಹಾತ್ಮರು, ಆದರೂ ಅವರಿಗೆ ಗಂಟಲಿನ ಕ್ಯಾನ್ಸರ್ ಬಂದಿತ್ತು. ಪರಮಶ್ರದ್ದೇಯ ರಾಮಸುಖ ದಾಸ್ ಜೀ ಮಹಾರಾಜರಿಗೂ ಗಂಟಲಿನ ಕ್ಯಾನ್ಸರ್ ಬಂದಿತ್ತು. ನಿಮಗೆ ಈ ಕ್ಯಾನ್ಸರ್ ಏತಕ್ಕಾಗಿ ಬಂದಿತು ಎಂದು ಕೇಳಿದಾಗ, ಅವರು ಈ ಜನ್ಮದಲ್ಲಿ ನನಗೆ ತಿಳಿಯದಂತೆ ಏನೋ ಪಾಪ ಕಾರ್ಯವಾಗಿರಬೇಕು ಎಂದರಂತೆ. ಅದನ್ನು ಇಲ್ಲಿಯ ಅನುಭವಿಸಲಿ ಎಂಬುದು ಭಗವಂತನ ಆಶಯ. ಹಾಗಾಗಿ ಇಲ್ಲಿ ಅನುಭವಿಸುತ್ತೇನೆ ಎಂದರಂತೆ. ಪ್ರತಿ ದುಃಖವನ್ನು ಈ ಭಾವದಿಂದಲೇ ಸ್ವೀಕರಿಸಬೇಕು.

4) ಕಾಕಿ ಮಾಟು ಅಕ್ಕ
ಪ್ರಶ್ನೆ : ಭಗವದ್ಗೀತೆಯ ಕಲಿಕೆಯನ್ನು 12ನೇ ಅಧ್ಯಾಯದಿಂದ ಪ್ರಾರಂಭಿಸುತ್ತಿರುವ ಉದ್ದೇಶವೇನು?
ಉತ್ತರ : ಬಹಳ ಸರಿಯಾದ ಪ್ರಶ್ನೆಯನ್ನು ಕೇಳಿದ್ದೀರಿ. ನಾವು ಅರ್ಜುನರಲ್ಲ. ಅರ್ಜುನ ಬಹಳ ಜ್ಞಾನಿ, ನಾವುಗಳು ಬಹಳ ಅಜ್ಞಾನಿಗಳು. ಅರ್ಜುನನಿಗೆ ಭಗವಂತ ಎರಡನೇ ಅಧ್ಯಾಯವನ್ನು ಮೊದಲಿಗೆ ಹೇಳಿದನು. 12ನೇ ಅಧ್ಯಾಯ ಬಹಳ ಸುಲಭ, ಹೇಳಲು ಸರಳವಾದ ಕಾರಣ, ನಮ್ಮ ಪೂಜ್ಯ ಸ್ವಾಮೀಜಿ ಗೋವಿಂದ ದೇವ್ ಗಿರಿ ಜೀ  ಮಹಾರಾಜರು ಇದನ್ನು ಮೊದಲು ಹೇಳಿಕೊಡಲು ತಿಳಿಸಿದ್ದಾರೆ. ಇದು ಕೇವಲ 20 ಶ್ಲೋಕಗಳಿರುವ ಚಿಕ್ಕ ಅಧ್ಯಾಯ. ಚಿಕ್ಕ ಚಿಕ್ಕ ಅಧ್ಯಾಯದಿಂದ ಪ್ರಾರಂಭಿಸಿದರೆ, ನಾವು ಈ ಕಲಿಕೆಯಲ್ಲಿ ಸೇರಿಕೊಳ್ಳುತ್ತೇವೆ. ಇಲ್ಲದಿದ್ದರೆ ಕಲಿಕೆಯನ್ನು ನಿಲ್ಲಿಸಿ ಬಿಡುತ್ತೇವೆ.

5) ಗಣೇಶ್ ಅಣ್ಣ
ಪ್ರಶ್ನೆ : ಗೀತೆಯನ್ನು ಹೇಗೆ ಹೆಚ್ಚಿನ ಜನರಿಗೆ ತಲುಪಿಸಬಹುದು?
ಉತ್ತರ : learngeeta.com ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿ. ಯಾವ ಭಾಷೆ, ಯಾವ ಸಮಯ ಅನುಕೂಲವೋ, ಅದೇ ಭಾಷೆ, ಸಮಯದ ತರಗತಿಯನ್ನು ನಿಃಶುಲ್ಕವಾಗಿ ಸೇರಿಸಿ. 13 ಭಾಷೆಗಳಲ್ಲಿ, 183 ದೇಶಗಳಿಂದ, ಹನ್ನೆರಡುವರೆ ಲಕ್ಷ ಜನರು ಗೀತೆಯೊಂದಿಗೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದಾಗ ಅವರು ಆಕರ್ಷಿತರಾಗುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ 2 ಗಂಟೆಗಳವರೆಗೆ ತರಗತಿಗಳು ಸತತವಾಗಿ ಇರುತ್ತವೆ ಎಂದು ತಿಳಿಸಿ. ಈ ಭಗವದ್ಗೀತೆಯಿಂದ ಜನರು ಬಿಪಿ, ಡಯಾಬಿಟಿಸ್, ಚಿಂತೆಯಿಂದ ಮುಕ್ತರಾಗುತ್ತಿದ್ದಾರೆ ಎಂದು ತಿಳಿಸಿ. ಇದಿಷ್ಟು ಮಾಡಿದ ನಂತರವೂ ಅವರು ತರಗತಿಗೆ ಸೇರಲಿಲ್ಲವೆಂದರೆ ಅವರ ಪ್ರಾರಬ್ಧ ಕರ್ಮ ಮುಗಿದಿಲ್ಲವೆಂದು ತಿಳಿಯಿರಿ. ನೀವು ಬೇಸರಿಸಿಕೊಳ್ಳಬೇಡಿ

ಸಮಾಪನಾ  ಪ್ರಾರ್ಥನೆ, ಹನುಮಾನ್ ಚಾಲೀಸಾ ಪಠಣೆಯೊಂದಿಗೆ ಇಂದಿನ ವಿವೇಚನಾ ಸತ್ರವನ್ನು ಮುಕ್ತಾಯಗೊಳಿಸಲಾಯಿತು.

ಓಂ ತತ್ಸತ್. ಶ್ರೀ ಕೃಷ್ಣಾರ್ಪಣಮಸ್ತು


ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ(ಯ್)
ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಪುರುಷೋತ್ತಮಯೋಗೋ ನಾಮ ಪಂಚದಶೋಽಧ್ಯಾಯಃ

ಇತಿ ಶ್ರೀಮದ್ಭಗವದ್ಗೀತಾರೂಪೀ ಉಪನಿಷದ್ ಬ್ರಹ್ಮವಿದ್ಯಾ ಹಾಗೂ ಯೋಗಶಾಸ್ತ್ರ ವಿಷಯಕ ಶ್ರೀ ಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ ಪುರುಷೋತ್ತಮಯೋಗ ಎಂಬ ಹದಿನೈದನೇ ಅಧ್ಯಾಯ ಸಂಪೂರ್ಣ